More

    ಕೋಟಿ ಬೇಕೆನ್ನುವವರ ಮಧ್ಯೆ ಎಲ್ಲವೂ ಸಾಕೆಂದವರು

    ಕೋಟಿ ಬೇಕೆನ್ನುವವರ ಮಧ್ಯೆ ಎಲ್ಲವೂ ಸಾಕೆಂದವರುವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಯುವಸಂನ್ಯಾಸಿಗಳ ಮತ್ತು ಅಧ್ಯಾತ್ಮಜಿಜ್ಞಾಸುಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಬದುಕಿನ ಬಗ್ಗೆ ಹೊಸ ದರ್ಶನ ಪ್ರಾಪ್ತವಾಗುತ್ತಿದೆ. ಆಧುನಿಕ ಒತ್ತಡದ, ಅನಗತ್ಯ ಸ್ಪರ್ಧೆಯ ಅರ್ಥಹೀನ ಬದುಕಿಗಿಂತ ಆಂತರಿಕ ಸಾಧನೆಯ, ಶಾಂತಿಪ್ರಾಪ್ತಿಯ ಪ್ರಯಾಣವೇ ಮಿಗಿಲು ಎನಿಸುತ್ತಿದೆ.

    ಕೋಟಿ, ಕೋಟಿ, ನೂರು ಕೋಟಿ, ಸಾವಿರ ಕೋಟಿ…

    ಲೋಕಸಭಾ ಚುನಾವಣೆ ಅವಧಿಯ ಎರಡು-ಮೂರು ತಿಂಗಳು ಪ್ರತಿನಿತ್ಯ ಬೇಡವೆಂದರೂ ಕಿವಿಗೆ ಅಪ್ಪಳಿಸುತ್ತಿದ್ದದ್ದು ಕೋಟಿಗಳೇ. ಅಭ್ಯರ್ಥಿಗಳ/ಜನಪ್ರತಿನಿಧಿಗಳ ಆಸ್ತಿಪ್ರಮಾಣವನ್ನು ನೋಡಿದರೆ ಜನಸಾಮಾನ್ಯರಿಗೆ ಕಾಡುವ ಪ್ರಶ್ನೆ ಒಂದೇ, ‘ಇಷ್ಟು ದುಡ್ಡು ಏನು ಮಾಡ್ತಾರೆ?’ ಅಚ್ಚರಿಯೆಂದರೆ, ಸಾವಿರಾರು ಕೋಟಿ ರೂ.ಗಳ ಒಡೆಯರು ಕೂಡ ‘ಜನಸೇವೆ’ಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇವೆ ಎಂದು ಹೇಳುತ್ತಿದ್ದರು. ಐದು ವರ್ಷಗಳ ತರುವಾಯ ಮತ್ತೆ ಅವರ ಆಸ್ತಿಪ್ರಮಾಣ ನೋಡಿದರೆ ಅವರೆಷ್ಟು ‘ಜನಸೇವೆ’ ಮಾಡಿದ್ದಾರೆ ಎಂಬುದು ಎಂಥ ಅಲ್ಪಮತಿಗೂ ಅರ್ಥವಾಗುತ್ತೆ ಬಿಡಿ. ಅದೇನಿದ್ದರೂ, ಎರಡು-ಮೂರು ತಿಂಗಳು ಈ ಕೋಟಿ-ಕೋಟಿ ಅಂತ ಕೇಳಿ ಮಧ್ಯಮವರ್ಗಿಯರಲ್ಲಿ ರಿಚ್​ನೆಸ್ ಫೀಲ್ ಆಗುತ್ತಿತ್ತು. ಇದೇ ಫೀಲ್​ನಲ್ಲಿ ತಿಂಗಳಾಂತ್ಯದಲ್ಲಿ ಮಧ್ಯಮವರ್ಗಿಯರು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದರೆ ಮೂರು ಅಂಕಿಗೆ, ಕೆಲವೊಮ್ಮೆ ಎರಡು ಅಂಕಿಗೂ ಇಳಿದಿರುತ್ತೆ. ಆಗ ರಿಚ್​ನೆಸ್ ಫೀಲ್ ಎಂಬುದು ವಿಷಾದದ ನಗುವಾಗಿ ಬದಲಾಗುತ್ತೆ!

    ಇದೆಲ್ಲ ಗದ್ದಲದ ನಡುವೆಯೂ ‘ಕೋಟಿಗಳ’ ಮತ್ತೊಂದು ಸುದ್ದಿ ಬಂತಾದರೂ, ಪತ್ರಿಕೆಗಳ ಸಿಂಗಲ್ ಕಾಲಂಗೆ ಸೀಮಿತವಾಯಿತು. ನೂರು ಕೋಟಿ, ಇನ್ನೂರು ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಅಲ್ಲದೆ, ಭೌತಿಕ ಸುಖಸೌಕರ್ಯಗಳನ್ನೆಲ್ಲ ತೊರೆದು ಸಂನ್ಯಾಸಿಯಾದರು ಅಂತ. ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಸಿರಿತನದ ಭವ್ಯಕೋಟೆಯಿಂದ ಹೊರಬಂದು ವೈರಾಗ್ಯವೆಂಬ ಬಯಲಿನಲ್ಲಿ ಕುಳಿತುಕೊಂಡವರ ಕತೆ. ನಿಜಕ್ಕೂ ಇದೊಂದು ಕೌತುಕ ಮತ್ತು ಅಧ್ಯಯನಯೋಗ್ಯ ವಿಷಯವಲ್ಲವೆ? ಒಂದೆಡೆ, ಸಾವಿರಾರು ಕೋಟಿ ಇರುವವರು ಕೂಡ, ಮತ್ತಷ್ಟು ಬೇಕು ಎಂದು ಹಪಹಪಿಸುತ್ತ, ಜೀವನವನ್ನು ಮತ್ತಷ್ಟು ಕ್ಲಿಷ್ಟವಾಗಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ, ಇದೆಲ್ಲ ಸಾಕೇಸಾಕು ಅಂತ ದೃಢನಿರ್ಧಾರ ತಳೆದು, ಎಲ್ಲವನ್ನೂ ದಾನ ಮಾಡಿ, ಮೋಹ ಎಂಬ ಮಹಾಬಂಧನವನ್ನು ಕಳಚಿ ಅಧ್ಯಾತ್ಮದ ಪಯಣದಲ್ಲಿ ಜೀವನದರ್ಶನ ಆರಂಭಿಸಿದ್ದಾರೆ.

    ಇದೇ ಏಪ್ರಿಲ್​ನಲ್ಲಿ ಗುಜರಾತ್​ನಲ್ಲಿರುವ ಸೂರತ್​ನ ಉದ್ಯಮಿ ಭವೇಶ್ ಭಂಡಾರಿ ಮತ್ತು ಅವರ ಪತ್ನಿ 200 ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ ಸಂನ್ಯಾಸ ದೀಕ್ಷೆ ಸ್ವೀಕರಿಸಿದರು. ಇದಕ್ಕೂ ಮುನ್ನ, 2022ರಲ್ಲಿ ಇವರ 19 ವರ್ಷದ ಪುತ್ರಿ ಮತ್ತು 16 ವರ್ಷದ ಪುತ್ರ ಕೂಡ ಸಂನ್ಯಾಸತ್ವ ಸ್ವೀಕರಿಸಿದ್ದಾರೆ. ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ, ಮಕ್ಕಳಿಂದಲೇ ಪ್ರೇರಣೆಗೊಂಡು ಭವೇಶ್ ಭಂಡಾರಿ ದಂಪತಿ ಎಲ್ಲ ಭೌತಿಕ ಸುಖ ತ್ಯಜಿಸಿ, ಅಧ್ಯಾತ್ಮದತ್ತ ವಾಲಿದ್ದಾರೆ. ಈಗ ಇವರು ಇಡೀ ದೇಶವನ್ನು ಬರಿಗಾಲಿನಲ್ಲಿ ಸುತ್ತುತ್ತಿದ್ದಾರೆ. ಹಾಗಂತ, ಇದೇನು ಮೊದಲ ಪ್ರಕರಣ ಎಂದುಕೊಳ್ಳಬೇಡಿ. ಭಾರತದ ಸಣ್ಣ ನೀರಾವರಿ ಪದ್ಧತಿಯ ಹರಿಕಾರ ಎಂದೇ ಪ್ರಸಿದ್ಧರಾದ ಭವರಲಾಲ್ ಜೈನ್ ಅವರು ಕೂಡ ಈ ಹಿಂದೆ ತಮ್ಮ ಕೋಟ್ಯಂತರ ರೂಪಾಯಿ ಆಸ್ತಿಯನ್ನು ದಾನ ಮಾಡಿ ಸಂನ್ಯಾಸದೀಕ್ಷೆ ಪಡೆದುಕೊಂಡಿದ್ದಾರೆ. ಕಳೆದ ವರ್ಷವಷ್ಟೇ (2023) ಗುಜರಾತಿನ ಬಹುಕೋಟಿ ವಜ್ರದ ವ್ಯಾಪಾರಿ ಇದೇ ಹೆಜ್ಜೆಯನ್ನು ಅನುಸರಿಸಿದರು. 2017ರಲ್ಲಿ ಮಧ್ಯಪ್ರದೇಶದ ಉದ್ಯಮಿ ಸುಮೀತ್ ರಾಥೋರ್ ಮತ್ತು ಅನಾಮಿಕ ದಂಪತಿ 100 ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ, ತಮ್ಮ ಮೂರು ವರ್ಷದ ಮಗಳನ್ನು ಅಜ್ಜ-ಅಜ್ಜಿಗೆ ಒಪ್ಪಿಸಿ ಸಂನ್ಯಾಸ ದೀಕ್ಷೆ ಪಡೆದಿದ್ದಾರೆ! ಹಿಂದೆಲ್ಲ ಇಂಥ ದೀಕ್ಷೆಗಳ ಸಂಖ್ಯೆ ವರ್ಷಕ್ಕೆ 15-20 ಇರುತ್ತಿತ್ತು. ಆದರೆ, ಕಳೆದ ವರ್ಷ ಇದು 150ರ ಗಡಿ ದಾಟಿದೆ.

    ಬಾಲಸಂನ್ಯಾಸಿಯಾಗಿ ಮುಂದೆ ಆಧ್ಯಾತ್ಮಿಕ ಬದುಕು ರೂಪಿಸಿಕೊಳ್ಳುವುದು ಅಷ್ಟೊಂದು ಕಷ್ಟಕರವಲ್ಲ. ಆದರೆ, ಸಂಸಾರವೆಂಬ ಸಾಗರದಲ್ಲಿ ಮುಳುಗಿದವರು, ಲೌಕಿಕಗಳ ಜಂಜಾಟದಲ್ಲಿ ಸಿಲುಕಿ ಹಾಕಿಕೊಂಡವರು ಅದರಿಂದ ಮೇಲೆ ಎದ್ದು ಬಂದು, ಅಧ್ಯಾತ್ಮ ಎಂಬ ನವಪಥದಲ್ಲಿ ನಡೆಯುವುದಿದೆಯಲ್ಲ ಅದು ನಿಜಕ್ಕೂ ಸವಾಲು.

    ಇಂಥ ಬೆಳವಣಿಗೆಗಳು ಬರೀ ಜೈನ ಧರ್ಮಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಹಿಂದೂ ಧರ್ಮದಲ್ಲಿ ಯುವ ಸಂನ್ಯಾಸಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಾಗಾ ಸಂನ್ಯಾಸಿಗಳಲ್ಲೂ ಈಗ 25-30 ವರ್ಷ ವಯೋಮಾನದವರ ಸಂಖ್ಯೆ ಹೆಚ್ಚಿದೆ. ಅಷ್ಟೇ ಅಲ್ಲ, ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ಸ್ಥಾಪಿಸಲ್ಪಟ್ಟ, ಭಕ್ತಿ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಇಸ್ಕಾನ್ (ಇಂಟರ್​ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್), ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಗುರೂಜಿ ಅವರಿಂದ ಸ್ಥಾಪಿಸಲ್ಪಟ್ಟ ಆರ್ಟ್ ಆಫ್ ಲಿವಿಂಗ್, ಸದ್ಗುರು ಅವರ ಈಶ ಫೌಂಡೇಶನ್, ರಾಮಕೃಷ್ಣ ಮಿಷನ್, ವಿವಿಧ ಪಂಥಗಳ ಮಠಗಳು, ಆಶ್ರಮಗಳು ಹೀಗೆ ಎಲ್ಲೆಲ್ಲೂ ಯುವ ಮುಖಗಳ ತೇಜಸ್ಸು, ಯುವ ಮನಸುಗಳ ಕಠಿಣ ಅನುಷ್ಠಾನ ಸ್ಪಷ್ಟವಾಗಿ ಕಂಡುಬರುತ್ತಿದ್ದು, ಸಮಾಜಕ್ಕೆ ಹೊಸ ದೊಂದು ಸಂದೇಶ ಮತ್ತು ಪ್ರೇರಣೆಯ ಮಿಂಚು ಹರಡುತ್ತಿದೆ.

    ಶುದ್ಧ ಭಾವ, ಸಾತ್ವಿಕ ಜೀವನ, ದ್ವೇಷ, ಅಸೂಯೆ, ಮತ್ಸರಕ್ಕೆ ಅಂತ್ಯ ಹಾಡಿ ಇಡೀ ಜಗತ್ತನ್ನು ಪ್ರೇಮಮಯವಾಗಿ, ಎಲ್ಲ ಮನುಷ್ಯರನ್ನು ಕರುಣೆ, ವಾತ್ಸಲ್ಯದಿಂದ ನೋಡುವ ಇವರ ಆಂತರ್ಯದ ಶಕ್ತಿ ಕಡಲಿನಷ್ಟು ವಿಸ್ತಾರ, ಅಂತಃಕರಣವು ಅಷ್ಟೇ ಅಗಾಧ. ನಮ್ಮೊಳಗಿನ ಶಕ್ತಿಯನ್ನು ಕಂಡುಕೊಂಡರೆ ಮಾನವ ಮಾಧವನಾಗಬಲ್ಲ ಎಂಬುದಕ್ಕೆ ನಿದರ್ಶನ. ಇವರಿಗೆ ಭಗವಂತನೇ ತಂದೆ-ತಾಯಿ, ಸ್ನೇಹಿತ ಎಲ್ಲವೂ. ಅಂದರೆ, ಜೀವನದ ಪರಮೋದ್ದೇಶದ ಕಡೆಗೆ ಸಾಗಿ, ಅದನ್ನು ಸಾಕಾರಗೊಳಿಸುವಂತೆ ಬದುಕುವುದಿದೆಯಲ್ಲ ಅದುವೇ ಆತ್ಮಸಂತೋಷ, ಅದುವೇ ಆತ್ಮಾನಂದ!

    ‘ದ ಹಾರ್ಟ್ ಆಫ್ ಸಕ್ಸಸ್’, ‘ಕುಂಡಲಿನಿ: ಆನ್ ಅನ್​ಟೋಲ್ಡ್ ಸ್ಟೋರಿ’, ‘ದ ಹಿಡನ್ ಪಾವರ್ ಆಫ್ ಗಾಯತ್ರಿ ಮಂತ್ರ’, ‘ದ ಬಿಗ್ ಕ್ವಶ್ಚನ್ ಆಫ್ ಲೈಫ್’ ಸೇರಿದಂತೆ 16 ಬೆಸ್ಟ್​ಸೆಲ್ಲರ್ ಪುಸ್ತಕಗಳ ಲೇಖಕ, ಆಧ್ಯಾತ್ಮಿಕ ಸಾಧಕ ಓಂ ಸ್ವಾಮಿ ಆಧ್ಯಾತ್ಮಿಕ ಜೀವನ ಪ್ರಾರಂಭಿಸುವ ಮುನ್ನ ಖ್ಯಾತ ಉದ್ಯಮಿಯಾಗಿದ್ದರು! ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಆಸ್ಟ್ರೇಲಿಯಾದಲ್ಲೇ ಸಾಫ್ಟ್​ವೇರ್ ಉದ್ಯಮವನ್ನು ಆರಂಭಿಸಿದರು. ಇವರ ದಕ್ಷತೆ, ನೈಪುಣ್ಯ, ಶ್ರಮ ಎಲ್ಲವೂ ಕೈಹಿಡಿಯಿತು. ಉದ್ಯಮ ಸಾಮ್ರಾಜ್ಯವನ್ನು ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ, ಅಲ್ಲಿಂದ ಕೆನಡಾ, ಬ್ರಿಟನ್, ಭಾರತಕ್ಕೆ ವಿಸ್ತರಿಸಿ, ಮಿಲಿಯನೇರ್ ಉದ್ಯಮಿ ಎನಿಸಿಕೊಂಡರು. ಭೌತಿಕ ಜೀವನಕ್ಕೆ ಬೇಕಾದ ಎಲ್ಲವೂ ಅವರ ಬಳಿ ಇತ್ತು. ಆಸ್ತಿ, ಸಂಪತ್ತು, ಸ್ವಂತ ಕಂಪನಿ, ಖ್ಯಾತಿ, ವರ್ಚಸ್ಸು, ಕಾಪೋರೇಟ್ ಪ್ರಪಂಚದ ಸ್ನೇಹ, ಗೌರವ… ಯಾವುದಕ್ಕೂ ಕಡಿಮೆ ಇರಲಿಲ್ಲ. ಆದರೆ, ಅವರ ಒಳಮನಸ್ಸು ಸದಾ ಹೇಳುತ್ತಿತ್ತು. ‘ಜೀವನದಲ್ಲಿ ಮಾಡಬೇಕಿರುವುದು ಬೇರೆ ಏನೋ ಇದೆ’ ಅಂತ. ಆ ದಾರಿಯನ್ನು ಭೌತಿಕ ಬದುಕಿನ ಜಗಮಗ ಬೆಳಕಿನಲ್ಲಿ ಹುಡುಕಲು ಸಾಧ್ಯವಿಲ್ಲ. ಅದನ್ನು ಶೋಧಿಸಬೇಕಾದರೆ ಅಧ್ಯಾತ್ಮ ಎಂಬ ಪ್ರಕಾಶದಲ್ಲೇ ನಡೆಯಬೇಕು ಎಂದು ತೀರ್ವನಿಸಿ, ಹೆಚ್ಚು ಯೋಚನೆ ಮಾಡದೆ ಎಲ್ಲವನ್ನೂ ತೊರೆದರು. ಇಡೀ ಉದ್ಯಮ ವಲಯ ಅಚ್ಚರಿ ಪಟ್ಟಿತು.

    2010ರ ಮಾರ್ಚ್ 15ರಂದು ತಮ್ಮೆಲ್ಲ ಭೌತಿಕ ಆಸ್ತಿಯನ್ನು ತೊರೆದು ಸತ್ಯದ ಹುಡುಕಾಟಕ್ಕೆ ಹೊರಟೇ ಬಿಟ್ಟರು. ಕಾಶಿ ಬಳಿಯ ಪುಟ್ಟಹಳ್ಳಿಯಲ್ಲಿ ನಾಗಾಸಾಧುವಿನ ಸಾನಿಧ್ಯದಲ್ಲಿ ನಾಲ್ಕೂವರೆ ತಿಂಗಳು ಕಳೆದು, ಬಳಿಕ ತಲುಪಿದ್ದು ಹಿಮಾಲಯಕ್ಕೆ. ಅಲ್ಲಿ ಹದಿಮೂರು ತಿಂಗಳು ಕೈಗೊಂಡ ಧ್ಯಾನ ಆಂತರಿಕ ಶಾಂತಿಯನ್ನು, ಮುಂದಿನ ದಾರಿಯನ್ನು ಕಲ್ಪಿಸಿತು. ಓಂ ಸ್ವಾಮಿ ದಿನಕ್ಕೆ 22 ಗಂಟೆಗಳ ಕಾಲ ನಿರಂತರವಾಗಿ, ಅದರಲ್ಲೂ 10 ಗಂಟೆಗಳ ಕಾಲ ಒಂದೇ ಭಂಗಿಯಲ್ಲಿ ಕುಳಿತು ಧ್ಯಾನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಆಧ್ಯಾತ್ಮಿಕ ಸಾಧನೆ, ತಪಸ್ಸಿನ ಬಗ್ಗೆ ಐಐಟಿಗಳ ವಿದ್ಯಾರ್ಥಿಗಳು, ಸಂಶೋಧಕರು ಸಂಶೋಧನೆ ನಡೆಸಿದ್ದು, 2019ರಲ್ಲಿ ಪ್ರಕಟಿಸಿದ್ದಾರೆ.

    ಓಂ ಸ್ವಾಮಿ ಹೇಳುತ್ತಾರೆ- ‘ನನ್ನ ಬಳಿ ಏನಿದೆ ಎಂಬುದು ನನ್ನ ಸಾಧನೆಯಲ್ಲ. ನಾನು ಏನು ಮಾಡುತ್ತೇನೆ ಎಂಬುದು ನನ್ನ ಪರಿಚಯವಲ್ಲ. ಹಾಗಾದರೆ ನಾನು ಯಾರು? ಯಾರೂ ಅಲ್ಲ. ಅನಂತಸೃಷ್ಟಿಯ ಒಂದು ಕಣವಷ್ಟೇ. ನಾನು ಹಾಡುತ್ತೇನೆ, ಕುಣಿಯುತ್ತೇನೆ, ನಗುತ್ತೇನೆ, ಚಪ್ಪಾಳೆ ತಟ್ಟುತ್ತೇನೆ. ಹಿಮಾಲಯದ ಶಾಂತವಾದ ಹರಿವು, ಪರ್ವತವೇ ನಾನು. ನೀವು ಕೂಡ ಅದೇ ಆಗಿದ್ದೀರಿ. ಕರುಣೆ ನನ್ನ ಧರ್ಮ, ಪ್ರೇಮವೇ ದರ್ಶನ’. ನಿಜವಲ್ಲವೆ- ಮಾನವಜೀವಿಯ ಪರಿಚಯ ಇದಕ್ಕಿಂತ ಭಿನ್ನವಾಗಿ ಇರಲು ಹೇಗೆ ಸಾಧ್ಯ?

    ಇದೆಲ್ಲ ಏಕೆ ಹೇಳಬೇಕಾಯಿತು ಎಂದರೆ, ನಾವು ಎಷ್ಟೇ ನಿರಾಕರಿಸಿದರೂ, ಭೌತಿಕ ಪ್ರಪಂಚದಲ್ಲಿ ಮುಳುಗಿ ಹೋದರೂ, ಹಲವು ಪೀಳಿಗೆಗಳಿಗೆ ಆಗುವಷ್ಟು ಗಳಿಸಿಟ್ಟರೂ, ಉನ್ನತ ಪದವಿ ಅಲಂಕರಿಸಿದರೂ, ಅಧ್ಯಾತ್ಮದ ಸಾಧನೆ, ಅಧ್ಯಾತ್ಮದ ಯಾತ್ರೆಯೇ ವ್ಯಕ್ತಿಯನ್ನು ಔನ್ನತ್ಯಕ್ಕೇರಿಸಿ, ಜೀವನಕ್ಕೆ ಸಾರ್ಥಕತೆಯನ್ನು ತಂದುಕೊಡುವುದು. ಖ್ಯಾತ ನಟ ರಜನಿಕಾಂತ್ ಆಗಾಗ ಅಧ್ಯಾತ್ಮ ಯಾತ್ರೆಗೆ ಹೋಗೋದನ್ನು ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆಯಲ್ಲಿ, ಕನ್ಯಾಕುಮಾರಿಯ ವಿವೇಕಾನಂದ ಶಿಲೆಯಲ್ಲಿ ಧ್ಯಾನ ಮಾಡಿದ್ದನ್ನು ಜಗತ್ತು ಬೆರಗಿನಿಂದ ನೋಡಿತು. ಅದಕ್ಕೆ ವಿದೇಶಿಯರು ಕೂಡ ಜೀವನದ ಅರ್ಥವನ್ನು ತಿಳಿದುಕೊಳ್ಳಲು, ಜೀವನದಲ್ಲಿ ಸರಿಯಾದ ದಾರಿಯಲ್ಲಿ ಸಾಗಲು ಭಾರತಕ್ಕೆ ಆಗಮಿಸಿ ಅಧ್ಯಾತ್ಮದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದಾರೆ.

    ಯುವಕರು ದೊಡ್ಡಪ್ರಮಾಣದಲ್ಲಿ ಅಧ್ಯಾತ್ಮ ಲೋಕ ಪ್ರವೇಶಿಸುತ್ತಿರುವುದಕ್ಕೆ ಎರಡು ಪ್ರಮುಖ ಕಾರಣ

    • ನಿಜವಾದ ಸಂತೋಷ/ಆನಂದದ ಹುಡುಕಾಟ.
    • ಭೌತಿಕ ಪ್ರಪಂಚ ಹೆಚ್ಚು ಕಲುಷಿತಗೊಂಡಿದ್ದು, ಶುದ್ಧತೆ, ದಿವ್ಯತೆಯೆಡೆ ಸಾಗಬೇಕೆಂಬ ಸಂಕಲ್ಪ.

    ಅಲ್ಲದೆ, ಸನಾತನ ಧರ್ಮದ ನಂಬಿಕೆಗಳ ಪ್ರಕಾರ ಕರ್ಮಗಳನ್ನೆಲ್ಲ ಕಳೆದುಕೊಳ್ಳಲು ಇರುವ ಏಕೈಕ ಮಾಗವೇ ಅಧ್ಯಾತ್ಮ. ಭಕ್ತಿ, ತಪಸ್ಸು, ಶ್ರದ್ಧೆ, ನಂಬಿಕೆ, ಅನುಷ್ಠಾನ, ವ್ರತ, ಉಪವಾಸ, ಭಜನೆ, ಪೂಜೆ, ನಾಮಸಂಕಿರ್ತನೆ, ಯಾತ್ರೆ ಇದೆಲ್ಲವೂ ಅಧ್ಯಾತ್ಮ ಪ್ರಪಂಚದ ಸಾಧನಾಮೆಟ್ಟಿಲುಗಳು ಮತ್ತು ನಮ್ಮ ಹೃದಯವನ್ನು. ಆತ್ಮವನ್ನು ಶುದ್ಧೀಕರಿಸುವ ಶಕ್ತಿಗಳು. ಅಲ್ಲದೆ, ಇಂದಿನ ಯುವಸಮೂಹ ಬದುಕನ್ನು ವಿಶಿಷ್ಟ ಉದ್ದೇಶಕ್ಕಾಗಿ ಸಾಗಿಸಬೇಕೆಂಬ ಗುರಿ ಇಟ್ಟುಕೊಂಡಿರುವುದರಿಂದ, ಉನ್ನತ ಧ್ಯೇಯಗಳು ಅವರ ಜತೆಗೂಡುತ್ತಿವೆ. ಒತ್ತಡ, ಆತಂಕ, ಅಭದ್ರತೆ, ಖಿನ್ನತೆ, ದುಃಖ, ನಿರಾಸೆಯ ಬದುಕು ಯಾರಿಗೆ ಬೇಕು ಹೇಳಿ? ಯುವಕರು ಇವುಗಳಿಂದ ಆದಷ್ಟು ಬೇಗ ದೂರವಾಗಲು ಬಯಸುತ್ತಿದ್ದಾರೆ. ವಾತ್ಸಲ್ಯ, ಪ್ರೇಮ, ಕರುಣೆ, ದಯೆ, ಅಂತಃಕರಣ, ಭಕ್ತಿ, ಸೇವೆ ಈ ಎಲ್ಲ ಶ್ರೇಷ್ಠ ಮೌಲ್ಯಗಳು ಮಿಳಿತಗೊಂಡಿರುವುದುದೇ ಅಧ್ಯಾತ್ಮ ಲೋಕದಲ್ಲಿ ಎಂಬ ವಾಸ್ತವದ ಅರಿವು ಮೂಡುತ್ತಿರುವುದರಿಂದಲೇ, ಯುವಕರು ಜೀವನದರ್ಶನಕ್ಕಾಗಿ ಈ ಪಥದಲ್ಲಿ ಕ್ರಮಿಸುತ್ತಿದ್ದಾರೆ. ಅಷ್ಟಕ್ಕೂ, ‘ಬೇಕು’ಗಳ ಲೋಕದಲ್ಲಿ ಸಿಲುಕಿಕೊಂಡರೆ ಕೊನೆಯವರೆಗೂ ಬದುಕು ಬಂಧನವೇ. ‘ಎಲ್ಲವೂ ಸಾಕು, ಯಾವುದೂ ನನ್ನದಲ್ಲ, ಎಲ್ಲವೂ ನಿನ್ನದೆ (ಭಗವಂತನದ್ದು)’ ಎಂಬ ಭಾವ ಬಿಡುಗಡೆಯನ್ನು, ಸಾಕ್ಷಾತ್ಕಾರದ ಪಥವನ್ನು ದರ್ಶಿಸುತ್ತದೆ.

    ಎಲ್ಲರೂ ಒಂದಿಲ್ಲ ಒಂದು ದಿನ ಅಂತರಾತ್ಮದ ಕಟಕಟೆಯಲ್ಲಿ ನಿಲ್ಲಲೇ ಬೇಕು, ಅಂತರಾತ್ಮದ ಕರೆಗೆ ಸ್ಪಂದಿಸಲೇ ಬೇಕು. ಯಾರನ್ನು ಮೋಸ ಮಾಡಿದರೂ ಅಂತರಾತ್ಮಕ್ಕೆ ಮೋಸ ಮಾಡಲು ಸಾಧ್ಯವಿಲ್ಲ. ಆ ಶುದ್ಧಭಾವ, ಶುದ್ಧ ಆತ್ಮ ನಮ್ಮದಾಗಿಸಿಕೊಳ್ಳುವ ಅಂತಿಮ ಸತ್ಯವೇ ಅಧ್ಯಾತ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts