Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ನಿರ್ವಾತ ಪ್ಯಾಕಿಂಗ್ ಯಂತ್ರಕ್ಕೆ ಮರುಜೀವ

Monday, 09.07.2018, 3:02 AM       No Comments

| ವಿಕ್ರಮ ನಾಡಿಗೇರ ಧಾರವಾಡ

ಕೃಷಿ ಉತ್ಪನ್ನಗಳನ್ನು ದೀರ್ಘ ಕಾಲ ದಾಸ್ತಾನು ಮಾಡಲು ಕೃಷಿ ವಿಶ್ವವಿದ್ಯಾಲಯ ನಿರ್ವಾತ ತಂತ್ರಜ್ಞಾನ ಸಂಶೋಧನೆ ಮಾಡಿತ್ತು. ಆದರೆ, ಈ ವಿನೂತನ ಪ್ರಯೋಗ ಹೆಚ್ಚು ಪ್ರಚಾರವಾಗದ ಕಾರಣ ನಿರ್ವಾತ ಪ್ಯಾಕಿಂಗ್ ಯಂತ್ರ ಮೂಲೆಗುಂಪಾಗಿತ್ತು.

2006-07ನೇ ಸಾಲಿನಲ್ಲಿ ಬೆಲ್ಜಿಯಂನಿಂದ ತರಿಸಲಾಗಿದ್ದ ಈ ಯಂತ್ರವನ್ನು ವಿವಿಯ ಸಸ್ಯಶರೀರ ಕ್ರಿಯಾಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಿದ್ದು, 6 ವರ್ಷಗಳ ಕಾಲ ಮಾತ್ರ ಕಾರ್ಯ ನಿರ್ವಹಿಸಿತ್ತು. ಇಂತಹ ಯಂತ್ರವೊಂದು ಕೃಷಿ ವಿವಿಯಲ್ಲಿ ಇದೆ ಎನ್ನುವುದನ್ನು ಅಲ್ಲಿನ ಉಪನ್ಯಾಸಕರು ಸೇರಿದಂತೆ ಎಲ್ಲರೂ ಮರೆತಂತಾಗಿತ್ತು. ಇದೀಗ ರಾಜ್ಯ ಸರ್ಕಾರ ಮುಂಗಡಪತ್ರದಲ್ಲಿ 3 ಕೋಟಿ ರೂ. ನೀಡುವ ಮೂಲಕ ನೆನಪಿಸಿಕೊಟ್ಟಿದೆ. ಹೊಸ ಯಂತ್ರ ಬಂದಾಗ ಸಂಶೋಧನಾ ವಿದ್ಯಾರ್ಥಿಗಳು ವಿವಿಧ ಆಹಾರ ಪದಾರ್ಥ, ಕಾಳುಗಳ ಮೇಲೆ ಪ್ರಯೋಗ ನಡೆಸುತ್ತಿದ್ದರು. ಪ್ರಥಮವಾಗಿ ಖಾರದ ಪುಡಿ ಮೇಲೆ ಪ್ರಯೋಗ ನಡೆಸಿದಾಗ ಸುಮಾರು ಎರಡು ವರ್ಷಗಳ ಕಾಲ ಖಾರದಪುಡಿಯ ರುಚಿ, ಬಣ್ಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದು ಅರಿವಾಗಿದ್ದಲ್ಲದೆ, ಈರುಳ್ಳಿ, ಹತ್ತಿ, ಸೋಯಾಬಿನ್ ಹಾಗೂ ಶೇಂಗಾವನ್ನು ಸಹ ಈ ರೀತಿ ಪ್ಯಾಕಿಂಗ್​ನಿಂದ 18 ತಿಂಗಳು ಕೆಡದಂತೆ ದಾಸ್ತಾನು ಮಾಡಬಹುದು ಎಂದು ಸಾಬೀತು ಮಾಡಿದ್ದಾರೆ.

ಈ ಯಂತ್ರದಲ್ಲಿ ಗೋಡಂಬಿ, ಮೆಣಸಿನಕಾಯಿ, ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಸೇರಿದಂತೆ ಎಲ್ಲ ಬಗೆಯ ಆಹಾರ ಪದಾರ್ಥ ಹಾಗೂ ಬೇಳೆ-ಕಾಳುಗಳನ್ನು ಪ್ಯಾಕ್ ಮಾಡಿ ದೀರ್ಘ ಕಾಲದವರೆಗೆ ದಾಸ್ತಾನು ಮಾಡಬಹುದು. ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದ ಸಂದರ್ಭದಲ್ಲಿ ಈ ರೀತಿ ಪ್ಯಾಕ್ ಮಾಡಿ ಶೇಖರಿಸಿಡಬಹುದು. ಆದರೆ ಸದ್ಯ ಕೃಷಿ ವಿಶ್ವವಿದ್ಯಾಲಯದಲ್ಲಿನ ಯಂತ್ರದಲ್ಲಿ 2ರಿಂದ 8 ಕೆಜಿ ಮಾತ್ರ ಪ್ಯಾಕ್ ಮಾಡಲು ಅವಕಾಶವಿದೆ.

ಯಂತ್ರದ ಕೆಲಸ?: ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಬೆಲ್ಜಿಯಂನಿಂದ ತಂದಿರುವ ಯಂತ್ರ ಇದು. ಹೆಚ್ಚಿನ ಸಾಂದ್ರತೆಯ ಪಾಲಿಥೀನ್ ಚೀಲದಲ್ಲಿ ಆಹಾರ ಪದಾರ್ಥ ಹಾಕಿ ಇಟ್ಟಾಗ ಆ ಚೀಲದಲ್ಲಿನ ಗಾಳಿಯನ್ನು ಹೊರ ತೆಗೆದು ಪ್ಯಾಕ್ ಮಾಡುತ್ತದೆ. ಈ ಪ್ರಕ್ರಿಯೆ 5 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ. ಹೀಗೆ ಇಟ್ಟಾಗ ಆಹಾರ ಪದಾರ್ಥಗಳನ್ನು ಬಹುದಿನಗಳ ಕಾಲ ದಾಸ್ತಾನು ಮಾಡಲು ಅನುಕೂಲವಾಗುತ್ತದೆ.

ಯಂತ್ರ ಸ್ಥಗಿತವಾಗಿದ್ದೇಕೆ?: ಆಹಾರ ಪದಾರ್ಥ ಪ್ಯಾಕ್ ಮಾಡಲು ಅಗತ್ಯವಿರುವ ಎಚ್​ಡಿಪಿಇ (ಹೈ ಡೆನ್ಸಿಟಿ ಪಾಲಿ ಎಥಿಲೈನ್) 350180150 ಅಳತೆಯ 3 ಡೈಮೆನ್ಶನ್ ಪ್ಲಾಸ್ಟಿಕ್ ಚೀಲವನ್ನು ಬೆಲ್ಜಿಯಂನಿಂದಲೇ ತರಿಸಲಾಗುತ್ತಿತ್ತು. ಕ್ರಮೇಣ ಅಲ್ಲಿಂದ ಪ್ಲಾಸ್ಟಿಕ್ ಚೀಲ ತರಿಸುವುದು ಕಠಿಣವಾಗಿದ್ದರಿಂದ ಯಂತ್ರ ಮೂಲೆ ಸೇರುವಂತಾಯಿತು. ಈ ಯಂತ್ರ ಈವರೆಗೂ ಕೇವಲ ಸಂಶೋಧನಾ ವಿದ್ಯಾರ್ಥಿಗಳ ಚಟುವಟಿಕೆಗೆ ಮಾತ್ರ ಬಳಕೆಯಾಗಿದೆ. ಇದೀಗ ಸರ್ಕಾರವೇ ಅನುದಾನ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ರೈತರ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅನುಕೂಲ ವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಮುಂಗಡಪತ್ರದಲ್ಲಿ ಅನುದಾನ ಘೊಷಣೆ ಮಾಡಲಾಗಿದೆ. ಆದರೆ ಹೆಚ್ಚಿನ ಸಾಮರ್ಥ್ಯದ ನೂತನ ಯಂತ್ರ ಖರೀದಿ, ಪ್ರತ್ಯೇಕ ಘಟಕ ಹೀಗೆ ಇನ್ನೂ ಹಲವು ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ಸರ್ಕಾರದಿಂದ ಬರಬೇಕಿದೆ ಎನ್ನುತ್ತಾರೆ ಕೃಷಿ ವಿ.ವಿ. ಕುಲಪತಿ ವಿ.ಐ. ಬೆಣಗಿ.

ಅನುದಾನ ಸಿಕ್ಕಿದ್ದು ಹೇಗೆ?

ವಿಶೇಷ ಯಂತ್ರವೊಂದು ಧಾರವಾಡ ಕೃಷಿ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಬಹುತೇಕ ಸ್ಥಳೀಯ ನಾಯಕರಿಗೇ ಗೊತ್ತಿಲ್ಲ. ಆದಾಗ್ಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್​ನಲ್ಲಿ ಇದಕ್ಕೆ 3 ಕೊಟಿ ರೂ. ಅನುದಾನ ನೀಡಲು ಸಾಧ್ಯವಾಗಿದ್ದು ಹೇಗೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈ ಹಿಂದೆ ಬಂಡೆಪ್ಪ ಖಾಶೆಂಪುರ ಅವರು ಕೃಷಿ ಸಚಿವರಿದ್ದಾಗ ಯಂತ್ರ ವೀಕ್ಷಣೆಗೆ ಬಂದಿದ್ದರು. ಹಾಗಾಗಿ ಅವರೇ ಈ ಅನುದಾನ ನೀಡಿಕೆಗೆ ಕಾರಣ ಇರಬಹುದು ಎಂದು ಭಾವಿಸಲಾಗಿದೆ.

ಬೆಲ್ಜಿಯಂ ಪ್ಲಾಸ್ಟಿಕ್​ಗೆ ಬೇಡಿಕೆ

ನಿರ್ವಾತ ಯಂತ್ರದಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಬೆಲ್ಜಿಯಂ ಪ್ಲಾಸ್ಟಿಕ್ ಮುಖ್ಯವಾಗಿದೆ. ಆದರೆ ಆ ಪ್ಲಾಸ್ಟಿಕ್ ಖರೀದಿಗೆ ಹಣ ಬೇಕು. ಆಮದು ಪ್ರಕ್ರಿಯೆ ಕೂಡ ಕಷ್ಟಕರ. ಹಾಗಾಗಿ ವಿಶ್ವವಿದ್ಯಾಲಯ ಸುಮ್ಮನಾಗಿತ್ತು. ಇದೀಗ ಅನುದಾನ ಸಿಕ್ಕಿರುವುದರಿಂದ ಮತ್ತೆ ಬೆಲ್ಜಿಯಂ ಪ್ಲಾಸ್ಟಿಕ್​ಗೆ ಬೇಡಿಕೆ ಬಂದಂತಾಗಿದೆ.

ಆಧುನಿಕ ಹಗೇವು

ನೆಲದಾಳದಲ್ಲಿ ‘ಹಗೇವು’ ಮಾಡಿ ಆಹಾರ ಧಾನ್ಯಗಳನ್ನು ಹಲವು ವರ್ಷಗಳ ಕಾಲ ಕೆಡದಂತೆ ಇಟ್ಟುಕೊಳ್ಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ಹಿಂದೆ ಸಾಮಾನ್ಯವಾಗಿತ್ತು. ಸ್ಥಳದ ಕೊರತೆಯಿಂದಾಗಿ ಇತ್ತೀಚೆಗೆ ಈ ಕ್ರಮ ಮರೆಯಾಗುತ್ತಿದೆ. ಕೃಷಿ ವಿವಿಯಲ್ಲಿಯ ನಿರ್ವಾತ ಯಂತ್ರ ಒಂದು ರೀತಿಯಲ್ಲಿ ಆಧುನಿಕ ಹಗೇವು ಎನ್ನಬಹುದಾಗಿದೆ.

Leave a Reply

Your email address will not be published. Required fields are marked *

Back To Top