More

    ಕೆರಿಬಿಯನ್​ ನಾಡಲ್ಲಿ ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮ​: ಒಂದೇ ಪಂದ್ಯದಲ್ಲಿ 6 ದಾಖಲೆ ಬರೆದ ಹಿಟ್​ಮ್ಯಾನ್​!

    ನವದೆಹಲಿ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಬಿರುಗಾಳಿಯನ್ನು ಸೃಷ್ಟಿಸಿದೆ. ಎದುರಿಗೆ ಸಿಕ್ಕ ಯಾವುದೇ ತಂಡವನ್ನು ತರಗೆಲೆಯಂತೆ ತೂರಿ ಮುನ್ನುಗ್ಗುತ್ತಿದೆ. ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲಿ ಗೆದ್ದು ಸಮಿಸ್​ಗೆ ಲಗ್ಗೆ ಇಟ್ಟಿದೆ. ಅದರಲ್ಲೂ ನಿನ್ನೆ (ಜೂನ್​ 24) ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್​-8 ಹಂತದ ಪಂದ್ಯವಂತೂ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ಉಣಬಡಿಸಿತು.

    ಈ ವಿಶ್ವಕಪ್​ನಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ದೊಡ್ಡ ಇನ್ನಿಂಗ್ಸ್ ಇದುವರೆಗೂ ಬರಲಿಲ್ಲವಲ್ಲಾ ಎಂದು ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದರು. ಆದರೆ, ಆ ಬೇಸರವನ್ನು ನಾಯಕ ರೋಹಿತ್ ಶರ್ಮ ತೊಡೆದು ಹಾಕಿದರು. ನಿನ್ನೆಯ ಪಂದ್ಯದಲ್ಲಿ ಇಡೀ ಕ್ರೀಡಾಂಗಣದಲ್ಲಿ ಕಂಡಿದ್ದು ಮಾತ್ರ ರೋಹಿತ್​ ಶರ್ಮರ ಸುನಾಮಿ. ಆಸಿಸ್​ ಬೌಲರ್​ಗಳನ್ನು ಚೆಂಡಾಡಿದ ರೋಹಿತ್​, ಟೀಮ್​ ಇಂಡಿಯಾಗಿ ಭರ್ಜರಿ ಜಯ ತಂದುಕೊಟ್ಟರು. ಅಲ್ಲದೆ, ಸೆಮಿಸ್​ ತಲುಪಲು ನೆರವಾದರು.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹಿಟ್‌ಮ್ಯಾನ್ ತನ್ನ ಸಾರ್ವತ್ರಿಕ ಫಾರ್ಮ್ ಅನ್ನು ತೋರಿಸಿದರು. ಮೊದಲ ಎಸೆತದಿಂದಲೇ ಬೌಲರ್‌ಗಳನ್ನು ವಧಿಸಲು ಆರಂಭಿಸಿದರು. ಹಿಟ್‌ಮ್ಯಾನ್ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 92 ರನ್ ಗಳಿಸಿದರು. ಅವರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು ಮತ್ತು ಆಸಿಸ್​ ಪಡೆಯನ್ನು ಚಿಂತೆಗೆ ದೂಡಿದರು.

    ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ ಆಡಿದ ರೋಹಿತ್, ಒಂದೇ ಬಾರಿಗೆ 6 ದಾಖಲೆಗಳನ್ನು ಮುರಿದರು. ಈ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರೈಸಿದರು. ಶಾರ್ಟ್ ಫಾರ್ಮೆಟ್​ನಲ್ಲಿ ಇಷ್ಟೊಂದು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,000 ರನ್‌ಗಳ ಮೈಲುಗಲ್ಲು ದಾಟಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ.

    ಇದಿಷ್ಟೇ ಅಲ್ಲದೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಒಂದು ತಂಡದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು. ಹೀಗಾಗಿ ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಅದೇ ರೀತಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಪರ ಎರಡನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯು ಸಹ ಹಿಟ್​ಮ್ಯಾನ್​ ಪಾಲಾಯಿತು.

    ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್​)

    ಮೊಹಮ್ಮದ್​ ಶಮಿ ಜತೆ ಮದುವೆ! ಕೊನೆಗೂ ಮೌನ ಮುರಿದ ಸಾನಿಯಾ ಸಿಹಿ ಸುದ್ದಿ ಕೊಟ್ಟೇ ಬಿಟ್ರಾ?

    ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲಿ ರಾರಾಜಿಸಿದ ವಿರಾಟ್ ಕೊಹ್ಲಿ ಪ್ರತಿಮೆ; ಇದಕ್ಕೆ ಹೇಳೋದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts