More

    ಮಳೆ ನೀರಿನ ಸದ್ಭಳಕೆ ಅವಶ್ಯಕ, ಅಂತರ್ಜಲ ಪುನಶ್ಚೇತನಕ್ಕೆ ಒತ್ತು

    ಕೋಲಾರ : ಸಾರ್ವಜನಿಕರು ಮಳೆ ಕೊಯ್ಲು ಮೂಲಕ ತಮ್ಮಮನೆ ಹಾಗೂ ಜಮೀನಿನಲ್ಲಿ ಮಳೆ ನೀರನ್ನು ಸಂರಕ್ಷಣೆ ಮಾಡಿಕೊಂಡಾಗ ಮಾತ್ರ ಅಂತರ್‌ರ್ಜಲ ಪುನಶ್ಚೇತನ ಸಾಧ್ಯ. ಈ ದಿಸೆಯಲ್ಲಿ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
    ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ನೆಹರು ಯುವಕೇಂದ್ರ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮಳೆ ನೀರು ಸಂಗ್ರಹಣೆ ಕುರಿತು ಬುಧವಾರ ಆಯೋಜಿಸಿದ್ದ ಜಾಗೃತಿ ಅಭಿಯಾನದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ನೀರು ಸಕಲ ಜೀವರಾಶಿಗಳಿಗೂ ಜೀವಜಲವಾಗಿದೆ. ಅನ್ನ ಆಹಾರವಿಲ್ಲದೆ ವಾರಗಟ್ಟಲೆ ಬದುಕಬಹುದು, ನೀರಿಲ್ಲದೆ ದಿನಗಳಿರುವುದು ಅಸಾಧ್ಯವಾಗಿದೆ. ಮಳೆ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು. ಕೋಲಾರದಂತಹ ಬಯಲುಸೀಮೆ ಜಿಲ್ಲೆಗೆ ಮಳೆ ನೀರಿನ ಸದ್ಭಳಕೆ ಅವಶ್ಯಕವಾಗಿರುತ್ತದೆ ಎಂದರು.
    ಮನೆಯ ಮೇಲ್ಛಾವಣಿ ಮೇಲೆ ಬಿದ್ದ ಮಳೆ ನೀರು ನಿರುಪಯುಕ್ತವಾಗಿ ಹರಿದು ಹೋಗುವುದನ್ನು ತಪ್ಪಿಸಲು ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡು ಸಂಗ್ರಹಿಸಿದರೆ ದನ ಕರುಗಳಿಗೆ ಕುಡಿಯಲು ಮತ್ತು ದಿನನಿತ್ಯದ ಗೃಹಬಳಕೆಗೆ ಬಳಸಿಕೊಳ್ಳುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
    ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡಿ ಅಂತರ್ಜಲದ ಪುನಶ್ಚೇತನಗೊಳಿಸಬಹುದು. ಮಳೆ ನೀರನ್ನು ಸಂರಕ್ಷಣೆ ಮಾಡಿ ರಕ್ಷಣಾತ್ಮಕ ನೀರಾವರಿಗೆ ನೀರನ್ನು ಬಳಸಿ ಕೃಷಿ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ. ಕೃಷಿಹೊಂಡ ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಿಬೇಕು. ಬೆಳೆಗಳಿಗೆ ಸಸ್ಯ ಸಂರಕ್ಷಣೆ, ರಾಸಾಯನಿಕಗಳನ್ನು ಸಿಂಪಡಿಸಲು ಬಳಸಬಹುದೆಂದು ಹೇಳಿದರು.
    ಸಾಮಾಜಿಕ ಅರಣ್ಯ ಇಲಾಖೆ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್ ಹಷರ್ವರ್ಧನ್ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಶೇ.33 ರಷ್ಟು, ಭಾರತದಲ್ಲಿ ಶೇ.19 ಮತ್ತು ಕರ್ನಾಟಕದಲ್ಲಿ ಶೇ.20 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇವುಗಳ ರಕ್ಷಣೆಯ ಜತೆಗೆ ಉಳಿದ ಪ್ರದೇಶದಲ್ಲಿ ಅರಣ್ಯೀಕರಣಗೊಳಿಸಬೇಕು. ಮರ ಬೆಳೆಸುವುದರಿಂದ ನೆಲ ಜಲ ವಾಯು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
    ಜಿಪಂ ಸಿಇಒ ಎನ್.ಎಂ.ನಾಗರಾಜ್ ಮಾತನಾಡಿ, ನೀರು ಅಮೂಲ್ಯವಾದ ವಸ್ತು. ನೀರಿನ ಬಳಕೆ ಹಾಗೂ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಖಾಲಿ ಇರುವ ಜಾಗದಲ್ಲಿ ಗಿಡಮರಗಳನ್ನು ಹಾಕಬೇಕು. ಬಯಲುಸೀಮೆ ಜಿಲ್ಲೆಯಲ್ಲಿ ಮಳೆ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತರಾಗಬೇಕು, ಇಲ್ಲದೇ ಹೋದರೆ ನೀರಿಗೆ ಗಂಡಾಂತರ ತಪ್ಪಿದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
    ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವುದರಿಂದ ಅಂತರ್ಜಲ ಪುನಶ್ಚೇತನಗೊಂಡಿದೆ. ಕೃಷಿ ಚಟುವಟಿಕೆ ಹೆಚ್ಚಾಗಿವೆ. ನೀರನ್ನು ಉಳಿಸುವುದರ ಜತೆಗೆ ನೀರಿನ ಲಭ್ಯತೆಯ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು.
    ಪ್ರಾಧ್ಯಾಪಕ ಡಾ.ಎಸ್.ಶಂಕರಪ್ಪ ಮಳೆ ನೀರಿನ ಬಗ್ಗೆ ಉಪನ್ಯಾಸ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್ ಮಂಜುನಾಥ್, ನೆಹರು ಯುವಕೇಂದ್ರ ಯುವಜನ ಸಮನ್ವಯಾಧಿಕಾರಿ ಎಸ್ ಸರಣ್ಯಾ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ವಿ.ಬಾಬು, ಕಾರ್ಯಕ್ರಮ ಸಂಘಟಕ ಎಸ್ ಪ್ರವೀಣ್ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವನಾಥ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts