More

    ಖಾಲಿಯಾಗುತ್ತಿದೆ ಆಲೂಗಡ್ಡೆ ಕಣಜ!; ನಿಧಾನವಾಗಿ ಕಣ್ಮರೆ ಆಗುತ್ತಿರುವ ಬೆಳೆ..

    | ರಮೇಶ್ ಹಂಡ್ರಂಗಿ ಹಾಸನ
    ‘ಆಲೂಗಡ್ಡೆ ಕಣಜ’ ಎಂದೇ ಕರೆಸಿಕೊಳ್ಳುತ್ತಿದ್ದ ಹಾಸನ ಜಿಲ್ಲೆಯಲ್ಲಿ ಈಗ ಆಲೂಗಡ್ಡೆ ಬೆಳೆ ನಿಧಾನವಾಗಿ ಕಣ್ಮರೆಯಾಗುತ್ತಿದೆ.

    ಜಿಲ್ಲೆಯ ಬೆಳೆಗಳಲ್ಲಿ ಆಲೂಗಡ್ಡೆ ಅಗ್ರಸ್ಥಾನದಲ್ಲಿತ್ತು. ರಾಜ್ಯದಲ್ಲಿ ಶೇ. 4ರಷ್ಟು ಆಲೂಗಡ್ಡೆಯು ಜಿಲ್ಲೆಯಲ್ಲಿಯೇ ಉತ್ಪಾದನೆಯಾಗುತ್ತಿತ್ತು. ಆದರೀಗ ಈ ಬೆಳೆ ಬಿತ್ತನೆ ಈಗ ಕೇವಲ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಕಳಪೆ ಬಿತ್ತನೆ ಬೀಜ, ಅಂಗಮಾರಿ ರೋಗ, ಸಿಗದ ಸೂಕ್ತ ಬೆಲೆ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರ ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದಾಗಿ ಜಿಲ್ಲೆಯ ರೈತರು ಆಲೂಗಡ್ಡೆ ಬೆಳೆಯಲು ನಿರಾಸಕ್ತಿ ತಳೆದಿದ್ದಾರೆ.

    2018-19ನೇ ಸಾಲಿನಲ್ಲಿ ಜಿಲ್ಲೆಯ 13,859 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಆಲೂಗಡ್ಡೆ, 2019-20ನೇ ಸಾಲಿನಲ್ಲಿ 10,127 ಹೆಕ್ಟೇರ್​ಗೆ ಕಡಿಮೆಯಾಯಿತು. 2020-21ನೇ ಸಾಲಿನಲ್ಲಿ 9,345 ಹೆಕ್ಟೇರ್, 2021-22ನೇ ಸಾಲಿನಲ್ಲಿ 10,849 ಹೆಕ್ಟೇರ್, 2022-23ನೇ ಸಾಲಿನಲ್ಲಿ 6,970 ಹೆಕ್ಟೇರ್ ಹಾಗೂ ಪ್ರಸ್ತುತ 2,160.9 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬಿತ್ತನೆ ಮಾಡಲಾಗಿದೆ.

    ಶುಂಠಿ, ಜೋಳದತ್ತ ಒಲುವು: ರೈತರಿಗೆ ಆಲೂಗಡ್ಡೆ ನಷ್ಟದ ಬೆಳೆ ಎನಿಸಿದಾಗ ರೈತರು ಜೋಳ ಹಾಗೂ ಶುಂಠಿ ಬೆಳೆಯತ್ತ ಗಮನ ಹರಿಸಿದರು. ಪ್ರಸ್ತುತ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಜೋಳ, ಶುಂಠಿ ನಾಟಿ ಮಾಡಿದ್ದಾರೆ. ಜೋಳ ಹೆಚ್ಚು ಖರ್ಚಿಲ್ಲದ, ನಿಶ್ಚಿತ ಆದಾಯದ ಬೆಳೆಯಾಗಿದ್ದರೆ, ಶುಂಠಿ ಒಮ್ಮೆ ಲಾಟರಿ ಹೊಡೆದರೆ ಕೋಟ್ಯಧಿಪತಿಯನ್ನಾಗಿ ಮಾಡುತ್ತದೆ ಎಂಬ ನಂಬಿಕೆ ಇದೆ.

    2 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ: ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಿಗೆ ಹಾಸನ ಉಗ್ರಾಣದಿಂದಲೇ ಆಲೂಗಡ್ಡೆ ಬಿತ್ತನೆ ಬೀಜ ನೀಡಲಾಗುತ್ತದೆ. ಈ ಬಾರಿ ಶೇಖರಿಸಿದ್ದ 4 ಲಕ್ಷ ಕ್ವಿಂಟಾಲ್​ನಲ್ಲಿ 2 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಹಾಗೆಯೇ ಉಳಿದಿದೆ. ಕ್ವಿಂಟಾಲ್​ಗೆ ಈ ಮೊದಲು 1,600 ರೂ. ನಿಗದಿ ಮಾಡಲಾಗಿತ್ತು. ಆ ನಂತರ 1,200 ರೂ., 900 ರೂ., 800 ರೂ. ಗೆ ನಿಗದಿ ಮಾಡಿದರೂ ಬಿತ್ತನೆ ಬೀಜ ಕೊಳ್ಳಲು ರೈತರು ಮುಂದೆ ಬರುತ್ತಿಲ್ಲ.

    ಅಂಗಾಂಶ ತಂತ್ರಜ್ಞಾನದಿಂದ ಆಲೂಗಡ್ಡೆ ಸಸಿಗಳನ್ನು ಬೆಳೆಸಿ ತಲಾ 1 ರೂ. ನಂತೆ ರೈತರಿಗೆ ನೀಡುತ್ತೇವೆ. ಸರ್ಕಾರದಿಂದ ಎಕರೆಗೆ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ. ನಾವು ನೀಡುವ ಸಸಿಯಿಂದ ಒಂದನೇ ತಲೆಮಾರಿನ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದು. ಇದು ಗುಣಮಟ್ಟದ ಬೀಜವಾಗಿರುತ್ತದೆ.

    | ಎಚ್.ಆರ್. ಯೋಗೇಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

    ಕುಸರಿ ಹಿಮಾಲಿನಿ ಎಂಬ ಬಿತ್ತನೆ ತಳಿ ರೋಗನಿರೋಧಕ ಶಕ್ತಿ ಹೊಂದಿದ್ದು, ಇದೇ ಸಸಿಗಳನ್ನು 10 ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ. ಇದಕ್ಕೆ 15 ದಿನಗಳ ಅಂತರದಲ್ಲಿ 3 ಸ್ಪ್ರೇ ನೀಡಿದರೆ ಉತ್ತಮ ಇಳುವರಿ ತೆಗೆಯಬಹುದು. ಈ ಸಸಿಗಳನ್ನು ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.

    | ಡಾ.ವೈ.ಎಸ್. ಮಹೇಶ್, ಮುಖ್ಯಸ್ಥ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಾಸನ

    ವಿದೇಶಗಳಿಗೆ ರಫ್ತು ಸ್ಥಗಿತ: ಹಾಸನದ ಆಲೂಗಡ್ಡೆ ಮೊದಲು ಬರುತ್ತದೆ. ಇದನ್ನು ಚಿಪ್ಸ್, ತರಕಾರಿಯಾಗಿ ರಾಜ್ಯ ಸೇರಿ ದೇಶದ ವಿವಿಧ ಭಾಗಗಳಿಗೆ ಕಳುಹಿಸಿಕೊಡಲಾಗುತ್ತದೆ. ಈ ಮೊದಲು ಶ್ರೀಲಂಕಾ, ಸಿಂಗಾಪುರ, ಬ್ಯಾಂಕಾಕ್ ಸೇರಿ ವಿದೇಶಗಳಿಗೂ ರಫ್ತು ಮಾಡುತ್ತಿದ್ದೇವು. ಆದರೆ, ಈಗ ಜಿಲ್ಲೆಯಲ್ಲಿ ಬೆಳೆಯುವ ಪ್ರಮಾಣ ಕಡಿಮೆಯಾಗಿರುವುದರಿಂದ ವಿದೇಶಗಳಿಗೆ ರಫ್ತು ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ ಹಾಸನ ಎಪಿಎಂಸಿ ಗೌರವ ಅಧ್ಯಕ್ಷ ಎಚ್.ಕೆ. ಬೋರೇಗೌಡ.

    ಬೇಡಿಕೆ ಏಕೆ?: ದೇಶದಲ್ಲಿ ಅತಿ ಹೆಚ್ಚು ಆಲೂಗಡ್ಡೆಯನ್ನು ಉತ್ತರ ಭಾರತದ ಪಂಜಾಬ್, ಹಿಮಾಚಲಪ್ರದೇಶ, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿ ನವೆಂಬರ್​ನಲ್ಲಿ ನಾಟಿ ಮಾಡಿ, ಫೆಬ್ರವರಿ ವೇಳೆಗೆ ಕಟಾವು ಮಾಡುತ್ತಾರೆ. ಆ ಬಳಿಕ ಅದನ್ನು ಕೋಲ್ಡ್ ಸ್ಟೋರೇಜ್​ನಲ್ಲಿ ಸಂಗ್ರಹ ಮಾಡಲಾಗುತ್ತದೆ. ವರ್ಷಪೂರ್ತಿ ಇದೇ ಆಲೂಗಡ್ಡೆಯನ್ನು ಬಳಕೆ ಮಾಡಲಾಗುತ್ತದೆ. ಆದರೆ, ಹಾಸನ ಭಾಗದಲ್ಲಿ ಮುಂಗಾರು ಆರಂಭದಲ್ಲಿ ನಾಟಿ ಮಾಡಿದರೆ ಆಗಸ್ಟ್- ಸೆಪ್ಟೆಂಬರ್​ನಲ್ಲಿ ಬೆಳೆ ಬರುತ್ತದೆ. ಈ ಭಾಗದ ಮಣ್ಣು ಮತ್ತು ಮಳೆಯಾಶ್ರಿತದಲ್ಲಿ ಬೆಳೆಯುವ ಆಲೂಗಡ್ಡೆ ಗುಣಮಟ್ಟದಿಂದ ಕೂಡಿರುತ್ತದೆ. ಹೀಗಾಗಿ ಹಾಸನ ಆಲೂಗಡ್ಡೆಗೆ ತುಂಬ ಬೇಡಿಕೆ ಇದೆ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ಯೋಗೇಶ್.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts