More

    ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬಿಜೆಪಿ ಬ್ಯಾಡ್ ಟ್ವೀಟ್: ಸಚಿವ ದಿನೇಶ್ ಗುಂಡೂರಾವ್ ಕಿಡಿ

    ಬೆಂಗಳೂರು: ಡೆಂಘೆ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ಹೊಸದೇನಲ್ಲ. ಮುಂಜಾಗ್ರತೆ ವಹಿಸಿ ಹೆಚ್ಚಿನ ಪರೀಕ್ಷೆ ನಡೆಸಿದ್ದರಿಂದ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗಿರುವ ಕುರಿತು ಬಿಜೆಪಿ ಎಕ್ಸ್‌ನಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಆರೋಗ್ಯ ಇಲಾಖೆ ಯಾರ ಕಾಲದಲ್ಲಿ ಅನಾರೋಗ್ಯಗೊಂಡಿತ್ತು, ಈಗ ಎಷ್ಟು ಸುಧಾರಿಸಿದೆ. ಈ ಕುರಿತು ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.

    ಡೆಂಘೆ ನಿಯಂತ್ರಿಸಲು ಹಾಗೂ ಸೋಂಕು ಮತ್ತು ಸಾವಿನ ಪ್ರಮಾಣ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅರ್ಲಿ ಡಿಟೆಕ್ಷನ್ ಗೆ ಒತ್ತು ನೀಡಿ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿದೆ. ಕಳೆದ ಸಾಲಿಗೆ ಹೊಲಿಸಿದರೆ ಶೇ. 40 ಹೆಚ್ಚು ಪರೀಕ್ಷೆ ಮಾಡಲಾಗಿದೆ. ಹಾಗಾಗಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಇದನ್ನು ವಿರೋಧ ಪಕ್ಷಗಳು ಅರಿಯಲಿ ಎಂದಿರುವ ಅವರು, ಡೆಂಘೆ ಸಾವಿನ ಪ್ರಮಾಣ ಶೇ 0.09 ಇದೆ. ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರು ಕ್ಯಾನ್ಸರ್ ರೋಗಿ ಎಂದು ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.

    ಈಗಾಗಲೇ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿದೆ. ಪ್ರತಿ ಶುಕ್ರವಾರ ಲಾರ್ವಾನಾಶಕ ದಿನವನ್ನಾಗಿ ಆಂದೋಲನದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ, ಡೆಂಘೆ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದಿದ್ದಾರೆ.

    ಸರ್ಕಾರ ನೋಡಿ ಕಾಯಿಲೆ ಹರಡುತ್ತದೆಯೇ? ಯಾವ ಸರ್ಕಾರ ಅಸ್ಥಿತ್ವದಲ್ಲಿದೆ ಎಂದು ನೋಡಿ ಡೆಂಘೆ ಉಲ್ಬಣಗೊಳ್ಳುತ್ತದೆಯೇ ಎಂದು ಪ್ರಶ್ನಿಸಿರುವ ಸಚಿವರು, ಮೋದಿ ಸರ್ಕಾರ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್ ಹರಡಿತ್ತು ಎಂದು ಅರೋಪಿಸಿದರೆ ಒಪ್ಪಿತ್ತೀರ ಎಂದು ಪ್ರಶ್ನಿಸಿದರು. ಸಚಿವರಿಗೆ ಡೆಂಘೆ ಬರಲಿ ಎಂದು ಬಿಜೆಪಿ ಬಯಸುವುದು ಆ ಪಕ್ಷದ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.

    ಸುಧಾರಣೆಯ ಪ್ರಯತ್ನ: ಆರೋಗ್ಯ ಇಲಾಖೆ ಈ ಹಿಂದೆ ಎಷ್ಟು ಅನಾರೋಗ್ಯವಾಗಿತ್ತು ಈಗ ಎಷ್ಟರ ಮಟ್ಟಿಗೆ ನಾವು ಸುಧಾರಣೆ ತಂದಿದ್ದೇವೆ ಎಂದು ಚರ್ಚಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಷ್ಕ್ರೀಯವಾಗಿದ್ದ ಔಷಧಿ ಸರಬರಾಜು ನಿಗಮವನ್ನ ನಮ್ಮ ಸರ್ಕಾರ ಸುಧಾರಣೆಯತ್ತ ತರುವ ಪ್ರಯತ್ನವನ್ನ ಸತತವಾಗಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts