Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಸ್ವಚ್ಛ ಭಾರತಕ್ಕೆ ಪರಮ ಸೇವೆ

Sunday, 15.04.2018, 3:04 AM       No Comments

| ಜ ಉಮೇಶ್ ಕುಮಾರ್ ಶಿಮ್ಲಡ್ಕ

ಮಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ ‘ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ‘ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ಅದನ್ನು ರೂಪಿಸಲಾಗಿತ್ತು. ಸ್ವಚ್ಛ ಭಾರತದ ‘ಸ್ವಚ್ಛಾಗ್ರಹಿ’ಗಳಾಗಿ 20,000ಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ, ‘…..ಹಲವು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದವರು ಉದ್ಯೋಗ ಬಿಟ್ಟು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಅವರು ಸುಖವಾಗಿ ಬದುಕುತ್ತಿದ್ದರು. ನಮ್ಮ ಸರ್ಕಾರ ರಚನೆಯಾದ ಬಳಿಕ ವಿದೇಶದಲ್ಲಿ ನೆಲೆಸಿರುವ ಅನೇಕ ಭಾರತೀಯರನ್ನು ತಾಯ್ನಾಡಿಗೆ ಬರುವಂತೆ ಆಹ್ವಾನಿಸಿದೆವು. ಹಲವರು ಅದಕ್ಕೆ ಸ್ಪಂದಿಸಿ ವಾಪಸಾಗಿ ತವರಿನ ಸೇವೆಯಲ್ಲಿ ತೊಡಗಿದ್ದಾರೆ. ಅವರ ಪೈಕಿ ಅಮೆರಿಕದಲ್ಲಿದ್ದ ಈ ಅಧಿಕಾರಿಯೂ ಒಬ್ಬರು. ನಾನು ಈ ಮಾತು ಹೇಳುತ್ತಿರುವಂತೆಯೇ ಟಿವಿಯವರು ಅವರನ್ನು ಕೆಲಕಾಲ ತೋರಿಸಿದರು. ಈಗ ಮತ್ತೊಮ್ಮೆ ಕ್ಯಾಮರಾಗಳನ್ನು ಅವರೆಡೆಗೆ ತಿರುಗಿಸಿ ದೇಶದ ಜನರಿಗೆ ಅವರನ್ನೊಮ್ಮೆ

ತೋರಿಸಿ ಎಂದು ಟಿವಿಯವರಿಗೆ ಮನವಿ ಮಾಡುತ್ತೇನೆ..’ ಎಂದು ಹೇಳುತ್ತಿರುವಂತೆ ಎಲ್ಲ ಟಿವಿ ಚಾನಲ್​ಗಳ ಕ್ಯಾಮರಾಗಳೂ ಆ ವ್ಯಕ್ತಿಯೆಡೆಗೆ ಮುಖಮಾಡಿದವು.

‘ಇವರೇ ಪರಮೇಶ್ವರನ್ ಜಿ ಅಯ್ಯರ್. ಅಮೆರಿಕದಿಂದ ಬಂದ ಕೂಡಲೇ ಅವರನ್ನು ದೇಶದ ಕೆಲಸದಲ್ಲಿ ಜೋಡಿಸಿಕೊಂಡೆ. ಅವರ ಕರ್ತವ್ಯನಿಷ್ಠೆ ಎಷ್ಟಿದೆ ಎಂದರೆ, ಸ್ವತಃ ಗ್ರಾಮ ಗ್ರಾಮಗಳಿಗೆ ತೆರಳಿ ಶೌಚಗೃಹದ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ’ ಎಂದೂ ಮೋದಿ ಹೇಳಿದರು.

ಸ್ವಚ್ಛ ಭಾರತ ಮಿಷನ್ ನೇತೃತ್ವವನ್ನು ಸರ್ಕಾರ 2016ರ ಫೆಬ್ರವರಿಯಲ್ಲಿ ಪರಮೇಶ್ವರನ್ ಅಯ್ಯರ್ ಹೆಗಲಿಗೇರಿಸಿದ ಸುದ್ದಿ ಆಗ ಸಣ್ಣದಾಗಿ ವರದಿಯಾಗಿತ್ತು. ಅವರ ಸೇವಾ ಅವಧಿ 2019ರ ಏಪ್ರಿಲ್​ನಲ್ಲಿ ಕೊನೆಗೊಳ್ಳಲಿದೆ. ಅದಾಗಿ ಮರುವರ್ಷ ಫೆಬ್ರವರಿ 18ರಂದು ಪ್ರಕಟವಾದ ವರದಿಯಲ್ಲಿ, ಪರಮೇಶ್ವರನ್ ಅಯ್ಯರ್ ಶೌಚಗುಂಡಿಯೊಂದರ ದುರಸ್ತಿ ಮಾಡುತ್ತಿರುವ ಫೋಟೊ ದೇಶದ ಗಮನಸೆಳೆದಿತ್ತು. ಅದೇ ದಿನ 23 ರಾಜ್ಯಗಳ ಐಎಎಸ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಶೌಚಗುಂಡಿ ದುರಸ್ತಿಗೊಳಿಸುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ರಾರಾಜಿಸಿದ್ದವು. ಇವನ್ನೆಲ್ಲ ಗಮನಿಸಿದರೆ ಅಯ್ಯರ್, ಯೋಜನೆಯ ಯಶಸ್ಸಿಗೆ ಯಾವ ಕೆಲಸಕ್ಕೂ ಸಿದ್ಧ ಎಂಬುದು ವೇದ್ಯವಾಗುತ್ತದೆ.

2014ರ ಅಕ್ಟೋಬರ್ 2ರಂದು ಮೋದಿ ಸರ್ಕಾರ ಸ್ವಚ್ಛ ಭಾರತ ಯೋಜನೆಗೆ ಚಾಲನೆ ನೀಡಿತು. ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಫಲಿತಾಂಶ ಆಧಾರಿತವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇತ್ತು. ಹೀಗಾಗಿ ಇದರ ನೇತೃತ್ವವನ್ನು ಗುಜರಾತ್ ಕೆಡರ್​ನ 1980ರ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯಲಕ್ಷ್ಮೀ ಜೋಶಿಯವರಿಗೆ ವಹಿಸಲಾಗಿತ್ತು. 2015ರ ನವೆಂಬರ್​ನಲ್ಲಿ ಅಚಾನಕ್ ಆಗಿ ಅವರು ಸ್ವಯಂನಿವೃತ್ತಿ ತೆಗೆದುಕೊಂಡರು. ಮತ್ತೆರಡು ತಿಂಗಳು ಈ ಯೋಜನೆಗೆ ಸರಿಯಾದ ನಾಯಕತ್ವ ಇರಲಿಲ್ಲ. ಕೊನೆಗೆ ಹುಡುಕಾಟ ನಡೆಸಿದಾಗ ನೈರ್ಮಲ್ಯ, ಸ್ವಚ್ಛತಾ ವಿಷಯದಲ್ಲಿ ಅಯ್ಯರ್ ಅವರ ಕೆಲಸ ಮೋದಿಯವರ ಗಮನ ಸೆಳೆಯಿತು. ಪರಿಣಾಮ 2016ರ ಫೆ.3ರಂದು ನೇಮಕ ಆದೇಶ ಹೊರಬಿತ್ತು. ಮರುದಿನವೇ ಅಯ್ಯರ್ ಅಧಿಕಾರ ಗ್ರಹಣ ಮಾಡಿದರು ಕೂಡ. ಇಂಥ ಮಹತ್ವದ ಹೊಣೆಗಾರಿಕೆಯನ್ನು ನಿವೃತ್ತ ಐಎಎಸ್ ಅಧಿಕಾರಿಗೆ ವಹಿಸಿದ್ದು ಇದೇ ಮೊದಲಿರಬೇಕು. ಲಭ್ಯ ಮಾಹಿತಿ ಪ್ರಕಾರ, ಅಯ್ಯರ್ 1981ನೇ ಬ್ಯಾಚಿನ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿ. ಆರಂಭದಲ್ಲಿ ರಕ್ಷಣಾ ಸಚಿವಾಲಯ, ಕೇಂದ್ರ ಜವಳಿ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು. ನಂತರ ಉತ್ತರ ಪ್ರದೇಶದ ಬಿಜ್ನೂರು ಜಿಲ್ಲೆಯ ಕಲೆಕ್ಟರ್ ಆಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು. 2009ರಲ್ಲಿ ಸ್ವಯಂ ನಿವೃತ್ತಿ ಪಡೆದ ಅವರು, ವಿಶ್ವ ಬ್ಯಾಂಕ್​ನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1998ರ ಏಪ್ರಿಲ್​ನಿಂದ 2006ರ ಫೆಬ್ರವರಿ ತನಕ ಅವರು ವಿಶ್ವಸಂಸ್ಥೆಯ ಗ್ರಾಮೀಣ ಜಲ ಸ್ವಚ್ಛತಾ ಕಾರ್ಯಯೋಜನೆ ನಿಭಾಯಿಸಿದ್ದರು. ಭಾರತ ಸರ್ಕಾರದ ಸೇವೆಯಲ್ಲೂ ಇದೇ ಕ್ಷೇತ್ರದಲ್ಲಿ ಅವರು ಹೆಚ್ಚು ಸೇವೆ ಸಲ್ಲಿಸಿದ್ದರು. ವಿಶ್ವ ಬ್ಯಾಂಕ್​ನಲ್ಲಿದ್ದಾಗ ಅವರು ಹನೋಯ್ನ ಕಚೇರಿಯಲ್ಲಿ ಲೀಡ್ ವಾಟರ್ ಆಂಡ್ ಸ್ಯಾನಿಟೇಷನ್ ಸ್ಪೆಷಲಿಸ್ಟ್ ಹಾಗೂ ಪ್ರೋಗ್ರಾಂ ಲೀಡರ್ ಆಗಿದ್ದರು. ಅದಕ್ಕೂ ಮುನ್ನ ವಾಷಿಂಗ್ಟನ್​ನಲ್ಲಿ ಈಜಿಪ್ಟ್ ಮತ್ತು ಲೆಬನಾನ್​ಗಳ ವಿಚಾರವಾಗಿ ಕೆಲಸ ಮಾಡಿದ್ದರು. ಹೀಗಾಗಿ ಅವರು ಜಲ ಮತ್ತು ನೈರ್ಮಲ್ಯ ಸೇವಾ ಕ್ಷೇತ್ರದಲ್ಲಿ ಪರಿಣತರೆನ್ನುವುದರಲ್ಲಿ ಸಂದೇಹವಿಲ್ಲ. ಅವರ ಅನುಭವ ಈಗ ಸ್ವಚ್ಛ ಭಾರತ್ ಯೋಜನೆಯ ಯಶಸ್ಸಿಗೆ ಬುನಾದಿಯನ್ನು ರೂಪಿಸುತ್ತಿದೆ. ಸಹೋದ್ಯೋಗಿಗಳು ಮತ್ತು ಆಪ್ತರ ವಲಯದಲ್ಲವರು ‘ಪರಮ್ ಎಂದೇ ಗುರುತಿಸಿಕೊಂಡವರು. ‘ಸ್ವಜಲ್ ಪ್ರೋಗ್ರಾಂ’ ಅವರ ಕನಸಿನ ಕೂಸು. ಅದರ ಅನುಷ್ಠಾನವನ್ನೂ ಅವರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ವಿಯೆಟ್ನಾಂ, ಚೀನಾ, ಈಜಿಪ್ಟ್, ಲೆಬನಾನ್​ಗಳಲ್ಲಿ ಇದೇ ಕ್ಷೇತ್ರದಲ್ಲಿ ವಿಶ್ವಬ್ಯಾಂಕ್ ಪರವಾಗಿ ದುಡಿದವರು.

ತಮಿಳುನಾಡು ಮೂಲದ ಅಯ್ಯರ್ 1959ರ ಏಪ್ರಿಲ್ 16ರಂದು ಜನಿಸಿದರು. ಕುಟುಂಬದ ಮಾಹಿತಿ ಲಭ್ಯವಿಲ್ಲ. ಇಂಗ್ಲಿಷ್​ನಲ್ಲಿ ಪದವಿ ಶಿಕ್ಷಣ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಿರ್ವಹಣಾ ಶಾಸ್ತ್ರದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಚಂಪಾರಣ್

ಸತ್ಯಾಗ್ರಹದ ನೂರು ವರ್ಷ ಸಂಪನ್ನಗೊಂಡ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸಿದ ನಡೆ ಅಯ್ಯರ್ ಸೇವಾನಿಷ್ಠೆಗೆ ನೀಡಿದ ಗೌರವ ಎನ್ನಬೇಕು. ಹಾಗೆಯೇ, ಸ್ವಚ್ಛ ಭಾರತ್ ಯೋಜನೆ ಯಶಸ್ವಿಗೊಳಿಸುವ ವಿಷಯದಲ್ಲಿ ಅಯ್ಯರ್ ಮೇಲಿನ ನಿರೀಕ್ಷೆಯೂ ಹೆಚ್ಚಿದೆ.

Leave a Reply

Your email address will not be published. Required fields are marked *

Back To Top