More

    ಮುಖಗವಸು ಬಳಕೆ ಕಡ್ಡಾಯ

    ಹುಬ್ಬಳ್ಳಿ: ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತಾಲೂಕು ಆಡಳಿತದಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಸ್ಕ್ ಡೇಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು.

    ಕರೊನಾ ಸೋಂಕಿನ ಬಗ್ಗೆ ಅನಗತ್ಯ ಭಯ ಬೇಡ. ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಸೋಂಕಿನಿಂದ ರಕ್ಷಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

    ಜನ ಜಾಗೃತಿ ಅಂಗವಾಗಿ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ವೃತ್ತ, ಕೊಪ್ಪಿಕರ ರಸ್ತೆ, ದುರ್ಗದಬೈಲ್​ನಲ್ಲಿ ಪಾದಯಾತ್ರೆ ನಡೆಸಲಾಯಿತು.

    ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್. ದಿಲೀಪ, ಉಪ ವಿಭಾಗಧಿಕಾರಿ ಮಹಮದ್ ಜುಬೇರ್, ಪಾಲಿಕೆ ಉಪ ಆಯುಕ್ತ ಎ.ಆರ್. ದೇಸಾಯಿ, ಡಿಎಚ್​ಒ ಡಾ. ಯಶವಂತ ಮದೀನಕರ್, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ ಪ್ರಕಾಶ್ ನಾಸಿ, ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಡಾ. ಎಸ್.ಎಂ. ಹೊನಕೇರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ ಇತರರಿದ್ದರು.

    ಪ್ರತಿ ವಾರ?: ಮಾಸ್ಕ್ ಡೇ ಅನ್ನು ಪ್ರತಿ ವಾರ ಆಚರಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಜಗದೀಶ ಶೆಟ್ಟರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ದೇಶದ 130 ಕೋಟಿ ಜನ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರವೇ ನೋಡಿಕೊಳ್ಳಬೇಕೆಂದರೆ ಕಷ್ಟ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸುವ, ಪರಸ್ಪರ ಅಂತರ ಕಾಪಾಡಿಕೊಳ್ಳುವ ನಿಯಮ ಪಾಲಿಸಬೇಕು. ಸರ್ಕಾರ ನಿರ್ದೇಶನದಂತೆ ಲಕ್ಷಣ ಕಂಡುಬರುವ ರೋಗಿಗಳಿಗೆ ಮಾತ್ರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ಮುಂದಿನ ದಿನಗಳಲ್ಲಿ ಪ್ಯಾಂಟ್, ಶರ್ಟ್​ಗೆ ಮ್ಯಾಚಿಂಗ್ ಆಗುವಂತಹ ಮಾಸ್ಕ್ ಗಳು ಸಹ ಮಾರುಕಟ್ಟೆಗೆ ಬರಬಹುದು.

    | ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ

    ಆರೋಗ್ಯಕರ ಜೀವನಶೈಲಿ ಅನುಸರಿಸಿ: ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ ಗುರುವಾರ ಮಾಸ್ಕ್ ದಿನ ಆಚರಿಸಲಾಯಿತು. ವಿಭಾಗೀಯ ಕಚೇರಿಯಲ್ಲಿ, ಸ್ಥಳೀಯವಾಗಿ ಸಂಸ್ಥೆಯಲ್ಲಿಯೇ ಸಿದ್ಧಪಡಿಸಿದ ಮರು ಬಳಸಬಹುದಾದ ಹತ್ತಿಬಟ್ಟೆಯ ಮಾಸ್ಕ್​ಗಳನ್ನು ಸಿಬ್ಬಂದಿಗೆ ವಿತರಿಸಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಚಾಲನೆ ನೀಡಿ, ದಿನದಿಂದ ದಿನಕ್ಕೆ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದು ಆತಂಕಕಾರಿಯಾಗಿದೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕರೊನಾ ಸೋಂಕು ನಿಯಂತ್ರಿಸಬಹುದಾಗಿದೆ ಎಂದರು. ಹುಬ್ಬಳ್ಳಿ ವಿಭಾಗದಲ್ಲಿ 2015 ಸಿಬ್ಬಂದಿ ಇದ್ದು ಇದುವರೆಗೆ 7000ಕ್ಕೂ ಹೆಚ್ಚು ಮಾಸ್ಕ್​ಗಳನ್ನು ವಿತರಿಸಲಾಗಿದೆ. ಹತ್ತಿ ಬಟ್ಟೆಯ ಮಾಸ್ಕ್ ಗಳನ್ನು ಎಲ್ಲ ಸಿಬ್ಬಂದಿಗೆ ವಿತರಿಸಲಾಗುತ್ತದೆ ಎಂದು ಹೇಳಿದರು.

    ಒಂದೇ ದಿನ 1.75 ಲಕ್ಷ ರೂ. ದಂಡ!: ಮಾಸ್ಕ್ ಡೇ ಅಂಗವಾಗಿ ವಾಹನ ಸವಾರರಿಗೆ ದಂಡ ಹಾಕುವ ಕಾರ್ಯಾಚರಣೆಗೆ ಚಾಲನೆ ನೀಡಿರುವ ಹುಬ್ಬಳ್ಳಿ- ಧಾರವಾಡ ಪೊಲಿಸರು ಅವಳಿ ನಗರದಲ್ಲಿ ಗುರುವಾರ ಒಂದೇ ದಿನ ಬರೊಬ್ಬರಿ 1.75 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ವಾಹನ ಸವಾರರು, ಪಾದಚಾರಿಗಳನ್ನು ತಡೆದ ಪೊಲೀಸರು ಮಾಸ್ಕ್ ಧರಿಸದವರಿಗೆ ತಲಾ 200 ರೂ. ದಂಡ ವಿಧಿಸಿದರು. ಬೈಕ್ ಸವಾರರು, ಹಿಂಬದಿ ಸವಾರರಿಂದಲೂ ದಂಡ ಪಡೆದರು. ಕೆಲ ಸವಾರರು ಮಾತಿನ ಚಕಮಕಿ ನಡೆಸಿದರು. ಕಾರ್ಯಾಚರಣೆಯಲ್ಲಿ ಅವಳಿ ನಗರದ ಎಲ್ಲ ಠಾಣೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

    ಖಾಕಿಗೆ ಸಂಪೂರ್ಣ ಅಧಿಕಾರ: ಇನ್ನು ಮುಂದೆ ಅವಳಿ ನಗರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದಂಡ ವಿಧಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರವಿದೆ. ಮಾಸ್ಕ್ ಧರಿಸದ ವಾಹನ ಸವಾರರು, ವ್ಯಾಪಾರಿಗಳು, ಪಾದಚಾರಿಗಳು ಸೇರಿ ಎಲ್ಲರಿಗೂ ದಂಡ ವಿಧಿಸಲಾಗುವುದು ಎಂದು ಡಿಸಿಪಿ ಪಿ. ಕೃಷ್ಣಕಾಂತ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts