More

    ಇಂದಿನಿಂದ ಏಷ್ಯಾಕಪ್​ ಕ್ರಿಕೆಟ್​ ಹಬ್ಬ; ಪಾಕ್​-ನೇಪಾಳ ಉದ್ಘಾಟನಾ ಪಂದ್ಯ

    ಮುಲ್ತಾನ್​/ಕೊಲಂಬೊ: ಉಪಖಂಡದ ಅತಿದೊಡ್ಡ ಕ್ರಿಕೆಟ್​ ಹಬ್ಬ ಎನಿಸಿರುವ ಏಷ್ಯಾಕಪ್​ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್​ ಸಿದ್ಧತೆ ದೃಷ್ಟಿಯಿಂದ ಈ ಬಾರಿ ಮತ್ತೆ ಏಕದಿನ ಮಾದರಿಗೆ ಟೂರ್ನಿ ಮರಳುತ್ತಿದೆ. ಬುಧವಾರ ಮುಲ್ತಾನ್​ನಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಸೆಣಸಲಿದೆ. ಕಳೆದ ವರ್ಷದ ಟಿ20 ಏಷ್ಯಾಕಪ್​ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಿದ್ದರೂ, ಏಕದಿನ ಮಾದರಿಯಲ್ಲಿ 2018ರಲ್ಲಿ ನಡೆದ ಕೊನೇ ಏಷ್ಯಾಕಪ್​ನಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಭಾರತವನ್ನೇ ಹಾಲಿ ಚಾಂಪಿಯನ್​ ಮತ್ತು ಫೇವರಿಟ್​ ತಂಡವನ್ನಾಗಿ ಪರಿಗಣಿಸಬಹುದು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ರೋಹಿತ್​ ಶರ್ಮ ಪಡೆ ಶನಿವಾರ ಅಭಿಯಾನ ಆರಂಭಿಸಲಿದೆ. ಶ್ರೀಲಂಕಾ ತಂಡ ಕೆಲ ಪ್ರಮುಖ ಆಟಗಾರರ ಗಾಯದ ಹಿನ್ನಡೆ ಹೊಂದಿದ್ದರೆ, ಬಾಂಗ್ಲಾ ತಂಡ ಮತ್ತೆ ಶಕೀಬ್​ ಅಲ್​ ಹಸನ್​ ಸಾರಥ್ಯ ಪಡೆದುಕೊಂಡಿದೆ. ಅಫ್ಘಾನಿಸ್ತಾನ ತಂಡ ಗಮನಾರ್ಹ ನಿರ್ವಹಣೆ ತೋರುವ ಹಂಬಲದಲ್ಲಿದೆ. ಹಿಂದಿನ 15 ಆವೃತ್ತಿಗಳಲ್ಲಿ 7ರಲ್ಲಿ ಭಾರತ ಚಾಂಪಿಯನ್​ ಪಟ್ಟವೇರಿದೆ. ಶ್ರೀಲಂಕಾ 6 ಮತ್ತು ಪಾಕಿಸ್ತಾನ 2 ಬಾರಿ ಪ್ರಶಸ್ತಿ ಜಯಿಸಿವೆ.

    ಪಾಕ್​-ನೇಪಾಳ ಉದ್ಘಾಟನಾ ಪಂದ್ಯ
    ಎರಡು ಬಾರಿಯ ಚಾಂಪಿಯನ್​ ಪಾಕಿಸ್ತಾನ ಮತ್ತು ಇದೇ ಮೊದಲ ಬಾರಿಗೆ ಟೂರ್ನಿ ಆಡುತ್ತಿರುವ ನೇಪಾಳ ತಂಡಗಳ ನಡುವೆ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ತವರಿನ ಅನುಕೂಲಕರ ವಾತಾವರಣದಲ್ಲಿ ಪಾಕಿಸ್ತಾನ ತಂಡ ಶುಭಾರಂಭ ಕಾಣುವ ತವಕದಲ್ಲಿದೆ. ಇತ್ತೀಚೆಗಷ್ಟೇ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರಿರುವುದು ಬಾಬರ್​ ಅಜಮ್​ ಬಳಗದ ಆತ್ಮವಿಶ್ವಾಸ ಹೆಚ್ಚಿಸಿದೆ.

    ಪಾಕ್​-ಲಂಕಾ ಜಂಟಿ ಆತಿಥ್ಯ
    ಮೂಲ ವೇಳಾಪಟ್ಟಿಯ ಪ್ರಕಾರ ಟೂರ್ನಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕಾಗಿತ್ತು. ಆದರೆ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಭದ್ರತಾ ಭೀತಿಯಿಂದ ಭಾರತ ತಂಡ ಪಾಕಿಸ್ತಾನಕ್ಕೆ ಹೋಗದ ಕಾರಣ, ಟೂರ್ನಿ ಶ್ರೀಲಂಕಾಕ್ಕೂ ವಿಸ್ತರಿಸಲ್ಪಟ್ಟಿದೆ. ಪಾಕ್​ನಲ್ಲಿ 4 ಪಂದ್ಯಗಳು ನಡೆದರೆ, ಉಳಿದ 9 ಪಂದ್ಯಗಳು ಲಂಕಾದಲ್ಲಿ ನಡೆಯಲಿವೆ. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲೇ ಆಡಲಿದ್ದರೆ, ಶ್ರೀಲಂಕಾ ಸಹಿತ ಉಳಿದೆಲ್ಲ ತಂಡಗಳು ಕನಿಷ್ಠ ಒಂದಾದರೂ ಪಂದ್ಯವನ್ನು ಪಾಕ್​ನಲ್ಲಿ ಆಡಲಿದೆ.

    ವಿಶ್ವಕಪ್​ಗೆ ಸಮರಾಭ್ಯಾಸ
    ಭಾರತದ ಆತಿಥ್ಯದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಸಿದ್ಧತೆ ಮತ್ತು 11ರ ಬಳಗವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಎಲ್ಲ ತಂಡಗಳಿಗೂ ಈ ಟೂರ್ನಿ ಮಹತ್ವದ್ದಾಗಿದೆ. ಭಾರತ ಫೇವರಿಟ್​ ಆಗಿದ್ದರೂ, ಸೂಪರ್-4ರಲ್ಲಿ ಪ್ರತಿ ಪಂದ್ಯವೂ “ಸೆಮಿಫೈನಲ್​’ ಎನಿಸಲಿದೆ.

    ಐಸಿಸಿ ಟೂರ್ನಿ ಬಳಿಕ ದೊಡ್ಡ ಕಾದಾಟ
    1984ರಲ್ಲಿ ಆರಂಭಗೊಂಡ ಏಷ್ಯಾಕಪ್​, ವಿವಿಧ ಐಸಿಸಿ ಟೂರ್ನಿಗಳ ಬಳಿಕ ಅತಿದೊಡ್ಡ ಮತ್ತು ಅತಿಹೆಚ್ಚು ತಂಡಗಳು ಆಡುವ ಅಂತಾರಾಷ್ಟ್ರೀಯ ಕ್ರಿಕೆಟ್​ ಟೂರ್ನಿ ಎನಿಸಿದೆ. ಏಷ್ಯಾಕಪ್​ ಮೊದಲಿಗೆ ಇಂತಿಷ್ಟೇ ವರ್ಷಗಳಿಗೆ ಎಂಬಂತೆ ನಡೆಯುತ್ತಿರಲಿಲ್ಲ. 2008ರಿಂದ 2018ರವರೆಗೆ ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್​ ನಡೆದಿತ್ತು. 2020-2021ರಲ್ಲಿ ಕರೊನಾ ಹಾವಳಿಯಿಂದಾಗಿ ಟೂರ್ನಿ ನಡೆಯಲಿಲ್ಲ. ಹೀಗಾಗಿ ಈ ಬಾರಿ ಸತತ 2ನೇ ವರ್ಷ ಏಷ್ಯಾಕಪ್​ ನಡೆಯುತ್ತಿದೆ.

    ಈ ಬಾರಿ ಮತ್ತೆ ಏಕದಿನ ಮಾದರಿ
    ಮೊದಲಿಗೆ ಏಕದಿನ ಮಾದರಿಯಲ್ಲಿ ಮಾತ್ರ ಏಷ್ಯಾಕಪ್​ ನಡೆಯುತ್ತಿತ್ತು. ಆದರೆ ಟಿ20 ವಿಶ್ವಕಪ್​ ಇರುವ ವರ್ಷಗಳಲ್ಲಿ ಅದರ ಪೂರ್ವಸಿದ್ಧತೆಗೆ ಅನುಕೂಲವಾಗುವ ದೃಷ್ಟಿಯಿಂದ ಟಿ20 ಮಾದರಿಯಲ್ಲೂ 2 ಟೂರ್ನಿ ನಡೆಸಲಾಗಿದೆ. 2016 ಮತ್ತು 2022ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾಕಪ್​ ಆಯೋಜಿಸಲಾಗಿತ್ತು. ಈ ವರ್ಷ ಏಕದಿನ ವಿಶ್ವಕಪ್​ ಸಿದ್ಧತೆ ದೃಷ್ಟಿಯಿಂದ ಮತ್ತೆ ಏಕದಿನ ಮಾದರಿಯಲ್ಲೇ ಏಷ್ಯಾಕಪ್​ ನಡೆಯಲಿದೆ.

    ಗುಂಪುಗಳು:
    ಎ: ಭಾರತ, ಪಾಕಿಸ್ತಾನ, ನೇಪಾಳ
    ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ

    ಟೂರ್ನಿ ಸ್ವರೂಪ
    ಟೂರ್ನಿಯಲ್ಲಿ ಆಡುವ 6 ತಂಡಗಳನ್ನು ತಲಾ 3ರಂತೆ 2 ಗುಂಪುಗಳಾಗಿ ವಿಭಾಗಿಸಲಾಗಿದೆ. ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ‘ಸೂಪರ್​-4’ ಹಂತಕ್ಕೇರಲಿವೆ. ಸೆ. 6ರಿಂದ ಸೂಪರ್​-4ರಲ್ಲಿ ಎಲ್ಲ 4 ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿವೆ. ಅಂತಿಮವಾಗಿ ಸೂಪರ್​-4ರ ಅಗ್ರ 2 ತಂಡಗಳು ಸೆ. 17ರಂದು ಫೈನಲ್​ ಪಂದ್ಯದಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.

    ಗುಂಪು ಹಂತದ ವೇಳಾಪಟ್ಟಿ
    ದಿನಾಂಕ: ಪಂದ್ಯ(ಸ್ಥಳ)
    ಆ. 30: ಪಾಕಿಸ್ತಾನ-ನೇಪಾಳ (ಮುಲ್ತಾನ್​)
    ಆ. 31: ಶ್ರೀಲಂಕಾ-ಬಾಂಗ್ಲಾದೇಶ (ಪಲ್ಲೆಕಿಲೆ)
    ಸೆ. 2: ಭಾರತ-ಪಾಕಿಸ್ತಾನ (ಪಲ್ಲೆಕಿಲೆ)
    ಸೆ. 3: ಅಫ್ಘಾನಿಸ್ತಾನ-ಬಾಂಗ್ಲಾದೇಶ (ಲಾಹೋರ್​)
    ಸೆ. 4: ಭಾರತ-ನೇಪಾಳ (ಪಲ್ಲೆಕಿಲೆ)
    ಸೆ. 5: ಅಫ್ಘಾನಿಸ್ತಾನ-ಶ್ರೀಲಂಕಾ (ಲಾಹೋರ್​)
    *ಎಲ್ಲ ಪಂದ್ಯ ಆರಂಭ: ಮಧ್ಯಾಹ್ನ 3.00
    *ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ಸ್ಟಾರ್​

    ನೇಪಾಳ ಹೊಸ ಎಂಟ್ರಿ
    ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿರುವ ನೇಪಾಳ, ಮೊದಲ ಬಾರಿಗೆ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದೆ. ನೇಪಾಳ ಕ್ರಿಕೆಟ್​ ಏಷ್ಯಾಕಪ್​ಗೆ ಪ್ರವೇಶ ಪಡೆದಿರುವ 8ನೇ ದೇಶವೆನಿಸಿದೆ.

    ಭಾರತಕ್ಕೆ ಬರ್ತಿದ್ದಾರೆ ಡಬ್ಲ್ಯುಡಬ್ಲ್ಯುಇ ತಾರೆ ಜಾನ್​ ಸೀನಾ; ಎಲ್ಲಿ, ಯಾವಾಗ ಸ್ಪರ್ಧೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts