Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

2008ರ ಹಣಕಾಸು ಬಿಕ್ಕಟ್ಟು, ದಶಕದ ನಂತರ….

Friday, 21.09.2018, 3:03 AM       No Comments

| ಡಿ. ಮುರಳೀಧರ

ಸದ್ಯದ ಆರ್ಥಿಕ ಪರಿಸ್ಥಿತಿ, ಬ್ಯಾಂಕಿಂಗ್ ಕ್ಷೇತ್ರದ ಅಡ್ಡಿ ಆತಂಕಗಳನ್ನು ಗಮನಿಸಿದರೆ ಹತ್ತು ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಆರಂಭವಾದ ಆರ್ಥಿಕ ಹಿಂಜರಿತದ ದಿನಗಳು ನೆನಪಾಗುತ್ತವೆ. ಇತಿಹಾಸ ಮರುಕಳಿಸಿದಂತೆ ಭಾಸವಾಗುತ್ತಿದೆ. ಹೀಗಾಗಿ ಆ ದಿನಗಳ ಅವಲೋಕನಕ್ಕೆ ಮತ್ತು ಅದರಿಂದ ಪಾಠ ಕಲಿಯಲು ಇದು ಸಕಾಲ.

ಜಾಗತಿಕ ಹಣಕಾಸು ಮಾರುಕಟ್ಟೆಯನ್ನು ಬಾಧಿಸಿದ ಬಿಕ್ಕಟ್ಟಿಗೆ ಈಗ ಹತ್ತು ವರ್ಷ. ಅಂದರೆ 2008ರಲ್ಲಿ ಇಂಥದೊಂದು ಇಕ್ಕಟ್ಟು-ಬಿಕ್ಕಟ್ಟು ಎದುರಾಗಿತ್ತು. ಹಣಕಾಸಿನ ವಿಚಾರಕ್ಕೆ ಬಂದಾಗ ಕೊನೆಗೇನಪ್ಪಾ ಅಂದರೆ ದಿವಾಳಿ ಘೋಷಿಸಿಕೊಂಡುಬಿಡುವುದು. ಜಗತ್ತಿನ ಅತಿದೊಡ್ಡ ಹೂಡಿಕೆ ಬ್ಯಾಂಕುಗಳ ಪೈಕಿ ಒಂದಾದ ನ್ಯೂಯಾರ್ಕ್ ಮೂಲದ ಲೆಹ್​ವುನ್ ಬದ್ರರ್ಸ್ ಆ ಬಿಕ್ಕಟ್ಟಿನ ಕೇಂದ್ರಬಿಂದು. 2008ರ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಈ ಬ್ಯಾಂಕ್ ತಾನು ದಿವಾಳಿ ಎಂದು ಘೋಷಿಸಿತು. ಲೆಹ್​ವುನ್ ಬ್ರದರ್ಸ್​ನ ಈ ಘೋಷಣೆಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಯಿತು. ಈಗ ಹತ್ತು ವರ್ಷದ ನಂತರ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಮತ್ತೆ ಅಂಥದ್ದೇ ದುಃಸ್ವಪ್ನದ ಬೆಳವಣಿಗೆಗಳು ನಡೆದಿವೆ. ಇಂತಹ ಮಹಾವಿಪತ್ತು ಮರುಕಳಿಸದಂತೆ ತಡೆಯಲು ಇತಿಹಾಸವನ್ನು ಅರಿಯುವುದು ಅವಶ್ಯ.

ಲೆಹ್​ವುನ್ ಬ್ರದರ್ಸ್ ಹೂಡಿಕೆ ಬ್ಯಾಂಕ್ ಆಗಿತ್ತಾದರೂ ಅದಕ್ಕೆ ಇತರೆ ಬ್ಯಾಂಕುಗಳಿಗಿರುವ ಬಂಡವಾಳ ಅಗತ್ಯದ ನಿಯಮಾವಳಿಗಳು ಲಾಗೂ ಆಗುತ್ತಿರಲಿಲ್ಲ. ರಿಯಲ್ ಎಸ್ಟೇಟ್ ಮತ್ತು ಗೃಹ ಸಾಲಗಳಿಗೆ ಅದು ಹೆಚ್ಚಿನ ಹಣವನ್ನು ಸಾಲವನ್ನಾಗಿ ನೀಡಿತ್ತು. ಇತರೆ ಹಲವು ಸಣ್ಣ ಬ್ಯಾಂಕುಗಳಲ್ಲಿದ್ದ ಗೃಹ ಸಾಲವನ್ನು ಅಲ್ಲಿ ಚುಕ್ತಾಗೊಳಿಸಿ, ಅಂಥ ಗ್ರಾಹಕರಿಗೆ ಹೊಸದಾಗಿ ಗೃಹ ಸಾಲವನ್ನು ಲೆಹ್​ವುನ್ ಬ್ರದರ್ಸ್ ಒದಗಿಸಿತು. ವಸತಿಗಳ ಬೆಲೆ ಕೂಡ ಗಗನಮುಖಿಯಾಗಿ ಅಸಹಜ ರೀತಿಯಲ್ಲಿ ಸ್ಪೋಟಗೊಳ್ಳುವಷ್ಟು ವೇಗದಲ್ಲಿ ಮುನ್ನುಗ್ಗುತ್ತಿತ್ತು. ಹೊಸ ಮನೆ ಮಾಲೀಕರು ಕೂಡ ಕಡಿಮೆ ಮುಂಗಡ ಪಾವತಿ ಮಾಡಿದರೆ ಸಾಕಾಗಿತ್ತು. ಇನ್ನೊಂದೆಡೆ, ಬಡ್ಡಿ ಪಾವತಿಯನ್ನು ಮುಂದೂಡುವ ಮೂಲಕ ಸಾಲಗಾರರಿಗೂ ಅನುಕೂಲ ಮಾಡಿಕೊಡಲಾಗಿತ್ತು. ಈ ಭ್ರಾಮಕ ವರ್ತಲದಲ್ಲಿ ಸಿಲುಕಿದ ಪ್ರತಿಯೊಬ್ಬರೂ ಮನೆ ಸಾಲ ಪಾವತಿಸುವ ದಿನದ ತನಕವೂ ಖುಷಿಯಲ್ಲೇ ಇದ್ದರು. ಸಾಲ ಮರುಪಾವತಿಯಾಗದೆ, ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಸಲಿ ಬಿಕ್ಕಟ್ಟು ಶುರುವಾಯಿತು. ಬ್ಯಾಂಕುಗಳು ಮನೆಗಳನ್ನು ವಶಕ್ಕೆ ಪಡೆದುಕೊಂಡವಾದರೂ, ಅವುಗಳನ್ನು ನೈಜ ಬೆಲೆಗೆ ಮಾರಾಟ ಮಾಡುವುದು ಬ್ಯಾಂಕುಗಳಿಂದ ಸಾಧ್ಯವಾಗದೇ ಹೋಯಿತು. ಪರಿಣಾಮವಾಗಿ ರಿಯಲ್​ಎಸ್ಟೇಟ್ ದರ ಕುಸಿಯಿತು ಮತ್ತು ಸುಸ್ತಿಸಾಲದ ಪ್ರಮಾಣ ಇನ್ನಷ್ಟು ಹೆಚ್ಚಾಯಿತು. ಈ ಬೆಳವಣಿಗೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಬಲ್ಲ ಅತ್ಯಂತ ಕೆಟ್ಟ ಹಣಕಾಸು ಬಿಕ್ಕಟ್ಟಿನ ಆರಂಭವಾಗಿತ್ತು. ಲೆಹ್​ವುನ್ ಬ್ರದರ್ಸ್​ನ ಬಾಧ್ಯತೆ 600 ಶತಕೋಟಿ ಡಾಲರ್(-ಠಿ;43.17 ಲಕ್ಷ ಕೋಟಿ) ಆಗಿದ್ದು, ಮೂಲ ಬಂಡವಾಳ ಕೇವಲ 26 ಶತಕೋಟಿ ಡಾಲರ್(-ಠಿ;1.87 ಲಕ್ಷ ಕೋಟಿ) ಇತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ದಿವಾಳಿ ಘೋಷಿಸಲು ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ ಹಣಕಾಸು ಮಾರುಕಟ್ಟೆ ಪರಿಸ್ಥಿತಿ ನರಕಸದೃಶವಾಗಿಬಿಟ್ಟಿತು. ಅಂಟುಜಾಢ್ಯದಂತೆ ಇದು ಜಗತ್ತಿನ ಇತರೆ ಹಣಕಾಸು ಮಾರುಕಟ್ಟೆಗಳಿಗೂ ಪಸರಿಸಿತು.

ಅಮೆರಿಕದ ವಸತಿ ಕ್ಷೇತ್ರ ಇದಕ್ಕೆ ಸುಲಭ ತುತ್ತಾಯಿತಲ್ಲದೆ ಹಲವು ರಾಜ್ಯಗಳಲ್ಲಿ ವಸತಿ ದರ ಶೇಕಡ 50ಕ್ಕಿಂತಲೂ ಹೆಚ್ಚು ಕುಸಿತ ಕಂಡಿತು. ಈ ಕುಸಿತದ ಗಂಭೀರತೆ ಎಷ್ಟಿತ್ತೆಂದರೆ ಒಂದು ಅಂದಾಜು ಪ್ರಕಾರ ಅಮೆರಿಕ ಒಂದರಲ್ಲೇ 2 ಲಕ್ಷ ಕೋಟಿ ಡಾಲರ್ (ಸೆ.20ರ ದರದಂತೆ -ಠಿ; 144 ಲಕ್ಷ ಕೋಟಿ) ನಷ್ಟವಾಯಿತು. ಇದರ ಸಹಜ ಪರಿಣಾಮ ಎಂಬಂತೆ ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಇತರೆ ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸಿದವು. ಬ್ಯಾಂಕರ್​ಗಳ ಹೂಡಿಕೆ ಮೇಲೆ ಸರ್ಕಾರ ಯಾವುದೇ ನಿಯಮ ನಿಬಂಧನೆ ಹೇರದೇ ಇದ್ದುದೇ ಈ ಭಾರಿ ಕುಸಿತಕ್ಕೆ ಪ್ರಮುಖ ಕಾರಣವಾಯಿತು. ಅಲ್ಲದೆ, ಹೆಚ್ಚು ಕಮಿಷನ್ ಆಸೆ ಮತ್ತು ಹೆಚ್ಚು ಶುಲ್ಕ ವಸೂಲಿ ಮಾಡುವುದಕ್ಕಾಗಿ ಬ್ಯಾಂಕರ್​ಗಳು ಅಸಹಜ ರೀತಿಯಲ್ಲಿ ಸಾಲ ವಿತರಣೆಗೆ ಆದ್ಯತೆ ನೀಡಿದ್ದನ್ನೂ ಅಲ್ಲಗಳೆಯುವಂತಿಲ್ಲ. ಇದಾಗಿ, ಪ್ರತಿಷ್ಠಿತ ರೇಟಿಂಗ್ ಏಜೆನ್ಸಿಗಳು ಕೂಡ ಸಂಕೀರ್ಣ ಹಣಕಾಸು ಉತ್ಪನ್ನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಗರಿಷ್ಠ ರೇಟಿಂಗ್ ನೀಡುವ ಮೂಲಕ ಸಾಲದಾತರ ಜತೆಗೆ ಒಳಸಂಚಿನಲ್ಲಿ ಭಾಗಿಯಾಗಿದ್ದವು ಎಂಬುದು ಬಹಿರಂಗವಾಗಿತ್ತು. ವಸತಿ ಕ್ಷೇತ್ರದಲ್ಲಿ ಕೃತಕ ಉಬ್ಬರ ಸೃಷ್ಟಿಸಲು ಹಣಕಾಸು ಲೆಕ್ಕಾಚಾರದ ಮಾನದಂಡಗಳಲ್ಲೂ ರಾಜಿಮಾಡಿಕೊಳ್ಳಲಾಗಿತ್ತು. ಇದು ಕಾರ್ಪೆರೇಟ್ ಆಡಳಿತದಲ್ಲಿದ್ದ ಮಾನದಂಡಗಳು ಎಷ್ಟು ಲೋಪದೋಷಗಳಿಂದ ಕೂಡಿದ್ದವು ಎಂಬುದಕ್ಕೆ ನಿದರ್ಶನ. ಇಂತಹ ಸನ್ನಿವೇಶದಲ್ಲಿ ಬಡ್ಡಿದರ ಆಧಾರಿತವಾಗಿ ಉತ್ತುಂಗಕ್ಕೇರಿದ್ದ ವಸತಿ ಮಾರುಕಟ್ಟೆ ಕ್ಷೇತ್ರದ ಸಲುವಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕೂಡ ಕಡಿಮೆ ಬಡ್ಡಿದರವನ್ನು ನಿರ್ವಹಿಸಿತ್ತು. ಪರಿಣಾಮಕಾರಿ ಬೇಡಿಕೆ ಎಷ್ಟಿದೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ಫೆಡ್ ಬ್ಯಾಂಕ್ ಹೋಗಿರಲಿಲ್ಲ.

ಅಮೆರಿಕದ ಜಿಡಿಪಿಯಲ್ಲಿ ಹಣಕಾಸು ಕ್ಷೇತ್ರದ ಪಾಲು ಶೇಕಡ 2. ನೂರಾರು ವರ್ಷಗಳ ಇತಿಹಾಸವನ್ನು ಪರಿಗಣಿಸಿದರೆ ಅಮೆರಿಕದ ಜಿಡಿಪಿ ಬೆಳವಣಿಗೆ 20ನೇ ಶತಮಾನದ ಆರಂಭದಲ್ಲಷ್ಟೇ ಶೇಕಡ 9ಕ್ಕೆ ತಲುಪಿದೆ. ಈ ಅಂಕಿಸಂಖ್ಯೆಗಳನ್ನು ಗಮನಿಸಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾಲಾನುಕ್ರಮದಲ್ಲಿ ಪಾರದರ್ಶಕತೆಯನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕಾಗಿತ್ತು.

ವಸತಿ ಕ್ಷೇತ್ರದ ಉಬ್ಬರದ ಅಲೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಂತೆ ಕಂಡರೂ ಅಲೆ ಇಳಿದಾಗ, ವಾಸ್ತವ ಕಂಡು ಕಂಗಾಲಾಗುವಂತಾಯಿತು. ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಬೇಕಾಗಿ ಬಂತು ಮಾತ್ರವಲ್ಲದೇ ಶತಕೋಟ್ಯಂತರ ಡಾಲರ್​ಗಳನ್ನು ವ್ಯಯಿಸಬೇಕಾಯಿತು. ಕರದಾತರ ಹಣ ಹಲವು ಬ್ಯಾಂಕ್​ಗಳ ನಷ್ಟ ಭರ್ತಿಗೆ ಖರ್ಚಾಯಿತು. ಇತ್ತ, ಭಾರತ ಸರ್ಕಾರವೂ ಅಬಕಾರಿ ಸುಂಕ ಇಳಿಸಿದ್ದಲ್ಲದೆ, ಮಾರುಕಟ್ಟೆಯಲ್ಲಿ ಬಂಡವಾಳ ಹೆಚ್ಚಿಸಲು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿತು. ಐರೋಪ್ಯ ದೇಶಗಳು ಹೆಚ್ಚು ನಿಯಮ ನಿಬಂಧನೆಗಳನ್ನು ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದವು. ಬಹುತೇಕ ಜನಸಾಮಾನ್ಯರಿಗೆ ಅರ್ಥವಾಗದ ವಿಚಿತ್ರ ಹಣಕಾಸು ಉತ್ಪನ್ನಗಳ ಕಾರಣದಿಂದಾಗಿ ಅಮೆರಿಕದ ಅರ್ಥ ವ್ಯವಸ್ಥೆ ಕುಸಿಯಿತು. ಈ ಹಣಕಾಸು ಬಿಕ್ಕಟ್ಟಿನ ಪರಿಣಾಮ ಜಗತ್ತಿನ ಬಹುತೇಕ ದೇಶಗಳ ಮೇಲಾಗಿದ್ದು, ಪ್ರತಿಯೊಂದು ರಾಷ್ಟ್ರವೂ ತಮ್ಮ ಆಂತರಿಕ ವ್ಯವಸ್ಥೆ ಮೇಲೆ ನಿಯಂತ್ರಣ ಮತ್ತು ನಿಬಂಧನೆಗಳನ್ನು ಹೇರಿಕೊಂಡಿದ್ದವು. ಭಾರತವೂ ಇದಕ್ಕೆ ಹೊರತಾಗಿರಲಿಲ್ಲ. ಅಚ್ಚರಿ ಎಂದರೆ ಭಾರತದಲ್ಲಿ ಎನ್​ಪಿಎ(ಅನುತ್ಪಾದಕ ಆಸ್ತಿ) ಪ್ರಮಾಣ ಏರಿಕೆಯಲ್ಲಿದ್ದರೂ ಬ್ಯಾಂಕುಗಳು ವಿವಿಧ ಕೈಗಾರಿಕೆಗಳಿಗೆ ಸಾಲ ವಿತರಿಸುವುದನ್ನು ತಾರತಮ್ಯವಿಲ್ಲದಂತೆ ಮುಂದುವರಿಸಿದವು. 2008ರ ಹಣಕಾಸು ಬಿಕ್ಕಟ್ಟಿನ ನಂತರದ ಕೆಲವು ವರ್ಷಗಳ ಅವಧಿಯಲ್ಲಿ ಈಗ ಎನ್​ಪಿಎ ಆಗಿರುವಂತಹ ಬಹುತೇಕ ಸಾಲಗಳು ವಿತರಿಸಲ್ಪಟ್ಟದ್ದು. ಸದೃಢ ಬ್ಯಾಂಕಿಂಗ್ ವ್ಯವಸ್ಥೆ ಯಾವುದೇ ದೇಶದ ಬೆನ್ನೆಲುಬು ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪ್ರಾದೇಶಿಕ ಬ್ಯಾಂಕುಗಳ ನೇರ ಪಾಲಿರುತ್ತದೆ. 2008ರ ಬಿಕ್ಕಟ್ಟಿನ ಪರಿಣಾಮ ಏನಾಯಿತು ಎಂದರೆ, ಸುಲಭವಾಗಿ ಭಾರಿ ಪ್ರಮಾಣದಲ್ಲಿ ಸಾಲ ನೀಡುವ ವ್ಯವಸ್ಥೆಗೆ ಕಡಿವಾಣ ಹಾಕಲು ಬ್ಯಾಂಕುಗಳ ಬಂಡವಾಳ ಬಳಕೆ ಮೇಲೆ ಅನೇಕ ಕಠಿಣ ನಿಯಮ, ನಿಬಂಧನೆಗಳನ್ನು ಹೇರಲಾಯಿತು. ಜಾಗತಿಕ ಬ್ಯಾಂಕಿಂಗ್ ಗುಣಮಟ್ಟಕ್ಕೆ ಅನ್ವಯವಾಗುವಂತಹ ಬಿಎಎಸ್​ಇಎಲ್ ನಿಯಂತ್ರಣ ಚೌಕಟ್ಟನ್ನು ಜಾರಿಗೊಳಿಸಲಾಯಿತು. ಜಗತ್ತಿನ ಬಹುತೇಕ ಎಲ್ಲ ಬ್ಯಾಂಕುಗಳೂ ಈ ಮಾನದಂಡ ಅನುಸರಿಸಬೇಕಾಯಿತು.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿನ ವಾಸ್ತವಗಳನ್ನು ಅರಿತುಕೊಂಡು ಭಾರತದ ಬ್ಯಾಂಕಿಂಗ್ ನಿಯಂತ್ರಕರು ಈಗಷ್ಟೇ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಎನ್​ಪಿಎ ಪತ್ತೆಗೆ ಕಠಿಣ ಕ್ರಮ ಮತ್ತು ಸಾಲ ವಿತರಣೆ ನಿಯಮ ಬಿಗಿಗೊಳಿಸುವ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದೆ. ಇದು ಬ್ಯಾಂಕರ್​ಗಳ ಪಾಲಿಗೆ ಕಿರಿಕಿರಿ ಎಂದೆನಿಸಿದರೂ ಅರ್ಥ ವ್ಯವಸ್ಥೆ ದೃಷ್ಟಿಯಿಂದ ಜಾರಿಗೊಂಡಿರುವಂಥದ್ದು. ಹೊಸ ದಿವಾಳಿ ನೀತಿಯನ್ನು ಸರ್ಕಾರ ಜಾರಿಗೊಳಿಸಿರುವುದು ಇನ್ನೊಂದು ಮಹತ್ವದ ಸುಧಾರಣಾ ಕ್ರಮ. ಸರ್ಕಾರಿ ಸ್ವಾಮ್ಯದ ಸಣ್ಣ ಬ್ಯಾಂಕುಗಳ ವ್ಯವಸ್ಥಿತ ವಿಲೀನ ಪ್ರಕ್ರಿಯೆ ಕೂಡ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸ್ವಾಗತಾರ್ಹ ಬದಲಾವಣೆಯ ನಡೆ. ಆದಾಗ್ಯೂ, ಬ್ಯಾಂಕುಗಳ ಆರೋಗ್ಯ ಸ್ಥಿತಿ ಸುಧಾರಿಸುವಲ್ಲಿ ಇನ್ನಷ್ಟು ಕ್ರಮಗಳನ್ನು ನಿಯಂತ್ರಕರು ಮತ್ತು ಸರ್ಕಾರ ತೆಗೆದುಕೊಳ್ಳಬೇಕಾಗಿದೆ. ಇದಕ್ಕೆ 2008ರ ಆರ್ಥಿಕ ಹಿಂಜರಿತ ಪಾಠವಾಗಬೇಕು. ಇತಿಹಾಸ ಮರುಕಳಿಸುತ್ತದೆ ಎಂಬುದನ್ನು ಯಾರೂ ಮರೆಯಬಾರದು.

Leave a Reply

Your email address will not be published. Required fields are marked *

Back To Top