Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಮತದಾನಕ್ಕೆ ಮುನ್ನ #ಜಸ್ಟ್ ಆಸ್ಕಿಂಗ್!

Monday, 07.05.2018, 3:05 AM       No Comments

ಪ್ರಜಾಪ್ರಭುತ್ವದ ದೊಡ್ಡ ದೋಷ ಜನಸಾಮಾನ್ಯರ ಮರೆವು. ಮಾಡಿದ ಒಳ್ಳೆಯ ಕೆಲಸವನ್ನು ಜನ ಹೇಗೆ ಮರೆತುಬಿಡುವರೋ ಹಾಗೆಯೇ ಸರ್ಕಾರವೊಂದು ಮಾಡಿದ ಕೆಟ್ಟ ಕೆಲಸವನ್ನೂ ಜನ ಮರೆತುಬಿಡುತ್ತಾರೆ. ಮತದಾನಕ್ಕೆ ಮುನ್ನ ಹಿಂದಿನದ್ದೆಲ್ಲವನ್ನೂ ಒಮ್ಮೆ ನೆನಪಿಸಿಕೊಂಡು ಮತಗಟ್ಟೆಗೆ ಹೋಗುವುದೊಳಿತು. ನಾವು ಮರೆತುಬಿಡುತ್ತೇವೆ ಎನ್ನುವ ಭರವಸೆಯ ಮೇಲೆಯೇ ಎಲ್ಲ ಸರ್ಕಾರಗಳೂ ಚುನಾವಣೆಗೆ 6 ತಿಂಗಳ ಮುನ್ನ ರಸ್ತೆಯ ಕೆಲಸ, ಚರಂಡಿ ಕಾಮಗಾರಿ, ಬಜೆಟ್​ನಲ್ಲಿ ಜನಪ್ರಿಯವಾಗಬಲ್ಲಂಥ ಸ್ಕೀಮುಗಳ ಘೊಷಣೆ ಮಾಡಿಬಿಡುತ್ತವೆ. ಅದರ ಆಧಾರದ ಮೇಲೆಯೇ ಚುನಾವಣೆಗೆ ಹೋಗುವ ಧೈರ್ಯ ಅವರದ್ದು. ಆದರೆ ಪ್ರಜ್ಞಾವಂತ ಮತದಾರ ವೋಟು ಮಾಡುವುದು ಆರು ತಿಂಗಳ ಸರ್ಕಾರಕ್ಕಲ್ಲ, 5 ವರ್ಷಗಳ ಆಡಳಿತದ ವೈಖರಿಗೆ ಎನ್ನುವುದನ್ನು ಮರೆಯದಿರೋಣ. ಹೀಗಾಗಿಯೇ 5 ವರ್ಷಗಳ ಅವಧಿಯ ಕರ್ನಾಟಕ ಸರ್ಕಾರದಚ ಆಡಳಿತವನ್ನು ಒಮ್ಮೆ ನೆನಪಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಮತ ಹಾಕುವ ಮುನ್ನ ಒಮ್ಮೆ ಗಮನಿಸಿಬಿಡಿ.

  1. ಕಳೆದೈದು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರಿಗಳು ಪ್ರಾಮಾಣಿಕರಾಗಿರುವುದೇ ಅಪರಾಧವೆಂಬಂತಾಗಿತ್ತು. ಅನುಪಮಾ ಶೆಣೈ ಹುದ್ದೆಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಬೇಕಾಗಿ ಬಂತು. ಸರ್ಕಾರವೇ ಪ್ರಾಯೋಜನೆ ಮಾಡಿ ಮೈಸೂರಿನ ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿತು. ಮುಖ್ಯಮಂತ್ರಿಗಳ ಆಪ್ತನಾಗಿದ್ದ ಮರಿಗೌಡನಿಂದ ಡಿ.ಸಿ ಶಿಖಾ ಹಲ್ಲೆಗೊಳಗಾದರು. ಈ ಮರಿಗೌಡ ಪೊಲೀಸರಿಂದ ತಪ್ಪಿಸಿಕೊಂಡು ಮುಖ್ಯಮಂತ್ರಿ ಕಚೇರಿಯಲ್ಲೇ ಅಡಗಿ ಕುಳಿತಿದ್ದ ಎಂದು ಅನೇಕ ಪತ್ರಿಕೆಗಳು ವರದಿ ಮಾಡಿದ್ದವು.
  2. ಜೈಲಿನಲ್ಲಿ ತಮಿಳುನಾಡಿನ ಶಶಿಕಲಾಗೆ ವಿಶೇಷ ಸವಲತ್ತು ನೀಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ರೂಪಾ ಆರೋಪ ಮಾಡಿದರು. ಇದಕ್ಕಾಗಿ ಸರ್ಕಾರದ ಪ್ರಮುಖರೊಬ್ಬರು 2 ಕೋಟಿ ರೂಪಾಯಿ ಪಡೆದಿದ್ದಾರೆಂಬ ಆರೋಪವೂ ಕೇಳಿಬಂತು. ಶಶಿಕಲಾರಿಗೆ ವಿಶೇಷ ಸವಲತ್ತು ಕೊಡುತ್ತಿರುವ ಸಿಸಿಟಿವಿ ವಿಡಿಯೋ ಸಿಕ್ಕ ನಂತರವೂ ಸರ್ಕಾರ ತಲೆಕೆಡಿಸಿಕೊಳ್ಳದೇ ಆರೋಪ ಮಾಡಿದ ರೂಪಾರನ್ನೇ ಎತ್ತಂಗಡಿ ಮಾಡಿಬಿಟ್ಟಿತು.
  3. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ನೆಪದಲ್ಲಿ ಮಹಾ ಅವ್ಯವಹಾರಕ್ಕೆ ಕೈತೊಳೆದುಕೊಂಡು ಸಿದ್ಧವಾಗಿದ್ದ ಸರ್ಕಾರಕ್ಕೆ ಅಡ್ಡಗಾಲಾಗಿ ನಿಂತಿದ್ದ ರೋಹಿಣಿ ಸಿಂಧೂರಿಯನ್ನು ಸ್ವತಃ ಮುಖ್ಯಮಂತ್ರಿ ಆಸ್ಥೆ ವಹಿಸಿ ಎತ್ತಂಗಡಿ ಮಾಡಿದ್ದು ಮರೆಯುವುದು ಹೇಗೆ? ಗಟ್ಟಿಗಿತ್ತಿ ರೋಹಿಣಿ ಸಿಂಧೂರಿ ಸರ್ಕಾರವನ್ನೇ ಎದುರು ಹಾಕಿಕೊಂಡು ಮರಳಿ ಅದೇ ಜಾಗಕ್ಕೆ ಬಂದಿದ್ದು ಸರ್ಕಾರಕ್ಕೆ ಬಲುದೊಡ್ಡ ತಪರಾಕಿಯೇ! ಖಡಕ್ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್​ರನ್ನು ಎತ್ತಂಗಡಿ ಮಾಡಿದ್ದರ ಹಿಂದೆ ಇಂಥದ್ದೇ ಒಂದು ದೊಡ್ಡ ಕಾರಣವಿದೆ ಎನ್ನುವುದನ್ನು ಮೇ 12ರವರೆಗಾದರೂ ಮರೆಯಬೇಡಿ.
  4. ಕೆಲವರು ಈ ಸವಾಲುಗಳನ್ನು ಎದುರಿಸಿ ಬಲವಾಗಿ ನಿಂತುಬಿಟ್ಟರು. ಇನ್ನೂ ಕೆಲವರು ತಾಳಲಾಗದೇ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಡಿವೈಎಸ್​ಪಿ ಗಣಪತಿ ಸ್ವತಃ ಸಚಿವ ಜಾರ್ಜ್​ರೇ ಕಿರಿಕಿರಿ ಮಾಡುತ್ತಿದ್ದಾರೆಂದು ಕ್ಯಾಮರಾದ ಮುಂದೆ ಹೇಳಿಕೆಯನ್ನು ದಾಖಲಿಸಿಯೇ ಆತ್ಮಹತ್ಯೆ ಮಾಡಿಕೊಂಡರು. ಮುಖ್ಯಮಂತ್ರಿಗಳು ನಿಷ್ಪಕ್ಷಪಾತವಾದ ತನಿಖೆ ಮಾಡಿಸುವುದಿರಲಿ ಸಚಿವರಿಗೆ ಕ್ಲೀನ್​ಚಿಟ್ ಕೊಟ್ಟು ಮೃತರ ಕುಟುಂಬಕ್ಕೆ ಅವಮಾನ ಮಾಡಿದರು.
  5. ವೇತನದ ಕುರಿತಂತೆ ಮತ್ತು ಹಿರಿಯ ಅಧಿಕಾರಿಗಳು ನಡೆಸಿಕೊಳ್ಳುವ ರೀತಿಯ ಕುರಿತಂತೆ ನೊಂದು ಈ 5 ವರ್ಷಗಳಲ್ಲಿ 100ಕ್ಕೂ ಹೆಚ್ಚು ಜನ ಪೊಲೀಸರು ಆತ್ಮಹತ್ಯೆ ಮಾಡಿಕೊಂಡರು. ಇದನ್ನು ಪ್ರತಿಭಟಿಸಿ ಪೊಲೀಸರ ನೇತೃತ್ವ ವಹಿಸಿದ್ದ ಶಶಿಧರ್ ಪರಪ್ಪನ ಅಗ್ರಹಾರದಲ್ಲಿ ಕಡುಕಷ್ಟದ ದಿನಗಳನ್ನು ಕಳೆಯಬೇಕಾಗಿ ಬಂತು. ಒಂದು ಹಂತದಲ್ಲಂತೂ ಅವರನ್ನು ನಿಮ್ಹಾನ್ಸ್​ಗೆ ದಾಖಲಿಸಿತ್ತು ಸರ್ಕಾರ!
  6. ಜನಸ್ನೇಹಿ ಡಿಸಿಯಾಗಿದ್ದ ಡಿ.ಕೆ. ರವಿಯವರದ್ದು ಆತ್ಮಹತ್ಯೆಯೆಂದು ಸಾಬೀತು ಪಡಿಸಲು ಸರ್ಕಾರ ಹೆಣಗಾಡಿಬಿಟ್ಟಿತ್ತು. ಅದು ಒತ್ತಟ್ಟಿಗಿರಲಿ. ಡಿ.ಕೆ. ರವಿಯವರ ತಾಯಿ ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋದಾಗ ಭೇಟಿಗೂ ಅವಕಾಶ ಕೊಡದೆ ಅವಮಾನ ಮಾಡಿ ಕಳಿಸಿಬಿಟ್ಟರಲ್ಲ. ಮರೆತರೆ ದ್ರೋಹವಲ್ಲವೇನು?
  7. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಹದಗೆಟ್ಟುಹೋಗಿದ್ದು ವಿದ್ವತ್ ಎಂಬ ತರುಣನಿಗೆ ಶಾಸಕರ ಮಗ ನಲಪಾಡ್ ಮನಸೋ ಇಚ್ಛೆ ಥಳಿಸಿ ರಾಜ್ಯ ಸರ್ಕಾರ ತಮ್ಮದೆಂಬ ದುರಹಂಕಾರ ಪ್ರದರ್ಶಿಸಿದ್ದು ಜನಮಾನಸದಲ್ಲಿ ಇನ್ನೂ ಹಚ್ಚ ಹಸಿರಾಗಿದೆ.
  8. ಕಳೆದ 5 ವರ್ಷದಲ್ಲಿ 871 ಅಪಹರಣ, 462 ಲೈಂಗಿಕ ಹಲ್ಲೆ ಅತ್ಯಾಚಾರಗಳ ಮೂಲಕ ಕರ್ನಾಟಕವನ್ನು ಎನ್​ಸಿಆರ್​ಬಿ ವರದಿಯಲ್ಲಿ ಅಗ್ರಣಿಯಾಗಿಸಿದ್ದು ಇದೇ ಸರ್ಕಾರ.
  9. 2012ರಲ್ಲಿ 3 ಲಕ್ಷದಷ್ಟಿದ್ದ ಕ್ರೈಂ ವರದಿ 2017ರ ವೇಳೆಗೆ 11 ಲಕ್ಷಕ್ಕೇರಿತು.ಇದೇ ಅವಧಿಯಲ್ಲಿ ಬೆಂಗಳೂರು ದೇಶದ ಎರಡನೇ ದೊಡ್ಡ ಕ್ರೖೆಂ ಸಿಟಿಯಾಗಿ ಹೆಸರು ಪಡೆಯಿತು.
  10. 5 ವರ್ಷಗಳ ಅವಧಿಯಲ್ಲೇ ಕರ್ನಾಟಕ ಪ್ರತಿಭಟನೆಗಳ ಸರಮಾಲೆಯನ್ನು ಕಂಡಿದ್ದು. ಸರ್ಕಾರಿ ನೌಕರರು ರಾಷ್ಟ್ರೀಯ ಪೆನ್ಷನ್ ಸ್ಕೀಮಿನ ವಿರುದ್ಧವಾಗಿ ಬೀದಿಗಿಳಿದರು, ವೈದ್ಯರು ಸರ್ಕಾರ ತಂದ ಕಾನೂನನ್ನು ತಮ್ಮ ವಿರುದ್ಧದ ಮರಣ ಶಾಸನವೆಂದೇ ಬಣ್ಣಿಸಿ ಬೀದಿಗಿಳಿದರು. ಅಂಗನವಾಡಿ ಕಾರ್ಯಕರ್ತೆಯರು ವಿಧಾನಸೌಧದೆದುರು ಬೀಡುಬಿಟ್ಟಿದ್ದನ್ನು ಮರೆಯುವಂತೆಯೇ ಇಲ್ಲ. ಆಗೆಲ್ಲ ಮುಖ್ಯಮಂತ್ರಿ ಪದವಿಯಲ್ಲಿ ಕುಳಿತು ಸಿದ್ದರಾಮಯ್ಯನವರು ತೋರಿದ ದರ್ಪ, ಮಾತನಾಡಿದ ಶೈಲಿ ಈಗಲೂ ಕಣ್ಣಿಗೆ ರಾಚುವಂತಿದೆ.
  11. ಜಾರ್ಜ್ ಸೇರಿದಂತೆ ಈ ಅವಧಿಯ ಅನೇಕ ಮಂತ್ರಿಗಳು ಅಧಿಕಾರ ಮದದಿಂದಲೇ ಆಳ್ವಿಕೆ ನಡೆಸಿ ಜನಸಾಮಾನ್ಯರ ಬದುಕು ಅಸಹನೀಯಗೊಳಿಸಿದವರು. ಸ್ವತಃ ಮುಖ್ಯಮಂತ್ರಿಯ ಮೇಲೆ ಹತ್ತಾರು ಭ್ರಷ್ಟಾಚಾರದ ಪ್ರಕರಣಗಳಿದ್ದು ಅವುಗಳಲ್ಲಿ ಅತ್ಯಂತ ಗಂಭೀರವಾದ ಏಳೆಂಟು ಪ್ರಕರಣಗಳಿವೆ. ಅದರ ಅರಿವಿದ್ದೇ ರಾಜ್ಯದಲ್ಲಿದ್ದ ಲೋಕಾಯುಕ್ತವನ್ನು ತೆಗೆದು ಎಸಿಬಿ ಶುರುಮಾಡಿದ್ದು ಮುಖ್ಯಮಂತ್ರಿಗಳು.
  12.  ಮುಖ್ಯಮಂತ್ರಿಗಳ ಕೈಲಿದ್ದ ವಾಚು ಈ ಅವಧಿಯಲ್ಲಿ ಬಲುದೊಡ್ಡ ಸುದ್ದಿ ಮಾಡಿತ್ತು. ‘ಬಡವರ ಬಂಧು’, ‘ದಲಿತರ ಆಶಾಕಿರಣ’ ಸಿದ್ದರಾಮಯ್ಯನವರು ಕೈಗೆ ಕಟ್ಟುವ ವಾಚು 70 ಲಕ್ಷದ್ದೆಂಬುದೇ ಅನೇಕರಿಗೆ ಜೀರ್ಣವಾಗದ ಸಂಗತಿ. ವಿದೇಶದ ತನ್ನ ಮಿತ್ರ ಕೊಡುಗೆಯಾಗಿ ಕೊಟ್ಟದ್ದೆಂದು ಮುಖ್ಯಮಂತ್ರಿಗಳು ಹೇಳಿದ್ದು ಅಪಹಾಸ್ಯಕ್ಕೆ ಕಾರಣವಾಗಿತ್ತು. ಇಂಥ ಮಿತ್ರರು ತಮಗೆಲ್ಲ ಇರಬಾರದಾ ಎಂದು ಪಾಪ ಪ್ರತಿಯೊಬ್ಬ ಕನ್ನಡಿಗ ಇಂದಿಗೂ ಯೋಚಿಸುತ್ತಿದ್ದಾನೆ.
  13. ತಾವು ದುಬಾರಿ ವಾಚು ಕಟ್ಟುವ ಮುಖ್ಯಮಂತ್ರಿಗಳು ರಾಜ್ಯವನ್ನು ಮಾತ್ರ ಸಾಲದ ಕೂಪಕ್ಕೆ ತಳ್ಳಿಬಿಟ್ಟರು. ಬಜೆಟ್​ನ ವರದಿಯ ಪ್ರಕಾರವೇ ಇದುವರೆಗಿನ ಸಾಲ ಎರಡೂವರೆ ಲಕ್ಷ ಕೋಟಿ ರೂಪಾಯಿಯಾಗಿದ್ದು ಈ ಬಜೆಟ್ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ವೇಳೆಗೆ ಸಾಲದ ಮೊತ್ತ ಸುಮಾರು ಮೂರುಲಕ್ಷಕೋಟಿಗೆ ಹತ್ತಿರವಾಗಿಬಿಟ್ಟಿರುತ್ತದೆ. ಇಷ್ಟೂ ಸಾಲದ ಹೊರೆ 6 ಕೋಟಿ ಕನ್ನಡಿಗರ ಮೇಲೆ ಎಂಬುದನ್ನು ಮರೆತರೂ ನೆನಪಿಟ್ಟುಕೊಂಡರೂ ಸಾಲ ತೀರಿಸಬೇಕಾದವರು ಮಾತ್ರ ನಾವೇ.
  14. ವಿಧಾನಸೌಧಕ್ಕೆ 60 ವರ್ಷವಾದಾಗ ಸಂಭ್ರಮಾಚರಣೆ ಮಾಡಬೇಕೆಂದು ನಿರ್ಧರಿಸಿದ ಈ ಸರ್ಕಾರ ಪ್ರತಿಯೊಬ್ಬ ಶಾಸಕರಿಗೆ ಚಿನ್ನದ ಉಡುಗೊರೆ, ಅಲ್ಲಿನ ಕಾರ್ವಿುಕರಿಗೆ ಬೆಳ್ಳಿಯ ಉಡುಗೊರೆ ಕೊಡಬೇಕೆಂದು ನಿಶ್ಚಯಿಸಿ ಬೊಕ್ಕಸದ ಮೇಲೆ ಕೋಟ್ಯಂತರ ರೂಪಾಯಿ ಹೊರೆ ಹೇರಬೇಕೆಂದು ಉಪಾಯ ಮಾಡಿತ್ತು. ಒಂದಷ್ಟು ಬುದ್ಧಿವಂತರು ವಿರೋಧಿಸಿದ ನಂತರ ಸಮಾಜವಾದಿ ಮುಖ್ಯಮಂತ್ರಿ ತಣ್ಣಗಾದರು.
  15. ದೇಶವೆಲ್ಲ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿದ್ಯುತ್ ವಿಚಾರದಲ್ಲಿ ಸ್ವಾವಲಂಬಿಯಾದರೆ ಕರ್ನಾಟಕದಲ್ಲಿ ಮಾತ್ರ ಪವರ್ ಕಟ್ ಇಂದಿಗೂ ನಿಂತಿಲ್ಲ. ವಿದ್ಯುತ್ ಖರೀದಿಯಲ್ಲಿ ದೊಡ್ಡ ಮೊತ್ತದ ಕಿಕ್​ಬ್ಯಾಕ್ ಸಂದಾಯವಾಗುತ್ತಿದೆ ಎಂಬ ಆರೋಪಕ್ಕೆ ಸರ್ಕಾರ ಎಂದಿಗೂ ಉತ್ತರವೇ ಕೊಡಲಿಲ್ಲ. ದೇಶದ ಐಟಿ ಸಿಟಿ ಬೆಂಗಳೂರು ಕೂಡ ಪವರ್ ಕಟ್ ಭಾಗ್ಯದಿಂದ ನರಳುತ್ತಲೇ ಇದೆ.
  16. ಬೆಂಗಳೂರಿನ ರಸ್ತೆಯಲ್ಲಿ 15,000ಕ್ಕೂ ಹೆಚ್ಚು ಹೊಂಡಗಳಿವೆ ಎಂದು ಪಾಲಿಕೆಯೇ ಒಪ್ಪಿಕೊಂಡಿತಲ್ಲದೆ ಆ ನೆಪದಲ್ಲಿ ವೈಟ್ ಟಾಪಿಂಗ್ಸ್ ಮಾಡುವ ಯೋಜನೆ ಮುಂದಿಟ್ಟು ಹತ್ತಾರು ಕೋಟಿ ರೂಪಾಯಿಯನ್ನು ನುಂಗಿಹಾಕಲಾಯ್ತು.
  17. ಬೆಂಗಳೂರು ನಾಗರಿಕರು ಪ್ರತಿಭಟನೆ ಮಾಡದಿದ್ದರೆ ಅನಗತ್ಯವಾದ ಸ್ಟೀಲ್ ಬ್ರಿಡ್ಜ್ ನಿರ್ವಣಗೊಂಡು ಕೋಟ್ಯಂತರ ರೂ. ಕಿಕ್​ಬ್ಯಾಕ್ ಮಂತ್ರಿಗಳ ಕಿಸೆ ಸೇರಿರುತ್ತಿತ್ತು.
  18. ಎತ್ತಿನಹೊಳೆಯೊಂದು ಇದೇ ಬಗೆಯ ಭಾರಿ ದೊಡ್ಡ ಯೋಜನೆ. 13 ಸಾವಿರ ಕೋಟಿ ರೂಪಾಯಿಯ ಯೋಜನೆಗೆ ತೋಡಿದ ಹಳ್ಳ, ಹಾಸಿದ ಪೈಪುಗಳು ಈ ಮಳೆಗಾಲದ ವೇಳೆಗೆ ಖಂಡಿತ ವ್ಯರ್ಥವಾಗಲಿವೆ. ಈ ಯೋಜನೆ ಬಲುದೊಡ್ಡ ಕಿಕ್​ಬ್ಯಾಕ್​ನ ಒಂದು ಭಾಗ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
  19. ಕಿಕ್​ಬ್ಯಾಕ್​ಗಳ ಭರಾಟೆ ಎಷ್ಟಿದೆಯೆಂದರೆ ಮಂತ್ರಿ ಜಾರ್ಜ್​ರ ಆಸ್ತಿ 5 ವರ್ಷಗಳಲ್ಲಿ 158%, ಡಿಕೆಶಿಯವರ ಆಸ್ತಿ ಸುಮಾರು 300 ಪ್ರತಿಶತ ಹೆಚ್ಚಾಗಿದ್ದು ಸಮೃದ್ಧ ಸರ್ಕಾರದ ನಿಶಾನಿಯಾಗಿತ್ತು. ಸಿದ್ದರಾಮಯ್ಯನವರ ಆಪ್ತ ಚಿಕ್ಕರಾಯಪ್ಪನವರ ಬಳಿ ಸುಮಾರು 5 ಕೋಟಿ ರೂಪಾಯಿಯಷ್ಟು 2000 ರೂಪಾಯಿ ನೋಟುಗಳ ಕಂತೆ ಇದ್ದದ್ದು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿತ್ತು!
  20. ಕೆಟ್ಟ ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರದ ಕಾರಣದಿಂದಾಗಿಯೇ ಫ್ಲಿಪ್​ಕಾರ್ಟ್ ಮತ್ತು ಹೀರೋ ಮೋಟಾರ್ಸ್​ನಂತಹ ಕಂಪನಿಗಳು ರಾಜ್ಯವನ್ನು ಬಿಟ್ಟು ಹೊರಟುಬಿಟ್ಟವು.
  21. ನೀರಿನ ವಿಚಾರದಲ್ಲಿ ಈ 5 ವರ್ಷ ಅತ್ಯಂತ ಕೆಟ್ಟ ಆಡಳಿತ. ಮಹಾದಾಯಿ ಗಲಾಟೆ ರಾಜ್ಯಕ್ಕೆಲ್ಲ ಬೆಂಕಿ ಹಚ್ಚಿತೇ ಹೊರತು ಅದನ್ನು ಪರಿಹರಿಸುವ ದಿಸೆಯಲ್ಲಿ ಮುಖ್ಯಮಂತ್ರಿಗಳು ಗೋವಾದೊಂದಿಗೆ ಒಂದಿನಿತೂ ಪ್ರಯತ್ನ ಮಾಡಲಿಲ್ಲ. ಕಾವೇರಿಯ ಕುರಿತಂತೆ ಜನಮಾನಸದಲ್ಲಿ ಕಾವೇರಿಸಿದ್ದು ಬಿಟ್ಟರೆ ಕಾವೇರಿಯ ರಕ್ಷಣೆಗಾಗಿ ಈ 5 ವರ್ಷಗಳಲ್ಲಿ ಸರ್ಕಾರ ಮಾಡಿದ ಕೆಲಸ ಶೂನ್ಯವೇ. ಕೆರೆಗಳ ಹೂಳೆತ್ತುವ ನಿಟ್ಟಿನಲ್ಲಿ ಚಿತ್ರ ನಟ ಯಶ್ ಮಾಡಿದ್ದಷ್ಟನ್ನೂ ಸರ್ಕಾರ ಮಾಡಲಿಲ್ಲವೆಂಬುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.
  22. ಕೇಂದ್ರ ಸರ್ಕಾರ ಬರ ನಿರ್ವಹಣೆಗೆಂದು 1685 ಕೋಟಿ ರೂ. ಕೊಟ್ಟರೂ ಅದರಲ್ಲಿ ಅರ್ಧದಷ್ಟನ್ನೂ ಬಳಸಿಕೊಳ್ಳಲಾಗದ ಸಾಧನೆ ಸಿದ್ದರಾಮಯ್ಯನವರದ್ದು. ಹೀಗಾಗಿಯೇ ಕಳೆದ 5 ವರ್ಷಗಳಲ್ಲಿ 3515ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಯಮನೂರಿನಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದ್ದನ್ನು ಮರೆತರೆ ಅಪರಾಧವಾದೀತು.
  23.  ಶಾಂತವಾಗಿದ್ದ ಕರ್ನಾಟಕದಲ್ಲಿ ಅನವಶ್ಯಕವಾಗಿ ಟಿಪ್ಪು ಜಯಂತಿಯನ್ನು ಆರಂಭಿಸಿ ಹಿಂದೂ-ಮುಸ್ಲಿಂ ಕಂದಕ ವೃದ್ಧಿಯಾಗುವಂತೆ ಮಾಡಿದ್ದು ಇದೇ ಅವಧಿಯಲ್ಲಿ. ಜಾತಿ ಗಣತಿ ನಡೆಸಿ ನೆಮ್ಮದಿಯಿಂದ ಬದುಕಿದ್ದ ಜನರ ನಡುವೆ ಹುಳಿಹಿಂಡಿದ್ದು ಸಿದ್ದು ಯುಗವೇ!
  24. ಹಿಂದೂಧರ್ಮವನ್ನು ಶತ್ರುವೆಂಬಂತೆ ಕಂಡು ಪದೇಪದೆ ಅನುಯಾಯಿಗಳನ್ನು ಅವಮಾನಿಸಿ ಅವರ ಆಸ್ಥೆಗಳನ್ನು ಅಗೌರವದಿಂದ ಕಂಡು ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದು ಸಿದ್ದರಾಮಯ್ಯನವರ 5 ವರ್ಷದ ಸಾಧನೆ. ಕಲ್ಲಡ್ಕದ ಶ್ರೀರಾಮ ಶಾಲೆಗೆ ಊಟ ನಿಲ್ಲಿಸಿದ್ದು, ಗೋಕಳ್ಳರನ್ನು ಮನೆಗೆ ಹೋಗಿ ಸನ್ಮಾನಿಸಿದ್ದು, ಗೋಹಂತಕರಿಗೆ ಬಹುಮಾನ ಕೊಟ್ಟಿದ್ದು, ಮಾಂಸ ಸೇವಿಸಿ ಮಂದಿರಕ್ಕೆ ಹೋಗಿದ್ದು ಇವೆಲ್ಲವೂ ಇದೇ ಅವಧಿಯಲ್ಲಿ ನಡೆದಂಥವೇ.
  25. 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆದಾಗಲೂ ಅದನ್ನು ನಡೆಸಿದ ಮುಸ್ಲಿಂ ಉಗ್ರ ಸಂಘಟನೆ ಪಿಎಫ್​ಐ ಮೇಲಿದ್ದ ಎಲ್ಲ ಕೇಸುಗಳನ್ನು ಹಿಂಪಡೆದಿದ್ದಷ್ಟೇ ಅಲ್ಲದೆ ಕೊಂದಿದ್ದು ಸ್ಕೂ›ಡ್ರೈವರ್, ಕೈತಪ್ಪಿಯಾದ ಹತ್ಯೆ ಎಂದೆಲ್ಲ ಗೃಹ ಸಚಿವರ ಕೈಲೇ ಹೇಳಿಕೆ ಕೊಡಿಸಿದ್ದು ಚುನಾವಣೆ ಮುಗಿದ ನಂತರವೂ ನೆನಪಿನಲ್ಲುಳಿಯುವಂಥದ್ದು.

ಕೇಳಲು ನನಗೆ ಇನ್ನೂ ಸಾಕಷ್ಟು ಪ್ರಶ್ನೆಗಳಿವೆ. ಆದರೆ ಲೇಖನದ ಮಿತಿ ಇಷ್ಟೇ ಇರುವುದರಿಂದ ಇಷ್ಟಕ್ಕೇ ಸುಮ್ಮನಾಗುತ್ತಿದ್ದೇನೆ. ಮತದಾನಕ್ಕೆ ಮುನ್ನ ಆ ಉಳಿದ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ, ಸರಿಯಾದ ಸರ್ಕಾರವನ್ನು ಆರಿಸಿ. ಹಳೆಯದ್ದನ್ನು ನೆನಪಿಸಿಕೊಡುವುದಷ್ಟೇ ನನ್ನ ಜವಾಬ್ದಾರಿ. ಉಳಿದದ್ದು ನಿಮಗೆ ಬಿಟ್ಟದ್ದು!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top