More

    ಕೆಂಪೇಗೌಡರ ಅಭಿವೃದ್ಧಿ ಮಾದರಿಗೆ ಬಿಡಿಎ ಅಗೌರವ: ಶಾಸಕ ಸುರೇಶ್‌ಕುಮಾರ್ ಆಕ್ಷೇಪ

    ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಹೊಂದಿದ್ದ ಅಭಿವೃದ್ಧಿಯ ದೂರದೃಷ್ಟಿಗೆ ವಿರುದ್ಧವಾಗಿ ಬಿಡಿಎ ವರ್ತಿಸುತ್ತಿದ್ದು, ಈ ಮೂಲಕ ಸರ್ಕಾರಿ ಸಂಸ್ಥೆಯೇ ನಾಡಪ್ರಭುಗಳಿಗೆ ಅಗೌರವ ತೋರಿಸುತ್ತಿದೆ ಎಂದು ಬಿಜೆಪಿ ಶಾಸಕ ಸುರೇಶ್‌ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಾಡಪ್ರಭು ಕೆಂಪೇಗೌಡರು ಅಭಿವೃದ್ಧಿಗೆ ಒಂದು ದೊಡ್ಡ ಮಾದರಿ. ಅವರ ಕಾಲದಲ್ಲಿ ನಿರ್ಮಿಸಿದ ಕೋಟೆಗಳು, ಕೆರೆ-ಉದ್ಯಾನ, ಪೇಟೆ-ಗುಡಿಗಳು ಯಾವುದೇ ಮಾನವ ನಿವಾಸ ಸ್ಥಳಗಳ ಅವಿಭಾಜ್ಯ ಅಂಗಗಳಾಗಿವೆ. ಬೆಂಗಳೂರು ಉದ್ಯಾನನಗರ ಎಂದು ಪ್ರಖ್ಯಾತವಾಗಲು ಕೆಂಪೇಗೌಡರು ಅಂದು ಹಾಕಿದ ಬುನಾದಿಯೇ ಕಾರಣ. ಆದರೆ, ಬಿಡಿಎ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಬಡಾವಣೆ ಘೋಷಿಸಿ ಅದನ್ನು ಪೂರ್ಣಗೊಳಿಸಲು ವಿಲವಾಗಿದೆ. ಇದು ಕೆಂಪೇಗೌಡರಿಗೆ ತೋರಿಸುತ್ತಿರುವ ಅನಾದರ ಎಂದು ಶಾಸಕರು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

    ಕೆಂಪೇಗೌಡ ಬಡಾವಣೆ ಅಂದಾಜು 20 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿ ಏಳೆಂಟು ವರ್ಷಗಳೇ ಕಳೆದಿದೆ. ಆದರೂ, ಸಕಲ ಮೂಲಸೌಕರ್ಯ ಕಲ್ಪಿಸಿ ಲೇಔಟ್‌ಅನ್ನು ವಾಸಯೋಗ್ಯ ಮಾಡುವಲ್ಲಿ ವೈಫಲ್ಯ ಕಂಡಿದೆ. ಇದೇ ಬಡಾವಣೆಯ ಆಸುಪಾಸಿನಲ್ಲಿರುವ ಖಾಸಗಿ ಲೇಔಟ್‌ಗಳಿಗೆ ಹೋಲಿಸಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳು ನಿಜಕ್ಕೂ ದುಬಾರಿಯಾಗಿದೆ. ಕಾಕತಾಳಿಯ ಎಂಬಂತೆ ನಾಡಪ್ರಭುಗಳ ಜಯಂತಿ ದಿನವಾದ ಗುರುವಾರ ವಿಧಾನಸಭೆ ಅರ್ಜಿ ಸಮಿತಿಯ ಮುಂದೆ ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಯಿತು. ಈ ವೇಳೆ ಬಿಡಿಎ ತಾನೇ ನೀಡಿದ್ದ ವಾಗ್ದಾನವನ್ನು ಈಡೇರಿಸಲು ಸಾಧ್ಯವಾಗಿಲ್ಲ. ಸಮಿತಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುವ ಆತ್ಮವಿಶ್ವಾಸದ ಕೊರತೆ ಅಧಿಕಾರಿಗಳಲ್ಲಿ ಎದ್ದು ಕಾಣುತ್ತಿತ್ತು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ಬಿಡಿಎ ಜವಾಬ್ದಾರಿ ಹೊತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಮುಂದಿನ ವರ್ಷದ ಜಯಂತಿಯೊಳಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರೆಲ್ಲರೂ ಮನೆ ಕಟ್ಟಿಕೊಳ್ಳುವ ಮೂಲಸೌಕರ್ಯಗಳಿಂದ ಕೂಡಿದ ವಾತಾವರಣವನ್ನು ಸೃಷ್ಟಿಸುವ ಮೂಲಕ ಕೆಂಪೇಗೌಡರಿಗೆ ನಿಜವಾದ ಗೌರವ ಸಲ್ಲಿಸಲಿ ಎಂದು ಸುರೇಶ್‌ಕುಮಾರ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts