More

    ವೀರನಾರಿ ಓಬವ್ವ ನಾರಿಶಕ್ತಿಗೆ ಮಾದರಿ

    ಚಿತ್ರದುರ್ಗ: ವೀರನಾರಿ ಒನಕೆ ಓಬವ್ವ ಹೈದರಾಲಿ ಸೈನ್ಯದ ವಿರುದ್ಧ ಏಕಾಂಗಿಯಾಗಿ ಹೋರಾಡಿ, ಐತಿಹಾಸಿಕ ಕೋಟೆಯನ್ನೂ ರಕ್ಷಿಸಿ, ಕನ್ನಡನಾಡಿನ ಕೀರ್ತಿಯನ್ನು ದೇಶದಲ್ಲಿ ಬೆಳಗುವ ಮೂಲಕ ನಾರಿಶಕ್ತಿಗೆ ಮಾದರಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.

    ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಶನಿವಾರ ನಡೆದ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಓಬವ್ವ ಶಿಕ್ಷಣ, ಯುದ್ಧ ತರಬೇತಿ ಪಡೆದಿರಲಿಲ್ಲ. ತನ್ನ ಜೀವದ ಹಂಗು ತೊರೆದು ಶತ್ರುಗಳನ್ನು ಸದೆಬಡೆದ ಆಕೆಯ ಧೈರ್ಯ ಯಾರೂ ಮರೆಯುವಂತಿಲ್ಲ. ಸ್ವಾಮಿ ನಿಷ್ಠೆ, ಕರ್ತವ್ಯ ಪ್ರಜ್ಞೆ, ವೀರತ್ವದಿಂದಾಗಿ ಸಾಮಾನ್ಯ ಮಹಿಳೆ ಅಸಾಮಾನ್ಯ ಸ್ಥಾನಕ್ಕೇರಿ ಮಹಾತಾಯಿಯಾಗಿದ್ದಾರೆ. ಅವರ ಸಾಹಸ ಅವಿಸ್ಮರಣೀಯ ಎಂದು ಸ್ಮರಿಸಿದರು.

    ಹೆಚ್ಚುವರಿ ಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಓಬವ್ವಳ ಸಾಧನೆ ಸರ್ವಕಾಲಕ್ಕೂ ಚಿರಸ್ಥಾಯಿಯಾಗಿ ಉಳಿಯಲಿದೆ. ಸಮಾಜದಲ್ಲಿ ಸ್ವಾರ್ಥಕ್ಕಾಗಿ ಬದುಕದೇ, ಜನರಿಗಾಗಿ ಸತ್ಕಾರ್ಯ ಮಾಡಿದವರು ಚಿರಂಜೀವಿ ಇದ್ದಂತೆ ಎಂದರು.

    ಶ್ರೀ ಬಸವನಾಗೀದೇವ ಸ್ವಾಮೀಜಿ ಮಾತನಾಡಿ, ಮದಕರಿನಾಯಕ, ಓಬವ್ವ ಅವರ ಕೊಡುಗೆ ಚಿತ್ರದುರ್ಗ ಇತಿಹಾಸದಲ್ಲಿ ಅವಿಸ್ಮರಣೀಯ. ದೇಶ, ನಾಡಿನ ಅಭಿವೃದ್ಧಿಗೆ ಯಾರು ಶ್ರಮಿಸುತ್ತಾರೋ ಅವರು ಉತ್ಕೃಷ್ಠ ಸ್ಥಾನಕ್ಕೆ ಏರುತ್ತಾರೆ. ಆ ನಿಟ್ಟಿನಲ್ಲಿ ಯುವಸಮೂಹ, ಅದರಲ್ಲೂ ಮಹಿಳೆಯರು ಅಭೂತಪೂರ್ವ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

    ನಿವೃತ್ತ ಪ್ರಾಂಶುಪಾಲ ಎನ್.ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ದಾವಣಗೆರೆ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯೆ ಎನ್.ಬಿ.ಭಾರ್ಗವಿ ದ್ರಾವಿಡ್, ಶೇಷಪ್ಪ, ಎಚ್.ಗುರುಮೂರ್ತಿ, ರವಿಕುಮಾರ್, ಜಯರಾಮ್, ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಅಣ್ಣಪ್ಪಸ್ವಾಮಿ, ಚನ್ನಬಸಪ್ಪ, ದಯಾನಂದ, ಸುವರ್ಣಮ್ಮ, ಸುನಿಲ್ಕುಮಾರ್, ತಿಪ್ಪೇಸ್ವಾಮಿ, ನಗರಸಭೆ ಪೌರಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇತರರಿದ್ದರು.

    ಮೆರವಣಿಗೆ ಅದ್ದೂರಿ: ಓಬವ್ವ ಜಯಂತ್ಯುತ್ಸವ ಅಂಗವಾಗಿ ಐತಿಹಾಸಿಕ ಕೋಟೆ ಮುಂಭಾಗದಿಂದ ಆರಂಭವಾದ ಭಾವಚಿತ್ರ ಮೆರವಣಿಗೆಗೆ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ಸಚಿವ ಡಿ.ಸುಧಾಕರ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಹಳೆ, ಉರುಮೆ, ತಮಟೆ, ಡೋಲು ಸೇರಿ ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು. ಕೋಟೆ ರಸ್ತೆಯಿಂದ ಹೊರಟು ಆನೆಬಾಗಿಲು, ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಓಬವ್ವ, ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಿ ರಂಗಮಂದಿರ ತಲುಪಿತು. ಅಧಿಕಾರಿಗಳು, ಛಲವಾದಿ ಸಮುದಾಯದ ಮುಖಂಡರು, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts