Monday, 25th June 2018  

Vijayavani

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ- ಪರಂ, ಸಿದ್ದು ನಡುವೆ ಮೂಡದ ಒಮ್ಮತ- ಸಿದ್ದು ಟ್ರೀಟ್‌ಮೆಂಟ್‌ ಮುಗಿಯೋವರೆಗೂ ವೇಟಿಂಗ್‌        ಸಾಲಮನ್ನಾ ಹೇಗೆ ಮಾಡ್ತಾರೆ ಕಾದು ನೋಡ್ತೀನಿ- ಜೆಡಿಎಸ್‌ ಅಂದಿದಕ್ಕೆಲ್ಲಾ ತಲೆ ಅಲ್ಲಾಡಿಸಬೇಡಿ- ಪರಂಗೆ ಸಿದ್ದರಾಮಯ್ಯ ಕಿವಿಮಾತು        ಐಎಎಸ್‌ ಅಧಿಕಾರಿಗಳ ಫೀಡ್‌ಬ್ಯಾಕ್‌ ಕೇಳಿದ ಕೇಂದ್ರ- ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ರವಾನೆ- ಬಡ್ತಿ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಮೋದಿ ಸರ್ಕಾರ        ಸಿಎಂ ಗ್ರಾಮ ವಾಸ್ತವ್ಯದ ಫಲದಿಂದ ಬಂತು ಬಸ್‌- ಎಚ್‌ಡಿಕೆ ಸೇತುವೆ ಭರವಸೆ ಠುಸ್‌- ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಗ್ರೌಂಡ್‌ ರಿಪೋರ್ಟ್‌        ಕೈಗಾ ಸುತ್ತಮುತ್ತಾ ಕ್ಯಾನ್ಸರ್‌ ಭೀತಿ- ಭಯ ಪಡಬೇಡಿ ಇದು ಕೇವಲ ವದಂತಿ- ಉತ್ತರಕನ್ನಡ ಜನತೆಗೆ ಜಿಲ್ಲಾಧಿಕಾರಿ ಅಭಯ        ಊಟ, ತಿಂಡಿ, ಸ್ನ್ಯಾಕ್ಸ್‌ ಎಲ್ಲದಕ್ಕೂ ಅದೇ- 19 ವರ್ಷದಿಂದ ಪಾರ್ಲೆ ಜಿ ಬಿಸ್ಕೆಟ್‌ ತಿಂದೇ ಜೀವನ- ಚಿಕ್ಕೋಡಿ ಯುವತಿ ವೈದ್ಯಲೋಕಕ್ಕೆ ಸವಾಲ್‌       
Breaking News

ಪ್ರಣಬ್ ಮುಖರ್ಜಿ ಸಂಘಭೇಟಿ ಲಾಭ ಯಾರಿಗೆ?

Monday, 11.06.2018, 3:05 AM       No Comments

ಹಿಂದೂ ಮಹಾಸಭಾದ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಗಾಂಧೀಜಿ 1934ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿರುವ ತರುಣರನ್ನೆಲ್ಲ ಮಾತನಾಡಿಸಿ ಆನಂದಿತರಾಗಿ ‘ಇಲ್ಲಿನ ಶಿಸ್ತು ಮತ್ತು ಅಸ್ಪಶ್ಯತೆ ಆಚರಣೆಯಿಲ್ಲದಿರುವುದನ್ನು ಕಂಡು ನನಗೆ ಬಲು ಸಂತೋಷವಾಗಿದೆ’ ಎಂದು ಉದ್ಗಾರವೆತ್ತಿದ್ದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಶಿಕ್ಷಾ ವರ್ಗದ ಸಮಾರೋಪಕ್ಕೆ ಬರುವೆನೆಂದು ಹೇಳಿದ್ದು ಹದಿನೈದು ದಿನಗಳ ಕಾಲವಾದರೂ ದೇಶದ ತಲೆ ಕೆಡಿಸಿತ್ತು. ಕಾಂಗ್ರೆಸ್ಸಿನ ಕಟ್ಟಾಳುವಾಗಿ 5-6 ದಶಕಗಳ ಕಾಲ ಅದರ ಸೇವೆಗೈದವರು ಪ್ರಣಬ್ ಮುಖರ್ಜಿ. ಅಧಿಕಾರದಲ್ಲಿದ್ದಷ್ಟೂ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ವಿರೋಧಿಯಾಗಿದ್ದವರು ಅವರು. ಅಂಥವರು ಈಗ ಚುನಾವಣೆಯ ವರ್ಷದಲ್ಲಿ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗುವುದೆಂದರೆ ಕಾಂಗ್ರೆಸ್ಸಿಗೆ ಉತ್ತರಿಸಲು ಕಷ್ಟವಾಗುವ ಪ್ರಶ್ನೆಯೇ ಆಗಿತ್ತು. ಪ್ರಣಬ್​ರಂಥ ಪ್ರಮುಖ ವ್ಯಕ್ತಿಯೇ ಸಂಘವನ್ನು ಒಪ್ಪಿಕೊಂಡುಬಿಟ್ಟ ಮೇಲೆ ಇನ್ನು ಕಾಂಗ್ರೆಸ್ಸಿನ ಸಣ್ಣ-ಪುಟ್ಟ ಜನರ ದನಿಗೆ ಯಾವ ಬೆಲೆ? ಕಾಂಗ್ರೆಸ್ಸು ತನಗೇ ಅರಿವಾಗದ ಬೇನೆಯಲ್ಲಿ ವಿಲವಿಲನೆ ಒದ್ದಾಡುತ್ತಿದ್ದುದು ಸ್ಪಷ್ಟವಾಗಿ ಗಮನಕ್ಕೆ ಬರುವಂತಿತ್ತು. ಹಾಗೆ ನೋಡಿದರೆ ಪ್ರಣಬ್ ಮುಖರ್ಜಿ ಒಂದು ಬಗೆಯಲ್ಲಿ ಅವಕಾಶವಂಚಿತರೇ. ಹಾಗಂತ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಸೀತಾರಾಂ ಕೇಸರಿಯಂತೆ ಅವಮಾನಕ್ಕೆ ಒಳಗಾದವರಲ್ಲ. ತಮಗಾದ ನೋವನ್ನು ನುಂಗಿಕೊಂಡೇ ಪಕ್ಷನಿಷ್ಠೆಯನ್ನು ಮೆರೆಯುತ್ತ ಬಂದವರು.

1984ರಲ್ಲಿ ಇಂದಿರಾ ಹತ್ಯೆಗೀಡಾದಾಗ ಅಂದಿನ ಕಾಂಗ್ರೆಸ್ಸಿನ ಹಿರಿಯ ವ್ಯಕ್ತಿ ಪ್ರಧಾನಿಯಾಗಬೇಕೆಂಬುದನ್ನು ಎಲ್ಲರೂ ಅಪೇಕ್ಷಿಸಿದ್ದರು. ಸಹಜವಾಗಿಯೇ ಅವಕಾಶವಿದ್ದುದು ಪ್ರಣಬ್ ಮುಖರ್ಜಿಯವರಿಗೇ. ಆದರೆ ಕಾಂಗ್ರೆಸ್ಸಿನ ಮನೆತನದ ರಾಜಕೀಯ ಬಿಡಲಿಲ್ಲ. ಪ್ರಣಬ್ ಮೂಲೆಗೆ ತಳ್ಳಲ್ಪಟ್ಟರು. 2004ರಲ್ಲಿ ವಾಜಪೇಯಿಯವರಿಂದ ಅಧಿಕಾರವನ್ನು ಕಸಿದುಕೊಂಡ ಮೇಲಾದರೂ ಪ್ರಣಬ್​ರಿಗೆ ಪ್ರಧಾನಿ ಪಟ್ಟ ಒಲಿಯುವುದೆಂದು ಭಾವಿಸಿದರೆ ಅದೂ ಸುಳ್ಳಾಯಿತು.

ಸೋನಿಯಾ ತಮ್ಮ ಕೈಗೊಂಬೆಯಾಗಿರಬಲ್ಲ ವ್ಯಕ್ತಿಯನ್ನೇ ಪ್ರಧಾನಿ ಪಟ್ಟದಲ್ಲಿ ಕೂರಿಸಬೇಕೆಂದು ನಿರ್ಧರಿಸಿದರು. ಅಧಿಕಾರಕ್ಕೆ ತಾವೇರಲಿಲ್ಲವೆಂದರೂ ತಮ್ಮದೇ ಅಧಿಕಾರ ನಡೆಯುವಂತಹ ಛದ್ಮವ್ಯವಸ್ಥೆ ಅದು. ಹಣಕಾಸು ವಿಭಾಗದಲ್ಲಿ ತಮ್ಮ ಕೈಕೆಳಗೆ ದುಡಿದ ವ್ಯಕ್ತಿಯೊಬ್ಬರನ್ನು ಪ್ರಧಾನಮಂತ್ರಿಯಾಗಿ ಕಾಣುವುದು ಪ್ರಣಬ್​ರಿಗೆ ಸುಲಭವಾಗಿರಲಿಲ್ಲ. ಹೀಗಾಗಿ ಅವರು ಮಂತ್ರಿಯಾಗಲೂ ಒಪ್ಪುವುದಿಲ್ಲವೆಂದು ಎಲ್ಲರೂ ಭಾವಿಸಿದ್ದರು. ಅವರನ್ನು ಪಕ್ಕಕ್ಕಿಡುವುದು ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆಂದು ಮಹತ್ವದ ಹುದ್ದೆಯನ್ನು ಕೊಟ್ಟು ಅವರನ್ನು ಸರ್ಕಾರದೊಳಕ್ಕೆ ಕೂರಿಸಿದ್ದು ಸೋನಿಯಾರೇ. ಹಾಗಂತ 2009ರಲ್ಲೂ ಸೋನಿಯಾ ಪ್ರಣಬ್​ರನ್ನು ಪ್ರಧಾನಿ ಮಾಡಲಿಲ್ಲ. ಪ್ರಣಬ್ ಮಂತ್ರಿಯಾಗಿಯೇ ಮುಂದುವರಿದರು.

2013ರಲ್ಲಿ ಪ್ರತಿಭಾ ಪಾಟೀಲ್​ರ ಜಾಗಕ್ಕೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಹೊಸ ವ್ಯಕ್ತಿಯನ್ನು ಅರಸಲಾರಂಭಿಸಿದಾಗ ಪ್ರಣಬ್ ಆಸೆಗಳು ಚಿಗುರೊಡೆದಿದ್ದವು. ಮಮತಾ ಬ್ಯಾನರ್ಜಿ ಆ ಸ್ಥಾನಕ್ಕೆ ಅಬ್ದುಲ್ ಕಲಾಂ ಅಥವಾ ಪ್ರಣಬ್ ಮುಖರ್ಜಿ ಆಗಬಹುದೆಂದು ಸೂಚಿಸಿದ್ದರು. ಇನ್ನೇನು ಪ್ರಣಬ್ ರಾಷ್ಟ್ರಪತಿ ಆಗಿಯೇಬಿಡುತ್ತಾರೆ ಎನ್ನುವ ವೇಳೆಗೆ ಬದಲಾವಣೆಯ ಸುದ್ದಿ ತೇಲಿಬಂದು ಪ್ರಣಬ್ ಅಕ್ಷರಶಃ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ತಮ್ಮ ಇತ್ತೀಚಿನ ಪುಸ್ತಕ “The Coalition Years’ನಲ್ಲಿ ಅವರು ತಮ್ಮೆಲ್ಲ ಮಾನಸಿಕ ತುಮುಲವನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ರಾಜಕೀಯ ದಾಳಗಳ ಕುರಿತಂತೆ ಸೋನಿಯಾರಿಗೆ ಅಂದು ಅನೇಕರು ವಿವರಿಸಿರಲಿಕ್ಕೆ ಸಾಕು. ಮತ್ತೊಮ್ಮೆ ಚುನಾವಣೆ ಗೆದ್ದರೆ ರಾಹುಲ್​ರನ್ನು ಪ್ರಧಾನಿಯಾಗಿಸಲು ಪ್ರಣಬ್​ರೇ ಅಡ್ಡಗಾಲಾಗಬಹುದೆಂದು ಹೆದರಿದ ಸೋನಿಯಾ ಕೊನೆಗೂ ಅವರನ್ನು ರಾಷ್ಟ್ರಪತಿಯನ್ನಾಗಿಸಿ ಕೈತೊಳೆದುಕೊಂಡರು.

ಭಾಗವತ್-ಮುಖರ್ಜಿ ಸಂಬಂಧವೃದ್ಧಿ: ಅಲ್ಲಿಗೇ ಎಲ್ಲವೂ ಮುಗಿಯಿತು ಎಂದು ಅವರಂದುಕೊಂಡಿದ್ದರು; ಆದರೆ ವಾಸ್ತವವಾಗಿ ಅಲ್ಲಿಂದಾಚೆಗೆ ಎಲ್ಲವೂ ಶುರುವಾಯ್ತು. ಕಾಂಗ್ರೆಸ್ಸಿನ ಪರವಾಗಿ ಬಲವಾದ ಪ್ರತಿಸ್ಪರ್ಧೆಯೇ ಇಲ್ಲವಾಗಿ ನರೇಂದ್ರ ಮೋದಿ ಅನಾಯಾಸದ ಗೆಲುವು ಸಾಧಿಸಿದರು. ರಾಹುಲ್​ರನ್ನು ದೇಶ ಪ್ರಧಾನಿಯೆಂದು ಒಪ್ಪಿಕೊಳ್ಳಲು ನಿರಾಕರಿಸಿತು. ಇತ್ತ ನರೇಂದ್ರ ಮೋದಿಯವರ ಆಡಳಿತವನ್ನು ಹತ್ತಿರದಿಂದ ಗಮನಿಸಿದ ರಾಷ್ಟ್ರಪತಿಗಳು ಅವರ ಪ್ರತಿಯೊಂದು ಕೆಲಸವನ್ನೂ ಹೊಗಳಲಾರಂಭಿಸಿದರು. ಸಹಜವಾಗಿಯೇ, ಅಂತಹ ವ್ಯಕ್ತಿಯನ್ನು ತಯಾರುಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಂತೆ ಅವರಿಗೆ ಗೌರವ ಮೂಡಿರಲು ಸಾಕು. ಈ ಕಾರಣಕ್ಕಾಗಿಯೇ ಸರಸಂಘಚಾಲಕ ಮೋಹನ್ ಭಾಗವತರೊಂದಿಗೆ ಅವರ ಸಂಬಂಧವೂ ವೃದ್ಧಿಸಿತು. ರಾಷ್ಟ್ರಪತಿ ಭವನಕ್ಕೆ ಅವರನ್ನು ಊಟಕ್ಕೂ ಆಹ್ವಾನಿಸಿದ್ದಲ್ಲದೆ ಪ್ರಣಬ್ ಮುಖರ್ಜಿ ಫೌಂಡೇಷನ್​ನ ಉದ್ಘಾಟನೆಯ ಹೊತ್ತಲ್ಲೂ ವಿಶೇಷ ಆಹ್ವಾನವಿತ್ತರು. ‘ಇಂಡಿಯನ್ ಎಕ್ಸ್​ಪ್ರೆಸ್’ ವರದಿಯ ಪ್ರಕಾರ ಕಳೆದ ವರ್ಷದ ಸಂಘಶಿಕ್ಷಾ ವರ್ಗದ ಸಮಾರೋಪಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತಂತೆ. ಆದರೆ ಅಂದು ಅಸಹಾಯಕತೆ ತೋಡಿಕೊಂಡ ಪ್ರಣಬ್ ಮುಖರ್ಜಿ ಈ ಬಾರಿ ಆಹ್ವಾನವನ್ನು ನಿರಾಕರಿಸಲಿಲ್ಲ. ಬಲು ಪ್ರೀತಿಯಿಂದಲೇ ಒಪ್ಪಿಕೊಂಡು ಸಮಾರೋಪಕ್ಕೆ ಧಾವಿಸಿದರು.

ಹಾಗಂತ ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾಸಭಾದ ಮತ್ತು ಆರೆಸ್ಸೆಸ್​ನ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಗಾಂಧೀಜಿ 1934ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿರುವ ತರುಣರನ್ನೆಲ್ಲ ಮಾತನಾಡಿಸಿ ಆನಂದಿತರಾಗಿ ‘ಇಲ್ಲಿನ ಶಿಸ್ತು ಮತ್ತು ಅಸ್ಪಶ್ಯತೆಯ ಆಚರಣೆಯಿಲ್ಲದಿರುವುದನ್ನು ಕಂಡು ನನಗೆ ಬಲು ಸಂತೋಷವಾಗಿದೆ’ ಎಂದು ಉದ್ಗಾರವೆತ್ತಿದ್ದರು.

ಗಾಂಧಿ ಹತ್ಯೆಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಸಂಘವನ್ನು ನಿಷೇಧಿಸಲಾಗಿತ್ತು. ಆದರೆ ಭಾರತ-ಪಾಕಿಸ್ತಾನ ಯುದ್ಧದ ಹೊತ್ತಲ್ಲಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರ ಪಾತ್ರವನ್ನು ಅರಿತಿದ್ದ ಸರ್ದಾರ್ ಪಟೇಲರು ನಂತರದ ದಿನಗಳಲ್ಲಿ ಸಂಘದ ಕುರಿತಂತೆ ಸದ್ಭಾವನೆ ತಳೆದಿದ್ದರು. ಸರ್ದಾರ್ ಪಟೇಲರು ಸಂಘದೊಂದಿಗೆ ಮೃದುಧೋರಣೆ ಹೊಂದಿದ್ದಾರೆ ಎಂಬ ಆರೋಪ ಮಾಡಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ಜಯಪ್ರಕಾಶ್ ನಾರಾಯಣ್, ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾಗಿರುವ ಸಂಘದ ಮಂತ್ರಿಗಳು ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಹೊರನಡೆಯಬೇಕೆಂದು ಕೂಡ ಆಗ್ರಹಿಸಿದ್ದರು. ನಂತರದ ದಿನಗಳಲ್ಲಿ ಪರಿಪೂರ್ಣವಾದ ವಿಚಾರಣೆ ನಡೆದು ಸಂಘ ನಿದೋಷಿ ಎಂದು ಸಾಬೀತಾಯ್ತು. ಮುಂದೆ ಇಂದಿರಾ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರುಹೋದ ಇದೇ ಜಯಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು. ಸಂಘದ ಪ್ರಚಾರಕರಾಗಿದ್ದ ಮತ್ತು ತಮಗಿಂತ 40 ವರ್ಷ ಚಿಕ್ಕವರಾಗಿದ್ದ ಕೆ.ಎನ್. ಗೋವಿಂದಾಚಾರ್ಯರನ್ನು ಕೇಳದೇ ಜಯಪ್ರಕಾಶ್ ನಾರಾಯಣರು ಭಾಷಣವನ್ನೂ ಮಾಡುತ್ತಿರಲಿಲ್ಲ ಎನ್ನುವುದು ಆಗೆಲ್ಲ ಜನಜನಿತವಾದ ಮಾತು.

ಸಂಘವೆಂದರೆ ಉರಿದುಬೀಳುತ್ತಿದ್ದ ಜವಾಹರಲಾಲ್ ನೆಹರು 1962ರ ಚೀನಿ ಯುದ್ಧದ ವೇಳೆಗೆ ಸಂಘ ತೋರಿದ ರಾಷ್ಟ್ರಭಕ್ತಿಯನ್ನು ಕಂಡು 1963ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ 3000 ಸ್ವಯಂಸೇವಕರನ್ನು ಆಹ್ವಾನಿಸಿದ್ದರು. ಕಾಂಗ್ರೆಸ್ಸಿಗರು ಪ್ರಶ್ನೆ ಎತ್ತಿದಾಗ ‘ದೇಶಭಕ್ತ ಭಾರತೀಯರನ್ನು ನಾನು ಕರೆದಿದ್ದೇನೆ’ ಎಂದು ಉತ್ತರಿಸಿದ್ದರು. 1965ರ ಪಾಕಿಸ್ತಾನ ಯುದ್ಧ ಆರಂಭವಾದಾಗ ಶಾಸ್ತ್ರೀಜಿ ಸರ್ವನಾಯಕರ ಸಭೆ ಕರೆದಿದ್ದರಲ್ಲ, ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರಿಗೂ ಅದಕ್ಕೆ ಆಹ್ವಾನವಿತ್ತು. ಬಾಬಾಸಾಹೇಬ್ ಅಂಬೇಡ್ಕರ್​ರಿಗೂ ಸಂಘದ ಕುರಿತಂತೆ ಗೌರವವಿದ್ದುದಲ್ಲದೆ ಪ್ರಚಾರಕರಾಗಿದ್ದ ದತ್ತೋಪಂಥ ಠೇಂಗಡಿಯವರಿಗೆ ‘ನಿಮ್ಮ ಶಾಖೆಗಳ ಸಂಖ್ಯೆ ಹೆಚ್ಚಬೇಕು, ಅದು ಇನ್ನೂ ವಿಸ್ತಾರವಾಗಬೇಕು’ ಎಂದು ಯಾವಾಗಲೂ ತಾಕೀತುಮಾಡುತ್ತಿದ್ದರು. ದೂರನಿಂತು ತನ್ನ ಕಂಡರೆ ಆಗದೆಂದು ನಿಂತವರನ್ನು ಹತ್ತಿರ ಸೆಳೆದು ಕಾರ್ಯಶೈಲಿಯನ್ನು ತೋರಿಸಿ ಅವರಿಂದಲೂ ಶಹಬ್ಬಾಸ್ ತೆಗೆದುಕೊಳ್ಳುವುದು ಸಂಘಕ್ಕೆ ಹೊಸದೇನಲ್ಲ. 2007ರಲ್ಲಿ ನಿವೃತ್ತ ಏರ್​ಚೀಫ್ ಮಾರ್ಷಲ್ ಟಿಪ್ನಿಸ್ ಸಂಘಶಿಕ್ಷಾ ವರ್ಗಕ್ಕೆ ಬಂದು ಸಂಘದ ಕುರಿತಂತೆ ಗುರುತರವಾದ ಆರೋಪಗಳನ್ನೇ ಮಾಡಿದ್ದರು. ಅಂದಿನ ಸರಸಂಘಚಾಲಕರಾದ ಸುದರ್ಶನ್​ಜೀ ಪ್ರತಿಯೊಂದು ಪ್ರಶ್ನೆಗೂ ಸಮರ್ಥವಾದ ಉತ್ತರವನ್ನು ಕೊಟ್ಟು ಟಿಪ್ನಿಸ್​ರಿಗೆ ತಿಳಿಹೇಳಿದರು. ಇದೇ ಸಂಘಶಿಕ್ಷಾ ವರ್ಗಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ರವಿಶಂಕರ್​ಜೀ, ಡಾ.ವೀರೇಂದ್ರ ಹೆಗ್ಗಡೆಯವರೆಲ್ಲ ಭೇಟಿಯಿತ್ತಿದ್ದರು. ಆದರೆ ಪ್ರಣಬ್ ಮುಖರ್ಜಿ ಹೋದಾಗ ಆದಷ್ಟು ರಾದ್ಧಾಂತ ಹಿಂದೆಂದೂ ಆಗಿರಲಿಲ್ಲ. ಏಕೆಂದರೆ ಚುನಾವಣೆಯ ವರ್ಷದಲ್ಲಿ ಕಾಂಗ್ರೆಸ್ಸು ಹೆಣೆಯಬೇಕೆಂದುಕೊಂಡಿದ್ದ ಎಲ್ಲ ಸುಳ್ಳುಗಳಿಗೂ ಮಾಜಿ ರಾಷ್ಟ್ರಪತಿಗಳು ಒಂದೇ ಮಾತಿನಲ್ಲಿ ಉತ್ತರ ಕೊಟ್ಟಂತಾಗಿತ್ತು. ಅರುಂಧತಿ ರಾಯ್ ಬಿಬಿಸಿಗೆ ಸಂದರ್ಶನ ಕೊಟ್ಟು ಮೋದಿಯ ಆಡಳಿತದಲ್ಲಿ ಭಾರತ ಅತ್ಯಂತ ಕೆಟ್ಟದಿನಗಳನ್ನು ಕಾಣುತ್ತಿದೆ ಎಂದು ಹೇಳಿ ಆ ಮೂಲಕ ಸಂಘವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದರೆ ಇಲ್ಲಿ ಮಾಜಿ ರಾಷ್ಟ್ರಪತಿಗಳು ಸಂಘಶಿಕ್ಷಾ ವರ್ಗದಲ್ಲೇ ನಿಂತು ಸಂಘದ ಕಾರ್ಯಶೈಲಿಯನ್ನು ಹೊಗಳುವ ಪರಿಸ್ಥಿತಿ ಕಾಂಗ್ರೆಸ್ಸಿಗರಿಗೇ ಎಂತಹ ಮುಜುಗರ ಉಂಟುಮಾಡಿರಬಹುದೆಂದು ಊಹಿಸಿದರೂ ಅರ್ಥವಾಗುತ್ತದೆ. ಹಾಗೆಂದೇ ಜಾಫರ್ ಷರೀಫ್, ಜೈರಾಮ್ ರಮೇಶ್​ರಂಥವರು ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದು ಹೋಗಬಾರದೆಂಬ ಸಲಹೆ ಕೊಟ್ಟಿದ್ದು. ಅಹ್ಮದ್ ಪಟೇಲ್, ಮೊಯ್ಲಿ ಅಲ್ಲದೆ ಸ್ವತಃ ಪ್ರಣಬ್​ರ ಮಗಳು ಶರ್ವಿುಷ್ಠಾ ಅಪ್ಪನ ವಿರುದ್ಧ ಟ್ವಿಟರ್​ನಲ್ಲಿ ಬೆಂಕಿಯುಂಡೆ ಹೊರಹಾಕಿದಳು. ವೀರಪ್ಪ ಮೊಯ್ಲಿಯವರಂತೂ ಕಾಂಗ್ರೆಸ್ಸಿನ ಆದರ್ಶಗಳು ಸಂಘದ ಆದರ್ಶಗಳಿಗಿಂತ ಭಿನ್ನವಾಗಿರುವುದರಿಂದ ಪ್ರಣಬ್ ಹೋಗಬಾರದು ಎಂಬ ಹೊಸ ಸಿದ್ಧಾಂತವನ್ನು ಮುಂದಿಟ್ಟು ನಗೆಪಾಟಲಿಗೀಡಾದರು. ಏಕೆ ಗೊತ್ತೇ? ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾದರೂ ಸಿದ್ಧಾಂತ, ಆದರ್ಶ ಎಂಬುದೆಲ್ಲ ಇದೆ. ಕೊನೇಪಕ್ಷ ಹಿಂದುತ್ವ ತಮ್ಮ ಆಧಾರವೆಂದು ಧೈರ್ಯದಿಂದ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ಸಿಗೆ ಅಂಥ ಆಧಾರ ಯಾವುದು? ಅಧಿಕಾರದಾಹವಾ? ಅಲ್ಪಸಂಖ್ಯಾತರ ತುಷ್ಟೀಕರಣವಾ, ದೇಶದ ಸಂಪತ್ತನ್ನು ಲೂಟಿಮಾಡಿ ವಿದೇಶದಲ್ಲಿ ಕೂಡಿಡುವುದಾ, ಯಾವುದು? ಸ್ವಾತಂತ್ರ್ಯ ಬಂದು ಮೊದಲೈದು ದಶಕಗಳ ಕಾಲ ಭಾರತವನ್ನು ವಿಕಾಸದ ಪಥದಿಂದ ಆಚೆಗೊಯ್ದದ್ದು ಕಾಂಗ್ರೆಸ್ಸಿನ ನೀತಿಯೇ ಇಲ್ಲದ ರಾಜಕಾರಣ. ನೆಹರು ತಮಗಿಚ್ಛೆ ಬಂದಂತೆ ಆಡಳಿತ ನಡೆಸಿದರು. ಇಂದಿರಾ ಸರ್ವಾಧಿಕಾರಿಯಾದರು. ರಾಜೀವ್ ಅರ್ಹತೆಯೇ ಇಲ್ಲದೆ ಗದ್ದುಗೆ ಏರಿದರು. ಸೋನಿಯಾ ತಾವು ಹೇಳಿದಂತೆ ಕೇಳುವ ವ್ಯಕ್ತಿಯ ಮೂಲಕ ಆಡಳಿತ ನಡೆಸಿದರು. ಒಟ್ಟಾರೆಯಾಗಿ ಭಾರತ ಹಿಂದುಳಿಯಿತು. ಈ ನಡುವೆ ಸದಾ ಭಾರತವನ್ನು ಜಾಗತಿಕ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಬೇಕೆಂದು ಪ್ರಯತ್ನಿಸುತ್ತಿರುವ ಸಂಘ ಮಾತ್ರ ಒಂದು ಶತಮಾನದ ಕಾಲ ಏಕೈಕ ಉದ್ದೇಶದಿಂದ ಗುರುತರವಾಗಿ ಶ್ರಮಿಸಿತು.

ರಾಷ್ಟ್ರಮುಖಿ ಬದುಕು: ಜಯಪ್ರಕಾಶರ ಆಂದೋಲನ ನಡೆಯುವಾಗ ಜೈಲಿನಲ್ಲಿದ್ದ ಬಾಳಾಸಾಹೇಬ್ ದೇವರಸರಿಗೆ, ವೈಮನಸ್ಯ ತೊರೆದು ಅಧಿಕಾರ ಪಡೆಯಲು ಸಹಕರಿಸಿರೆಂದು ಇಂದಿರಾ ಕೇಳಿಕೊಂಡಿದ್ದರಂತೆ. ಅದನ್ನು ನಿರಾಕರಿಸಿದ ಸಂಘ ಇಂದಿಗೂ ರಾಷ್ಟ್ರಮುಖಿಯಾಗಿ ಬದುಕಿದೆ. ಆದರೆ ಜಯಪ್ರಕಾಶ ನಾರಾಯಣರ ಜತೆಯಲ್ಲಿದ್ದೂ ಇಂದಿರಾ ವಿರೋಧಿಯಾಗಿ ಬೆಳೆದು ಅಧಿಕಾರ ಗಿಟ್ಟಿಸಿಕೊಂಡ ಅನೇಕರು ಇಂದು ಮಹಾಘಟಬಂಧನದಲ್ಲಿ ಒಟ್ಟಾಗಿ ನಿಂತಿದ್ದಾರೆ. ಇಂದಿರಾ ತಮ್ಮೆಲ್ಲ ದ್ವೇಷವನ್ನು ಸಂಘದ ವಿರುದ್ಧ ಸುಳ್ಳುಸುದ್ದಿ ಹಬ್ಬಿಸುವ ಮೂಲಕ ತೀರಿಸಿಕೊಂಡುಬಿಟ್ಟರು. ಆಳುವವರ ಈ ಬಗೆಯ ಧಾಷ್ಟರ್್ಯವನ್ನು ನುಂಗಿಕೊಂಡು ಸಂಘ ಮಾತ್ರ ಬಲವಾಗಿ ಬೆಳೆದು ನಿಂತಿತು. 1925ರಲ್ಲಿ ಹುಟ್ಟಿದ ಸಂಘ 1940ರ ವೇಳೆಗೆ ಎಲ್ಲ ರಾಜ್ಯವನ್ನೂ ಮುಟ್ಟಿತು. 1980ರ ವೇಳೆಗೆ ಎಲ್ಲ ಜಿಲ್ಲೆಗಳನ್ನು ತಲುಪಿದ್ದಲ್ಲದೇ ಇಂದು 10 ಕೋಟಿಗೂ ಹೆಚ್ಚು ಸಂಖ್ಯೆಯ ಮೂಲಕ ಜಗತ್ತಿನ ಬಲು ದೊಡ್ಡ ಸರ್ಕಾರೇತರ ಸಂಸ್ಥೆಯಾಗಿ ಬೆಳೆದು ನಿಂತಿದೆ. ‘ಸಂಪ್ರದಾಯವಾದಿ’ ಎಂಬ ಮೂದಲಿಕೆಗೆ ಒಳಗಾಗುವ ಆರ್​ಎಸ್​ಎಸ್​ನ ಕೆಲವು ಸರಸಂಘಚಾಲಕರುಗಳು ಅಪಾರ ಬುದ್ಧಿಮತ್ತೆಯವರು ಮತ್ತು ವಿಜ್ಞಾನವನ್ನೇ ಅಧ್ಯಯನ ಮಾಡಿದವರು. ಎರಡನೇ ಸರಸಂಘಚಾಲಕರಾದ ಗುರೂಜಿಯವರು ಎಂಎಸ್​ಸಿ ಅಧ್ಯಯನ ಮಾಡಿದ್ದರೆ, ರಜ್ಜು ಭಯ್ಯಾ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರಲ್ಲದೆ ಅಣುವಿಭಾಗದ ವಿಜ್ಞಾನಿಯೂ ಆಗಿದ್ದರು.

ಇದೇ ಸಂಘದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿಗಳು ಭೇಟಿಕೊಟ್ಟು ರಾಷ್ಟ್ರೀಯತೆ, ಭಾರತೀಯ ಸಭ್ಯತೆ, ನಾಗರಿಕತೆಗಳ ಕುರಿತಂತೆ ಮನಮುಟ್ಟುವಂತೆ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಸರಸಂಘಚಾಲಕರು ಭಾರತದ ಯಾವ ವೈವಿಧ್ಯವನ್ನು ಕೊಂಡಾಡಿದ್ದರೋ ಅದಕ್ಕೆ ಪೂರಕವಾಗಿಯೇ ಪ್ರಣಬ್ ಮುಖರ್ಜಿಯವರು ಮಾತನಾಡಿದ್ದು ಎಲ್ಲರ ಹುಬ್ಬೇರಿಸುವಂತಾಗಿತ್ತು. ರಾಜಕೀಯ ಲೆಕ್ಕಾಚಾರಗಳು ಎಷ್ಟೆಲ್ಲ ವೇಗವಾಗಿ ಕೂಡುವ ಕಳೆಯುವ ಪ್ರಕ್ರಿಯೆ ಮಾಡಿತ್ತೆಂದರೆ ಶಿವಸೇನಾದ ಮುಖವಾಣಿ ‘ಸಾಮ್ನಾ’ ಮೋದಿಗೆ ಬಹುಮತ ಕೊರತೆಯಾದರೆ ಸಂಘದ ಆಯ್ಕೆ ಪ್ರಣಬ್ ಮುಖರ್ಜಿ ಎಂದೂ ಹೇಳಿಬಿಟ್ಟಿತು. ಈ ಎಲ್ಲ ಕದನಗಳಲ್ಲಿ ಮನೆ-ಮನೆ ಮುಟ್ಟಿ ಪ್ರತಿಯೊಬ್ಬರೆದುರಿಗೆ ತನ್ನ ತಾನು ಮತ್ತೊಮ್ಮೆ ಅನಾವರಣಗೊಳಿಸುವ ಅವಕಾಶ ಪಡೆದದ್ದು ಮಾತ್ರ ರಾಷ್ಟ್ರೀಯ ಸ್ವಯಂಸೇವಕ ಸಂಘವೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top