More

    ರಾಜಧಾನಿಯ 28 ಕ್ಷೇತ್ರಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರ ನೇಮಕ

    ಬೆಂಗಳೂರು: ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲಿದ್ದು, ಕಚೇರಿಗಳನ್ನು ಹೊಂದಿಸಿಕೊಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಪಾಲಿಕೆಯ ಪೌರ ಸಭಾಂಗಣದಲ್ಲಿ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ತರಲು ಈ ಸಮಿತಿಗಳು ನಿಗಾ ಇಡಲಿವೆ. ಲಾನುಭವಿಗಳಿಗೆ ಸೌಲಭ್ಯ ಸಿಗದಿದ್ದಲ್ಲಿ ಅಂತಹವರಿಂದ ವಿವರ ಪಡೆದು ಸರ್ಕಾರದ ಸವಲತ್ತು ಒದಗಿಸುವ ಕಾರ್ಯವನ್ನು ಸಮಿತಿಯು ಮಾಡಲಿದೆ ಎಂದರು.

    ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರನ್ನು ನೇಮಿಸಿ ಕಚೇರಿಯನ್ನು ಒದಗಿಸಲಾಗಿದೆ. ಸದ್ಯದಲ್ಲೇ ನಗರದ ಎಲ್ಲ 28 ಕ್ಷೇತ್ರಗಳಿಗೂ ಅಧ್ಯಕ್ಷರನ್ನು ನಿಯೋಜಿಸಿ ಕಚೇರಿ ಹೊಂದಿಸಿಕೊಡಲಾಗುವುದು. ರಾಜ್ಯದೆಲ್ಲೆಡೆ ಪ್ರತಿ ಜಿಲ್ಲೆ, ತಾಲೂಕುಗಳಿಗೆ ಈಗಾಗಲೇ ಕೆಲವರನ್ನು ನೇಮಕ ಮಾಡಿದ್ದು, ಬಾಕಿ ಸ್ಥಾನಗಳಿಗೆ 15 ದಿನಗಳೊಳಗೆ ಭರ್ತಿ ಮಾಡಲಾಗುವುದು. ಅಧ್ಯಕ್ಷರಿಗೆ ಸಂಭಾವನೆ ಕೂಡ ನೀಡಲಾಗುತ್ತದೆ. ಗ್ಯಾರಂಟಿ ಯೋಜನೆಗಳು ದುರ್ಬಲರಿಗೆ ಆರ್ಥಿಕವಾಗಿ ಶಕ್ತಿ ತುಂಬಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

    ಉದ್ಘಾಟನೆ ವೇಳೆ ಶಾಸಕ ಪ್ರಿಯಕೃಷ್ಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮಾಜಿ ಉಪಮಹಾಪೌರ ಎಲ್.ಶ್ರೀನಿವಾಸ್, ಮಾಜಿ ಕಾರ್ಪೊರೇಟರ್ ಆಡುಗೋಡಿ ಮೋಹನ್ ಮತ್ತಿತರರಿದ್ದರು.

    ಬಿಬಿಎಂಪಿ ಚುನಾವಣೆಗೆ ಸಿದ್ಧತೆ:

    ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ. ವಾರ್ಡ್‌ವಾರು ಮೀಸಲಾತಿಯನ್ನೂ ನಿಗದಿ ಮಾಡುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ಯಾವ ಸಮಯದಲ್ಲಿ ಚುನಾವಣೆ ನಡೆಯಬಹುದು ಎಂಬುದನ್ನು ತಿಳಿಸಿಲ್ಲ. ಕಾದು ನೋಡಿ ಎಂದಷ್ಟೇ ಹೇಳಿದರು.

    ರಾಜ್ಯದ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಯ ಲಾಭ ತಲುಪಿದೆ. ಅನ್ನಭಾಗ್ಯ ಮತ್ತು 200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಾಜಮಾನಿಗೆ 2,000 ರೂ. ಸಹಾಯಧನ, ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಯುವ ನಿಧಿ ಯೋಜನೆಗಳು ಬಡವರ ಮತ್ತು ಮಧ್ಯಮ ವರ್ಗದ ಕುಟುಂಬದವರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನ ತಿಳಿಸಲಾಗುತ್ತದೆ.
    – ಜಿ.ಕೃಷ್ಣಪ್ಪ, ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts