More

    ಕಾಡಾನೆಗಳ ಹಿಂಡು ದಾಳಿ ನಡೆಸಿ ಫಸಲು ನಾಶ

    ಬೇಲೂರು: ಕಳೆದ 15 ದಿನಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಹಾಗೂ ಕಣಗುಪ್ಪೆ ಗ್ರಾಮದ ತೋಟೇಶ್, ಚಂದ್ರಶೇಖರ್, ವಸಂತ್ ಅವರ ತೋಟಗಳಲ್ಲಿ ಬುಧವಾರ ರಾತ್ರಿ ಕಾಫಿ, ಬಾಳೆ, ಅಡಕೆ ಬೆಳೆ ಹಾಗೂ ಮಡಿ ಮಾಡಿದ್ದ ಭತ್ತದ ಸಸಿಗಳನ್ನೂ ನಾಶಪಡಿಸಿದೆ.


    ಅನುಘಟ್ಟ ಸಮೀಪದ ಕಣಗುಪ್ಪೆ ಗ್ರಾಮದ ತೋಟೇಶ್, ಚಂದ್ರಶೇಖರ್, ವಸಂತ್ ಅವರ ಕಾಫಿ ತೋಟಕ್ಕೆ ಮಂಗಳವಾರ ಲಗ್ಗೆ ಇಟ್ಟಿರುವ ಆನೆಗಳ ಹಿಂಡು, ತೋಟದಲ್ಲಿ ಬೆಳೆದಿದ್ದ ಬಾಳೆ ತಿಂದು ಹಾಳು ಮಾಡಿರುವುದಲ್ಲದೆ, ಕಾಫಿ ಗಿಡಗಳನ್ನು ತುಳಿದು, ಫಸಲಿಗೆ ಬಂದ ಅಡಕೆ ಗಿಡಗಳನ್ನು ನಾಶಪಡಿಸಿವೆ.
    ಜತೆಗೆ ಎದುರಿಗೆ ಸಿಕ್ಕ ಸಣ್ಣಪುಟ್ಟ ಮರ, ಗಿಡಗಳನ್ನು ಮುರಿದು ಹಾಕಿವೆ. ಜತೆಗೆ ತೋಟದೊಳಗೆ ನಿರ್ಮಿಸಿದ್ದ ಕೊಳಕ್ಕೆ ನೀರು ಕುಡಿಯಲು ಆನೆಗಳು ಇಳಿದಿರುವುದರಿಂದ ಕೊಳದ ಸುತ್ತ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಮೋಟಾರ್ ಪಂಪ್ ಹಾನಿಗೊಳಗಾಗಿರುವುದರಿಂದ ಬೆಳೆಗಾರರು, ರೈತರು ನಷ್ಟ ಅನುಭವಿಸುವಂತಾಗಿದೆ.


    ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಈ ಭಾಗದ ಬೆಳೆಗಾರರು ತೋಟದೊಳಕ್ಕೆ ಹೋಗಲು ಹೆದರುವಂತಾಗಿದೆ. ಆನೆಗಳು ಓಡಾಡುವ ಸಂದರ್ಭ ಕಂಡು ಬರುವ ತೋಟದ ಮನೆ, ಶೆಡ್ ಇತ್ಯಾದಿಗಳನ್ನು ಉರುಳಿಸುವುದು, ವಸ್ತುಗಳನ್ನು ನಾಶಪಡಿಸುವುದು ನಿತ್ಯ ನಡೆಯುತ್ತಿದೆ. ಶೆಡ್‌ನಲ್ಲಿ ಇರಿಸಿದ್ದ 10 ಮೂಟೆ ಗೊಬ್ಬರವನ್ನು ಆನೆ ಎಳೆದು ಹಾಳು ಮಾಡಿದೆ. ಮೂರು ಗುಂಪಿನಲ್ಲಿರುವ ಆನೆಗಳಲ್ಲಿ ಒಂದು ಗುಂಪು ಮಲಸಾವರ ಗ್ರಾಮದ ಆಸುಪಾಸಿನ ತೋಟದಲ್ಲಿ ಬೀಡು ಬಿಟ್ಟಿದ್ದರೆ, ಉಳಿದ ಎರಡು ಗುಂಪಿನ ಕಾಡಾನೆಗಳು ಕಣಗುಪ್ಪೆ ಸಮೀಪದ ತೋಟದಲ್ಲಿ ಬೀಡು ಬಿಟ್ಟು ಮನಬಂದಂತೆ ಬೆಳೆ ಹಾನಿ ಉಂಟು ಮಾಡುತ್ತಿವೆ.


    ಕೆಲ ದಿನಗಳ ಹಿಂದಷ್ಟೆ ಗ್ರಾಮದ ಪ್ರವೀಣ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಬಾನಟ್ ಮೇಲೆ ಆನೆ ಕಾಲಿಟ್ಟು ಹಾನಿ ಉಂಟು ಮಾಡಿತ್ತು. ಈ ಆನೆಗಳ ಹಾವಳಿಯಿಂದ ತೋಟದಲ್ಲಿ ಕೆಲಸ ಮಾಡಿಸಲು ಆಗದೆ ಬೆಳೆಗಾರರು ಪರಿತಪಿಸುತ್ತಿದ್ದಾರೆ. ಕೂಲಿ ಕಾರ್ಮಿಕರಂತೂ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.


    ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಒಂದಿಷ್ಟು ಮಾಹಿತಿ ನೀಡಿ ಹೋಗುವುದು ಬಿಟ್ಟರೆ ಅವರಿಂದಲೂ ಆನೆಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts