More

    ರಾಷ್ಟ್ರ ಕುಂಡಲಿನಿಯನ್ನು ಜಾಗೃತಗೊಳಿಸಬಲ್ಲ ಶಿಕ್ಷಕರ ಗಮನಕ್ಕೆ ಕೆಲವು ವಿಚಾರಗಳು…

    ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಬಲಶಾಲಿಗಳಾಗುವ ಜೀವನ ವಿಧಾನದ ಮಹತ್ವವನ್ನಷ್ಟೇ ಬೋಧಿಸಿದರೆ ಸಾಲದು, ಗಳಿಸಿದ ಬಲವನ್ನು ಸದುದ್ದೇಶಕ್ಕಾಗಿ ಉಪಯೋಗಿಸುವ ಜೀವನಕಲೆಯನ್ನು ಮನವರಿಕೆ ಮಾಡಿಕೊಡಬೇಕು. ಕೆಲಸವೆಂದರೆ ಬೀಜ ಬಿತ್ತಿದಂತೆ. ಅದು ಫಲ ಕೊಡುವುದಷ್ಟೇ ಅಲ್ಲ, ಮುಂದಿನ ಕೃಷಿ ಕಾರ್ಯಗಳಿಗೆ ಬೀಜಗಳನ್ನು ಒದಗಿಸಿಕೊಡುತ್ತದೆ.

    ರಾಷ್ಟ್ರ ಕುಂಡಲಿನಿಯನ್ನು ಜಾಗೃತಗೊಳಿಸಬಲ್ಲ ಶಿಕ್ಷಕರ ಗಮನಕ್ಕೆ ಕೆಲವು ವಿಚಾರಗಳು...ಮಾನವ ಇತಿಹಾಸದಲ್ಲಿ ಶಿಕ್ಷಣ ಹಾಗೂ ಜ್ಞಾನ ಸಂಪಾದನೆಯ ಪ್ರಕ್ರಿಯೆಯನ್ನು ಓದು, ಬರಹಕ್ಕಷ್ಟೇ ಸೀಮಿತವಾಗಿಸದೆ ಅದನ್ನು ಶ್ರದ್ಧೆಯ ಪಯಣ, ಅಜ್ಞಾನ ನಿವೃತ್ತಿಯ ಕೈಂಕರ್ಯ, ಅನಂತತೆಯತ್ತ ನಡಿಗೆ, ಮಾನವತ್ವದಿಂದ ದೈವತ್ವಕ್ಕೇರಲು ನಿರ್ವಹಿಸಬೇಕಾದ ಮಹತ್ ಸಾಧನಾಕ್ರಿಯೆ- ಎಂಬಿತ್ಯಾದಿ ವಿಚಾರಗಳನ್ನಾಧರಿಸಿ ವಿಶ್ಲೇಷಿಸಿದ ಸಿಂಹಸದೃಶ ತತ್ತಾ್ವದರ್ಶ ರಾಷ್ಟ್ರ ಭಾರತ. ಭಾರತೀಯ ನಾಗರಿಕತೆ ಜಗತ್ತಿನ ಪಾಲಿಗೆ ಆದರ್ಶದ ವಿಚಾರದಲ್ಲಿ ಹಿಮಾಲಯ, ಸ್ಪೂರ್ತಿಯ ವಿಷಯದಲ್ಲಿ ಮಹಾಗಂಗೆ! ‘ನಿನ್ನನ್ನು ನೀನು ತಿಳಿ, ನಿನ್ನನ್ನು ನೀನು ನಂಬು’, ‘The kingdom of God is within you’ ಮೊದಲಾದ ಮಹಾತ್ಮರ ನುಡಿಗಳು ಭಾರತೀಯ ವೇದಾಂತ ತತ್ತ್ವಸಾಗರದ ಕೆಲವು ಅಲೆಗಳಷ್ಟೇ. ಅನಾದಿಕಾಲದಿಂದಲೂ ನಮ್ಮ ಮಾತೃಭೂಮಿ ಜಗತ್ತನ್ನು ತಬ್ಲಿ(ಕ್ಷಮಿಸಿ ತಬ್ಬಲಿ)ತನದಿಂದ ಮುಕ್ತಗೊಳಿಸಿ, ಅಸ್ತಿತ್ವದಿಂದೊಡಮೂಡಿ ಆದರ್ಶ ಪಥದಲ್ಲಿ ಸಾಗುವಂತೆ ಪ್ರೇರೇಪಿಸುತ್ತ ಬಂದಿರುವುದು ಸೂರ್ಯಚಂದ್ರರಷ್ಟೇ ಸತ್ಯ; ಸ್ಪಷ್ಟ.

    ಕಾಲನ ಮಹಿಮೆಯನ್ನು ನಿರ್ಲಕ್ಷಿಸುವಂತಿಲ್ಲ. ಮನುಷ್ಯರ ನಡುವಿನ ವಿಕೃತ ವೈಮನಸ್ಯಗಳಿಗೆ ಚಿಕಿತ್ಸೆ ನೀಡುವ ಭರದಲ್ಲಿ, ‘ನಿನ್ನ ನೆರೆಹೊರೆಯವರನ್ನು ನಿನ್ನಂತೆ ಪ್ರೀತಿಸು’ ಎಂಬ ಸಂದೇಶ ಪಾಶ್ಚಾತ್ಯರ ನಾಡಲ್ಲಿ ಮೂಡಿಬಂದರೂ ಆ ಸಂದೇಶದ ಅನುಯಾಯಿಗಳೇ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಟ್ಟುವ ಉತ್ಸಾಹದಲ್ಲಿ ಜನರನ್ನು ಬಿಳಿಯ-ಕರಿಯರೆಂದು ಬೇರ್ಪಡಿಸಿ ಜಗತ್ತಿನಲ್ಲಿ ಮಾಡಿದ ನರಮೇಧವು ಎಂದಿಗೂ ಮರೆಯಲಾರದ ಬೀಭತ್ಸಕೃತ್ಯ!. ಗಾಯ ವಾಸಿಯಾದರೂ ಮಚ್ಚೆ ಉಳಿದಿದೆ, ಘಟಿಸಿದ ಘೋರ ಸನ್ನಿವೇಶಗಳು ಮನಃಪಟಲದಿಂದ ದೂರವಾಗುವುದು ಕಷ್ಟಸಾಧ್ಯ.

    ಇತಿಹಾಸದ ಕಾಲಚಕ್ರ ಉರುಳಿದಂತೆ ಎದುರಾದ ಹೊಸ ಸವಾಲುಗಳಿಗೆ ಜಾಗತೀಕರಣ ಹಾಗೂ ಕೈಗಾರಿಕಾ ಕ್ರಾಂತಿಗಳು ಸಫಲತೆಯನ್ನು ಪೂರ್ಣವಾಗಿ ಸಾಧಿಸಲಾರದೇ ಹೋದವು. ಸತ್ತಂತಿಹರನು ಬಡಿದೆಬ್ಬಿಸಲು ಸಂತಚಿಂತನಕ್ಕೆ ಜಗತ್ತು ಮೊರೆ ಹೋಗಲೇಬೇಕಾಯ್ತು. ಜಗತ್ತು ಬುದ್ಧ-ಶಂಕರ-ವಿವೇಕಾನಂದರ ‘ಮಾನವನನ್ನು ಮಹಾತ್ಮನಾಗಿಸುವ’ ಶ್ರೇಷ್ಠ ಚಿಂತನೆಗಳಿಗೆ ತಲೆಬಾಗಿ ಹೃನ್ಮನಗಳಲ್ಲಿ ಸ್ವೀಕರಿಸಿತು. ‘ಆತ್ಮಶಕ್ತಿಯು ಎಂದೆಂದೂ ಖಡ್ಗಶಕ್ತಿಯನ್ನು ಮಣಿಸುತ್ತದೆ’ ಎಂಬ ಅನಾದಿಕಾಲದ ಭಾರತೀಯರ ತಾತ್ವಿಕ ನಿಲುವಿಗೆ ಜಗತ್ತು ಹಣೆ ಮಣಿಯಿತು.

    ಇತಿಹಾಸತಜ್ಞ ಮಾರ್ಕ್ ಟ್ವೇನ್ ಭಾರತದ ಬಗ್ಗೆ ಹೇಳಿದ ಮಾತು ಆಲೋಚನಾಯೋಗ್ಯ:India is the cradle of human race, the mother of history, grandmother of legends and great grandmother of traditions… In religion all other countries are paupers; India is the only millionaire’.

    ವಿವೇಕಾನಂದರು ಜಗತ್ತನ್ನು ಆಮೂಲಾಗ್ರವಾಗಿ ಅರಿತವರು. ಮಾನವಸಂಕುಲದ ಯಾವುದೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒಲ್ಲದ ಮನಸ್ಸು ಅವರದ್ದು. ಬದಲಾಗುವ ಸಮಾಜಕ್ಕೆ ಶಾಂತಿ-ಸುಖ-ಸಮಾಧಾನಗಳ ದಾರಿದ್ರ್ಯ ಬಾರದಿರಲೆಂದು ಅಹರ್ನಿಶಿ ಶ್ರಮಿಸಿದ ಅವರು ವೇದಾಂತದ ತಾತ್ತಿ್ವಕ ಬೆಳಕಿನಲ್ಲಿ ಹತ್ತಾರು ಮಾಲಿನ್ಯಗಳಿಗೆ ಪರಿಣಾಮಕಾರಿ ಚಿಕಿತ್ಸೆಯಿತ್ತರು.

    ಜಗತ್ತಿನ ಉಳಿವಿಗೆ ಭಾರತದ ಉಳಿವಿನ ಅನಿವಾರ್ಯತೆಯನ್ನು ಮನಗಂಡಿದ್ದ ಸ್ವಾಮಿ ವಿವೇಕಾನಂದರು ಭಾರತ ಇತಿಹಾಸ ಕಂಡ ಸಹಸ್ರ ವರ್ಷಗಳ ಸರ್ವದಾಳಿಗಳನ್ನು ಕೂಲಂಕಷವಾಗಿ ಅಧ್ಯಯನಗೈದು ಭಾರತದ ಪುನರುತ್ಥಾನಕ್ಕೆ ಮಾರ್ಗಸೂಚಿಯಿತ್ತರು. ಶಿಕ್ಷಣವೊಂದೇ ಮಾನವನ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ಮಹೋನ್ನತ ಧ್ಯೇಯಾದರ್ಶದೊಂದಿಗೆ ರಾಷ್ಟ್ರದ ಕುಂಡಲಿನಿಯನ್ನು ಜಾಗೃತಗೊಳಿಸಿದರು.

    ರಾಮಕೃಷ್ಣ ಪರಂಪರೆಯ ಯತಿಗಳು ಸ್ವಾಮಿ ವಿವೇಕಾನಂದರಿತ್ತ ‘ಮಾನವ ಪುನರುತ್ಥಾನಕ್ಕೆ ಶಿಕ್ಷಣ’ ಎಂಬ ದೀಕ್ಷೆಯೊಂದಿಗೆ ಶ್ರಮಿಸುತ್ತಿದ್ದಾರೆ. ಪ್ರಾರಂಭದಲ್ಲಿ ಲೌಕಿಕ ಶಿಕ್ಷಣವನ್ನು ಯೋಗ್ಯರೀತಿಯಲ್ಲಿ ನೀಡಿ ಸಮಾಜೋದ್ಧಾರ ತನ್ಮೂಲಕ ರಾಷ್ಟ್ರೋದ್ಧಾರದ ಮಹತ್ಕಾರ್ಯಕ್ಕೆ ಸಂಕಲ್ಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

    ಕನ್ನಡದ ನೆಲದಲ್ಲಿ ತಮ್ಮ ಶ್ರೇಷ್ಠ ಉಪನ್ಯಾಸಗಳು ಹಾಗೂ ಬರವಣಿಗೆಯ ಮೂಲಕ ಶಿಕ್ಷಣ ಕ್ಷೇತ್ರವನ್ನು ನೈತಿಕವಾಗಿ ಮೌಲ್ಯಪೂರ್ಣವಾಗಿಸಲು ಶ್ರಮಿಸಿದವರಲ್ಲಿ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ಸೇವೆ ಅವಿಸ್ಮರಣೀಯ. ಶಿಕ್ಷಕರ ಬಗ್ಗೆ ಅಪಾರ ಗೌರವ ಹಾಗೂ ಭರವಸೆಯಿರಿಸಿದ್ದ ಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟವಾಗಿ ಸಮರ್ಪಿಸಿಕೊಂಡರು. ಅವರ ಶೈಕ್ಷಣಿಕ ಧ್ಯೇಯೋದ್ದೇಶಗಳ ಸಾರಾಂಶವನ್ನಿಲ್ಲಿ ಚಿತ್ರಿಸಲು ಬಯಸುವೆ.

    ಅವರೆನ್ನುತ್ತಾರೆ: ‘ಹೊಸ ರಕ್ತ ಹರಿಯುತ್ತಿರುವ, ನವೋತ್ಸಾಹ ಚಿಮ್ಮುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಆಟೋಟಗಳ ಮೂಲಕ ಹತೋಟಿಯಲ್ಲಿಟ್ಟುಕೊಂಡು ಜಗತ್ತಿನ ಪ್ರತಿಯೊಂದು ವಿಷಯದಲ್ಲೂ ಕುತೂಹಲ ತೋರುವ ಅವರ ಜ್ಞಾನದಾಹವನ್ನು ತಿಳಿವಳಿಕೆ ನೀಡುವುದರ ಮೂಲಕ ಸಂತೃಪ್ತಿಪಡಿಸುತ್ತ ಅವರ ಹೃನ್ಮನಗಳನ್ನು ಗೆಲ್ಲಬೇಕಾದವರು ಸಮರ್ಥ ಶಿಕ್ಷಕರಲ್ಲವೇ?’

    ‘ಕಠಿಣವಾದ ಕಲ್ಲನ್ನು ಕೆತ್ತಿ ಕಡೆದು ಸುಂದರ ವಿಗ್ರಹವನ್ನಾಗಿ ರೂಪಿಸುವ ಕಾರ್ಯವನ್ನು ಸುಲಭವೆನ್ನಬಹುದೇನೋ, ಆದರೆ ಚಂಚಲಚಿತ್ತ ವಿದ್ಯಾರ್ಥಿಯ ಬುದ್ಧಿಯನ್ನು ತಿದ್ದಿ ಆತನನ್ನು ಸುಶಿಕ್ಷಿತನನ್ನಾಗಿ ರೂಪಿಸಲು ಸಾಧ್ಯವಾಗುವುದು ಸಮರ್ಥ ಶಿಕ್ಷಕನಿಗಲ್ಲವೇ?’

    ‘ವಿದ್ಯಾರ್ಥಿಯಲ್ಲಡಗಿರುವ ಪ್ರತಿಭೆಯ ಆವಿಷ್ಕಾರ, ಪ್ರತಿಭೆಯ ವಿಕಸನಕ್ಕೆ ಪೋ›ತ್ಸಾಹ ಹಾಗೂ ಮಾರ್ಗದರ್ಶನ, ಪ್ರತಿಭೆಯನ್ನು ಸಂಪೂರ್ಣವಾಗಿ ವಿಕಸನಗೊಳಿಸಲು ಬೇಕಾದ ತಾಳ್ಮೆ, ಪೂರ್ಣ ಪರಿಶ್ರಮ ಈ ಅಂಶಗಳನ್ನೊಳಗೊಂಡ ಮಹತ್ಕಾರ್ಯ ಯಶಸ್ವಿಯಾಗುವುದು ಸಮರ್ಥ ಶಿಕ್ಷಕನಿಂದಲ್ಲವೇ?’

    ‘ವಿದ್ಯಾರ್ಥಿಗಳನ್ನು ಕೀಳರಿಮೆ, ವ್ಯಸನಗಳೇ ಮೊದಲಾದ ಅನಿಷ್ಟಗಳಿಂದ ಮುಕ್ತಗೊಳಿಸಿ ಅವರಲ್ಲಿ ನೈತಿಕಮೌಲ್ಯಗಳಿಂದೊಡ ಮೂಡಿದ ಮನುಷ್ಯತ್ವವನ್ನು ಜಾಗೃತಗೊಳಿಸಬೇಕಾದವರು ಸಮರ್ಥ ಶಿಕ್ಷಕರಲ್ಲವೇ?’

    ‘ವಿದ್ಯಾಸಂಸ್ಥೆಗಳು ಯಶಸ್ಸು ಕಾಣಲು ಸುಂದರ ಕಟ್ಟಡ, ಸಕಲ ಸೌಕರ್ಯಗಳು ಮತ್ತು ಉತ್ತಮ ವಿದ್ಯಾರ್ಥಿಗಳು ಸಾಕೆ? ಖಂಡಿತ ಸಾಲದು, ಸಮರ್ಥ ಶಿಕ್ಷಕರು ಬೇಕೇ ಬೇಕು. ಏಕೆಂದರೆ ವಿದ್ಯಾಸಂಸ್ಥೆಯು ಎಂತಹ ಗರೀಬ ಸ್ಥಿತಿಯಲ್ಲಿದ್ದರೂ ಅದು ಉದ್ಧಾರ ಕಾಣುವುದು ಸಮರ್ಥ ಶಿಕ್ಷಕರ ಪರಿಶ್ರಮದಿಂದಲ್ಲವೇ?’

    ‘ಶಿಕ್ಷಣತಜ್ಞರು ರೂಪಿಸುವ ಸವೋತ್ಕೃಷ್ಟ ಶಿಕ್ಷಣ ಪದ್ಧತಿಯನ್ನು ಫಲಕಾರಿಯಾಗಿ ಕಾರ್ಯರೂಪಕ್ಕೆ ತರಬಲ್ಲವರು ಸಮರ್ಥ ಶಿಕ್ಷಕರಲ್ಲವೇ?’

    ಶಿಕ್ಷಕರ ಮೇಲಿನ ಅವಲಂಬನೆ: ತಂದೆಯು ಅನುಗ್ರಹಿಸುವುದು ಜೀವನವಾದರೆ ಗುರುವು ದಯಪಾಲಿಸುವುದು ಜೀವನಕಲೆಯನ್ನು! ‘ಅವರವರ ಭವಿಷ್ಯದ ಶಿಲ್ಪಿ ಅವರವರೇ’ ಎಂಬುದು ನಿಜವಾದರೂ ವಿದ್ಯಾರ್ಥಿಯ ವ್ಯಕ್ತಿತ್ವರಚನೆಯಲ್ಲಿ ಶಿಕ್ಷಕನೇ ಶಿಲ್ಪಿ. ವಿದ್ಯೆಯನ್ನು ಕಲಿಸಲು ಪುಸ್ತಕಜ್ಞಾನವಿದ್ದರೆ ಸಾಕು; ಆದರೆ ಶೀಲವನ್ನು ಕಲಿಸಲು ಶೀಲವಂತ ಶಿಕ್ಷಕನೇ ಬೇಕು.

    ಸುಭಾಷಿತ ಹೇಳುತ್ತದೆ:

    ಬಾಲ್ಯೇಕ್ರೀಡನಕಾಸಕ್ತಾ ಯೌವನೆ ವಿಷಯೋನ್ಮುಖಾಃ|

    ಅಜ್ಞಾ ನಯಂತ್ಯ ಶಕ್ತಾ್ಯ ಚ ವಾರ್ಧಕ್ಯಂ ಸಮುಪಸ್ಥಿತಂ||

    ಮೂರ್ಖರು ಬಾಲ್ಯವನ್ನು ಆಟದಲ್ಲಿಯೂ, ತಾರುಣ್ಯವನ್ನು ವಿಷಯಸುಖಗಳನ್ನು ಅನುಭವಿಸುವುದರಲ್ಲಿಯೂ, ಮುದಿತನವನ್ನು ತನಗೆ ಶಕ್ತಿ ಇಲ್ಲವೆಂದೂ ಹೇಳುತ್ತಾ ಕಾಲಕಳೆಯುತ್ತಾರೆ.

    ಪ್ರತಿಯೊಬ್ಬರ ಬದುಕಿನ ಕ್ಷಣಕ್ಷಣದಲ್ಲೂ ಕರ್ತವ್ಯ ಮತ್ತು ಮನರಂಜನೆಗಳು ಕಣ್ಣ ಮುಂದೆ ಮೂಡುತ್ತವೆ. ಪ್ರಜ್ಞಾವಂತನಾದವನು ಕರ್ತವ್ಯಕ್ಕೆ ಮೊದಲ ಪ್ರಾಶಸ್ತ್ಯವಿತ್ತು, ಕಾರ್ಯಪ್ರವೃತ್ತನಾಗಿ ಮನೋರಂಜನೆಯನ್ನು ಮುಂದೂಡುತ್ತಾನೆ.

    ಶಿಕ್ಷಕರ ಮುಂದಿನ ಸವಾಲುಗಳು: ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಬಲಶಾಲಿಗಳಾಗುವ ಜೀವನ ವಿಧಾನದ ಮಹತ್ವವನ್ನಷ್ಟೇ ಬೋಧಿಸಿದರೆ ಸಾಲದು, ಗಳಿಸಿದ ಬಲವನ್ನು ಸದುದ್ದೇಶಕ್ಕಾಗಿ ಉಪಯೋಗಿಸುವ ಜೀವನಕಲೆಯನ್ನು ಮನವರಿಕೆ ಮಾಡಿಕೊಡಬೇಕು. ಕೆಲಸವೆಂದರೆ ಬೀಜ ಬಿತ್ತಿದಂತೆ. ಅದು ಫಲ ಕೊಡುವುದಷ್ಟೇ ಅಲ್ಲ, ಮುಂದಿನ ಕೃಷಿ ಕಾರ್ಯಗಳಿಗೆ ಬೀಜಗಳನ್ನು ಒದಗಿಸಿಕೊಡುತ್ತದೆ ಎಂಬ ಕಾಯಕತತ್ತ್ವವನ್ನು ಮನದಟ್ಟು ಮಾಡಿಕೊಡಬೇಕು.

    ವಿದ್ಯಾರ್ಥಿಗಳಿಗೆ ಜೀವನದ ಏಳುಬೀಳುಗಳನ್ನು ಸಕಾರಾತ್ಮಕವಾಗಿ ಹಾಗೂ ಜವಾಬ್ದಾರಿಯುತವಾಗಿ ವಿಶ್ಲೇಷಿಸುವ ವಿವೇಕವನ್ನು ನೀಡಿ, ‘ನಿನ್ನನ್ನಷ್ಟೇ ನೀನು ಪ್ರೀತಿಸುವ ಸ್ವಾರ್ಥಕೇಂದ್ರಿತ ವ್ಯಕ್ತಿಯಾದಾಗ ಏಕಾಂಗಿಯಾಗುವೆ. ಇತರರನ್ನು ಸಂಶಯದೃಷ್ಟಿಯಿಂದಲೇ ಗಮನಿಸುವೆ, ಮಾನಸಿಕ ಒತ್ತಡಕ್ಕೆ ಗುರಿಯಾಗುವೆ. ಆದರೆ ನಿನಗೆ ನೀನೇ ಸಹಾಯ ಮಾಡಿಕೊಳ್ಳದಿದ್ದರೆ, ನಿನ್ನ ಬದುಕಿಗೆ ಪರಾವಲಂಬಿತನವೇ ವರವೆಂದು ಭಾವಿಸುವೆಯಾದರೆ ನಿನ್ನ ಉದ್ಧಾರವು ಸಾಧ್ಯವೇ ಇಲ’ ಎಂಬ ತಿಳಿವಳಿಕೆಯನ್ನು ನೀಡಬೇಕು.

    ತಮ್ಮಲ್ಲಿ ತಾವು ಶ್ರದ್ಧೆ ಬೆಳೆಸಿಕೊಳ್ಳುವುದು, ಗುರುಹಿರಿಯರನ್ನು ಗೌರವಿಸುವುದು, ಸ್ವತಂತ್ರವಾಗಿ ಆಲೋಚಿಸುವುದು, ಸ್ವಾವಲಂಬಿಗಳಾಗಿ ಬಾಳುವುದು ಮತ್ತು ದೀನರೊಂದಿಗೆ ವಿನಯದಿಂದ ವರ್ತಿಸುವುದು-ಇವೇ ಮೊದಲಾದ ಗುಣಗಳನ್ನು ಶಿಕ್ಷಕರು ತಮ್ಮ ಬದುಕನ್ನೇ ಸಾಕ್ಷಾತ್ ಉದಾಹರಣೆಯಾಗಿಸಿ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನ ದಿನವನ್ನು ಯೋಗ್ಯರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಾಗ ಮಾತ್ರವೇ ನಾಳೆಯನ್ನು ಸಮೃದ್ಧಿಯಾಗಿ ರೂಪಿಸಿಕೊಳ್ಳಬಹುದೆಂಬ ಭರವಸೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ‘ಸದಾಕಾಲ ಒಳ್ಳೆಯದನ್ನೇ ನಿರೀಕ್ಷಿಸೋಣ; ಆದರೆ ಯಾವುದೇ ಸಮಯದಲ್ಲೂ ಎದುರಾಗಬಹುದಾದ ಕೆಟ್ಟದ್ದಕ್ಕೂ ಸಿದ್ಧರಿರೋಣ’, ‘ಎಲ್ಲರನ್ನೂ ಮೆಚ್ಚಿಸಲು ಹೊರಟವನು ನೈತಿಕವಾಗಿ ಉಳಿಯಲು ಸಾಧ್ಯವಿಲ್ಲ’, ‘ದಯೆ, ಸಜ್ಜನಿಕೆ ಮತ್ತು ನಿಃಸ್ವಾರ್ಥತೆಗಳನ್ನು ಅಳವಡಿಸಿಕೊಳ್ಳುವುದೇ ಧರ್ಮಶೀಲತೆ’ ಎಂಬ ವಿಚಾರಗಳು ಶಿಕ್ಷಕರಿಂದ ಪರಿಚಯವಾಗಲೇಬೇಕು.

    ಶಿಕ್ಷಕರೇ ಎಚ್ಚರ: ಶಿಕ್ಷಕರಿಂದು ತಮ್ಮ ಜವಾಬ್ದಾರಿಯನ್ನು ‘ಧರ್ಮ’ ಎಂದೆಣಿಸದೆ ‘ವೃತ್ತಿ’ ಎಂದುಕೊಂಡಿದ್ದಾರೆ. ಜೀವನ ಶಿಕ್ಷಣವನ್ನು ಕಲಿಸಿ ವಿದ್ಯಾರ್ಥಿಗಳ ಪಾಲಿಗೆ ಅನಾಥರಕ್ಷಕರಾಗಬೇಕಿದ್ದವರು ತಮ್ಮ ಕರ್ತವ್ಯಗಳನ್ನು ಯೋಗ್ಯವಾಗಿ ನಿರ್ವಹಿಸದೆ ಮಕ್ಕಳನ್ನು ಕತ್ತಲೆಯ ಕೂಪಕ್ಕೆ ತಳ್ಳಿ ಅನಾಥಪ್ರಜ್ಞೆಯಲ್ಲಿ ನರಳುವಂತೆ ಮಾಡಿದ್ದಾರೆ. ರಚನಾತ್ಮಕ ಹಾಗೂ ಕ್ರಿಯಾಶೀಲವಾಗಬೇಕಿದ್ದ ಮಕ್ಕಳ ಬದುಕು ನಿರ್ವೀರ್ಯ, ನಿಸ್ತೇಜವಾಗುತ್ತಿದೆ. ಇಂತಹ ದುರ್ಬಲ ಸಂತಾನಕ್ಕೆ, ‘ಸಮಾಜದಲ್ಲಿ ಅಪರಾಧಗಳನ್ನು ನೋಡಿ ಸುಮ್ಮನಿರುವುದೂ ಮಹಾಪರಾಧ’ ಎಂಬ ವಿಚಾರವು ಸ್ಮೃತಿಪಟಲದಿಂದ ಕಣ್ಮರೆಯಾಗಿದೆ. ದುರ್ಬಲ ಮನಸ್ಸಿನ ಯುವಜನತೆೆ ಒಂದೋ ಅಮಾಯಕರಾಗುತ್ತಾರೆ ಇಲ್ಲವೇ ಪಾತಕಲೋಕದ ಕಡೆಗೆ ಆಕರ್ಷಿತರಾಗುತ್ತಾರೆ! ಈ ಆಘಾತಕಾರಿ ವಿಷಯಗಳಿಗೆ ಶಿಕ್ಷಕರು ನಿರುತ್ತರರಾಗಿರುವುದು ಇನ್ನೂ ಅಪಾಯಕಾರಿಯಲ್ಲವೇ?

    ಶಿಕ್ಷಕರ ಕ್ಷೇತ್ರದ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳನ್ನು ಮೀರಿಸುವಷ್ಟು ದಾರಿ ತಪ್ಪಿವೆ. ‘ದೀನರಲ್ಲಿ ದರ್ಪದೋರುವ, ಶಕ್ತರ ಮುಂದೆ ಮೆತ್ತಗಿರುವ, ರಾಜಕೀಯ ಪ್ರತಿನಿಧಿಗಳ ಮುಂದೆ ಮುದುಡಿಕೊಂಡ ವ್ಯಕ್ತಿಯು ಎಷ್ಟೇ ವಿದ್ಯಾವಂತನಾದರೂ ಆತ ಒಬ್ಬ ಆತ್ಮವಿಶ್ವಾಸವುಳ್ಳ ಕೂಲಿಗಿಂತಲೂ ನಿಕೃಷ್ಟ’ ಎಂಬ ವಾಸ್ತವಿಕತೆಯ ಅರಿವು ಶಿಕ್ಷಕರಿಗಿಲ್ಲದಂತಾಗಿದೆ. ಸರ್ವರಿಗೂ ಶಿಕ್ಷಣ ನೀಡುತ್ತೇವೆ ಎಂಬ ಬೃಹತ್ ಸುಳ್ಳಿನಡಿಯಲ್ಲಿ ‘Education was made popular by making it cheaper’ ಎಂಬ ಮಾತನ್ನು ಸತ್ಯವಾಗಿಸಿದ್ದಾರೆ.

    ಶಿಕ್ಷಕರ ಗುಣಮಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳ ವ್ಯಕ್ತಿತ್ವ, ಪದವೀಧರರ ಯೋಗ್ಯತೆಯಂತೆ ರಾಷ್ಟ್ರದ ಘನತೆ. ಅಂದರೆ ರಾಷ್ಟ್ರದ ಯೋಗ್ಯತೆ ಅಲ್ಲಿನ ಶಿಕ್ಷಕರ ಯೋಗ್ಯತೆಯನ್ನು ಮೀರಿ ಬೆಳೆಯಲು ಸಾಧ್ಯವೇ ಇಲ್ಲ!

    ತುರ್ತು ಅಗತ್ಯ: ಭಗವದ್ಗೀತೆ ಹೇಳುತ್ತದೆ ‘ಸಮಾಜದಲ್ಲಿ ಶ್ರೇಷ್ಠರಾದವರ ಜೀವನಾಚರಣೆಗಳು ಇತರರಿಗೆ ದಾರಿದೀಪ. ಹಿರಿಯರ ನಡೆನುಡಿಗಳೇ ತಲೆಮಾರುಗಳಿಗೆ ಪ್ರಮಾಣ’. ಋಷಿವಾಣಿ ಹೀಗಿದೆ:

    ಹಿತೈಷಿಣಸ್ಸಂತು ನತೇ ಮನೀಷಿಣಃ| ಮನೀಷಿಣಃಸ್ಸಂತು ನತೇ ಹಿತೈಷಿಣಃ||

    ಬುದ್ಧಿವಂತರಲ್ಲದ ಒಳ್ಳೆಯವರಿಂದ ಅಥವಾ ಒಳ್ಳೆಯವರಲ್ಲದ ಬುದ್ಧಿವಂತರಿಂದ ಏನು ಪ್ರಯೋಜನ? ಸಮಾಜಕ್ಕೆ ಬೇಕಿರುವುದು ಬುದ್ಧಿವಂತರಾದ ಒಳ್ಳೆಯವರು ಮತ್ತು ಒಳ್ಳೆಯವರಾದ ಬುದ್ಧಿವಂತರು! ಈ ಕಾರ್ಯನಿರ್ವತೃಗಳು ಶಿಕ್ಷಕರೇ ಅಲ್ಲವೇ?

    ಸಂತನೊಬ್ಬನ ಅಂತರಂಗದಲ್ಲಿ ಸಾತ್ತಿ್ವಕ ಸಂಸ್ಕಾರಗಳಿರಬಹುದು; ವಿಜ್ಞಾನಿಯೊಬ್ಬನ ಆಂತರ್ಯದಲ್ಲಿ ಸತ್ತ್ವವಿದ್ದಿರಬಹುದು; ಕಲಾವಿದನ ವ್ಯಕ್ತಿತ್ವದಲ್ಲಿ ಪ್ರತಿಭೆ ಅಡಗಿದ್ದಿರಬಹುದು; ಆದರೆ ಇವರೆಲ್ಲರ ಯಶಸ್ಸಿನ ಹಿನ್ನಲೆಯಲ್ಲಿ ಸಮರ್ಥ ಶಿಕ್ಷಕನೊಬ್ಬ ಇದ್ದಿರಲೇಬೇಕಲ್ಲವೇ?

    ಶಿಕ್ಷಕರೇ, ಆದ್ದರಿಂದಲೇ ಹೇಳಲಾದ್ದು:“Teachers should be by choice and not by chance”. ‘ನಾವು Mass ಅಲ್ಲ’Class ಅಲ್ಲ ಎನ್ನುವಿರೇನು? ಹಾಗಾದರೆ ಸಮಾಜ ‘ಖಲಾಸ್’ ಆಗುವುದರಲ್ಲಿ ಸಂಶಯವೇ?

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    34 ಪೊಲೀಸ್ ಸಿಬ್ಬಂದಿಗೆ ಕರೊನಾ ವೈರಸ್​; ಸೋಂಕು ತಗುಲಿದ್ದು ತಬ್ಲಿಘಿಗಳಿಂದಲೇ ಎಂದ ಮೇಲಧಿಕಾರಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts