Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಹದಗೊಳ್ಳದ ಮಣ್ಣು ಮಡಕೆಯಾಗದು…

Friday, 20.04.2018, 3:05 AM       No Comments

ರಾಮಕೃಷ್ಣರು ತ್ಯಾಗಜೀವನ ನಡೆಸಬಯಸುವ ಸಾಧಕರಿಗೆ ನೀಡಿದ ತಿಳಿವಳಿಕೆ ನಿಜಕ್ಕೂ ಕಠಿಣವೂ ನಿಷ್ಠುರವೂ ಆಗಿದೆ. ಆದರೆ ಗೃಹಸ್ಥರನ್ನು ಸಾಧನಾಪ್ರವೃತ್ತರನ್ನಾಗಿಸಲು ಅವರು ಅನುಗ್ರಹಿಸಿರುವ ಅಮೃತೋಪಮವಾದ ಮಾತುಗಳು ಚಿರಸ್ಮರಣೀಯವಾದವು. ಅವರ ಭರವಸೆಯ ಮಾತುಗಳು ಗೃಹಸ್ಥರನ್ನು ಉನ್ನತ ಸತ್ಯದೆಡೆಗೆ ಪಯಣಿಸಲು ಪ್ರೇರೇಪಿಸುತ್ತವೆ.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಸಂದೇಶಗಳನ್ನು ಉಪಮೆಗಳ ಮೂಲಕ ಅತ್ಯಂತ ಸರಳ ರೀತಿಯಲ್ಲಿ ಜಗತ್ತಿಗೆ ಅರುಹಿದ್ದಾರೆ. ಪ್ರಾಚೀನ ಪರಂಪರೆಯಲ್ಲಿ ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಗಳ ನಡುವೆ ಪೂರ್ಣವಾಗಿ ವೈರುಧ್ಯವನ್ನೇ ಗುರುತಿಸಿದ್ದ ಜಗತ್ತಿಗೆ ರಾಮಕೃಷ್ಣರು ಪ್ರತಿಪಾದಿಸಿದ ಚಿಂತನೆಗಳು ಆಶ್ಚರ್ಯ ಮೂಡಿಸಿದ್ದರೂ ವಾಸ್ತವಿಕ ಸತ್ಯವನ್ನು ಹೃತ್ಪೂರ್ವಕವಾಗಿ ಅರಿತು ಅನುಸರಿಸುವಲ್ಲಿ ನಿಸ್ಸಂದೇಹವಾಗಿ ಪ್ರೇರಣೆ ನೀಡುತ್ತಿವೆ.

ಸಾಧನಾಜೀವನ ಎಂಬುದು ‘ಕನ್ನಡಿಯಲ್ಲಿನ ಗಂಟು’ ಎಂದು ಭಾವಿಸಿದ್ದ ಗೃಹಸ್ಥರಿಗೆ, ‘ಭಗವಂತನಲ್ಲಿ ಮನಸ್ಸಿಟ್ಟು ಸಂಸಾರದ ಎಲ್ಲ ಕೆಲಸಗಳನ್ನು ಮಾಡಿ, ಅದು ಕಠಿಣವೇ ಆದರೂ ದುಸ್ಸಾಧ್ಯವೇನಲ್ಲ. ಮೀನು ಕೆಸರಿನಲ್ಲೇ ವಾಸಿಸುತ್ತಿದ್ದರೂ ತನ್ನ ಶರೀರಕ್ಕೆ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಸಾಂಸಾರಿಕ ಕರ್ತವ್ಯಗಳನ್ನು ಸಾಕ್ಷಾತ್ ಭಗವಂತನೇ ನಿರ್ದೇಶಿಸಿದ ಕರ್ತವ್ಯಗಳೆಂದರಿತು ನಿರ್ವಹಿಸಬೇಕು’ ಎನ್ನುತ್ತಾರೆ ರಾಮಕೃಷ್ಣರು.

ನಾಮಸ್ಮರಣೆಯ ಶಕ್ತಿ: ಸಾಧನೆಯಲ್ಲಿ ನಿರತರಾದವರು ಲೌಕಿಕರೇ ಆಗಲಿ ಅಥವಾ ಪಾರಮಾರ್ಥಿಗಳೇ ಆಗಲಿ ಅವರವರ ಮನಸ್ಸನ್ನು ಅವಲಂಬಿಸಿ ಪ್ರಗತಿ ಮೂಡುತ್ತದೆ ಎಂಬುದು ರಾಮಕೃಷ್ಣರ ನಿಚ್ಚಳ ಅಭಿಮತ. ಸತ್ಸಂಗ, ಸದ್ಗ›ಂಥಗಳ ಅಧ್ಯಯನ ಹಾಗೂ ಭಗವಂತನ ದಿವ್ಯನಾಮಸ್ಮರಣೆಯಲ್ಲಿ ನಿರತವಾದಾಗ ಮನಸ್ಸು ಶುದ್ಧವಾಗುತ್ತ ಹೋಗುತ್ತದೆ. ಶುದ್ಧ ಮನಸ್ಸಿನಲ್ಲಿ ಒಂದು ಬಗೆಯ ಅಪೂರ್ವವಾದ ಶಕ್ತಿ ಉದಿಸುತ್ತದೆ. ಈ ಶಕ್ತಿಯ ಸಹಾಯದಿಂದ ಮನಸ್ಸು ಯುಕ್ತಾಯುಕ್ತತೆಗಳ ವಿಶ್ಲೇಷಣೆಯನ್ನು ಸಮರ್ಪಕವಾಗಿ ಮಾಡುತ್ತದೆ. ಅಶಿಕ್ಷಿತ ಮನಸ್ಸು ಬಂಧನಕ್ಕೆ ಕಾರಣವಾಗುತ್ತದೆ ಎಂಬ ಮಾತು ಎಷ್ಟು ಸತ್ಯವೋ ಪರಿಶುದ್ಧ ಮನಸ್ಸು ಮುಕ್ತಿಯನ್ನು ದೊರಕಿಸಿಕೊಡುವುದು ಅಷ್ಟೇ ಖಂಡಿತ ಎಂಬ ಅಭಿಪ್ರಾಯವು ಪರಮಹಂಸರ ಚಿಂತನೆಗಳಲ್ಲಿ ಸ್ಪಷ್ಟವಾಗಿದೆ.

ಭಗವಂತನ ಹೆಸರಿನಲ್ಲಿ ತನ್ನ ಪಾಲಿನ ಕರ್ತವ್ಯಗಳನ್ನು ನಿರ್ವಹಿಸುವ ವ್ಯಕ್ತಿಯಲ್ಲಿ ಅದ್ಭುತವಾದ ಮಾನಸಿಕ ಶಕ್ತಿ ಸಂಚಯವಾಗುತ್ತದೆ. ಇಂತಹ ಮನಸ್ಸು ಸತ್ಪಥದಲ್ಲಿ ಸಾಗಲು ಪ್ರೇರೇಪಿಸುತ್ತದೆ. ಉದಾತ್ತ ಆದರ್ಶಗಳ ಹಿನ್ನೆಲೆಯಲ್ಲಿ ಗಳಿತಗೊಂಡ ಮನಸ್ಸು ಸಾಧಕನ ವಶದಲ್ಲಿಯೇ ಇರುತ್ತದೆಯಾದ್ದರಿಂದ ಆತನ ದೃಷ್ಟಿ ತಪ್ಪಿಸಿ ಅದು ಅಪರಾಧ ಎಸಗದು ಎಂಬುದು ಪರಮಹಂಸರ ಅಭಿಮತ.

ಅನಾಸಕ್ತಿ ಎಂದರೆ: ಭಗವಂತನ ಸೃಷ್ಟಿಯಲ್ಲಿ ಶಕ್ತಿಯ ವಿಶೇಷತೆಯನ್ನು ಅಲ್ಲಗಳೆಯುವಂತಿಲ್ಲ. ‘ನಿರಾಸಕ್ತಿ’ ಎಂದರೆ ಮಾಡಬೇಕಾದ ಕಾರ್ಯದಲ್ಲಿ ಬದ್ಧತೆ ತೋರದೇ ಕಾಟಾಚಾರಕ್ಕೆ ಶ್ರಮಿಸುವುದು. ಆದರೆ ‘ಅನಾಸಕ್ತಿ’ ಇರುವಲ್ಲಿ ಕಾರ್ಯದಲ್ಲಿ ಬದ್ಧತೆಯಿದೆ, ಪ್ರಾಮಾಣಿಕ ಪ್ರಯತ್ನ, ಪರಿಶ್ರಮಗಳಿವೆ; ಆದರೆ ಫಲಾಪೇಕ್ಷೆಯ ಗೀಳಿಲ್ಲ. ಇಂತಹ ಅನಾಸಕ್ತಿ ಭಾವನೆಯನ್ನು ಪರಮಹಂಸರು ಒತ್ತಿಹೇಳುತ್ತಾರೆ.

ನಮ್ಮ ಮನಸ್ಸನ್ನು ಹಾಲಿಗೂ ನಮ್ಮ ಸಂಸಾರವನ್ನು ನೀರಿಗೂ ಹೋಲಿಸುವ ಪರಮಹಂಸರು ಹಾಲು ತನ್ನ ಪ್ರತ್ಯೇಕತೆ ಕಾಯ್ದಿರಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮನಸ್ಸು ದುರ್ಬಲಸ್ಥಿತಿಯಲ್ಲಿ ಸಂಸಾರದ ಆಗುಹೋಗುಗಳನ್ನು ನಿರ್ವಹಿಸಲು ಕಷ್ಟ ಎಂದು ಹೇಳುತ್ತಾರೆ. ಆದರೆ ಮನುಷ್ಯನನ್ನು ಪರಮಹಂಸರು ಎಂದೆಂದೂ ಅಸಹಾಯಕ ಸ್ಥಿತಿಗೆ ಎಡೆಮಾಡಲಿಲ್ಲ. ಅವರೆನ್ನುತ್ತಾರೆ, ‘ಹಾಲನ್ನು ಚೆನ್ನಾಗಿ ಕಾಯಿಸಿ, ಹೆಪ್ಪು ಹಾಕಿ, ಆ ನಂತರ ನಿರ್ಜನ ಪ್ರದೇಶದಲ್ಲಿ ಅದನ್ನು ರಕ್ಷಿಸಿ. ಮೊಸರಾದ ನಂತರ ಕಡೆಯಿರಿ. ಆಗ ನಮಗೆ ಬೆಣ್ಣೆ ಲಭ್ಯವಾಗುತ್ತದೆ. ಬೆಣ್ಣೆಯನ್ನು ನೀರಿನ ಮೇಲೆ ತೇಲಿಬಿಟ್ಟರೂ ಯಾವುದೇ ಅಪಾಯವಿಲ್ಲ, ಅದು ನಿರ್ಲಿಪ್ತತೆ ಕಾಯ್ದಿರಿಸಿಕೊಳ್ಳುತ್ತದೆ’.

ಇದೊಂದು ಪರಮಾದ್ಭುತವಾದ ಉಪಮೆಯಾಗಿದೆ. ಸಾಮಾನ್ಯ ಸ್ಥಿತಿಯಲ್ಲಿರುವ ಮನಸ್ಸು ನಿಜಕ್ಕೂ ದುರ್ಬಲ. ಹೀಗಾಗಿ ಅದು ಕೇವಲ ಪ್ರಾಪಂಚಿಕ ವಿಷಯಗಳಲ್ಲೇ ತೃಪ್ತಿಯನ್ನು ಶೋಧಿಸಲು ಹಾತೊರೆಯುತ್ತಿರುತ್ತದೆ. ಆದರೆ ನಾವು ಬದುಕಬೇಕಾದ್ದು ನಮ್ಮ ಮನಸ್ಸಿನೊಂದಿಗೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಮನಸ್ಸು ಮಲಿನವಾಗದಿರಲು ಹಾಗೂ ಸುಸ್ಥಿತಿಯಲ್ಲಿ ಮುಂದುವರಿಯಲು ಸಾಹಸವನ್ನೇ ಮಾಡಬೇಕಾಗುತ್ತದೆ.

‘ದಿನದ ಸಾರ್ಥಕತೆಯನ್ನು ನೀನು ಕೊಯ್ದ ಬೆಳೆಯೊಂದಿಗೆ ನಿರ್ಷRಸಬೇಡ; ಬದಲು ಬಿತ್ತಿದ ಬೀಜದೊಂದಿಗೆ ನಿರ್ಣಯಿಸು’ ಎಂಬ ಚಿಂತಕನೊಬ್ಬನ ಮಾತು ನೆನಪಿಗೆ ಬರುತ್ತದೆ. ಈ ಮಾತು ಮಾನವನ ಶುದ್ಧ ಸಂಕಲ್ಪ, ಸಂಕಲ್ಪಕ್ಕೆ ಅನುಗುಣವಾದ ಪ್ರಯತ್ನ, ಪ್ರಯತ್ನದಲ್ಲಿ ತೀವ್ರತೆ ಕ್ಷೀಣಿಸದಿರುವಿಕೆ, ಕಾರ್ಯದ ಮೇಲಿನ ನಿಯಂತ್ರಣ ಇವೇ ಮೊದಲಾದ ಅಂಶಗಳನ್ನು ಆಲೋಚಿಸುವಂತೆ ಮಾಡುತ್ತದೆ. ಮಾನಸಿಕ ಶಕ್ತಿಯನ್ನು ಅಲ್ಲಗಳೆಯಲಾಗದಾದರೂ ಮನೋಧರ್ಮಗಳು ವಿಭಿನ್ನ ಎಂಬುದು ಜಗತ್ತಿನ ವೈಶಿಷ್ಟ್ಯವಂತೂ ಹೌದು. ಮನಸ್ಸಿನ ಕೃಪೆಯಾಗದ ಮಾನವನು ಜೀವನದ ಮಹಿಮೆಯನ್ನರಿತು, ಸಂಕಲ್ಪಿಸಿ ಅಭ್ಯುದಯದ ಶೃಂಗವನ್ನು ಮುಟ್ಟಲಾರ. ಅಜ್ಞಾನದ ಶೃಂಖಲೆಯಿಂದ ಮುಕ್ತನಾಗಿ ಜ್ಞಾನದ ಶೃಂಗ ಸ್ಥಿತಿಯನ್ನು ಮುಟ್ಟುವುದೇ ಜೀವನಧರ್ಮ ಹಾಗೂ ಜೀವನಯೋಗ.

ಜೀವನದ ಉದ್ದೇಶವೇನು?: ನಮ್ಮ ಮನಸ್ಸಿನ ಆಸೆಗಳನ್ನು ಭಗವಂತನ ಇಚ್ಛೆಗಳಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು, ಕಾಲಕ್ರಮದಲ್ಲಿ ಭಗವಂತನ ಮನಸ್ಸಿನಲ್ಲಿ ನಮ್ಮ ಮನಸ್ಸು ತಾದಾತ್ಮ್ಯಗೊಳ್ಳಬೇಕು. ಶುದ್ಧ ಮನಸ್ಸಿಗೆ ಮಾತ್ರ ಎಚ್ಚೆತ್ತ ಸ್ಥಿತಿ ಪ್ರಾಪ್ತವಾಗುವಂಥದ್ದು. ಮನಸ್ಸು ಎಚ್ಚೆತ್ತಾಗ ಮಾತ್ರವೇ ಜೀವನ ತತ್ತ್ವಗಳು ನಮಗೆ ಅರ್ಥವಾಗಿ ಊರ್ಧ್ವಮುಖದ ಪ್ರಯಾಣ ಫಲಿಸುತ್ತದೆ. ಇಲ್ಲಿ ‘ಮನಸ್ಸಿನಂತೆ ಮಹಾದೇವ’ ಎಂಬ ಗ್ರಾಮ್ಯಮಾತು ನಮ್ಮ ಮನಸ್ಸಿನೊಂದಿಗೆ ನಾವಿದ್ದೇವೆ ಹಾಗೂ ನಾವು ಮತ್ತು ನಮ್ಮ ಮನಸ್ಸುಗಳು ಒಟ್ಟೊಟ್ಟಿಗೇ ಸಂಚರಿಸುತ್ತೇವೆ ಎಂಬ ಅಂಶವೂ ದಿಟವಾದುದು. ‘ಕಲ್ಲು ಬಾಯಿಯಲ್ಲಿ ಸಿಕ್ಕಿಕೊಂಡಿತೆಂದರೆ, ಇಡೀ ತುತ್ತನ್ನು ಉಗುಳಿಬಿಡಬೇಕಾಗುತ್ತದೆ’ ಎಂಬ ಪರಮಹಂಸರ ಮಾತು ಆತ್ಮವಿಶ್ಲೇಷಣೆಗೆ ಎಡೆಮಾಡಿಕೊಡುತ್ತದೆ. ಹಾಗಾದರೆ ಜೀವನ ಎಂದರೇನು? ಜೀವನದ ಉದ್ದೇಶವೇನು? The purpose of life is a life of purpose’ ಎಂಬ ಚಿಂತಕನೊಬ್ಬನ ಮಾತಿನಲ್ಲಿ ಜೀವನದ ಉದ್ದೇಶವೇನೆಂದರೆ ಸದುದ್ದೇಶಪೂರ್ವಕವಾದ ಜೀವನ ಎಂದಾಗುತ್ತದೆ! ಆಗ ನಮ್ಮ ನಮ್ಮ ಮನಸ್ಸುಗಳ ಸ್ಥಿತಿಗತಿಗಳನ್ನರಿತು, ಸಾಧನೆಯಿಂದ ಅದನ್ನು ಸುಸ್ಥಿರಗೊಳಿಸಿ, ಘನತತ್ತ್ವವನ್ನು ಸ್ವಾನುಭವವಾಗಿಸಿಕೊಳ್ಳುವ ಅವಶ್ಯಕತೆ ಸ್ಪಷ್ಟವಾಗಿ ಗೋಚರಿಸುತ್ತದೆ.

ತ್ಯಾಗಿಗಳನ್ನು ಪುರಸ್ಕರಿಸುವ ಭರದಲ್ಲಿ ರಾಮಕೃಷ್ಣರು ಗೃಹಸ್ಥಾಶ್ರಮಿಗಳನ್ನು ಅಲ್ಪರೆಂದು, ಅಸಮರ್ಥರೆಂದು ಅಥವಾ ಯಶಸ್ಸಿಗೆ ಅಪಾತ್ರರೆಂದು ಎಂದೂ ಬಿಂಬಿಸಲಿಲ್ಲ. ಅವರ ಭರವಸೆಯ ಮಾತುಗಳು ಗೃಹಸ್ಥರನ್ನು ತಾವಿರುವ ಆಶ್ರಮ ಧರ್ಮವನ್ನು ನಿಕೃಷ್ಟಗೊಳಿಸದೆ, ಅವರು ಅಲ್ಲೇ ನಿಂತ ನೀರಾಗದೆ ಉನ್ನತ ಸತ್ಯದೆಡೆಗೆ ಪಯಣಿಸಲು ಪ್ರೇರೇಪಿಸುತ್ತವೆ.

ರಾಮಕೃಷ್ಣರು ಸಂಸಾರವನ್ನು ‘ಮುಳ್ಳಿನ ಗಿಡ’ಕ್ಕೆ ಹೋಲಿಸುತ್ತಾರೆ. ಈ ಗಿಡಕ್ಕೆ ಕೈ ಹಾಕಿದರೆ ಅದು ತರಚಿ ರಕ್ತ ಸುರಿಯುತ್ತದೆ. ಗಿಡವನ್ನು ದೂಷಿಸಿದರೆ ಫಲವಿಲ್ಲ; ಬದಲಾಗಿ ನಮ್ಮಲ್ಲಿ ಜ್ಞಾನಾಗ್ನಿಯನ್ನು ಹೊತ್ತಿಸಿಕೊಂಡು ಅದನ್ನು ಸುಡಬೇಕೆಂಬ ಅಭಿಪ್ರಾಯ ನೀಡುತ್ತಾರೆ.

‘ವಿಷಯಬುದ್ಧಿ ಹೋಗದ ಹೊರತು ಮನುಷ್ಯನಲ್ಲಿ ದಿವ್ಯಮೌಲ್ಯಗಳಾದ ಉದಾರತೆ, ಸರಳತೆಗಳು ಉದಿಸವು. ಪ್ರಾಪಂಚಿಕರಲ್ಲಿ ಸಂಶಯಾಸ್ಪದ ಬುದ್ಧಿ ಅಧಿಕವಾಗಿರುವುದರಿಂದ ಅವರಿಗೆ ಭಗವಂತನಲ್ಲಿ ವಿಶ್ವಾಸ ಮೂಡುವುದು ಸುಲಭವಲ್ಲ. ಗೃಹಸ್ಥರು ಮೊದಲು ಸತ್ಸಂಗದಲ್ಲಿ ತೊಡಗಬೇಕು. ಸತ್ಸಂಗದಿಂದ ಮಾತ್ರವೇ ಸದಸದ್ವಿಚಾರ ಬೆಳೆಯುವುದು’ ಎನ್ನುತ್ತಾರೆ ಪರಮಹಂಸರು.

‘ಕರ್ಮಕ್ಕೆ ತಕ್ಕ ಫಲ ಎಂಬ ಮಾತು ಜನಜನಿತವಾದುದಾದರೂ ಗೃಹಸ್ಥನು ಭಗವಂತನೊಂದಿಗೆ ಐಕ್ಯವಾಗುವುದು ಕರ್ಮದ ಮೂಲಕವೇ’ ಎಂದ ಪರಮಹಂಸರು, ‘ನಿಜವಾದ ಆಕಾಂಕ್ಷೆಯಿರುವ ವ್ಯಕ್ತಿ ಸಂಸಾರದಲ್ಲಿದ್ದರೂ ಭಗವಂತನಲ್ಲಿ ಶರಣಾಗಿ, ಅವನ ಕೃಪಾಬಲದಿಂದ ತನ್ನ ಕರ್ಮವನ್ನು ಕ್ಷಯವಾಗಿಸಿಕೊಳ್ಳಬಲ್ಲ’ ಎನ್ನುತ್ತಾರೆ.

ಗೃಹಸ್ಥನಿಗೆ ಸಮಾಜದಲ್ಲಿ ಬದುಕಬೇಕಾದಾಗ ಎದುರಾಗಬಹುದಾದ ಸಮಸ್ಯೆಗಳಿಗೆ ಪರಮಹಂಸರು ನೀಡುವ ಭರವಸೆಯ ಮಾತುಗಳು ಮನೋಜ್ಞವಾದವು. ಪ್ರಪಂಚವೆಂಬುದು ಎಂದೆಂದಿಗೂ ಒಳಿತು ಕೆಡುಕುಗಳ ಮಿಶ್ರಣ! ಕಾಡಿನಲ್ಲಿ ವಾಸಿಸುತ್ತಿದ್ದ ಋಷಿಗಳು ದುಷ್ಟ ಮೃಗಗಳ ನಡುವೆಯೂ ಧ್ಯಾನ-ಜಪಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಯಿತಂತೆ! ಇದೊಂದು ಅತ್ಯಂತ ಆಲೋಚನೀಯ ಅಂಶ. ಕಮ್ಮಾರನ ಅಡಿಗಲ್ಲಿನಂತೆ ಭಕ್ತನು ಭಗವಂತನಲ್ಲಿ ನಿಶ್ಚಲ ಬುದ್ಧಿಯನ್ನು ಬೆಳೆಸಿಕೊಳ್ಳಬೇಕೆಂಬ ಸಲಹೆ ನೀಡುವ ಪರಮಹಂಸರು, ಸುತ್ತಿಗೆಯ ನೂರಾರು ಪೆಟ್ಟುಗಳ ನಡುವೆಯೂ ಅಡಿಗಲ್ಲು ನಿರ್ವಿಕಾರವಾಗಿ ಉಳಿಯುವ ಮರ್ಮವನ್ನು ತಿಳಿಹೇಳುತ್ತಾರೆ.

ಚಿತ್ತಶುದ್ಧಿಗೆ ಒತ್ತು: ‘ಭಗವಂತನು ಸಾಧು, ಸತ್ಪುರುಷರನ್ನು ಎಂದೆಂದೂ ಅವಮಾನಕ್ಕೆ ಈಡು ಮಾಡುವುದಿಲ್ಲ; ಅಲ್ಲದೆ ಅವರ ಅಪಜಯವನ್ನೂ ಸಹಿಸುವುದಿಲ್ಲ. ಏಕೆಂದರೆ ಭಗವಚ್ಚಿಂತನೆಯನ್ನು ಬಹಳ ಕಾಲ ಮಾಡುವುದರಿಂದ ಸಾಧು, ಸತ್ಪುರುಷರ ಆಂತರ್ಯದಲ್ಲಿ ಭಗವತ್ ಶಕ್ತಿಯ ಸಾರವು ಜಾಗೃತವಾಗುತ್ತದೆ’ ಎಂದು ಪರಮಹಂಸರು ಹೇಳುತ್ತಾರೆ.

‘ಮಾಯೆಯ ಮನೆಯೊಳಗೆ ಇರುವವರೆಗೂ ಮಾಯೆಯ ಮೋಡವು ನಮ್ಮ ಮೇಲೆ ಕವಿದಿರುತ್ತದೆಯಾದ್ದರಿಂದ ಜ್ಞಾನಸೂರ್ಯ ಗೋಚರಿಸುವುದಿಲ್ಲ. ಮಾಯೆಯ ಗೃಹವನ್ನು ತ್ಯಜಿಸಿದ ಕ್ಷಣವೇ ಜ್ಞಾನಸೂರ್ಯನು ಅವಿದ್ಯೆಯ ಮೋಡವನ್ನು ನಾಶಮಾಡುತ್ತಾನೆ’ ಎನ್ನುವ ಪರಮಹಂಸರು ಚಿತ್ತಶುದ್ಧಿಗೆ ಒತ್ತು ನೀಡುತ್ತಾರೆ. ಅವರೆನ್ನುವಂತೆ, ‘ಚಿತ್ತಶುದ್ಧಿಯಾಗದೆ ಭಗವಂತನನ್ನು ಪಡೆಯಲಾಗದು! ಚಿತ್ತಶುದ್ಧಿಯಾಗದೆ ಭಗವಂತನನ್ನು ಪಡೆಯುವ ಇಚ್ಛೆಯೂ ಮನಸ್ಸಿನಲ್ಲಿ ಮೂಡದು!’

ಕುಂಬಾರನೊಬ್ಬನ ಜೀವನಶೈಲಿ ವಿಶ್ವದಲ್ಲಿ ಮಾನವನವಿಕಾಸದ ಪ್ರಕ್ರಿಯೆಯನ್ನೇ ಸೂಚಿಸುತ್ತದೆ. ಕುಂಬಾರನು ಮಡಕೆ ತಯಾರಿಸುವ ಮೊದಲು ಮಣ್ಣನ್ನು ಹದಮಾಡಿಕೊಳ್ಳುತ್ತಾನೆ. ಮಣ್ಣು ಹದವಾಗದೆ ಒಳಗೆ ಹುಲ್ಲು, ಕಲ್ಲು, ಮರಳುಗಳಿಂದ ಕೂಡಿದ್ದರೆ ಮಡಕೆ ಉತ್ತಮ ರೀತಿಯಲ್ಲಿ ಮೂಡದು. ನಿರ್ಲಕ್ಷಿಸಿ ತಯಾರಿಸಿದಲ್ಲಿ ಬಿರುಕು ಬಿಡುವುದು ನಿಶ್ಚಿತ! ಕುಂಬಾರನು ಮಣ್ಣನ್ನು ಸೂಕ್ತ ರೀತಿಯಲ್ಲಿ ಹದಮಾಡಿಕೊಳ್ಳುವಂತೆ ಭಗವಂತನು ಮನುಷ್ಯನನ್ನು ನೂರಾರು ಸನ್ನಿವೇಶಗಳ ಮೂಲಕ ಉತ್ತಮನನ್ನಾಗಿ ರೂಪಿಸುತ್ತಾನೆ.

ಮನುಷ್ಯನ ಜೀವನದ ಮುಂದಿರುವ ವಿಚಾರ ಇಷ್ಟು- ದೇಹಾಭಿಮಾನ ವಿರುವವರೆಗೂ ಕರ್ಮವನ್ನು ಮಾಡಲೇಬೇಕು. ಆಸೆ-ಆಕಾಂಕ್ಷೆಗಳು ಬಂಧನವುಂಟು ಮಾಡುವುದು ದಿಟ. ಆದ್ದರಿಂದ ನಿಷ್ಕಾಮಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು. ಭಗವಂತನೇ ನಿಜವಾದ ಕರ್ತ, ಮಾನವ ಅಕರ್ತ! ಭಗವಂತನೇ ಕರ್ತನೆಂದು ತಿಳಿದು ನಾವು ನಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂಬುದು ಪರಮಹಂಸರ ಅತ್ಯುಪಯುಕ್ತ ಸಲಹೆ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top