More

    G20 ಶೃಂಗಸಭೆ; ವಿದೇಶಿ ಗಣ್ಯರ ಸುರಕ್ಷತೆಗೆ AIನ ಕ್ಯಾಮರಾ ಕಣ್ಣುಗಳು!

    ನವದೆಹಲಿ: ಸೆಪ್ಟೆಂಬರ್ 9 – 10ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಮತ್ತು ಇತರ ಘಟಕಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿವೆ.

    ಕಾರ್ಯಕ್ರಮವನ್ನು ಆಯೋಜಿಸುವ ಸ್ಥಳಗಳಲ್ಲಿ ಭದ್ರತಾ ಪಡೆಗಳ ನಡುವೆ ಸಮನ್ವಯತೆ ಹೆಚ್ಚಿಸಿ, ದೋಷರಹಿತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಈ ಬಾರಿ ಕೃತಕ ಬುದ್ಧಿಮತ್ತೆ (ಎಐ) ಮಾಡ್ಯೂಲ್‍ಗಳನ್ನು ಬಳಸುತ್ತಿವೆ. ಈ ಯಂತ್ರಗಳ ಮೂಲಕ, ಭದ್ರತಾ ಸಿಬ್ಬಂದಿ ಸುಧಾರಿತ ಎಐ ಆಧಾರಿತ ಕ್ಯಾಮೆರಾಗಳು ಮತ್ತು ಸಾಫ್ಟ್ ವೇರ್ ಅಲಾರಂಗಳನ್ನು ಬಳಸಿಕೊಂಡು ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿ ಫಿಲ್ಟರ್ ಮಾಡಲು ಸಾಧ್ಯವಾಗುತ್ತದೆ.

    ಈ ಕ್ಯಾಮರಾ ಕಣ್ಣುಗಳು, ಯಾರಾದರು ಗೋಡೆಗಳನ್ನು ಹತ್ತುವುದು, ಓಡುವುದು, ಬಾಗುವುದು ಮುಂತಾದ ಅನುಮಾನಾಸ್ಪದ ಚಲನೆಗಳನ್ನು ಮಾಡುವುದು ಕಂಡುಬಂದರೆ, ಎಐ ಕ್ಯಾಮೆರಾಗಳು ತಕ್ಷಣ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸುತ್ತವೆ. ಆಗ ಆಸುಪಾಸಿನಲ್ಲಿರುವ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಲಿದ್ದಾರೆ.

    ಎತ್ತರದ ಕಟ್ಟಡಗಳಲ್ಲಿ ಸ್ನೈಪರ್ ನಿಯೋಜನೆ

    ಜಿ 20 ಶೃಂಗಸಭೆಯ ಸಮಯದಲ್ಲಿ ಹೆಚ್ಚುವರಿ ಭದ್ರತೆಗಾಗಿ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‍ಜಿ) ಕಮಾಂಡೋಗಳು ಮತ್ತು ಸೇನಾ ಸ್ನೈಪರ್‍.ಗಳನ್ನು ಎತ್ತರದ ಕಟ್ಟಡಗಳಲ್ಲಿ ನಿಯೋಜಿಸಲಾಗುವುದು ಎಂದು ಮೂಲಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿವೆ. ಈ ಬೃಹತ್ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ಅಮೆರಿಕದ CIA, ಇಂಗ್ಲೆಂಡ್‍ನ MI-6 ಮತ್ತು ಚೀನಾದ MSS ಸೇರಿದಂತೆ ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ತಂಡಗಳು ಪರಿಶೀಲನೆ ನಡೆಸಲಿದ್ದು ಈಗಾಗಲೇ ದೆಹಲಿಗೆ ಬಂದಿವೆ.

    ದೆಹಲಿಯಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಅವರ ಪ್ರತಿನಿಧಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭದ್ರತಾ ಯೋಜನೆಗಳ ವಿವರವನ್ನು ಈ ದೇಶಗಳ ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಗುಪ್ತಚರ ಸಹಕಾರದ ಮೂಲಕ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

    ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವವರು ಮತ್ತು ಸ್ಥಳಗಳ ಭದ್ರತೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ, ಭಾರತೀಯ ವಾಯುಪಡೆ ಮತ್ತು ಸೇನೆಯ ಹೆಲಿಕಾಪ್ಟರ್‍ಸ್ ದೆಹಲಿಯ ಮೇಲಿನ ಆಕಾಶದಲ್ಲಿ ನಿರಂತರವಾಗಿ ಗಸ್ತು ತಿರುಗಲಿವೆ. ಯಾವುದೇ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಎನ್ಎಸ್‍ಜಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸುತ್ತದೆ.

    ವಿಐಪಿ ಭದ್ರತೆಯಲ್ಲಿ ಅನುಭವ ಹೊಂದಿರುವ ಸುಮಾರು 1000 ಭದ್ರತಾ ಸಿಬ್ಬಂದಿಯನ್ನು ಒಳಗೊಂಡ “ವಿಶೇಷ 50” ತಂಡವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿದ್ಧಪಡಿಸಿದೆ.

    ವಿದೇಶಿ ಗಣ್ಯರ ವಾಸ್ತವ್ಯ ಎಲ್ಲೆಲ್ಲಿ?

    ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಪ್ರಧಾನಿ ಕ್ಸಿ ಜಿನ್‍ಪಿಂಗ್, ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿದೇಶಿ ಗಣ್ಯರು ರಾಷ್ಟ್ರ ರಾಜಧಾನಿಯ ಉನ್ನತ ಮಟ್ಟದ ಹೋಟೆಲ್‍ಗಳಲ್ಲಿ ತಂಗಲಿದ್ದಾರೆ. ಐಟಿಸಿ ಮೌರ್ಯ ಹೋಟೆಲ್‍ನ 14 ನೇ ಮಹಡಿಯಲ್ಲಿರುವ ಅಧ್ಯಕ್ಷೀಯ ಸೂಟ್ಅನ್ನು ಅಧ್ಯಕ್ಷ ಜೋ ಬೈಡನ್ ಬಳಸಲಿದ್ದಾರೆ.

    ಕ್ಸಿ ಜಿನ್ಪಿಂಗ್ ತಾಜ್ ಪ್ಯಾಲೇಸ್ ಹೋಟೆಲ್‍ನಲ್ಲಿ ತಂಗಿದರೆ, ಪ್ರಧಾನಿ ರಿಷಿ ಸುನಕ್ ಶಾಂಗ್ರಿ-ಲಾ ಹೋಟೆಲ್‍ನಲ್ಲಿ ತಂಗಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕ್ಲಾರಿಡ್ಜ್ ಹೋಟೆಲ್‍ನಲ್ಲಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂಪೀರಿಯಲ್ ಹೋಟೆಲ್‍ನಲ್ಲಿ ತಂಗಲಿದ್ದಾರೆ.

    ಚೀನಾ ಮತ್ತು ಬ್ರೆಜಿಲ್ ಪ್ರತಿನಿಧಿಗಳಿಗೆ ತಾಜ್ ಪ್ಯಾಲೆಸ್‍ ಆತಿಥ್ಯ ವಹಿಸಿದರೆ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಪ್ರತಿನಿಧಿಗಳು ಇಂಪೀರಿಯಲ್ ಹೋಟೆಲ್‍ನಲ್ಲಿ ತಂಗಲಿದ್ದಾರೆ. ಶಾಂಗ್ರಿ-ಲಾ ಯುನೈಟೆಡ್ ಕಿಂಗ್ಡಮ್ ಮತ್ತು ಜರ್ಮನಿಯ ಪ್ರತಿನಿಧಿಗಳಿಗೆ ಆತಿಥ್ಯ ವಹಿಸಿದರೆ, ಇಟಲಿ ಮತ್ತು ಸಿಂಗಾಪುರದ ಪ್ರತಿನಿಧಿಗಳು ಹಯಾತ್ ರೆಸಿಡೆನ್ಸಿಯಲ್ಲಿ ಆತಿಥ್ಯ ವಹಿಸಲಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts