More

    ಬಂದಾರು ಬಿಸಿನೀರ ಚಿಲುಮೆ ಚೇತರಿಕೆ : ಮೊದಲ ಬಾರಿಗೆ 40.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ : ವಿಜ್ಞಾನಿಗಳ ಅಧ್ಯಯನ ತಾಣ

    ವಿನಯ್ ಉಪ್ಪಿನಂಗಡಿ

    ಕಳೆದ ಎರಡು ವರ್ಷದಿಂದ ಬೇಸಿಗೆಯಲ್ಲಿ ಬತ್ತುತ್ತಿರುವ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿನ ಬಿಸಿ ನೀರ ಚಿಲುಮೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಚೇತರಿಸಿಕೊಂಡಿದ್ದು, ಬಂಡೆಗಳ ನಡುವಿನಿಂದ ಬಿಸಿ ನೀರು ಹರಿದು ಬರಲು ಆರಂಭವಾಗಿದೆ. ಮೊದಲ ಬಾರಿಯೆಂಬಂತೆ ನೀರಿನ ತಾಪಮಾನ 40.3 ಡಿಗ್ರಿ ಸೆಲ್ಶಿಯಸ್ ಆಗಿದೆ.

    ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕ ಎಂಬಲ್ಲಿ ಮುಳುಗು ತಜ್ಞ ಮುಹಮ್ಮದ್ ಬಂದಾರು ಅವರ ಜಾಗದಲ್ಲಿ ಬಿಸಿನೀರಿನ ಚಿಲುಮೆ ಕೆರೆಯಂತಿದೆ. ಇದು 10 ರಿಂದ 12 ಅಡಿ ಉದ್ದ, ಏಳು ಅಡಿ ಅಗಲ, ಐದು ಅಡಿ ಆಳವಿದ್ದು, ಇದರ ಮೇಲ್ಗಡೆ ಇರುವ ಕಲ್ಲುಗಳ ಸಂದಿನಿಂದ ಸುಮಾರು ಅರ್ಧ ಇಂಚಿನಷ್ಟು ಬಿಸಿನೀರು ಬಂದು ಇದಕ್ಕೆ ಬೀಳುತ್ತದೆ. ಇದರ ಕೆಳಗಡೆ ತಗ್ಗು ಪ್ರದೇಶದಲ್ಲಿ ಗದ್ದೆಯಿದ್ದು, ಇದಕ್ಕಿಂತ ಸುಮಾರು 100 ಮೀ. ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ.

    365 ದಿನವೂ ಇಲ್ಲಿ ನೀರು ಬತ್ತುತ್ತಿರಲಿಲ್ಲ. ದಿನದ 24 ಗಂಟೆಯೂ ಬಿಸಿನೀರು ಬಂಡೆಗಳೆಡೆಯಿಂದ ಬಂದು ಬೀಳುತ್ತಿತ್ತು. ಸುತ್ತಮುತ್ತ ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಕಳೆದ ಎರಡು ವರ್ಷದಿಂದ ಬೇಸಿಗೆ ಕಾಲದಲ್ಲಿ ನೀರು ಬತ್ತುತ್ತಿದೆ ಎನ್ನುತ್ತಾರೆ ಮುಹಮ್ಮದ್. ಈ ನೀರು ಬಂದು ಬೀಳುವ ಕೆರೆಯಂತಹ ಜಾಗದ ಅಡಿಗೆ ಕಾಂಕ್ರೀಟ್ ಹಾಕಿದ್ದು, ಕೆರೆಯ ಬದಿಯ ಬಂಡೆಗಳಿಗೆ ಬಣ್ಣ ಹಚ್ಚಿದ್ದು ಹಾಗೂ ಬಿಸಿ ನೀರು ಬರುವ ಬಳಿ ಪೈಪೊಂದನ್ನು ಸಿಕ್ಕಿಸಿದ್ದು ಬಿಟ್ಟರೆ, ಇದರ ಮೂಲ ಸ್ವರೂಪವನ್ನು ಬದಲಾಯಿಸಿಲ್ಲ.

    ಚರ್ಮ ವ್ಯಾಧಿಗೆ ಪರಿಣಾಮಕಾರಿಯಾಗಿರುವ ಈ ಬಿಸಿ ನೀರಿನ ಚಿಲುಮೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದ್ದು, ಇದು ಪ್ರವಾಸಿತಾಣವಾಗಿಯೂ ಅಭಿವೃದ್ಧಿಯಾಗಬೇಕಿದೆ.

    ಭತ್ತದ ಕೃಷಿಗೆ ಇದೇ ನೀರು

    ಈ ಚಿಲುಮೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದು ಗಡಸು ನೀರಾಗಿದ್ದು, ಇದರಲ್ಲಿ ಸ್ನಾನ ಮಾಡಿದಾಗ ಸಾಬೂನಿನಲ್ಲಿ ನೊರೆ ಬರುವುದಿಲ್ಲ. ನೀರಿನಲ್ಲಿ ಮೀನುಗಳು ಬದುಕುವುದಿಲ್ಲ. ಇದರಲ್ಲಿ ಒಂದು ರೀತಿಯ ಪಾಚಿ ಬರುತ್ತದೆ. ಈ ನೀರು ಚರ್ಮ ರೋಗಕ್ಕೆ ಉತ್ತಮವಂತೆ. ತುಂಬಾ ಜನ ಚರ್ಮ ರೋಗ ಇದ್ದವರು ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗಿದ್ದಾರೆ. ಸ್ನಾನ ಮಾಡಿಕೊಂಡು ಹೋಗುವುದಕ್ಕೆ ಆಕ್ಷೇಪವಿಲ್ಲ. ಅವರಿಗೆ ಬೇಕಾದ ಬಕೆಟ್ ಮತ್ತಿತರ ವ್ಯವಸ್ಥೆ ನಾನೇ ಮಾಡಿಕೊಡುತ್ತೇನೆ ಎನ್ನುತ್ತಾರೆ ಮುಹಮ್ಮದ್.

    ವಿಜ್ಞಾನಿಗಳ ಅಧ್ಯಯನಕ್ಕೆ ಒಳಪಟ್ಟ ಸ್ಥಳ

    10 ವರ್ಷಗಳಿಂದ ಭೂ ವಿಜ್ಞಾನಶಾಸ್ತ್ರ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ, ಅಧ್ಯಯನ ನಡೆಸುತ್ತಿದೆ. ಮೊದಲು ಚೆನ್ನೈಯಿಂದ ಬರುತ್ತಿದ್ದರು. ಈಗ ಕೇರಳದ ತಿರುವನಂತಪುರದಿಂದ ವಿಜ್ಞಾನಿಗಳ ತಂಡ ಆರು ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ. ಅವರಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಮಹಮ್ಮದ್ ನೀರಿನ ತಾಪಮಾನ ಪರೀಕ್ಷಿಸಿ ವರದಿ ಕಳುಹಿಸಬೇಕು. ಅದಕ್ಕೆ ಬೇಕಾದ ಥರ್ಮಾಮೀಟರ್‌ಗಳನ್ನು ಇಲಾಖೆಯೇ ನೀಡಿದೆ.

    ತಾಪಮಾನ ಹೆಚ್ಚಾಗುತ್ತಿದೆ

    ಈವರೆಗೆ ಇಲ್ಲಿ ನೀರಿನ ಗರಿಷ್ಠ ಉಷ್ಣತೆ 36.6 ಡಿಗ್ರಿ ಸೆಲ್ಶಿಯಸ್ ಇರುತ್ತಿತ್ತು. ಆದರೆ ಮಂಗಳವಾರ ಬೆಳಗ್ಗೆ 40.3 ಡಿಗ್ರಿ ಸೆಲ್ಶಿಯಸ್ ಇದೆ. ಸುತ್ತಲಿನ ವಾತಾವರಣ ತಂಪಿದ್ದಾಗ ಈ ನೀರಿನ ತಾಪಮಾನ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಬಂಡೆಗಳೆಡೆಯಿಂದ ಬರುವ ನೀರಿನ ಪ್ರಮಾಣವೂ ಸ್ವಲ್ಪ ಜಾಸ್ತಿಯಿರುತ್ತದೆ ಎನ್ನುತ್ತಾರೆ ಮುಹಮ್ಮದ್. ಭೂಮಿಯ ಒಳಗಡೆ ಈ ನೀರು ಇನ್ನಷ್ಟು ಬಿಸಿ ಇದ್ದರೂ ಹೊರಗೆ ಬಂದಂತೆ ಅದರ ತಾಪಮಾನ ಕಡಿಮೆಯಾಗುತ್ತದೆ. ಬಿಸಿನೀರ ಚಿಲುಮೆ ಈಗ ದಕ್ಷಿಣ ಭಾರತದಲ್ಲಿ ಬೆರಳೆಣಿಕೆಯಷ್ಟಿದೆ ಎಂದು ವಿಜ್ಞಾನಿಗಳು ಅವರಿಗೆ ತಿಳಿಸಿದ್ದಾರಂತೆ.

    ಬಟ್ಲಡ್ಕದ ಬಿಸಿ ನೀರ ಚಿಲುಮೆ ನಮ್ಮ ಗ್ರಾಮದ ವ್ಯಾಪ್ತಿಯೊಳಗಿದೆ ಎನ್ನುವುದನ್ನು ಬಿಟ್ಟರೆ ಅದು ಪಂಚಾಯಿತಿ ನಿಯಂತ್ರಣದಲ್ಲಿ ಇಲ್ಲ. ನೀರು ಬಿಸಿಯಾಗಿ ಬರುತ್ತಿದ್ದರೂ ಅದನ್ನು ಕುಡಿಯುವುದಕ್ಕೆ ಬಳಸಲಾಗುತ್ತಿಲ್ಲ. ಅದನ್ನು ಆ ಜಾಗದ ಮಾಲೀಕರು ಪಂಚಾಯಿತಿ ಆಡಳಿತಕ್ಕೆ ಬಿಟ್ಟುಕೊಟ್ಟಲ್ಲಿ ಅಭಿವೃದ್ಧಿ ಪಡಿಸಲು, ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತಿಸಲು ಅವಕಾಶವಿದೆ. ಸದ್ಯ ಅದರ ನೀರು ನದಿ ಸೇರುವುದನ್ನು ಬಿಟ್ಟರೆ, ಬೇರಾವ ರೀತಿಯಲ್ಲಿಯೂ ಬಳಕೆಯಾಗುತ್ತಿಲ್ಲ.

    – ದಿನೇಶ್ ಗೌಡ, ಬಂದಾರು ಗ್ರಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts