More

    ಶಿವಭಕ್ತರೊಡನೆ ಮಹಾಮನೆಗೆ ಬಿಜಯಂಗೈದ ಅಲ್ಲಮ

    Mallepuram venkatesh

    ಬಸವಣ್ಣನ ‘ಮಹಾಮನೆ’ಯನ್ನು ಶಿವಗಣಪ್ರಸಾದಿಯು ಲಿಂಗಮುಖದಲ್ಲಿ ಕಂಡರಿಸುತ್ತಿದ್ದಾನೆ. ಇದು ಅವನು ಕಂಡ ಪರಿ. ಹೀಗಾಗಿ, ನಾವು ವಚನದ ಹೃದಯವನ್ನು ತೆರೆದು ನೋಡಬೇಕು. ಸಾಮಾನ್ಯರಿಗೆ ‘ನೊರೆ ತೊರೆ ಕಪ್ಪೆ ಚಿಪ್ಪುಗಳು’ ಕಂಡರೆ; ಶರಣರಿಗೆ ಅಲ್ಲಿ ‘ಶಿವಾಮೃತದ ಕಲ್ಲುಸಕ್ಕರೆ’ಯೇ ಕಂಡಿದೆ. ಇಲ್ಲಿ ಪರಿಚಾರಕರು ಮಾಡಿದ ಕ್ರಿಯಾಭೋಗಗಳುಂಟು. ಶರಣನು ಮೊದಲು ವಾಯುಪ್ರಾಣಿಯಾಗಿರುತ್ತಾನೆ. ಅವನು ದಶವಾಯುಗಳ ಸಂಸರ್ಗಕ್ಕೆ ಬಂದಾಗ ‘ಲಿಂಗಪ್ರಾಣಿ’ ಆಗುತ್ತಾನೆ! ಪ್ರಾಣ, ವ್ಯಾನ, ಅಪಾನ, ಉದಾನ, ಸಮಾನ, ನಾಗ ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ. ಈ ಹತ್ತು ವಾಯುಗಳನ್ನು ಹತ್ತುಸ್ಥಾನಗಳಲ್ಲಿ ಶರಣನು ನಿಲ್ಲಿಸಿಕೊಳ್ಳಬೇಕು. ಪ್ರಾಣವಾಯುವನ್ನು ಪ್ರಾಣಲಿಂಗದಲ್ಲಿ ನಿಲ್ಲಿಸಿಕೊಳ್ಳಬೇಕು. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯವೆಂಬ ನಾಲ್ಕು ವಿಧದ ಪದವಿಯ ಬಯಕೆಯನ್ನು ಕಿತ್ತುಹಾಕಿ ಲಿಂಗಧ್ಯಾನದಲ್ಲಿ ಶರಣನು ನೆಲೆಗೊಳಿಸಿಕೊಳ್ಳಬೇಕು. ಆಗ ‘ವ್ಯಾನವಾಯು’ವಿನ ದುಷ್ಪರಿಣಾಮವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಲಿಂಗಧ್ಯಾನ ಮಾಡಿದರೆ, ಉದಾನವಾಯುವು ಸುಚಿತ್ತದಲ್ಲಿ ನೆಲೆಗೊಳ್ಳುತ್ತದೆ. ಧ್ಯಾನದಿಂದ ಉಂಟಾಗುವ ಸ್ವಯಂಜ್ಯೋತಿಪ್ರಭೆಯಲ್ಲಿ ‘ಸಮಾನ ವಾಯು’ವನ್ನು ನೆಲೆಗೊಳಿಸಿದರೆ ಶರಣನಿಗೆ ಉಪಶಾಂತಿಯು ದೊರಕುತ್ತದೆ.

    ಆ ಮಹಾಮನೆಯೇ ಆದಿಲಿಂಗ. ಅಲ್ಲಿ ಶಿವನು ಲಿಂಗಮುಖದಲ್ಲಿದ್ದಾನೆ. ಇಲ್ಲಿ ಬರುವ ಒಂದೊಂದು ವಿವರವೂ ‘ಶಿವಯೋಗದ ಆತ್ಯಂತಿಕ ಸಂಭ್ರಮವನ್ನು ನಮ್ಮ ಒಳಗಣ್ಣಿನ ಮುಂದೆ ತಂದು ನಿಲ್ಲಿಸುತ್ತದೆ. ಅಲ್ಲಮ ಹೇಳುವಂತೆ, ‘ಶರಣ ಸಂಗನ ಬಸವಣ್ಣನ ಮನೆಯ ಕಂಡು ಧನ್ಯನಾದೆನು’ ಎಂಬುದು ಅಲ್ಲಮನ ಧನ್ಯತಾಭಾವ ಮಾತ್ರವಲ್ಲ; ಅದು ಶರಣರ ಧನ್ಯತೆಯ ನೆಲೆಯೂ ಹೌದು!

    ಅಲ್ಲಮ-ಸಿದ್ಧರಾಮರು ಬಸವಣ್ಣನ ಮಹಾಮನೆಯ ಎದುರು ನಿಂತರಷ್ಟೆ. ಬಸವಣ್ಣನು ಒಳಗಡೆ ‘ಇಷ್ಟಲಿಂಗ’ದ ನೆಲೆಯಲ್ಲಿ ಕುಳಿತಿದ್ದಾನೆ. ಅಲ್ಲಿ ಓಡಾಡುತ್ತಿದ್ದವರು ‘ಇವರೇನು ಶಿವನ ಸಗುಣ-ನಿರ್ಗಣದ ಚೆಲುವಿಗರೋ ಶಿವಾಶಿವಾ’ ಎಂದು ವಿಸ್ಮಯ ಪಡುತ್ತಿದ್ದಾರೆ. ಹಡಪದ ಅಪ್ಪಣ್ಣ ಇವರಿಬ್ಬರನ್ನು ಕಂಡವನೇ ಬಸವಣ್ಣನ ಬಳಿಬಂದು ‘ಶಿವನ ದೃಶ್ಯ-ಅದೃಶ್ಯ ರೂಪುಗಳ ಧಣಿಗಳಿಬ್ಬರು ಬಂದಿದ್ದಾರೆ’ ಎಂದು ಬಿನ್ನವಿಸಿಕೊಳ್ಳುತ್ತಾನೆ. ಆಗ ಬಸವಣ್ಣನು ಅಂಗೈಯಲ್ಲಿ ಇಷ್ಟಲಿಂಗವನ್ನು ಬಿಜಯ ಮಾಡಿಸಿ ಪೂಜೆಯ ಆತುರದಲ್ಲಿದ್ದವನು ‘ಲಿಂಗದೇವನು ಜಂಗಮರೂಪವನ್ನು ತಾಳಿ ಬಂದಿದ್ದಾರೆ. ತಡವೇಕೆ ಒಳಗೆ ಕರೆಯಿರಿ’ ಎಂದನು. ಅಪ್ಪಣ್ಣನು ಬಸವಣ್ಣನ ಮಾತಿನಿಂದ ಉಬ್ಬಿ ಅಲ್ಲಮಪ್ರಭುವಿನ ಮುಂದೆ ಹೋಗಿ ಕೈಜೋಡಿಸಿ ನಿಂತು ‘ಒಳಗೆ ದಯಮಾಡಿಸುವುದು’ ಎಂದು ಬಿನ್ನಹ ಮಾಡುವನು. ಆಗ ಅಲ್ಲಮ ‘ನಮಗೆ ಒಳಗಿರುವ ಕೆಲಸವೇನು? ಅರಸರ ಮನೆಗಳಲ್ಲಿ ನಮಗೆಂಥ ಸಂಚಾರ’ ಎಂದು ಉಪಹಾಸ್ಯ ಮಾಡಿದನು, ಈ ಮಾತನ್ನು ಅಪ್ಪಣ್ಣ ಬಸವಣ್ಣನಿಗೆ ತಿಳಿಸುವನು. ‘ಶಿವಾ ಶಿವಾ ನಾನು ಗರ್ವದ ಪರ್ವತ ಹತ್ತಿದೆನೊ ಅಥವ ದುಷ್ಟತನದಿಂದ ನನ್ನ ನಡೆ-ನುಡಿ ತಪ್ಪನ್ನು ಅಪ್ಪಿದುವೊ?’ ಎಂದು ಚಿಂತಾಸಮುದ್ರದಲ್ಲಿ ಮುಳುಗಿ ಹೋಗುತ್ತಾನೆ. ಆಗ ಅಲ್ಲಿದ್ದ ಮಡಿವಾಳ ಮಾಚಿದೇವರು ‘ನಿನ್ನ ಮನೆಯ ಬಾಗಿಲಿಗೆ ಆ ಘನಮಹಿಮನು ಬಂದಿದ್ದಾನೆ. ರಾಜಸಗುಣದ ಅಹಂಕಾರದಿಂದ ಅಪ್ಪಣ್ಣನನ್ನು ಅಟ್ಟುವುದು ನಿನಗೆ ಯೋಗ್ಯವೆ ಬಸವಣ್ಣಾ’ ಎಂದು ಆಕ್ಷೇಪಿಸುವನು. ಆಗ ಬಸವಣ್ಣನು ತಪ್ಪು ನನ್ನದು ಎಂದೆನ್ನುತ್ತಾ ಶಿವಗಣ ಸಹಿತ ನಡೆದು ಬಂದು ಅಲ್ಲಮನ ಪಾದಗಳಲ್ಲಿ ತನ್ನ ಮೈಯನ್ನು ಚಾಚುತ್ತಾನೆ. ‘ನಾನೊಬ್ಬ ಹುಚ್ಚ. ನೀನು ಜ್ಞಾನದ ತಿರುಳು. ನಾನು ವೇಷಧಾರಿ. ನೀನು ಸಹಜ ಸ್ವರೂಪಿ. ವಿಚಾರ ಮಾಡಿದರೆ ನಾನು ಪಶು; ನೀನು ಪಶುಪತಿ. ನನ್ನ ತಪ್ಪನ್ನು ನೀನು ಮನ್ನಿಸಬೇಕು’ ಎಂದು ನಿವೇದಿಸಿಕೊಳ್ಳುವನು. ಆಗ ಚನ್ನಬಸವಣ್ಣ ‘ತಂದೆ-ತಾಯಿಯರು ತಮ್ಮ ಮಕ್ಕಳಲ್ಲಿ ದೋಷವನ್ನು ಕಾಣುತ್ತಾರೆಯೆ?’ ಎಂದು ಅಲ್ಲಮನಲ್ಲಿ ಬಿನ್ನವಿಸಿಕೊಳ್ಳುತ್ತಾನೆ.

    See also  ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ತಾಯಿ-ಮಗು ಸೇರಿ ಮೂವರ ದುರ್ಮರಣ

    ಅಲ್ಲಮನು ಅಲ್ಲಿದ್ದ ಶಿವಗಣಂಗಳ ಮಾತನ್ನು ಆಲಿಸುವನು. ನಂತರ ಸಿದ್ಧರಾಮನ ಕಡೆಗೆ ತಿರುಗಿ ‘ನೋಡಿದೆಯಾ ಸಿದ್ಧರಾಮಯ್ಯ, ಇವರು ತಮ್ಮ ತಪ್ಪನ್ನು ತಾವೇ ಅರಿಯರು ಎಂದು ನಗುತ್ತಾ ನುಡಿಯುವನು. ಆಗ ಸಿದ್ಧರಾಮನು ‘ನೀನು ಕರುಣಿಸು’ ಎಂದು ಸಲುಗೆಯಿಂದ ಅಲ್ಲಮನಲ್ಲಿ ಅರಿಕೆ ಮಾಡಿಕೊಳ್ಳುವನು. ಆಗ ಬಸವಣ್ಣನು ‘ನಮಗೆ ಒಲಿದು ನಮ್ಮನ್ನು ಪವಿತ್ರರನ್ನಾಗಿ ಮಾಡುವುದಕ್ಕೆ ಬಂದಿರುವ ನೀವು ನಮ್ಮನ್ನು ರಕ್ಷಿಸುವುದು’ ಎಂದು ತಲೆಬಾಗಿ ನಮಸ್ಕರಿಸುವನು. ಅಲ್ಲಮನು ಇವರಿಗೆ ‘ಭಕ್ತಿಮಾರ್ಗ’ವನ್ನು ತಿಳಿಸಬೇಕೆಂದು ನಿಶ್ಚಯಿಸಿಕೊಂಡನು. ‘ನಡೆವಳಿ ಏನಾದರಾಗಲಿ, ಆದರೆ ನುಡಿವಳಿಯಲ್ಲಿ ಅತಿ ಜಾಣರಾದಿರಿ. ಭುವಿಯಲ್ಲಿ ನೀವು ಹೊಗಳಿಕೆಗೆ ಪಾತ್ರರಾದಿರಿ’ ಎಂದು ನಸುನಗುತ್ತ ನುಡಿದು ‘ಇನ್ನು ನಡೆಯಿರಿ ಶಿವಲಿಂಗ ಭಕ್ತಿಯ ಬೆಡಗನ್ನು ಏಕಾಂತದಲ್ಲಿ ಹೇಳುವೆನು’ ಎಂದನು. ಅಲ್ಲಮನು ಬಸವಣ್ಣನ ಜೊತೆಗೂಡಿ ಎಲ್ಲಾ ಶಿವಭಕ್ತರೊಡನೆ ‘ಮಹಾಮನೆ’ಗೆ ಬಿಜಯ ಮಾಡಿಸಿದನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts