Friday, 21st September 2018  

Vijayavani

Breaking News

ದುಡಿಯದ ದುಡ್ಡು

Monday, 09.07.2018, 3:05 AM       No Comments

ಸುಸ್ತಿ ಸಾಲಗಳಿಂದಾಗಿ ಬ್ಯಾಂಕುಗಳು ವರ್ಷದಿಂದ ವರ್ಷಕ್ಕೆ ನಷ್ಟ ತೋರುತ್ತ ಸಾಗಿದರೆ ಬ್ಯಾಂಕುಗಳ ಮೇಲೆ ಜನರ ನಂಬಿಕೆ ಮತ್ತು ವಿಶ್ವಾಸ ಕಳೆದು ಹೋಗುತ್ತದೆ. ಹಾಗಾಗದಂತೆ ತಡೆಯುವ ಗುರುತರ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಇದೇ ವೇಳೆ, ಇಂಥ ಸಾಲಗಳ ಮರುಪಾವತಿಯನ್ನು ಸಾಧ್ಯವಾಗಿಸಲು ಬ್ಯಾಂಕುಗಳು ಕೂಡ ಇನ್ನಷ್ಟು ತೀವ್ರ ಪ್ರಯತ್ನ ಮಾಡಬೇಕಾದ ಕಾಲ ಬಂದಿದೆ.

| ಶಾ. ರಂಗನಾಥ್

ದೇಶದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಇತ್ತೀಚೆಗೆ ಅನುತ್ಪಾದಕ ಸಾಲಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗುತ್ತಿವೆ.

ಅನುತ್ಪಾದಕ ಅರ್ಥಾತ್ ಸುಸ್ತಿ ಸಾಲಗಳಿಗೆ ಬ್ಯಾಂಕುಗಳು ತಮ್ಮ ಲಾಭ, ಬಂಡವಾಳ ಅಥವಾ ಸಾಮಾನ್ಯ ಮೀಸಲು ನಿಧಿಯಿಂದ ಹಣ ಇಡಬೇಕಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ವರ್ಷದಿಂದ ವರ್ಷಕ್ಕೆ ತಮ್ಮ ಲಾಭ ಮತ್ತು ಬಂಡವಾಳ ಕಳೆದುಕೊಳ್ಳುತ್ತ ಹೋಗುತ್ತವೆ. ಬ್ಯಾಂಕುಗಳು ತಮ್ಮ ಅನುತ್ಪಾದಕ ಆಸ್ತಿಗಳ ವಸೂಲಾತಿಗೆ ಎಲ್ಲ ಪ್ರಯತ್ನ ಮಾಡುತ್ತ ಅದರಲ್ಲಿ ಸಾಕಷ್ಟು ಯಶಸ್ಸನ್ನು ಸಹ ಗಳಿಸುತ್ತಿವೆ. ಒಂದು ಕಡೆ ಹಳೇ ಸುಸ್ತಿ ಸಾಲಗಳ ವಸೂಲಾತಿ ಆಗುತ್ತಿದ್ದರೂ ಮತ್ತೊಂದು ಕಡೆಯಿಂದ ಹೊಸ ಸಾಲಗಳು ಈ ಅನುತ್ಪಾದಕ ಪಟ್ಟಿಗೆ ಸೇರುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಸಾಲ ಕೊಡುವುದು ಮತ್ತು ಠೇವಣಿ ಸ್ವೀಕರಿಸುವುದು ಬ್ಯಾಂಕುಗಳ ಮೂಲ ವ್ಯವಹಾರ. ಅನುತ್ಪಾದಕ ಸಾಲಗಳು ಹೆಚ್ಚುತ್ತಿವೆ ಎಂದು ಹೊಸ ಸಾಲಗಳನ್ನು ಕೊಡದೆ ಇರುವುದು ಅಸಾಧ್ಯ. ಸರ್ಕಾರಗಳ ವಿವಿಧ ಯೋಜನೆಗಳಿಗೆ ಸಾಲ ಕೊಡುವ ಜವಾಬ್ದಾರಿ ರಾಷ್ಟ್ರೀಕೃತ ಬ್ಯಾಂಕುಗಳ ಹೊಣೆ. ಈ ರೀತಿ, ಸರ್ಕಾರಿ ಸಾಲದ ಯೋಜನೆಗಳಿಗೆ ಹೆಚ್ಚಿನಂಶ ಯಾವುದೇ ಆಧಾರ ಇರುವುದಿಲ್ಲ. ಹಾಗಾಗಿ ಅಂಥ ಸಾಲಗಳ ವಸೂಲಾತಿ ಸಹ ತೃಪ್ತಿಕರವಾಗಿರುವುದಿಲ್ಲ.

ಉದ್ಯೋಗ ಸೃಷ್ಟಿ ಮತ್ತು ದೇಶದ ಸಂಪತ್ತು ವರ್ಧನೆಗಾಗಿ ದೊಡ್ಡ ದೊಡ್ಡ ಯೋಜನೆಗಳಿಗೆ ಬ್ಯಾಂಕುಗಳು ಸಾವಿರಾರು ಕೋಟಿ ರೂ. ಸಾಲ ಕೊಡಬೇಕಾಗುತ್ತದೆ. ಈ ರೀತಿಯ ಸಾಲಗಳು ಅನುತ್ಪಾದಕ ಸಾಲಗಳಾದಾಗ ಬ್ಯಾಂಕುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಬ್ಯಾಂಕುಗಳ ಲಾಭ ಮತ್ತು ಬಂಡವಾಳಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾಲಗಳನ್ನು ಕೊಡದೆ ಉದ್ಯೋಗ ಸೃಷ್ಟಿ ಮತ್ತು ದೇಶದ ಸಂಪತ್ತಿನ ವೃದ್ಧಿ ಅಸಾಧ್ಯ. ಇದರ ಜತೆಗೆ ಅನುತ್ಪಾದಕ ಸಾಲಗಳು ಹೆಚ್ಚಾಗುವುದು ಕೂಡ ಸಹಜ. ಈ ಎರಡೂ ವಿಷಯಗಳಲ್ಲಿ ಸಮತೋಲನ ಸಾಧಿಸುವುದು ಬ್ಯಾಂಕುಗಳಿಗೆ ದೊಡ್ಡ ಸವಾಲೇ ಆಗಿದೆ.

ಸಾಕಷ್ಟು ಕ್ರಮಗಳು

ಇಷ್ಟೆಲ್ಲ ಅಡೆತಡೆಗಳಿದ್ದರೂ ಬ್ಯಾಂಕುಗಳು ತಮ್ಮ ಸುಸ್ತಿ ಸಾಲಗಳ ವಸೂಲಾತಿಗೆ ಕ್ರಮ ಕೈಗೊಳ್ಳುತ್ತಿವೆ. ನಮ್ಮ ದೇಶದ ಸಾಲ ವಸೂಲಾತಿ ಕಾನೂನು ಕ್ರಮ ಬಹಳಷ್ಟು ಸಾಲಗಾರರಿಗೆ ಅನುಕೂಲಕರ ಆಗಿರುವುದರಿಂದ ಈ ಕಾನೂನು ಪ್ರಕ್ರಿಯೆಗೆ ಹೆಚ್ಚಿನ ಸಮಯ ಮತ್ತು ವೆಚ್ಚ ತಗಲುತ್ತದೆ. ಈಗ ಸುಸ್ತಿ ಇರುವ 10 ಲಕ್ಷ ಕೋಟಿ ರೂ. ಮೊತ್ತ ವಸೂಲಾಗುವುದೇ ಇಲ್ಲ ಎಂದಲ್ಲ. ಮನೆ ಸಾಲ ಬಾಕಿ ಇದ್ದರೆ ನೂರಕ್ಕೆ ನೂರು ವಸೂಲಾತಿ ಆಗಿಯೇ ಆಗುತ್ತದೆ. ನಮ್ಮ ದೇಶದಲ್ಲಿ ಬ್ಯಾಂಕುಗಳು ಕೊಡುವ ಮನೆ ಸಾಲ ಮತ್ತು ಈ ಮನೆಗಳ ಮಾರುಕಟ್ಟೆ ಬೆಲೆ ಅನೇಕ ಪಟ್ಟು ಹೆಚ್ಚು. ಈಗ ಇರುವ ಕಾನೂನಿನ ಪ್ರಕಾರ, ಬ್ಯಾಂಕುಗಳು ತಮ್ಮ ಸಾಲದ ವಸೂಲಾತಿಗೆ ಆಧಾರವಾಗಿರುವ ಮನೆಯನ್ನು ಮಾರಲು ಯಾವ ಕೋರ್ಟಿನ ಆದೇಶವೂ ಬೇಕಾಗಿಲ್ಲ. ಹಾಗಾಗಿ, ಮನೆ ಸಾಲ ಪಡೆದಿರುವ ವ್ಯಕ್ತಿ ತನ್ನ ಮನೆಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದೇ ರೀತಿ, ಆಸ್ತಿ ಅಡ ಇರುವ ಸಾಲಗಳು ಸಂಪೂರ್ಣವಾಗಿ ವಸೂಲಾಗುತ್ತವೆ. ಕೋಟ್ಯಂತರ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿ ಆಗಿರುವ ಸಾಲಗಾರರ ಆಸ್ತಿ ಇಲ್ಲಿಯೇ ಇರುವುದರಿಂದ ಅವರ ಸಾಲಗಳ ವಸೂಲಾತಿ ಸಹ ಆಗುವ ಸಾಧ್ಯತೆ ಇದ್ದೇ ಇದೆ. ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಮತ್ತು ಪರಿಶ್ರಮದ ಅವಶ್ಯಕತೆ ಇದೆ.

ಈಗ ಹೊಸದಾಗಿ ಬಂದಿರುವ ಪಾಪರ್ ಚೀಟಿ ಕಾನೂನು ಬಹಳ ಪ್ರಬಲ ಮತ್ತು ಸರಳವಾಗಿದೆ. ಈ ಕಾನೂನಿನಿಂದ ದೊಡ್ಡ ಉದ್ಯಮ ಮತ್ತು ವ್ಯವಹಾರಗಳ ಕೋಟಿಗಟ್ಟಲೆ ಸಾಲ ವಸೂಲಾತಿ ಸುಲಭವಾಗಿದೆ. ಇದರ ಪ್ರಕಾರ, ಒಂದು ಅನುತ್ಪಾದಕ ಸಂಸ್ಥೆಯ ಚೇರ್​ವುನ್ ಅಥವಾ ಡೈರೆಕ್ಟರ್ ಯಾವುದೇ ಬೇರೆ ಕಂಪನಿಯ ಬೋರ್ಡ್​ನಲ್ಲಿ ಇರುವಂತಿಲ್ಲ. ಒಂದು ವೇಳೆ ಇದ್ದರೆ ಅಂತಹ ಕಂಪನಿಗೆ ಬ್ಯಾಂಕುಗಳ ಯಾವುದೇ ಹಣಕಾಸು ಸೌಲಭ್ಯ ದೊರೆಯುವುದಿಲ್ಲ. ಈ ಕಾನೂನಿನಿಂದ ಸುಮಾರು 83 ಸಾವಿರ ಕೋಟಿ ರೂ. ಸುಸ್ತಿ ಸಾಲ ವಸೂಲಾಗಿದೆ. ಇದರಿಂದ ಖಚಿತವಾಗುವುದೇನೆಂದರೆ, ಸರ್ಕಾರ ಮನಸ್ಸು ಮಾಡಿದರೆ ಎಂಥ ದೊಡ್ಡ ವ್ಯಕ್ತಿಯಿಂದಲೂ ಸಾಲ ವಸೂಲು ಮಾಡಬಹುದು. ಅದಕ್ಕೆ ಇಚ್ಛಾಶಕ್ತಿ ಮತ್ತು ರಾಜಕೀಯ ಹೊರತಾದ ದೃಷ್ಟಿಕೋನ ಅಗತ್ಯ.

ನಿಯಂತ್ರಣ ಅಸಾಧ್ಯ: ಅನುತ್ಪಾದಕ ಸಾಲಗಳ ಸಂಪೂರ್ಣ ನಿಯಂತ್ರಣ ಅಸಾಧ್ಯ. ಆದರೆ, ಸಮಯಕ್ಕೆ ಸರಿಯಾದ ಕಾರ್ಯಕ್ಷಮತೆ ಮತ್ತು ವಿವೇಚನೆಯಿಂದ ಬ್ಯಾಂಕುಗಳು ಸುಸ್ತಿಸಾಲಗಳ ಮೊತ್ತವನ್ನು ಕಡಿತ ಮಾಡಿಕೊಳ್ಳಬಹುದು. ಈ ಸುಸ್ತಿ ಸಾಲಗಳಿಗೆ ಮೀಸಲು ನಿಧಿಯಿಂದಾಗಿ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಲಾಭದಾಯಕವಾಗಿದ್ದರೂ ತಮ್ಮ ಬ್ಯಾಲೆನ್ಸ್ ಷೀಟಿನಲ್ಲಿ ನಿವ್ವಳ ನಷ್ಟ ತೋರಿಸಬೇಕಾಗಿದೆ. ಇಂಥ ನಿಧಿಗಳು ಬ್ಯಾಂಕಿಗೆ ಒಂದು ಆಸ್ತಿಯ ಪ್ರತಿರೂಪ. ಈ ಅನುತ್ಪಾದಕ ಸಾಲಗಳ ಪ್ರಕ್ರಿಯೆಯಿಂದ ವಸೂಲಾಗುವ ಸಾಲಗಳು ಲಾಭದ ಇನ್ನೊಂದು ಮುಖ.

ಸ್ಟ್ಯಾಂಡರ್ಡ್ ಸಾಲಗಳು: ಈ ವಿಭಾಗದ ಸಾಲಗಳ ಪಾವತಿ ಪೂರ್ವ ನಿರ್ಧಾರಿತ ರೀತಿಯಲ್ಲಿ ಒಂದು ಕಂತು ಸಹ ಬಾಕಿ ಇಲ್ಲದೆ ವಸೂಲಾತಿಯಾಗಿರುತ್ತದೆ. ಆದರೂ ಈ ರೀತಿಯ ಸಾಲಗಳಿಗೆ ಪ್ರತಿಶತ 0.40 ಮೀಸಲು ಕಾದಿರಿಸಬೇಕಾಗುತ್ತದೆ.

ಸಬ್​ಸ್ಟ್ಯಾಂಡರ್ಡ್ ಸಾಲಗಳೆಂದರೆ, ಯಾವುದೇ ಸಾಲದ ಕಂತು ಮತ್ತು ಬಡ್ಡಿ 90 ದಿನಗಳಿಂದ 1 ವರ್ಷದವರೆಗೆ ಬಾಕಿ ಉಳಿಯುತ್ತದೆಯೋ ಆ ರೀತಿಯ ಸಾಲಗಳನ್ನು ಆಧಾರ ಇರುವ ಸಾಲಗಳಿಗೆ ಶೇ.15 ಮತ್ತು ಆಧಾರರಹಿತ ಸಾಲಗಳಿಗೆ ಶೇ.25 ಮೀಸಲು ಇಡಬೇಕಾಗುತ್ತದೆ. ಈ ಸಾಲಗಳು 1 ವರ್ಷಕ್ಕೆ ಮೀರಿ 3 ವರ್ಷದ ಕೊನೆಯವರೆಗೆ ಬಾಕಿ ಉಳಿದರೆ ಅಂತಹ ಸಾಲಗಳಿಗೆ ಆಧಾರ ಇರಲಿ ಇಲ್ಲದಿರಲಿ, ಶೇ.100 ಮೀಸಲು ಇಡಬೇಕಾಗುತ್ತದೆ. ಈ ರೀತಿ ಬಾಕಿ ಇರುವ ಸಾಲಗಳನ್ನು ನಷ್ಟ ಸಾಲಗಳು ಎಂದು ಪರಿಗಣಿಸಲಾಗುತ್ತದೆ. ಇವೇ ಅನುತ್ಪಾದಕ ಸಾಲಗಳು.

ಸುಸ್ತಿ ಸಾಲಗಳು ಹೆಚ್ಚಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ, ಈಗ ನಮ್ಮ ಕೇಂದ್ರ ಬ್ಯಾಂಕು ಬಾಸೆಲ್ ಪ್ರುಡೆನ್ಷಿಯಲ್ ನಿಯಮಗಳ ಪ್ರಕಾರ ಸಾಲಗಳ ವಿಭಜನೆ ಮಾಡುತ್ತಿದೆ. ಸ್ವಿಜರ್ಲೆಂಡ್ ದೇಶದ ಒಂದು ನಗರ ಬಾಸೆಲ್. ಇಲ್ಲಿ ಬ್ಯೂರೋ ಆಫ್ ಇಂಟೆಕ್ ನ್ಯಾಷನಲ್ ಸೆಟಲ್​ವೆುಂಟ್ (ಬಿಐಎಸ್) ಕೇಂದ್ರ ಕಚೇರಿ ಇದೆ. ಈ ಬಿಐಎಸ್​ಗೆ ಪ್ರಪಂಚದ ಹೆಚ್ಚಿನ ಕೇಂದ್ರ ಬ್ಯಾಂಕುಗಳು (ನಮ್ಮ ಆರ್​ಬಿಐ ಸೇರಿ) ಸದಸ್ಯರಾಗಿರುತ್ತವೆ. ಈ ಬಿಐಎಸ್ ಬ್ಯಾಂಕುಗಳ ಬಂಡವಾಳ, ಅನುತ್ಪಾದಕ ಸಾಲಗಳ ನೀತಿನಿಯಮ ಮುಂತಾದವುಗಳನ್ನು ಬ್ಯಾಂಕಿನ ಕೇಂದ್ರ ಕಚೇರಿಗೆ ತಿಳಿಸುತ್ತದೆ. ಹಾಗಾಗಿ, ನಮ್ಮ ದೇಶದ ಆರ್​ಬಿಐ ಆಧಾರಸಹಿತ ಮತ್ತು ಆಧಾರರಹಿತ ಮುಂತಾದ ನಿಯಮಗಳನ್ನು ರಚಿಸುತ್ತದೆ. ಆಗ ಬ್ಯಾಂಕುಗಳು ತಮ್ಮ ಸುಸ್ತಿ ಸಾಲಗಳಿಗೆ ಮೀಸಲು ಇಡುವಾಗ ಹೆಚ್ಚಿನ ಭಾರ ಬೀಳುತ್ತದೆ. ಈಗಾಗಲೇ ಬಾಸೆಲ್ 1 ಮತ್ತು ಬಾಸೆಲ್ 2 ನಿಯಮಗಳು ಜಾರಿಯಲ್ಲಿವೆ. 2019ರ ಮಾರ್ಚ್ ವೇಳೆಗೆ ಬಾಸೆಲ್ 3 ನಿಯಮ ಜಾರಿಯಾದರೆ, ನಗದು ಮತ್ತು ಚಿನ್ನ ಹೊರತಾಗಿ ಮಿಕ್ಕ ಎಲ್ಲ ಸಾಲಗಳನ್ನು ಆಧಾರರಹಿತ ಎಂದು ವಿಭಜಿಸಬೇಕಾಗುತ್ತದೆ. ಆಗ, ಮನೆಸಾಲ ಶೇ.100ರಷ್ಟು ಸುಸ್ತಿಯಾದಾಗ ಬ್ಯಾಂಕುಗಳು ಮೀಸಲು ಧನ ಇಡಬೇಕಾಗಿ ಬರುತ್ತದೆ. ಆಗ ಅನುತ್ಪಾದಕ ಸಾಲ ಇನ್ನಷ್ಟು ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ಸಹ ತನ್ನ ಸುಸ್ತಿ ಸಾಲಗಳ ನಿಯಮಗಳನ್ನು ವಸ್ತುಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಬೇಕಾಗುತ್ತದೆ.

ಕೇಂದ್ರದಿಂದ ಉತ್ತಮ ಕ್ರಮ

ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 2.11 ಲಕ್ಷ ಕೋಟಿ ರೂ. ಮರು ಬಂಡವಾಳ ಹೂಡಲು ನಿರ್ಧರಿಸಿದೆ ಎಂಬ ಹೇಳಿಕೆ ಕೇಂದ್ರದ ವಿತ್ತ ಸಚಿವರಿಂದ ಬಂದಿದೆ. ಈ ಕ್ರಮ ಅತ್ಯಂತ ಅನಿವಾರ್ಯ. ಇಲ್ಲವಾದರೆ, ಬ್ಯಾಂಕುಗಳು ತಮ್ಮ ವ್ಯವಹಾರ ನಡೆಸಲು ಮೂಲ ಬಂಡವಾಳವೇ ಇಲ್ಲದಂತಾಗುತ್ತದೆ. ಈ ಅನುತ್ಪಾದಕ ಸಾಲಗಳನ್ನು ವಿಭಾಗಿಸಿ, ಸೂಕ್ತ ನಿರ್ಧಾರಿತ ಮೊತ್ತವನ್ನು ಪ್ರತಿ ವರ್ಷ ತಮ್ಮ ಲಾಭದಲ್ಲಾಗಲಿ ಬಂಡವಾಳದಲ್ಲಾಗಲಿ ಮೀಸಲು ಇಡಬೇಕಾಗುತ್ತದೆ. ಆಗ ಕ್ರಮೇಣ ಬ್ಯಾಂಕುಗಳ ಬಂಡವಾಳ, ಲಾಭ ಮತ್ತು ಮೀಸಲು ನಿಧಿಗಳು ಸಹ ಕಡಿಮೆ ಆಗುತ್ತ ಬರುತ್ತವೆ. ಇದರಿಂದ ಬ್ಯಾಂಕುಗಳು ರೋಗಗ್ರಸ್ತವಾಗಿ ಸಾಮಾನ್ಯ ಜನರ ವಿಶ್ವಾಸವನ್ನೇ ಕಳೆದುಕೊಳ್ಳುತ್ತವೆ.

ಎಷ್ಟಿದೆ ಅನುತ್ಪಾದಕ ಸಾಲ?

2018ರ ಮಾರ್ಚ್ ಕೊನೆಯಲ್ಲಿ ಇಂಥ ಸಾಲದ ಮೊತ್ತ ಎಲ್ಲ ಬ್ಯಾಂಕುಗಳು ಸೇರಿ ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಮೀರಿದೆ. ಇದರಲ್ಲಿ ಜನವರಿಯಿಂದ ಮಾರ್ಚ್​ವರೆಗಿನ ತ್ರೖೆಮಾಸಿಕದಲ್ಲಿಯೇ 1.39 ಲಕ್ಷ ಕೋಟಿ ರೂ. ಹೆಚ್ಚುವರಿ ಆಗಿದೆ. ಅಂದರೆ, 2017ರ ಮಾರ್ಚ್ 31ಕ್ಕೆ ಹೋಲಿಸಿದಾಗ ಸುಮಾರು ಶೇ.16 ಹೆಚ್ಚಳ ಆಗಿರುವುದನ್ನು ಕಾಣಬಹುದು. ಇದರಲ್ಲಿ ಶೇ.90ರಷ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಪಾಲು ಎಂಬುದು ಇನ್ನೂ ಗಮನಾರ್ಹ. 2017ರ ಏಪ್ರಿಲ್ 1ರಿಂದ 2018ರ ಮಾರ್ಚ್ 31ರವರೆಗೆ ಅನುತ್ಪಾದಕ ಸಾಲಗಳು 3.3 ಲಕ್ಷ ಕೋಟಿ ರೂ. ಹೆಚ್ಚಾಗಿರುತ್ತದೆ.

Leave a Reply

Your email address will not be published. Required fields are marked *

Back To Top