More

    ಎಪಿಎಂಸಿ ವಹಿವಾಟು 3 ದಿನ ಸ್ಥಗಿತ

    ಹುಬ್ಬಳ್ಳಿ: ತರಕಾರಿ ಬಹುಬೇಗ ಕೆಡುವ ವಸ್ತು, ಅದರ ವಹಿವಾಟು ಬಂದ್ ಮಾಡಿದರೆ ರೈತರು ಆಕ್ರೋಶಗೊಳ್ಳುತ್ತಾರೆ, ಅದರ ಬದಲು ಪರ್ಯಾಯ ಮಾರ್ಗ ಹುಡುಕಿ ಎಂಬ ಒತ್ತಾಯದ ಮಧ್ಯೆ ಮೂರು ದಿನ ಎಪಿಎಂಸಿ ತರಕಾರಿ ಮಾರ್ಕೆಟ್ ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

    ಕರೊನಾ ವೈರಸ್ ಹಬ್ಬುವ ಹಿನ್ನೆಲೆಯಲ್ಲಿ ಸಂತೆ, ಜಾತ್ರೆ, ಸಮಾವೇಶದಂತಹ ಜನ ಸೇರುವ ಯಾವುದೇ ಕಾರ್ಯಕ್ರಮ ನಡೆಸಬಾರದು ಎಂಬ ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ಎಪಿಎಂಸಿ ವಹಿವಾಟು ಬಂದ್ ಮಾಡುವ ಕುರಿತು ವರ್ತಕರೊಂದಿಗೆ ಆಡಳಿತ ಮಂಡಳಿ ಮಂಗಳವಾರ ಸಭೆ ನಡೆಸಿತು.

    ಎಪಿಎಂಸಿ ಸಹಾಯಕ ಕಾರ್ಯದರ್ಶಿ ಜಿ.ಬಿ. ಕಬ್ಬೇರಹಳ್ಳಿ, ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ 10 ದಿನದ ಮಟ್ಟಿಗೆ ಎಪಿಎಂಸಿ ಬಂದ್ ಇಡುವುದು ಅನಿವಾರ್ಯವಾಗಿದೆ ಎಂದು ಸಭೆ ಗಮನಕ್ಕೆ ತಂದರು.

    ಅದರಲ್ಲಿ ಬಹುತೇಕ ವರ್ತಕರು ತರಕಾರಿ ಮಾರ್ಕೆಟ್ ಬಂದ್ ಮಾಡುವುದರಿಂದಾಗುವ ಸಮಸ್ಯೆಗಳನ್ನು ವಿವರಿಸಿದರು. ನಾಲ್ಕೇ ದಿನದಲ್ಲಿ ತರಕಾರಿ ದರ ಮುಗಿಲು ಮುಟ್ಟುತ್ತದೆ. ಇನ್ನೊಂದೆಡೆ ರೈತರು ಬೆಳೆದ ತರಕಾರಿ ಹೊಲದಲ್ಲೇ ಕೊಳೆಯುತ್ತದೆ. ಅದರ ಬದಲು ಮೂರು ದಿನ ಬಂದ್ ಮಾಡಲು ಒಪ್ಪಿಗೆ ಸೂಚಿಸಿದರು.

    ಬುಧವಾರದ ತರಕಾರಿ ಮಾರ್ಕೆಟ್​ಗೆ ಬರಲು ಈಗಾಲೇ ರೈತರು ಕಟಾವ್ ಮಾಡಿಕೊಂಡು ಹೊರಟಿರುತ್ತಾರೆ. ಹಾಗಾಗಿ ಗುರುವಾರದಿಂದ ಮೂರು ದಿನ ಬಂದ್ ಮಾಡಲಾಗುತ್ತದೆ. ಶನಿವಾರದ ಜಾನುವಾರು ಸಂತೆಯೂ ರದ್ದಾಗಿದೆ. ಈ ಕುರಿತು ಎಲ್ಲ ಪೇಟೆ ಕಾರ್ಯಕರ್ತರಿಗೆ ಸೂಚನಾ ಪತ್ರ ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

    ಎಪಿಎಂಸಿ ಸದಸ್ಯರಾದ ಚನ್ನು ಹೊಸಮನಿ, ಶಂಕ್ರಣ್ಣ ಬಿಜವಾಡ ಮಾತನಾಡಿ, ತರಕಾರಿ ಬಂದ್ ಮಾಡುವುದರಿಂದ ಹಲವು ಸಮಸ್ಯೆ ಎದುರಾಗುತ್ತವೆ. ರೈತರ ಬಗ್ಗೆಯೂ ಕಾಳಜಿ ವಹಿಸಬೇಕು. ಈ ಕುರಿತು ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

    ದರ ಹೆಚ್ಚಳ: ಬರೀ ಹುಬ್ಬಳ್ಳಿ ಎಪಿಎಂಸಿ ಬಂದ್ ಇಟ್ಟರೆ ಸಾಲದು ಪಕ್ಕದ ಧಾರವಾಡ, ಗದಗ, ಎಲ್ಲ ಕಡೆ ಬಂದ್ ಮಾಡಬೇಕು. ರೈತರಿಗೆ ಮಾಹಿತಿ ನೀಡಬೇಕು. ಎಪಿಎಂಸಿ ಬಂದ್ ಮಾಡುವುದರಿಂದ ದರಗಳು ಏರುಮುಖವಾಗುತ್ತವೆ. ಈ ಬಗ್ಗೆ ಗಮನ ಹರಿಸಿ ಎಂದು ವರ್ತಕರು ಒತ್ತಾಯಿಸಿದರು.

    ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಬಿದರಿಗೌಡ್ರ ಮಾತನಾಡಿ, ಕರೊನಾ ಹರಡುವ ರೀತಿ, ಅದರಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಸಿ, ಜನ ಸೇರುವ ಸಂತೆ ರದ್ದುಪಡಿಸಿ ಎಂದು ಮನವಿ ಮಾಡಿದರು.

    ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಾ. 21ರವರೆಗೆ ಎಪಿಎಂಸಿ ವಹಿವಾಟು ಬಂದ್ ಮಾಡಲಾಗುವುದು. ನಂತರದಲ್ಲಿ ಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಸೂಚಿಸಿದರು. ಇದಕ್ಕೆ ವರ್ತಕರು ಒಪ್ಪಿಗೆ ಸೂಚಿಸಿದರು. ವರ್ತಕರಾದ ಸಲೀಂ ಬ್ಯಾಹಟ್ಟಿ, ಗಂಗನಗೌಡ ಪಾಟೀಲ, ರಾಜಕಿರಣ ಮೆಣಸಿನಕಾಯಿ, ಇತರರು ಪಾಲ್ಗೊಂಡಿದ್ದರು.

    ಪಾಲಿಕೆ ವಿರುದ್ಧ ಆಕ್ರೋಶ

    ಎಪಿಎಂಸಿಯಲ್ಲಿ ತೆರಿಗೆ ಸಂಗ್ರಹಕ್ಕೆ ಹತ್ತಾರು ದಾರಿ ಹುಡುಕುವ ಮಹಾನಗರ ಪಾಲಿಕೆ ಅಧಿಕಾರಿಗಳು, ಇಲ್ಲಿನ ಸ್ವಚ್ಛತೆ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಉಳಿದ ದಿನಗಳಲ್ಲಿ ಹೋಗಲಿ ಕನಿಷ್ಠ ಪಕ್ಷ ಈಗ ವೈರಾಣು ಕಾಯಿಲೆಗಳು ಬರುತ್ತಿರುವ ಸಂದರ್ಭದಲ್ಲಾದರೂ ಕಸ ನಿರ್ವಹಣೆ, ಫಾಗಿಂಗ್, ರಾಸಾಯನಿಕ ಸಿಂಪರಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಹಾನಗರ ಪಾಲಿಕೆಗೆ ಬರೀ ತೆರಿಗೆ ಸಾಕೇ, ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ ಬೇಡವೇ? ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts