More

    ಯೋಗಕ್ಷೇಮ| ಅಂತರಂಗ ಸಾಧನೆಯ ಮೊದಲ ಮೆಟ್ಟಿಲು ಧಾರಣಾ

    ಯೋಗಕ್ಷೇಮ| ಅಂತರಂಗ ಸಾಧನೆಯ ಮೊದಲ ಮೆಟ್ಟಿಲು ಧಾರಣಾಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರಗಳಲ್ಲಿ ಬಾಹ್ಯ ಪ್ರಯತ್ನ ಅನಿವಾರ್ಯವಾದುದರಿಂದ ಇದನ್ನು ‘ಬಹಿರಂಗ’ ಸಾಧನೆಗಳೆಂದು ಕರೆದಿದ್ದಾರೆ. ಧಾರಣ ಮತ್ತು ಅನಂತರದ ಧ್ಯಾನ-ಸಮಾಧಿ ಈ ಮೂರೂ ಸರ್ವಥಾ ಆಂತರಿಕ ಪ್ರಯತ್ನವನ್ನು ಅವಲಂಬಿಸಿರುವುರಿಂದ ಇವನ್ನು ‘ಅಂತರಂಗ’ ಸಾಧನಗಳೆಂದು ಕರೆದಿದ್ದಾರೆ. ಮಹರ್ಷಿ ಪತಂಜಲಿಯು ‘ಧಾರಣಾ’ ವನ್ನು ಹೀಗೆ ಸೂತ್ರೀಕರಿಸಿದ್ದಾರೆ – ‘ದೇಶಬಂಧಶ್ಚಿತ್ತಸ್ಯ ಧಾರಣಾ’ ಎಂದರೆ ‘ಚಿತ್ತವನ್ನು ಯಾವುದಾದರೂ ಒಂದು ದೇಶದಲ್ಲಿ ನಿಲ್ಲಿಸುವುದು ಧಾರಣಾ’- ಎಂದು ಇದರ ತಾತ್ಪರ್ಯ. ಮಹರ್ಷಿ ವ್ಯಾಸರು ಈ ಸೂತ್ರದ ಮೇಲೆ ವ್ಯಾಖ್ಯಾನ ಬರೆಯುತ್ತಾ- ‘ಹೊಕ್ಕಳಿನ ಪ್ರದೇಶದಲ್ಲಿ, ಹೃದಯ ಕಮಲದಲ್ಲಿ, ಬ್ರಹ್ಮರಂಧ್ರದಲ್ಲಿ, ಜ್ಯೋತಿಯಲ್ಲಿ, ನಾಸಿಕಾಗ್ರದಲ್ಲಿ, ಜಿಹ್ವಾಗ್ರಹದಲ್ಲಿ- ಈ ಮೊದಲಾದ ‘ದೇಶ’ಗಳಲ್ಲಿ ಬಾಹ್ಯ ವಿಷಯಗಳಲ್ಲಿ, ವೃತ್ತಿ ಮಾತ್ರದಿಂದ ಚಿತ್ತವನ್ನು ಬಂಧಿಸುವುದೇ ಧಾರಣಾ’.

    ಪತಂಜಲ ಯೋಗ ಸೂತ್ರದಲ್ಲಿನ ‘ದೇಶ’ ಶಬ್ದ ಕೇವಲ ಸ್ಥಾನ ವಾಚಕವಲ್ಲ; ಅದು ಹುಟ್ಟುವುದು ‘ದಿಶ್’ ಧಾತುವಿನಿಂದ. ದಿಶ್ ಧಾತುವಿಗೆ ತೋರಿಸು, ಸೂಚಿಸು ಮೊದಲಾದ ಅರ್ಥಗಳಿವೆ. ಆದುದರಿಂದ ‘ದೇಶ’ ಎಂಬ ಶಬ್ದಕ್ಕೆ ಕುರುಹು, ಚಿಹ್ನೆ, ಲಕ್ಷಣ, ಶಬ್ದ, ರೂಪ ಮತ್ತು ದಿಕ್ಕು ಎಂಬ ಅರ್ಥಗಳೂ ಆಗುತ್ತವೆ. ದ್ರವ್ಯಾಶ್ರಿತವಾದ ಗುಣಗಳು ಕೂಡ ಆ ದ್ರವ್ಯಗಳನ್ನು ಸೂಚಿಸುವ ಲಕ್ಷಣಗಳೇ ಆಗಿರುವುದರಿಂದ, ಗುಣಗಳನ್ನು ಸಹ ದೇಶಗಳೆಂದೆ ತಿಳಿಯಬೇಕು. ಅಲ್ಲದೇ ಎಲ್ಲ ದಿಕ್ಕುಗಳಷ್ಟೆ ಆಗದೆ, ನಿರ್ದಿಷ್ಟವಾದ ಯಾವುದೇ ಒಂದು ಸಿದ್ಧಾಂತ ಅಥವಾ ತತ್ವವನ್ನು ಸಹ ‘ದಿಕ್ಕು’ ಎಂಬ ಶಬ್ದದಿಂದ ಗ್ರಹಿಸಬೇಕು. ಹೀಗೆ ಯಾವುದಾರೂ ಗುಣದಲ್ಲಿ, ರೂಪದಲ್ಲಿ ಅಥವಾ ಸಿದ್ಧಾಂತದಲ್ಲಿ ಚಿತ್ತವನ್ನು ನಿಲ್ಲಿಸುವುದೂ ‘ಧಾರಣಾ’ ಎಂದೇ ಎನ್ನಿಸಿಕೊಳ್ಳುತ್ತದೆ.

    ಗೀತಾಚಾರ್ಯ ಶ್ರೀಕೃಷ್ಣನು
    ‘ಯತೋ ನಿಶ್ಚರತಿ ಮನಶ್ಚಂಚಲ ದುಸ್ಥಿರಂ | ತತಸ್ತತೋ ನಿಯಮೆ್ಮೖ ತದಾತ್ಮನ್ಯೇವ ವಶಂ ನಯೇತ್’||

    ಎಂದಿರುವನು. ಅಂದರೆ- ಅಸ್ಥಿರವೂ ಚಂಚಲವೂ ಆದ ಮನಸ್ಸು ಎಲ್ಲೆಲ್ಲಿ ಬಾಡಿ ಹೋಗುವುದೋ ಅಲ್ಲಲ್ಲಿನಿಂದ ಅದನ್ನು ಕಟ್ಟಿ ಹಾಕಿ ಆತನಲ್ಲಿಯೇ ವಶಪಡಿಸಬೇಕು. ಮನಸ್ಸು ಚಂಚಲ. ಓಡಿಹೋಗುವುದೆ ಅದರ ಸ್ವಭಾವ. ಅದನ್ನು ಬೇರೆಲ್ಲಾ ಕಡೆಗಳಿಂದಲೂ ಹಿಡಿದು ತಂದು ಜೀವಾತ್ಮನಲ್ಲಿಯೇ ಕಟ್ಟಿಹಾಕುವುದು ಆತ್ಮನ ಮತ್ತು ಪರಮಾತ್ಮನ ಗುಣಗಳ ಚಿಂತನದಲ್ಲಿಯೇ ಬಂಧಿಸುವುದು. ಇದೇ ಧಾರಣಾ. ಈ ಮಹಾಕಾರ್ಯಗಳ ಸಾಧನೆಗಾಗಿ, ಚಿತ್ತವನ್ನು ಸಂಕಲ್ಪ ಮಾತ್ರದಿಂದ, ಚಿಂತನ ಮಾತ್ರದಿಂದ, ಶರೀರ ಸ್ಥಿತವಾದ ಉಪಯುಕ್ತ ಸ್ಥಳಗಳಲ್ಲಾಗಲೀ, ಬಾಹ್ಯ ವಸ್ತುಗಳಲ್ಲಾಗಲಿ ಬಂಧಿಸುವುದು, ಅಂದರೆ ಚಿತ್ತಕ್ಕೆ ಒಂದಡೆ ನಿಲ್ಲುವ ಏಕಾಗ್ರಗೊಳ್ಳುವ ಸಾಮರ್ಥ್ಯವನ್ನು ಒದಗಿಸಿಕೊಡುವುದೂ ಧಾರಣಾ ಕ್ರಿಯೆಯೇ ಆಗಿದೆ. ವಿಜಯದಾಸರು ಯೋಗಧ್ಯಾನ ಸುಳಾದಿಯಲ್ಲಿ ಇದನ್ನು ಹೇಳುತ್ತಾರೆ. ಪರಮಾತ್ಮನ ಧ್ಯಾನಕ್ಕೆ ಅಣಿಗೊಳಿಸಿ ಮನ ಅಲ್ಲಿ ಸ್ಥಿರವಿದ್ದಾಗ,-

    ಮಧ್ಯ ಮಧ್ಯದಲ್ಲಿ ಮನಸು | ಎದ್ದು ಪೊರೆಗೆ ಪೋಪಲಾಗಿ | ಅಧೈರ್ಯ ಮಾಡದಲೆ | ಇದ್ದು ವಿನಯದಿಂದಲಿ ತಿದ್ದಿ ಮನ ಮೆಲ್ಲನೆ | ಪೊದ್ದಿಸಿಕೊಂಡು ದುರಾಶೆ | ಗೆದ್ದು ಸ್ವಧರ್ಮವ ಬಿಡದೆ | ಸಿದ್ಧನಾಗೋ ಧ್ಯಾನದಲ್ಲಿ | ಸಿದ್ಧ ನಮ್ಮ ವಿಠಲರಾಯ | ಉದ್ಧರಿಸುವನು ತನ್ನ | ಸಿದ್ಧ ಮೂರುತಿ ತೋರಿಕೊಡುತಾ ||

    ಪರಮಾತ್ಮನ ವಿಷಯದಲ್ಲಿ ಪೂಜ್ಯ ಬುದ್ಧಿ ಇಟ್ಟು ಅಂತರಂಗದಲ್ಲಿ ಧಾರಣೆ ಮಾಡಿದರೆ, ಕುಂತಿ ಮಕ್ಕಳಿಗೆ ಒಲಿದಂತೆ ಒಲಿದು ಅವರೊಡನೆ ತಿರುಗಿದಂತೆ ನಮ್ಮೊಡನೆ ಪರಮಾತ್ಮನು ತಿರುಗುತ್ತಾನೆ ಎಂದು ವಿಜಯದಾಸರು ಪೂಜಾ ಸುಳಾದಿಯಲ್ಲಿ ಅಂತರಂಗ ಪೂಜೆಯ ಕುರಿತು ಹೇಳುವಾಗ ಹೇಳುತ್ತಾರೆ. ಅಂದರೆ ಧಾರಣಾವಸ್ಥೆಯಲ್ಲಿ ಸದಾ ಭಗವಂತನ ಬಳಿಯಲ್ಲಿ ಇರುತ್ತಾನಾದ್ದರಿಂದ ತಾನಾಗಿ ಉತ್ತಮ ಪ್ರಕಾರದ ಸಮಾಧಿ ಸುಖವು ದೊರಕುತ್ತದೆ ಎಂದು ತಿಳಿಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts