More

    ಕಬ್ಬಿನ ಬೀಜದ ದರ ಗಗನಕ್ಕೆ!

    ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ತೀವ್ರ ಬರ, ಕಾರ್ಮಿಕರ ಕೊರತೆ, ಕಬ್ಬಿನ ದರದ ಸಮಸ್ಯೆ ನಡುವೆಯೂ ಕಬ್ಬಿನ ಬೀಜಕ್ಕೆ ಬಂಪರ್ ಬೆಲೆ ಬಂದಿದ್ದು, ವಿವಿಧ ತಳಿಯ ಟನ್ ಕಬ್ಬಿನ ಬೀಜದ ದರ 4,200 ರಿಂದ 5,000 ರೂ. ವರೆಗೆ ಏರಿಕೆ ಕಂಡಿದೆ. ಮತ್ತೊಂದೆಡೆ ಹೊಸದಾಗಿ ಕಬ್ಬು ನಾಟಿ ಮಾಡುವವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

    ಕಳೆದ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ಶೇ.32 ಕಬ್ಬು ಬೆಳೆ ಒಣಗಿರುವ ಪರಿಣಾಮ ಹೊಸದಾಗಿ ಕಬ್ಬು ನಾಟಿ ಮಾಡಲು ವಿವಿಧ ತಳಿಯ ಕಬ್ಬಿನ ಬೀಜಗಳ ಕೊರತೆ ಉಂಟಾಗಿದೆ. ಲಭ್ಯವಿರುವ ಕಡೆ ಕಬ್ಬಿನ ಬೀಜದ ದರವೂ ಹೆಚ್ಚಳವಾಗಿದೆ. ಕಳೆದ ವರ್ಷ ಕಬ್ಬಿನ ಬೀಜ ಟನ್‌ಗೆ 3400 ರಿಂದ 4000 ರೂ. ವರೆಗೆ ಇತ್ತು. ಈ ವರ್ಷ ಟನ್ ಕಬ್ಬಿಗೆ 600 ರಿಂದ 800 ರೂ. ವರೆಗೆ ಏರಿಕೆ ಕಂಡಿದೆ. ಮತ್ತೊಂದೆಡೆ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಬೀಜ ಸಿಗದಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

    ಪ್ರಸಕ್ತ ಮುಂಗಾರು ಹಂಗಾಮಿನ ಪೂರ್ವದಲ್ಲೇ ಮಳೆ ಸುರಿಯುತ್ತಿರುವ ಹಿನ್ನೆಲೆ ರಾಜ್ಯದಲ್ಲಿ 1.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಕಬ್ಬು ನಾಟಿ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಮುಖವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ ಸೇರಿ ವಿವಿಧ ಜಿಲ್ಲೆಗಳಲ್ಲಿನ ನೀರಾವರಿ ಪ್ರದೇಶಗಳಲ್ಲಿ ರೈತರು ಜೂನ್ ಮೂರನೇ ವಾರದಿಂದ ಹೊಸದಾಗಿ ಕಬ್ಬು ನಾಟಿ ಕಾರ್ಯ ಆರಂಭಿಸಿದ್ದರಿಂದ ಕಬ್ಬಿನ ಬೀಜದ ದರ ಹೆಚ್ಚಳವಾಗಿದೆ.

    ಪ್ರಸ್ತತ ರಾಜ್ಯದಲ್ಲಿ 76 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸರಾಸರಿ 52.91 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ಕಬ್ಬಿನ ಇಳುವರಿಯನ್ನು ಶೇ.9.04 ದಾಖಲಿಸಿವೆ. ಅಲ್ಲದೆ, ಉತ್ತಮ ಮಳೆ, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಜಲಾಶಯಗಳ ಭರ್ತಿಯಿಂದ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಕಬ್ಬಿನ ಪ್ರದೇಶ ಶೇ.13ರಷ್ಟು ವಿಸ್ತರಣೆಗೊಂಡಿದೆ.

    ವಾರ್ಷಿಕ ಸರಾಸರಿ 5.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ವರ್ಷ ಹೊಸದಾಗಿ 1.10 ಲಕ್ಷ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ. ಅಲ್ಲದೆ, ರೈತರು ಮುಂಗಡವಾಗಿ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರಿಂದ ಎಸ್‌ಎನ್‌ಕೆ 13374, ಎಸ್‌ಎನ್‌ಕೆ 13436, ಸಿಒ18009, ಪಿಡಿಎನ್15012, ಸಿಒ91010 (ಬಿಳಿ ಕಬ್ಬು), ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿರುವ ಸಿಒ 86032, ಸಿಒಎಂಒ206 ಹೀಗೆ ವಿವಿಧ ತಳಿಯ ಕಬ್ಬಿನ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಕೃಷಿ ಇಲಾಖೆ, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ತೀವ್ರ ಬರದಿಂದಾಗಿ ಸಾಕಷ್ಟು ಕಬ್ಬು ನೀರಿಲ್ಲದೆ ಒಣಗಿದ್ದರಿಂದ ಉತ್ಪಾದನೆ ತೀವ್ರ ಕುಸಿದಿತ್ತು. ಈ ವರ್ಷ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕಬ್ಬು ನಾಟಿ ಪ್ರದೇಶ ವಿಸ್ತರಣೆಗೊಂಡಿದೆ. ಮತ್ತೊಂದೆಡೆ ಕಬ್ಬಿನ ಬೀಜ ದರ ಕೂಡ ಹೆಚ್ಚಳವಾಗಿದೆ.
    | ಎಂ.ಆರ್.ರವಿಕುಮಾರ, ಕಬ್ಬು ಅಭಿವೃದ್ಧಿ ಆಯುಕ್ತ, ಸಕ್ಕರೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts