More

    ವೃತ್ತಿ ಘನತೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಲಿ – ಡಾ.ಎಚ್. ಬಿ.ರಾಜಶೇಖರ


    ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ವೈದ್ಯರು ಪ್ರಾಮಾಣಿಕವಾಗಿ ವೈದ್ಯಕೀಯ ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿದೆ. ಮಾನವೀಯವಾಗಿ ಸೇವೆ ಸಲ್ಲಿಸಿದರೆ ಸಮಾಜ ನಿಮ್ಮನ್ನು ಗುರುತಿಸಿ, ಗೌರವಿಸುತ್ತದೆ. ಇಲ್ಲದಿದ್ದರೆ ತಿರಸ್ಕರಿಸುತ್ತದೆ ಎಂದು ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್. ಬಿ.ರಾಜಶೇಖರ ಸಲಹೆ ನೀಡಿದರು.

    ನಗರದ ಯಳ್ಳೂರ ರಸ್ತೆಯ ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯರ ದಿನ ಅಂಗವಾಗಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಸಮಾರಂಭದಲ್ಲಿ ಮಾತನಾಡಿದರು. ವೈದ್ಯನೂ ವೃತ್ತಿ ಜೀವನದಲ್ಲಿ ರೋಗಿಗೆ ಮೋಸ ಮಾಡದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಮಾತ್ರ ವೈದ್ಯಕೀಯ ಕ್ಷೇತ್ರ ಉಳಿಯುತ್ತದೆ. ವೈದ್ಯಕೀಯ ಪದವಿ ಮುಗಿಸುವ ಯುವ ವೈದ್ಯರು ವೃತ್ತಿಯಲ್ಲಿ ರೋಗಿಗಳಿಗೆ ಮೋಸ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು ಎಂದರು.

    ಕೆಲ ವೈದ್ಯರು ದಾರಿ ತಪ್ಪಿದ್ದಾರೆ: ವೈದ್ಯಕೀಯ ಕ್ಷೇತ್ರದಲ್ಲಿ ಶೇ.95 ವೈದ್ಯರು ಒಳ್ಳೆಯವರಿದ್ದು ಶೇ.5 ವೈದ್ಯರು ದಾರಿ ತಪ್ಪಿರುವುದು ನಿಜ. ಅವರಿಂದಲೇ ವೈದ್ಯಕೀಯ ಕ್ಷೇತ್ರಕ್ಕೆ ಚ್ಯುತಿ ಉಂಟಾಗಿದೆ. ಹಾಗಾಗಿ, ಹಿರಿಯ ವೈದ್ಯರು ಕಿರಿಯ ವೈದ್ಯರಿಗೆ ವೃತ್ತಿ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ವೈದ್ಯಕೀಯ ಕ್ಷೇತ್ರದ ಗೌರವ ಉಳಿಸಿ, ಬೆಳೆಸಲು ಯುವ ವೈದ್ಯರು ಉಚಿತ ವೈದ್ಯಕೀಯ ಸೇವೆ ಮೈಗೂಡಿಸಿಕೊಳ್ಳಬೇಕು ಎಂದರು.

    ವಿಜಯವಾಣಿ ಕಾರ್ಯ ಶ್ಲಾಘನೀಯ: ಪ್ರತಿ ವರ್ಷ ವೈದ್ಯರ ದಿನವನ್ನು ಸಾರ್ವಜನಿಕರು,ಸಂಘ ಸಂಸ್ಥೆಗಳು ಆಚರಿಸಬೇಕು. ಆದರೆ, ವೈದ್ಯರೇ ವೈದ್ಯರ ದಿನ ಆಚರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕಾ ಬಳಗದವರು ವೈದ್ಯರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಎಲ್ಲ ವೈದ್ಯರ ಪರವಾಗಿ ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯವಾಣಿ ಪತ್ರಿಕೆಯ ಸಾಮಾಜಿಕ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

    ಮಾಜಿ ಮೇಯರ್ ವಿಜಯ ಮೋರೆ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಸೇವೆ, ಆಸ್ಪತ್ರೆ ಜನಪ್ರಿಯಗೊಳ್ಳಲು ಸುತ್ತಮುತ್ತಲಿನ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ರೋಗಿಯು ವೈದ್ಯರ ನಡವಳಿಕೆ, ಚಿಕಿತ್ಸೆಯ ಮೇಲೆ ಹೆಚ್ಚು ನಿಗಾವಹಿಸುತ್ತಾರೆ. ವೈದ್ಯರು ಬರೆದುಕೊಡುವ ಮಾತ್ರೆ ಸೇವಿಸುವ ಮುನ್ನ ಗೂಗಲ್‌ನಲ್ಲಿ ಹುಡುಕಿ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ, ವೈದ್ಯರು ತಮ್ಮ ವೃತ್ತಿಗೆ ಚ್ಯುತಿಬಾರದಂತೆ ಸೇವೆ ಸಲ್ಲಿಸಬೇಕು ಎಂದರು.

    ಬೆಳಗಾವಿ ನಗರದಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ಚಾರಿಟೇಬಲ್ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಜನರು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಈ ಕುರಿತು ವೈದ್ಯರು, ಸಿಬ್ಬಂದಿ, ರೋಗಿಗಳು ಹೆಚ್ಚೆಚ್ಚು ಪ್ರಚಾರ ನಡೆಸಬೇಕು.

    ಕೆಎಲ್‌ಇ ಸಂಸ್ಥೆಯ ಸಾಮಾಜಿಕ ಸೇವೆಯ ಜತೆಗೆ ವಿಜಯವಾಣಿ ದಿನಪತ್ರಿಕೆ ಕೈ ಜೋಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ.ಉಡಚನಕರ, ಡಾ.ವಿಕ್ರಾಂತ ನೇಸರಿ, ವಿಜಯವಾಣಿ ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಅಭಿಜಿತ ನಂದಿ, ಪ್ರಸಾರಾಂಗ ವ್ಯವಸ್ಥಾಪಕ ರಘುವೀರ ಕುಲಕರ್ಣಿ ಇತರರಿದ್ದರು. ಸಂತೋಷ ಇತಾಪೆ ಕಾರ್ಯಕ್ರಮ ನಿರೂಪಿಸಿದರು, ಪ್ರಭಾವತಿ ಪಾಟೀಲ ವಂದಿಸಿದರು.

    ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನಸಾಗರ: ಉಚಿತ ಆರೋಗ್ಯ ತಪಾಸಣಾ ಶಿಬಿರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನಗರ, ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ನೂರಾರು ಜನರಿಗೆ ನುರಿತ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದರು.

    ವೈದ್ಯಕೀಯ ಕಲಿಕಾ ವೆಚ್ಚ ತಗ್ಗಲಿ: ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕಲಿಕೆ ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯ ವರ್ಗದವರಿಗೆ ವೈದ್ಯಕೀಯ ಓದಲು ಸಾಧ್ಯವಾಗುತ್ತಿಲ್ಲ. ಬಿಎ, ಬಿಎಸ್ಸಿ ಪದವಿ ಮಾದರಿಯಲ್ಲಿಯೇ ಎಂಬಿಬಿಎಸ್ ಪದವಿಯನ್ನು ಕಲಿಯುವ ಶಿಕ್ಷಣ ಪದ್ಧತಿ ಜಾರಿಗೊಳ್ಳಬೇಕು. ಸರ್ಕಾರಗಳು ವೈದ್ಯಕೀಯ ಕಲಿಕಾ ವೆಚ್ಚದ ಪ್ರಮಾಣ ಕಡಿಮೆಗೊಳಿಸಬೇಕು. ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸಬೇಕು. ಹಣ ಸಂಪಾದನೆಗೆ ವೈದ್ಯಕೀಯ ವೃತ್ತಿ ಸೀಮಿತಗೊಳಿಸಬೇಡಿ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಎಸ್. ಸಿ.ಧಾರವಾಡ ಹೇಳಿದರು.

    ಸಾಧಕರಿಗೆ ವಿಜಯವಾಣಿ ಸನ್ಮಾನ: ಉಚಿತ ಆರೋಗ್ಯ ತಪಾಸಣೆ ಶಿಬಿರ ಸಮಾರಂಭದಲ್ಲಿ ವಿಜಯವಾಣಿ ದಿನಪತ್ರಿಕೆ ವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಆರ್.ಆರ್.ವಾಳ್ವೇಕರ್, ಡಾ.ಅಜಯ ಕಾಳೆ, ಡಾ.ಜಗದೀಶ ಸುರನ್ನವರ, ಡಾ.ಕೆ.ಎಸ್.ಹೂಲಿಕಟ್ಟಿ, ಡಾ.ಮೋಹನ ಅಶ್ವತ್ಥಪುರ, ಡಾ.ಜೆ.ಎಂ.ಖೋತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts