More

    ಗುತ್ತಿಗೆ ಸಾಕು, ಸರ್ಕಾರಿ ಉದ್ಯೋಗಗಳು ಹೆಚ್ಚಬೇಕು

    ದೇಶದಲ್ಲಿ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಬ್ಯಾಂಕ್​ಗಳಲ್ಲಿ 2 ಲಕ್ಷ, ಪೋಲಿಸ್ ಇಲಾಖೆಯಲ್ಲಿ 5.31 ಲಕ್ಷ, ಪ್ರಾಥಮಿಕ ಶಾಲೆಗಳಲ್ಲಿ 8.37 ಲಕ್ಷ ಹುದ್ದೆಗಳಿವೆ. ಒಂದೂವರೆ ವರ್ಷಗಳಲ್ಲಿ 10 ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷಿ ಯೋಜನೆ ರೂಪಿಸುವ ಅಗತ್ಯವಿದೆ.

    ಗುತ್ತಿಗೆ ಸಾಕು, ಸರ್ಕಾರಿ ಉದ್ಯೋಗಗಳು ಹೆಚ್ಚಬೇಕುಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಎಲ್ಲರನ್ನೂ ಕಳವಳಕ್ಕೀಡುಮಾಡಿರುವ ಸಂಗತಿ. ನಿರುದ್ಯೋಗ, ಬಡತನ ಅಥವಾ ದಿವಾಳಿತನದ ಕಾರಣದಿಂದ ಪ್ರತಿ ಗಂಟೆಗೆ ಒಬ್ಬ ಭಾರತೀಯ ಪ್ರಜೆ ಆತ್ಮಹತ್ಯೆ ಮಾಡಿಕೊಂಡಿರುವುದು 2019ನೇ ಸಾಲಿನಲ್ಲಿ ಕಂಡುಬಂದಿದೆ. 2018 ಮತ್ತು 2020ರ ನಡುವೆ 25,000 ಭಾರತೀಯರು ನಿರುದ್ಯೋಗ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಿರುದ್ಯೋಗಿಗಳಿಗೆ ಪ್ರತಿಭಟನೆಯು ಒಂದು ದೊಡ್ಡ ಮಾರ್ಗವೆಂದು ತೋರುತ್ತದೆ. 2022ರ ಜನವರಿಯಲ್ಲಿ ರೈಲ್ವೆ ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ರೈಲ್ವೆ ಕೋಚ್​ಗಳನ್ನು ಸುಟ್ಟುಹಾಕಿದರು. ಸದ್ಯ ಅಗ್ನಿಪಥ ಯೋಜನೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ರಾಷ್ಟ್ರಕ್ಕಾಗಿ ಗೌರವದಿಂದ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕಾದ ಅಗ್ನಿಪಥ ಯೋಜನೆಯು ಗುತ್ತಿಗೆ ನೌಕರರಾಗಲು ದಾರಿ ಮಾಡಿಕೊಡುತ್ತಿರುವಂತಿದೆ.

    ಸರ್ಕಾರದ ಉದ್ಯೋಗದಲ್ಲಿ ಇರುವವರ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. 2022ರ ಮೇ ತಿಂಗಳಲ್ಲಿ ಹರಿಯಾಣವು 2,212 ಗುತ್ತಿಗೆ ಆರೋಗ್ಯಕಾರ್ಯಕರ್ತರ ಸೇವೆಗಳನ್ನು ಕೊನೆಗೊಳಿಸಿತು. ಇವರೆಲ್ಲ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನೇಮಕಗೊಂಡಿದ್ದರು. ‘ಬಳಸಿ ಬಿಸಾಡುವ’ ನೀತಿಗೊಂದು ಅತ್ಯುತ್ತಮ ಉದಾಹರಣೆ ಇದು. ದೆಹಲಿಯಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರು ಕೂಡ ಗುತ್ತಿಗೆ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಸನ್ಮಾನ ಮಾಡಿ ಧನ್ಯವಾದಗಳನ್ನು ಹೇಳಿದ ನಂತರ ನಾವು ಅವರನ್ನು ವಜಾ ಮಾಡಿದ್ದೇವೆ. ಇದು- ‘ಬೇಕಾದಾಗ ಕೆಲಸಕ್ಕೆ ತೆಗೆದುಕೊಳ್ಳುವ ಹಾಗೂ ಬೇಡವಾದಾಗ ತೆಗೆದುಹಾಕುವ ಸಂಸ್ಕೃತಿ’.

    ಅಸ್ಸಾಂನಲ್ಲಿ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ 8,300 ಗುತ್ತಿಗೆ ಸಿಬ್ಬಂದಿ 2022ರ ಫೆಬ್ರವರಿಯಲ್ಲಿ ಪ್ರತಿಭಟನೆ ನಡೆಸಿದರು. ಇವರೆಲ್ಲ 12-14 ವರ್ಷಗಳಿಂದ ಗುತ್ತಿಗೆಯಾಧಾರಿತವಾಗಿ ಕೆಲಸ ಮಾಡುತ್ತಿದ್ದು, ಬೋನಸ್, ಭತ್ಯೆಗಳು, ಪಿಂಚಣಿ ಅಥವಾ ವೇತನ ಪರಿಷ್ಕರಣೆ ಸೌಲಭ್ಯಗಳು ಇವರಿಗೆ ದೊರೆತಿಲ್ಲ. ಇದೇ ರೀತಿ, 2021 ಡಿಸೆಂಬರ್ 1ರಂದು ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್​ನ 80 ಕಾರ್ವಿುಕರಿಗೆ (ಹೆಚ್ಚಾಗಿ ಮಹಿಳೆಯರು ಮತ್ತು ದಲಿತರು) ಸಂಸ್ಥೆಯ ಸ್ಥಾವರಕ್ಕೆ ಏಕಾಏಕಿ ಪ್ರವೇಶವನ್ನು ನಿರಾಕರಿಸಲಾಯಿತು. ತದನಂತರವೇ ಕೆಲಸದಿಂದ ತೆಗೆದ ವಿಷಯವನ್ನು ಅವರಿಗೆ ತಿಳಿಸಲಾಯಿತು. ಸಾರ್ವಜನಿಕ ವಲಯದ ಈ ಉದ್ಯಮವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದು, 2018ರಲ್ಲಿ 111 ಕೋಟಿ ರೂ. ಲಾಭ ಕೂಡ ಮಾಡಿದೆ. 2022ರ ಏಪ್ರಿಲ್​ನಲ್ಲಿ, ಛತ್ತೀಸ್​ಗಢದ ರಾಜ್ಯ ವಿದ್ಯುತ್ ಇಲಾಖೆಯ 200 ಗುತ್ತಿಗೆ ಕಾರ್ವಿುಕರ ಮೇಲೆ ಲಾಠಿ ಪ್ರಹಾರ ನಡೆಸಿ ಬಂಧಿಸಲಾಯಿತು.

    ಸರ್ಕಾರಿ ಸೇವೆಯ ನೇಮಕಾತಿ ಸಮಸ್ಯೆಗೆ ಎರಡು ಮಗ್ಗುಲುಗಳಿವೆ. ಮೊದಲನೆಯದಾಗಿ, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲಾಗುತ್ತಿಲ್ಲ. 2021ರ ಜುಲೈವರೆಗೆ ಸರ್ಕಾರದ ಎಲ್ಲಾ ಹಂತಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಇವುಗಳಲ್ಲಿ 9,10,513 ಹುದ್ದೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವು. ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ 2,00,000 ಹುದ್ದೆಗಳು ಖಾಲಿ ಇವೆ. ಪೋಲಿಸ್ ಇಲಾಖೆಯಲ್ಲಿ 5,31,737ಕ್ಕೂ ಹೆಚ್ಚು; ಪ್ರಾಥಮಿಕ ಶಾಲೆಗಳಲ್ಲಿ 8,37,592 ಖಾಲಿ ಹುದ್ದೆಗಳಿವೆ ಎಂದು ಅಂದಾಜಿಸಲಾಗಿದೆ. ಒಂದೂವರೆ ವರ್ಷಗಳಲ್ಲಿ 10 ಲಕ್ಷ ಜನರನ್ನು ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ. ಆದರೂ, ಇದು ಸಮಸ್ಯೆಯ ಗಾತ್ರಕ್ಕಿಂತ ಕಡಿಮೆ ಸಂಖ್ಯೆಯೇ ಆಗಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷಿ ಯೋಜನೆ ರೂಪಿಸುವ ಅಗತ್ಯವಿದೆ.

    ಎರಡನೆಯದಾಗಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ, ಗುತ್ತಿಗೆ ಆಧಾರಿತವಾಗಿ ನೇಮಕಾತಿ ಮಾಡಿಕೊಳ್ಳುವತ್ತ ಒಲವು ಹೆಚ್ಚುತ್ತಿದೆ. 2014ರಲ್ಲಿ ಶೇ. 43ರಷ್ಟು ಸರ್ಕಾರಿ ನೌಕರರು (ಅಂದರೆ 1.23 ಕೋಟಿ) ಕಾಯಂ ಅಲ್ಲದ ಗುತ್ತಿಗೆಯಾಧಾರಿತ ಉದ್ಯೋಗ ಹೊಂದಿದ್ದರು. ಈ ಪೈಕಿ ಪ್ರಮುಖವಾಗಿ ಕಲ್ಯಾಣ ಯೋಜನೆಗಳಲ್ಲಿ (ಉದಾ: ಅಂಗನವಾಡಿ ಕಾರ್ಯಕರ್ತೆಯರು) 69 ಲಕ್ಷ ಜನರು ಕೆಲಸ ಮಾಡುತ್ತಿದ್ದರು. ಇವರು ತೀರ ಕಡಿಮೆ ವೇತನ ಪಡೆಯುತ್ತಿದ್ದರು (ಕೆಲವು ಸಂದರ್ಭಗಳಲ್ಲಿ ಕನಿಷ್ಠ ವೇತನಕ್ಕಿಂತಲೂ ಕಡಿಮೆ). ಅಲ್ಲದೆ, ಯಾವುದೇ ಸಾಮಾಜಿಕ ಭದ್ರತಾ ಸೌಲಭ್ಯಗಳೂ ಇವರಿಗೆ ಇರಲಿಲ್ಲ. 2018ರ ವೇಳೆಗೆ, ಗುತ್ತಿಗೆಯಾಧಾರಿತ ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಶೇ. 59ಕ್ಕೆ ಏರಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಗುತ್ತಿಗೆಯ ಉದ್ಯೋಗಿಗಳ ಸಂಖ್ಯೆ ಶೇ. 19 ರಿಂದ ಶೇ. 37ಕ್ಕೆ ಏರಿದೆ. (2020ರ ಮಾರ್ಚ್ ತಿಂಗಳಲ್ಲಿ ಈ ಉದ್ಯೋಗಿಗಳ ಸಂಖ್ಯೆ 4,98,807 ಇದೆ,). ಇಲ್ಲಿನ ಕಾಯಂ ಉದ್ಯೋಗಿಗಳ ಸಂಖ್ಯೆ ಶೇ. 25 ರಷ್ಟು ಕುಸಿತ ಕಂಡಿದೆ.

    ಒಎನ್​ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ)ಯಲ್ಲಿ 2020ರ ಮಾರ್ಚ್ ವೇಳೆಗೆ ಶೇ. 81ರಷ್ಟು (43,397 ನೌಕರರು) ಸಿಬ್ಬಂದಿ ಗುತ್ತಿಗೆ ಆಧಾರಿತವಾಗಿದ್ದರು. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ, ನಿರುದ್ಯೋಗ ಹೆಚ್ಚಾದ ಸಂದರ್ಭದಲ್ಲಿ ಕೆಲವು ರಾಜ್ಯಗಳು ಗುತ್ತಿಗೆ ಕೆಲಸವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ಮುಂದಾದವು. ಉತ್ತರ ಪ್ರದೇಶದ ಸರ್ಕಾರವು ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಗುತ್ತಿಗೆಯಾಧಾರದಲ್ಲಿ ನೇಮಕಕ್ಕೆ ಕಾನೂನು ತಿದ್ದುಪಡಿಗೆ ಮುಂದಾಯಿತು. ಈ ಗುತ್ತಿಗೆ ಐದು ವರ್ಷಗಳ ಅವಧಿಯದ್ದಾಗಿದ್ದು, ಯಾವುದೇ ಭತ್ಯೆ ಮತ್ತು ವಿಶೇಷ ಪ್ರಯೋಜನಗಳನ್ನು ಕಲ್ಪಿಸುವುದಿಲ್ಲ. ಕಾರ್ಯಕ್ಷಮತೆಯ ಮೌಲ್ಯಮಾಪನದ (ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳು; ನಿಯಮಿತ ಹಾಜರಾತಿ; ನೈತಿಕತೆ, ಶಿಸ್ತು ಇತ್ಯಾದಿ) ನಂತರ ಕಾಯಮಾತಿ ಅವಕಾಶ ಕಲ್ಪಿಸಲಾಗಿದೆ. ಈ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗದವರನ್ನು ವಜಾಗೊಳಿಸಲಾಗುವುದು.

    2013ರ ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೆಂದನ್ನು ನೀಡಿ, ಸರ್ಕಾರಿ ಇಲಾಖೆಯ ಗುತ್ತಿಗೆ ಉದ್ಯೋಗಿಗಳು ಸರ್ಕಾರಿ ನೌಕರರಲ್ಲ ಎಂದು ಹೇಳಿತು. ಹಾಗಾದರೆ, ಬಹುತೇಕ ನೌಕರರು ಗುತ್ತಿಗೆಯಾಧಾರಿತವಾದರೆ, ಸರ್ಕಾರಿ ಸೇವೆ ಅಸ್ತಿತ್ವದಲ್ಲಿ ಇರಲು ಸಾಧ್ಯವೇ? ಗುತ್ತಿಗೆ ಉದ್ಯೋಗವನ್ನು ವಿಸ್ತರಿಸುವ ಬದಲು, ನಾವು ಸಾರ್ವಜನಿಕ ಸೇವೆಗಳನ್ನು ಹೆಚ್ಚಿಸಲು ಪ್ರಯತ್ನಿಸುವ ಅಗತ್ಯ ಇದೆ.

    ಸಾರ್ವಜನಿಕ ಸೇವೆ ವಿಸ್ತರಿಸುವುದರಿಂದ ಗುಣಮಟ್ಟದ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಉತ್ತೇಜನ ನೀಡುವುದು ಸಾಮಾಜಿಕ ಸ್ವತ್ತುಗಳ ಸೃಷ್ಟಿಗೆ ಕಾರಣವಾಗುತ್ತದೆ. ಹೆಚ್ಚು ಐಸಿಯು ಹಾಸಿಗೆಗಳನ್ನು ಹೊಂದಿದ್ದರೆ ಕೋವಿಡ್ ಬಿಕ್ಕಟ್ಟನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂಬುದು ನಮ್ಮ ಅರಿವಿಗೆ ಬಂದಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದು ಆಯುಷ್ಮಾನ್ ಭಾರತದಂತಹ ವಿಮೆ ಆಧಾರಿತ ಕಾರ್ಯಕ್ರಮಗಳಿಗೆ ನೆರವಾಗುತ್ತದೆ. ಇಂತಹ ಖರ್ಚುಗಳಿಂದಾಗಿ ಅಂತಿಮವಾಗಿ ಗ್ರಾಹಕ ವಸ್ತುಗಳ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಬಹುವಿಧ ಪರಿಣಾಮ ಬೀರಿ ಆರ್ಥಿಕತೆ ವೃದ್ಧಿಸುತ್ತದೆ. ಈ ಮೂಲಕ ಭಾರತದ ನಗರಗಳು ಮತ್ತು ಹಳ್ಳಿಗಳಲ್ಲಿ ಉತ್ಪಾದಕತೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

    ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶವಿದೆ. (ಉದಾ: ಮೇಲ್ಛಾವಣಿಯ ಸೌರ ವಿದ್ಯುತ್ ಉತ್ಪಾದನೆ, ಸೌರ ಫಲಕ ತಯಾರಿಕೆ ಮತ್ತು ಅಂತಿಮ ಬಳಕೆದಾರರಿಗೆ ಸೇವೆ) ತ್ಯಾಜ್ಯ ನಿರ್ವಹಣೆ ವಲಯದಲ್ಲಿ, ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯ ವಿಸ್ತರಿಸಲು ಅವಕಾಶವಿದೆ. ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣ ಮತ್ತು ನಿರ್ವಹಣೆ ಸಾಕಷ್ಟು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ.

    ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಗಮನಾರ್ಹವಾದ ಮಾನವಶಕ್ತಿಯ ಅಗತ್ಯವಿದೆ. ಇದು ಹಸಿರು ಉದ್ಯೋಗಗಳ (ಗ್ರೀನ್ ಜಾಬ್) ಸೃಷ್ಟಿಗೆ ಕಾರಣವಾಗುತ್ತದೆ. ತೋಟಗಾರಿಕೆ ಮತ್ತು ನರ್ಸರಿ ನಿರ್ವಹಣೆಯ ಮೂಲಕ ನಗರ ಕೃಷಿಯನ್ನು ಪೋ›ತ್ಸಾಹಿಸಿ ಉದ್ಯೋಗ ಸೃಷ್ಟಿಸಬಹುದು. ಆಯ್ದ ಸಾರ್ವಜನಿಕ ರಂಗದ ಉದ್ಯಮಗಳನ್ನು ಸುಧಾರಿಸಿ ಪ್ರೋತ್ಸಾಹ ನೀಡಿದರೆ, ಚೀನಾದ ಸರ್ಕಾರಿ ಕಂಪನಿಗಳ ರೀತಿಯಲ್ಲಿ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ.

    ಈಗ ಸರ್ಕಾರಿ ಉದ್ಯೋಗಗಳು ಹೊಳಪನ್ನು ಕಳೆದುಕೊಂಡಿವೆ. ಪ್ರತಿಭಾವಂತರನ್ನು ಸರ್ಕಾರದತ್ತ ಸೆಳೆಯಬೇಕಾಗಿದೆ. ಪಿಂಚಣಿ ಮತ್ತು ಪ್ರಯೋಜನಗಳ ವೆಚ್ಚವನ್ನು ಕಡಿಮೆ ಮಾಡುವ ಬದಲು, ಸೂಕ್ತ ರೀತಿಯಲ್ಲಿ ಇದನ್ನು ನಿಭಾಯಿಸಬೇಕಿದೆ. ನಮ್ಮ ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ವೈದ್ಯರು, ಶಿಕ್ಷಕರು, ಇಂಜಿನಿಯರ್​ಗಳ ಅಗತ್ಯವಿದೆ.

    ಆಡಳಿತ ಸುಧಾರಣಾ ಆಯೋಗವು ಪ್ರತಿಪಾದಿಸುವ ಸುಧಾರಣೆಗಳು ನಮ್ಮ ಆರಂಭಿಕ ಹೆಜ್ಜೆಗಳಾಗಬೇಕು. ಭ್ರಷ್ಟಾಚಾರಮುಕ್ತ ಕಲ್ಯಾಣ ವ್ಯವಸ್ಥೆ ಒದಗಿಸಲು, ಆಧುನಿಕ ಆರ್ಥಿಕತೆ ಮುನ್ನಡೆಸಲು ಮತ್ತು ಸಮರ್ಪಕ ಸಾರ್ವಜನಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂದಿನ ಸವಾಲುಗಳನ್ನು ಎದುರಿಸಬಹುದಾದ ಸಮರ್ಥ ನಾಗರಿಕ ಸೇವೆಯನ್ನು ರೂಪಿಸುವ ಸಮಯ ಇದಾಗಿದೆ.

    (ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts