Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಕ್ರಿಕೆಟ್​ನ ಮೋಡಿಗಾರ ಎಬಿಡಿ

Sunday, 27.05.2018, 3:05 AM       No Comments

| ಸಂತೋಷ್ ನಾಯ್ಕ್​

‘ಕೀಪ್ ಯುವರ್ ಬಾಡಿ ಸ್ಟೇಬಲ್.. ಆಂಡ್ ಹಿಟ್ ದ ಬಾಲ್…’

ವಿಶ್ವದ ಪ್ರತಿ ಕ್ರಿಕೆಟ್ ಕೋಚ್​ಗಳು ಬ್ಯಾಟ್ಸ್​ಮನ್​ಗಳಿಗೆ ಹೇಳುವ ಮೊದಲ ಮಾತಿದು. ದೇಹಚಲನೆ ಧೃಢವಾಗಿದ್ದರೆ, ಚೆಂಡನ್ನು ಬಾರಿಸುವ ಹೆಚ್ಚಿನ ಅವಕಾಶ ಸಿಗುತ್ತದೆ ಎನ್ನುವುದು ಇದರ ಹಿಂದಿರುವ ಲಾಜಿಕ್.

ಆದರೆ, ಇವರ ವಿಷಯದಲ್ಲಿ ಹಾಗಲ್ಲ. ಕ್ರೀಸ್​ನಲ್ಲಿದ್ದಾರೆ ಎಂದಾದರೆ, ಹಿಂದೆ, ಮುಂದೆ, ಅಕ್ಕ-ಪಕ್ಕ. ಕ್ರೀಸ್​ನ 360 ಡಿಗ್ರಿಯಲ್ಲೂ ನಿಂತೂ ಬೌಲರ್​ಗಳ ಬೆವರಿಳಿಸುತ್ತಾರೆ. ಆಧುನಿಕ ಕ್ರಿಕೆಟ್​ನ ಸೂಪರ್​ಸ್ಟಾರ್ ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಹಸಿರು-ಹಳದಿ ಬಣ್ಣದ ದಕ್ಷಿಣ ಆಫ್ರಿಕಾ ತಂಡದ ಜೆರ್ಸಿಯಲ್ಲಿ ಅವರಿನ್ನೆಂದೂ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಮುಂದೆ ಆಡುವುದು ಇನ್ನೂ ಸ್ಪಷ್ಟವಾಗಿಲ್ಲ.

ಅಬ್ರಾಹಂ ಬೆಂಜಮಿನ್ ಡಿವಿಲಿಯರ್ಸ್ ಕ್ರಿಕೆಟ್ ಜೀವನ ಸಚಿನ್​ರಂತೆ ದಾಖಲೆಗಳಿಂದ, ಕ್ರಿಸ್ ಗೇಲ್​ರಂತೆ ದೊಡ್ಡ ಮೊತ್ತಗಳಿಂದ ಮುಖ್ಯವಾಗುವುದಿಲ್ಲ. ಆಟದ ದಿಕ್ಕನ್ನೇ ಬದಲಿಸುವ ರೀತಿಯಿಂದ ಎಬಿಡಿ ವಿಶ್ವ ಕ್ರಿಕೆಟ್​ನಲ್ಲಿ ಮನೆಮಾತಾದವರು. ಕೇವಲ ಒಂದೆರಡು ಶಾಟ್​ಗಳಲ್ಲೇ ಎದುರಾಳಿಯಿಂದ ಪಂದ್ಯವನ್ನು ಕಿತ್ತುಕೊಳ್ಳುವ ಅವರ ಆಟ ವಿಸ್ಮಯ ಹುಟ್ಟಿಸುತ್ತದೆ. ಹಾಗಂತ ಎಂದೂ ವಿಲಿಯರ್ಸ್ ವಿರೋಧಾಭಾಸದ ಶಾಟ್​ಗಳನ್ನು ಹೊಡೆದು ಸುದ್ದಿ ಮಾಡಿದವರಲ್ಲ. ಹೊಸ ಶಾಟ್​ಗಳ ಅನ್ವೇಷಣೆ, ಭಿನ್ನ ಮನಸ್ಥಿತಿ, ಪಂದ್ಯವನ್ನು ಭಿನ್ನ ಮಾದರಿಯಲ್ಲಿ ನೋಡುವುದರಿಂದಲೇ ಅವರನ್ನು ಆಧುನಿಕ ಕ್ರಿಕೆಟ್​ನ ದಿಗ್ಗಜ ಆಟಗಾರ ಎಂದು ಬಣ್ಣಿಸಲಾಗುತ್ತದೆ.

ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಪಾಲಿಗೆ ವಿಶೇಷ ಎನಿಸಿರುವ 10 ಸಾವಿರ ರನ್ ಗಡಿ ಮುಟ್ಟಲು 423 ರನ್ ಬಾಕಿ ಇದ್ದಾಗ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕ ಬಾರಿಸಲು 3 ಶತಕ ದೂರವಿದ್ದಾಗ 34 ವರ್ಷದ ವಿಲಿಯರ್ಸ್ ಹಠಾತ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 20,014 ರನ್ ಬಾರಿಸಿರುವ ವಿಲಿಯರ್ಸ್, 100ಕ್ಕಿಂತ ಅಧಿಕ ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಏಕೈಕ ಆಟಗಾರ. ಕೇವಲ 16 ಪ್ರಥಮ ದರ್ಜೆ ಪಂದ್ಯವಾಡಿದ ಬೆನ್ನಲ್ಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದವರು ವಿಲಿಯರ್ಸ್. 2004ರಲ್ಲಿ ಇಂಗ್ಲೆಂಡ್ ಪರ ಪೋರ್ಟ್ ಎಲಿಜಬೆತ್ ಟೆಸ್ಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಎಬಿಡಿ ಆರಂಭಿಕರಾಗಿ ಕಣಕ್ಕಿಳಿದರು. ಆಗಿನ್ನೂ ಅವರಿಗೆ 20 ವರ್ಷ. ನಂತರದ ದಿನಗಳಲ್ಲಿ ಮಧ್ಯಮ ಕ್ರಮಾಂಕದ ಆಟಗಾರ, ವಿಕೆಟ್ಕೀಪರ್ ಆಗಿ ತಂಡದ ಜವಾಬ್ದಾರಿಯನ್ನು ನಿಭಾಯಿಸಿದವರು. 1ನೇ ಕ್ರಮಾಂಕದಿಂದ 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡಿದ ಅಪರೂಪದ ಬ್ಯಾಟ್ಸ್​ಮನ್.

ಭಾರತ ವಿರುದ್ಧ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್. 2012ರಲ್ಲಿ ಮಾರ್ಕ್ ಬೌಷರ್ ಗಾಯದಿಂದಾಗಿ ಕ್ರಿಕೆಟ್​ಗೆ ನಿವೃತ್ತಿ ಹೇಳಿದಾಗ ಪೂರ್ಣಪ್ರಮಾಣದ ವಿಕೆಟ್ಕೀಪರ್ ಆದ ವಿಲಿಯರ್ಸ್​ಗೆ, ಅದೇ ಹಂತದಲ್ಲಿ ಏಕದಿನ ಹಾಗೂ ಟಿ20 ನಾಯಕತ್ವದ ಜವಾಬ್ದಾರಿ ನೀಡಲಾಯಿತು. ಮುಂದಿನ ದಿನದಲ್ಲಿ ಫಾಫ್ ಡು ಪ್ಲೆಸಿಸ್ ಹೆಗಲಿಗೆ ಟಿ20ಯ ನಾಯಕ ಸ್ಥಾನವನ್ನು ಬಿಟ್ಟುಕೊಟ್ಟರು. ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿಕಾಕ್ ಸ್ಥಾನ ಪಡೆಯುತ್ತಿದ್ದ ವೇಳೆಯಲ್ಲಿ, ಬೆನ್ನು ನೋವಿನ ಕಾರಣಕ್ಕಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ತೊರೆದ ವಿಲಿಯರ್ಸ್, 2014ರ ವೇಳೆಗೆ ಇದನ್ನು ಪೂರ್ಣ ಪ್ರಮಾಣದಲ್ಲಿ ಡಿಕಾಕ್​ಗೆ ಹಸ್ತಾಂತರ ಮಾಡಿದ್ದರು. ಗ್ರೇಮ್ ಸ್ಮಿತ್ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಟೆಸ್ಟ್ ತಂಡಕ್ಕೆ ನಾಯಕನಾಗಬೇಕು ಎನ್ನುವ ಹಂಬಲ ವಿಲಿಯರ್ಸ್​ರಲ್ಲಿತ್ತು. ಆದರೆ, ಹಾಶಿಂ ಆಮ್ಲರನ್ನು ತಂಡದ ನಾಯಕರನ್ನಾಗಿ ನೇಮಿಸಿದಾಗ ಅದನ್ನು ವಿನಮ್ರವಾಗಿ ಸ್ವೀಕರಿಸಿದರು.

2015ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಡರರ್ಸ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿ ಅತಿವೇಗದ ಶತಕದ ವಿಶ್ವದಾಖಲೆ ಬರೆದರು. ವಿಲಿಯರ್ಸ್​ರ ಅದ್ಭುತ ಫಾಮ್ರ್ ಹಾಗೂ ತಂಡ ಇದ್ದ ಲಯದಿಂದ 2015ರ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ಫೇವರಿಟ್ ಎನ್ನಲಾಗಿತ್ತು. ವಿಲಿಯರ್ಸ್​ರ ಸ್ಪೂರ್ತಿದಾಯಕ ನಾಯಕತ್ವದ ಹೊರತಾಗಿಯೂ ‘ದಿ ಬೆಸ್ಟ್’ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಂತದಲ್ಲೇ ಮುಗ್ಗರಿಸಿತು. ಇದಕ್ಕೆ ವರ್ಣದ ಅನ್ವಯ ತಂಡದಲ್ಲಿ ಆಟಗಾರರಿಗೆ ಸ್ಥಾನ ನೀಡಬೇಕಿದ್ದ ರಾಷ್ಟ್ರೀಯ ಕ್ರೀಡಾ ನಿಯಮ ದೊಡ್ಡ ಕಾರಣವಾಗಿತ್ತು.

ಏಕದಿನ ಹಾಗೂ ಟಿ20ಯಲ್ಲಿ ಹೊಸ ಹೊಸ ಶಾಟ್​ಗಳ ಅನ್ವೇಷಣೆ ಮಾಡಿದ ವಿಲಿಯರ್ಸ್, ಟೆಸ್ಟ್​ನಲ್ಲೂ ಛಾಪು ಮೂಡಿಸಿದ್ದಾರೆ. ಇಡೀ ದಿನ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಾಗ ಹಲವು ಬಾರಿ ಯಶಸ್ಸು ಕಂಡಿದ್ದಾರೆ. ಭಾರತ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಪಂದ್ಯಗಳೇ ಇದಕ್ಕೆ ಸಾಕ್ಷಿ.

ವಿಲಿಯರ್ಸ್ ವಿಶ್ವ ಕಂಡ ಅದ್ಭುತ ಫೀಲ್ಡರ್ ಕೂಡ ಹೌದು. ತೀರಾ ಅಸಹಜ, ನಂಬಲಸಾಧ್ಯ ಕ್ಯಾಚ್​ಗಳನ್ನು ಪಡೆದಿರುವ ಎಬಿಡಿ, ಅಚ್ಚರಿದಾಯಕ ರನೌಟ್​ಗಳಿಂದಲೂ ಹೆಸರುವಾಸಿ. 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೋರ್ಟ್ ಎಲಿಜಬೆತ್ ಟೆಸ್ಟ್​ನಲ್ಲಿ ಸೈಮನ್ ಕಾಟಿಚ್ ರನೌಟ್, ಇತ್ತೀಚೆಗೆ ಬೆಂಗಳೂರಿನಲ್ಲಿ ಹಿಡಿದ ಸನ್​ರೈಸರ್ಸ್ ತಂಡದ ಅಲೆಕ್ಸ್ ಹ್ಯಾಲ್ಸ್ ಕ್ಯಾಚ್ ಇವುಗಳೆಲ್ಲ ಕೆಲವು ಉದಾಹರಣೆಗಳಷ್ಟೆ. ವೈದ್ಯರಾಗಿದ್ದ ಡಿವಿಲಿಯರ್ಸ್ ತಂದೆ, ಆರಂಭಿಕ ದಿನಗಳಲ್ಲಿ ರಗ್ಬಿ ಆಡುತ್ತಿದ್ದರು. ಅದರಂತೆ ಮಗನನ್ನೂ ಕ್ರೀಡಾಪಟುವನ್ನಾಗಿ ಅದರಲ್ಲೂ ರಗ್ಬಿ ಆಟಗಾರನನ್ನಾಗಿ ಮಾಡಬೇಕು ಎಂದು ಬಯಸಿದ್ದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಬ್ಲೂ ಬುಲ್ಸ್ ತಂಡದ ಪರ ಫ್ಲೈ-ಹಾಫ್ ಆಟಗಾರನಾಗಿ ಆಡುತ್ತಿದ್ದ ವಿಲಿಯರ್ಸ್ ಬಳಿಕ ಕ್ರಿಕೆಟ್​ನತ್ತ ವಾಲಿದರು. ಗಾಲ್ಪ್ ಹಾಗೂ ಟೆನಿಸ್​ನಲ್ಲೂ ವಿಲಿಯರ್ಸ್ ಪರಿಣಿತರಾಗಿದ್ದಾರೆ. ಪ್ರಿಟೋರಿಯಾ ಹೈ ಸ್ಕೂಲ್​ನಲ್ಲಿ ವಿಲಿಯರ್ಸ್​ರ ಸಹಪಾಠಿಯಾಗಿದ್ದವರು ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್. ಡೇನಿಯಲ್ ಸ್ವಾರ್ಟ್ ಜತೆಗಿನ ಐದು ವರ್ಷದ ಡೇಟಿಂಗ್ ಬಳಿಕ 2012ರ ಐಪಿಎಲ್ ನಡುವೆ ಆಗ್ರಾದ ತಾಜ್​ವುಹಲ್ ಎದುರು ಮದುವೆಯ ಪ್ರಸ್ತಾಪವನ್ನಿಟ್ಟಿದ್ದ ವಿಲಿಯರ್ಸ್, 2013ರ ಮಾರ್ಚ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅಬ್ರಾಹಂ ಬೆಂಜಮಿನ್ ಹಾಗೂ ಜಾನ್ ರಿಚರ್ಡ್ ಎನ್ನುವ ಇಬ್ಬರು ಪುತ್ರರಿದ್ದಾರೆ. ಕ್ರಿಕೆಟ್ ಅಲ್ಲದೆ, ಗಿಟಾರ್ ನುಡಿಸುವುದರಲ್ಲಿ ಹಾಗೂ ಗಾಯಕರಾಗಿಯೂ ವಿಲಿಯರ್ಸ್ ಗಮನಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾದ ಖ್ಯಾತ ಗಾಯಕ ಆಂಪಿ ಡು ಪ್ರೀಜ್ ಜತೆ ಜಂಟಿಯಾಗಿ ‘ಮಾಕ್ ಜೌ ಡ್ರೋಮ್ ವಾರ್’ ಎನ್ನು ಪಾಪ್ ಆಲ್ಬಂಅನ್ನು 2010ರಲ್ಲಿ ಹೊರತಂದಿದ್ದಾರೆ.

ಭಾರತದಲ್ಲಿ ಯಾವ ವಿದೇಶಿ ಆಟಗಾರನಿಗೂ ಸಿಗದ ಪ್ರೀತಿ, ಆದರ ವಿಲಿಯರ್ಸ್​ಗೆ ಸಿಕ್ಕಿದೆ. ಐಪಿಎಲ್ ತಂಡದ ಪರವಾಗಲಿ, ರಾಷ್ಟ್ರೀಯ ತಂಡದ ಪರವಾಗಿ ವಿಲಿಯರ್ಸ್ ಮೈದಾನಕ್ಕೆ ಇಳಿದರೆಂದರೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆಯೇ ಅನನ್ಯ. 50 ಎಸೆತಗಳಲ್ಲಿ 100 ರನ್ ಬೇಕಿದ್ದರೂ, ಟೆಸ್ಟ್ ಪಂದ್ಯ ಉಳಿಸಿಕೊಳ್ಳಲು 200ಕ್ಕಿಂತ ಅಧಿಕ ಎಸೆತ ಆಡಬೇಕಾದ ಸ್ಥಿತಿ ಬಂದರೂ ಎಲ್ಲದಕ್ಕೂ ಸೈ ಎನ್ನುವಂತಿದ್ದ ಫರ್ಫೆಕ್ಟ್ ಬ್ಯಾಟ್ಸ್​ಮನ್ ವಿಲಿಯರ್ಸ್.

(ಲೇಖಕರು ವಿಜಯವಾಣಿ ಹಿರಿಯ ಉಪಸಂಪಾದಕ)
[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top