Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಸಾಹಿತ್ಯ ಶ್ರೀಮಂತಗೊಳಿಸಿದ ಸರಸ್ವತಿಪುತ್ರಿಯರು

Saturday, 15.07.2017, 3:00 AM       No Comments

ಓದುವುದು, ಬರೆಯುವುದು, ಉಪನ್ಯಾಸ ನೀಡುವುದು ಇವೆಲ್ಲ ಯಾರೋ ಬಲವಂತ ಮಾಡಿ ಬರುವಂಥವಲ್ಲ; ಅದಕ್ಕೆ ಸ್ವಯಂಪ್ರೇರಣೆ ಬೇಕು. ಮಹಿಳೆಯರು ಸಾಹಿತ್ಯ-ಸಂಗೀತಪ್ರೇಮಿಗಳಾದರೆ ಸಮಾಜ ಉತ್ತಮಮಿಕೆಗೆ ಕೊಡುಗೆ ದಕ್ಕಿದಂತಾಗುತ್ತದೆ. ಹೀಗೆ ಸಾಹಿತ್ಯಸೇವೆ ಮಾಡಿ ಅಳಿಯದ ಹೆಸರು ಸಂಪಾದಿಸಿದ ಹಲವು ಸರಸ್ವತಿಪುತ್ರಿಯರು ನಮಗೆಲ್ಲ ಆದರ್ಶವಾಗಬೇಕು.

12ನೆಯ ಶತಮಾನದ ಅಕ್ಕಮಹಾದೇವಿ ಕನ್ನಡದ ಪ್ರಥಮ ಕವಯಿತ್ರಿ ಎಂದು ಖ್ಯಾತಿಪಡೆದ ಅತ್ಯದ್ಭುತ ದಾರ್ಶನಿಕಳು. ಅಪರಿಮಿತ ರೂಪವತಿ, ಗುಣವತಿ. ಭಕ್ತಿಯ ಪರಾಕಾಷ್ಠೆಗೆ ಅತ್ಯುತ್ತಮ ಉದಾಹರಣೆಯಾದ ಅಕ್ಕಮಹಾದೇವಿ- ‘ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು, ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು, ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು, ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು, ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ ನಾ ನಿಮ್ಮ ಮರೆತು ಭವದುಃಖಕ್ಕೀಡಾದೆ, ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ ನಿಮ್ಮ ಪಾದವನರುಹಿಸಯ್ಯಾ ಚೆನ್ನಮಲ್ಲಿಕಾರ್ಜುನ’ ಎಂದು ಇಡೀ ಸಂಸಾರದ ಸಾರವನ್ನು ಒಂದೇ ವಚನದಲ್ಲಿ ಹಾಡಿದ್ದಾಳೆ! ‘ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ? ಧನವಿದ್ದು ಫಲವೇನು ದಯವಿಲ್ಲದನ್ನಕ್ಕ? ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ? ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ? ಅಗಲಿದ್ದು ಫಲವೇನು ಬೋನವಿಲ್ಲದನ್ನಕ್ಕ? ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ? ಚೆನ್ನಮಲ್ಲಿಕಾರ್ಜುನಾ’ ಎಂದು ಶರಣಶ್ರೇಷ್ಠೆ ಅಕ್ಕಮಹಾದೇವಿ ಬದುಕಿನ ಸಾರ್ಥಕತೆ ವಿವರಿಸಿದರೆ, ಶರಣೆ ಸತ್ಯಕ್ಕ- ‘ಲಂಚ ವಂಚನಕ್ಕೆ ಕೈಯಾನದ ಭಾಷೆ! ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದಡೆ ಕೈಮುಟ್ಟಿ ಎತ್ತಿದೊಡೆ ಅಯ್ಯಾ ನಿಮ್ಮಾಣೆ, ನೀವಿಕ್ಕಿದ ಭಿಕ್ಷೆಯೊಳಗಾನಿಪ್ಪೆನಯ್ಯಾ ಶಂಭುಜಕ್ಕೇಶ್ವರ ದೇವಯ್ಯಾ’ ಎಂದು ಪ್ರಾಮಾಣಿಕತೆಯ ಪರಾಕಾಷ್ಠೆ ಮೆರೆದು ಸಮಾಜ ಶುಚಿಗೊಳಿಸುವ ಪರಿ ತೋರಿಸಿದ್ದಾಳೆ. ಇನ್ನು ಶರಣೆ ಆಯ್ದಕ್ಕಿ ಲಕ್ಕಮ್ಮ ತನ್ನ ಪತಿರಾಯರಿಗೇ ‘ಆಸೆ ಒಳ್ಳೆಯದಲ್ಲ’ ಎಂದು ತಿಳಿಸುತ್ತ- ‘ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ? ಕೋಪವೆಂಬುದು ಯಮದೂತರಿಗಲ್ಲದೆ ಅಜಾತರಿಗೆ ಉಂಟೆ ಅಯ್ಯ? ಈಸಕ್ಕಿ ಆಸೆ ನಿಮಗೇಕೆ ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ’ ಎನ್ನುವ ಲಕ್ಕಮ್ಮನಂತೆ ಇಂದಿನ ನಮ್ಮ ಮಹಿಳೆಯರು ಸಮಾಜದಲ್ಲಿಯ ಆಸೆಬುರುಕತನ, ಕೋಪ-ತಾಪ ಕಡಿಮೆ ಮಾಡಲು ಪ್ರಯತ್ನಿಸಬೇಕು. ಕುಟುಂಬದ ಮತ್ತು ಸಮಾಜದ ಶಾಂತಿ ಕದಡುವ ಕೋಪ ಯಮದೂತರಂತೆ ಎಂದು ನಾವೆಲ್ಲ ಅರಿಯಬೇಕು. ಮಹಾಜ್ಞಾನಿಯಾದ ಅಜಗಣ್ಣನ ತಂಗಿ ಮುಕ್ತಾಯಕ್ಕ ಹೇಳುತ್ತಾಳೆ- ‘ನುಡಿಯಲುಬಾರದು ಕೆಟ್ಟ ನುಡಿಗಳ, ನಡೆಯಲುಬಾರದು ಕೆಟ್ಟ ನಡೆಗಳ, ನುಡಿದಡೇನು ನುಡಿಯದಿರ್ದಡೇನು? ಹಿಡಿದ ವ್ರತ ಬಿಡದಿರಲು ಅದೇ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣತಂದೆ’ ಎನ್ನುವುದನ್ನು ಕೆಟ್ಟ ನಡೆ-ನುಡಿಗಳಿಂದ ಕೆಡುತ್ತಿರುವ ಇಂದಿನ ಸಮಾಜದಲ್ಲಿ ಜನರು ಅರಿಯಬೇಕು.

ಬಸವಣ್ಣನವರ ವೈಚಾರಿಕ ಪತ್ನಿ ಎಂದೇ ಹೆಸರಾದ ಶರಣೆ ನೀಲಾಂಬಿಕೆ ಹೇಳುತ್ತಾರೆ- ‘ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು, ಆಹಾ ಮನವೆ ಸಂತೈಸಿಕೊ ನಿನ್ನ ನೀನೆ. ಆಗೆಂದಡೆ ನಿನ್ನ ವಶವಲ್ಲ ಪೋಗೆಂದಡೆ ನಿನ್ನಿಚ್ಛೆಯಲ್ಲ ಭೋಗಾದಿಭೋಗಂಗಳೆಲ್ಲವೂ ಸಂಗಯ್ಯನಾಧೀನವಾಗಿ’ ಎನ್ನುತ್ತಾಳೆ. ಇಂದು ಸಮಾಜದಲ್ಲಿ ನಷ್ಟಕ್ಕೆ ಮುನಿಸಿಕೊಂಡು ಲಾಭಕ್ಕೆ ಬೆನ್ನಟ್ಟುವ ಅಜ್ಞಾನಿ ಜನರು ಮನಸ್ತಾಪದಿಂದ ಆತಂಕ, ದುಗುಡಕ್ಕೆ ತುತ್ತಾಗುತ್ತಿದ್ದಾರೆ. ಧ್ಯಾನ, ಪೂಜೆಯಿಂದ ಮನಸ್ಸನ್ನು ಸಮಾಧಾನಪಡಿಸಿಕೊಂಡು ಸ್ಥಿತಪ್ರಜ್ಞರಾಗುವುದನ್ನು ಬಿಟ್ಟು ರೋಗಗ್ರಸ್ತರಾಗುತ್ತಿದ್ದಾರೆ. ಇಂತವರಿಗೆ ಆಗುಹೋಗುಗಳು ಭಗವಂತನಿಚ್ಛೆ, ಕಾಯಕ ದಾಸೋಹ ಮಾಡುವುದು ಮಾತ್ರ ನಮ್ಮ ಕರ್ತವ್ಯವೆಂದು ತಿಳಿಸಿದ್ದಾರೆ!

ಬಸವಣ್ಣನವರ ಅಕ್ಕ, ಪರಮ ಪರಾಕ್ರಮಿ, ಸಾಹಿತ್ಯಕ, ಸಾಮಾಜಿಕ, ಧಾರ್ವಿುಕ, ಸಾಂಸ್ಕೃತಿಕ ಕ್ರಾಂತಿಯ ಗಂಗೋತ್ರಿ ಅಕ್ಕ ನಾಗಮ್ಮ ಹೇಳುತ್ತಾರೆ- ‘ಮನದೊಡೆಯ ಮಹಾದೇವ, ಮನವ ನೋಡಿಹನೆಂದು ಮನುಜರ ಕೈಯಿಂದ ಒಂದೊಂದು ನುಡಿಸುವನು. ಇದಕೆ ಕಳವಳಿಸದಿರು ಮನವೇ, ಇದಕೆ ಕಾತರಿಸದಿರು ತನುವೇ, ನಿಜವ ಮರೆಯದಿರು ಕಂಡಾ ನಿಶ್ಚಿಂತವಾಗಿರು ಮನವೇ, ಬಸವಣ್ಣಪ್ರಿಯ ಸಂಗಯ್ಯನ ಬೆಟ್ಟದನಿತಪರಾಧವನು ಒಂದು ಬೊಟ್ಟಿನಲಿ ತೊಡೆವನು’ ಎಂದು ಸ್ಥಿತಪ್ರಜ್ಞನಾಗಿರಲು ಭಗವಂತನನ್ನು ನಂಬಬೇಕು, ನಿಶ್ಚಿಂತೆಯಿಂದ ಬಾಳಬೇಕೆಂಬ ಬಂಗಾರದಂಥ ಬದುಕುವ ರೀತಿ ತಿಳಿಸಿದ್ದಾರೆ!

‘ಹದಿಬದೆಯ ಧರ್ಮ’ ಅಥವಾ ‘ಸ್ತ್ರೀಧರ್ಮ ಸಾಂಗತ್ಯ’ ಎಂಬ ಕೃತಿ ರಚಿಸಿದ ಸಂಚಿ ಹೊನ್ನಮ್ಮ 17ನೇ ಶತಮಾನದ ಧೀಮಂತ ಸಾಹಿತಿ. ಸ್ತ್ರೀಪರ ಕಾಳಜಿಯಿದ್ದ ಇವರು ಸಮಾಜ ಕಟ್ಟುವಲ್ಲಿ ಹೆಣ್ಣಿನ ಮಹತ್ವ ಏನೆಂಬುದನ್ನು ಈ ಕೃತಿಯ ಒಂಭತ್ತು ಸಂಧಿಗಳಲ್ಲಿ ವಿವರಿಸಿದ್ದಾರೆ. ಎರಡನೇ ಸಂಧಿಯಲ್ಲಿ ಪಾತಿವ್ರತ್ಯದ ಮಹಿಮೆಯನ್ನು ನಿರೂಪಿಸಿದ್ದಾರೆ. ಹೆಣ್ಣಾದವಳು ಅತ್ತೆ-ಮಾವ, ನೆರೆಹೊರೆಯವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಅವರು ವಿವರಿಸಿದ್ದಾರೆ. ತಂದೆ-ತಾಯಂದಿರು ಹೆಣ್ಣುಮಕ್ಕಳ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ಐದನೇ ಸಂಧಿಯಲ್ಲಿ ಕಳಕಳಿಯಿಂದ ವಿವರಿಸಿದ್ದಾರೆ. ಇದು ತಾಯಿಯ ಹೊಟ್ಟೆಯಲ್ಲಿರುವಾಗಲೇ ಹೆಣ್ಣು ಭ್ರೂಣಹತ್ಯೆ ಮಾಡುವ ಮಹಾಪಾತಕಿಗಳಿಗೆ ಕನ್ನಡಿಯಾಗಿದೆ. ಆರು ಮತ್ತು ಏಳನೇ ಸಂಧಿಯಲ್ಲಿ ಕ್ರಮವಾಗಿ ದಾಂಪತ್ಯ ಜೀವನ ಮತ್ತು ಪಾತಿವ್ರತ್ಯಕ್ಕಿರುವ ತಪಶ್ಶಕ್ತಿಯನ್ನು ನಿರೂಪಿಸಿದ್ದಾರೆ. ಎಂಟನೇ ಸಂಧಿಯಲ್ಲಿ ಗೃಹಿಣಿಯರ ಕರ್ತವ್ಯ ತಿಳಿಸಿದರೆ, ಭಗವಂತನ ನಾಮಸ್ಮರಣೆಯಿಂದ ಮುಕ್ತಿ ದೊರೆಯುವ ಸಂದೇಶ ಒಂಭತ್ತರಲ್ಲಿದೆ. ಇದು ವಿಶ್ವದ ಮಹಿಳೆಯರಿಗೆ ಮಾದರಿ.

ಸುಸಂಸ್ಕೃತ ಸಮಾಜದ ಚೌಕಟ್ಟಿನಲ್ಲಿದ್ದುಕೊಂಡೇ ಮಹಿಳೆಯರನ್ನು ಹೀಯಾಳಿಸಿ ‘ಮಹಿಳೆಯರ ಬುದ್ಧಿ ಮೊಳಕಾಲು ಕೆಳಗೆ’ ಎನ್ನುವ ದುರಹಂಕಾರಿ ಗಂಡಸರಿಗೆ ಸಂಚಿ ಹೊನ್ನಮ್ಮ ಚಾಟಿಯೇಟು ಕೊಟ್ಟಂತೆ ಹೀಗೆ ಬರೆದಿದ್ದಾರೆ- ‘ಪೆಣ್ಣು ಪೆತ್ತವರ ಬಳಗ ಬಳೆವುದು ಬೇಗ, ಪೆಣ್ಣು ಪೆತ್ತವರು ಪೆರ್ಚುವರು, ಪೆಣ್ಣು ಪೆತ್ತವರಿಂದ ಪೆಸರೆನಿಸಿತು ಮಿಗೆ, ಉಣ್ಣವೇರಿತು ಪಾಲ್ಗಡಲು, ಪೆಣ್ಣಲ್ಲವೇ ನಮ್ಮನ್ನೆಲ್ಲ ಪಡೆದ ತಾಯಿ? ಪೆಣ್ಣಲ್ಲವೇ ಪೊರೆದವಳು? ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು’. ತಾಯಿಂದ ಹುಟ್ಟಿ ತಾಯಿಂದ ಬೆಳೆದು ಹೆಣ್ಣು ಎಂದು ಹೀಯಾಳಿಸುವ ಕಣ್ಣು ಕಾಣದ ಮೂರ್ಖರು ಎಂದು ಕರೆಯುವ ಎದೆಗಾರಿಕೆಯ ಜತೆಗೆ ಹೆಣ್ಣೆಂಬ ಅಭಿಮಾನ ಬೀರಿ ಕುರುಡು ಸಮಾಜದ ಕಣ್ಣು ತೆರೆಸಿದವರು ಸಂಚಿ ಹೊನ್ನಮ್ಮ.

1887ರಲ್ಲಿ ನಂಜನಗೂಡಿನಲ್ಲಿ ಹುಟ್ಟಿದ ತಿರುಮಲಾಂಬಾ ಕನ್ನಡದ ಪ್ರಥಮ ಕಾದಂಬರಿಕಾರ್ತಿ, ಸಂಪಾದಕಿ, ಸಮಾಜಸೇವಕಿ. ತಂದೆಯ ಪ್ರೀತಿ-ಪ್ರೋತ್ಸಾಹದಿಂದ ಲೇಖಕಿಯಾಗಿ ‘ಸತಿ ಹಿತೈಷಿಣಿ’ ಎಂಬ ಕಾವ್ಯನಾಮದಲ್ಲಿ ಸಾಮಾಜಿಕ, ಪತ್ತೆದಾರಿ ಕಾದಂಬರಿ, ಪೌರಾಣಿಕ ನಾಟಕ, ಸಣ್ಣಕತೆ, ಪ್ರಬಂಧ, ಕವನ ಹೀಗೆ ಸಾಹಿತ್ಯದ ಹಲವು ಪ್ರಕಾರಗಳ ಪ್ರಯೋಗ ಮಾಡಿ ಪ್ರಕಟಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ‘ಕರ್ನಾಟಕ ನಂದಿನಿ’ ಪತ್ರಿಕೆಯ ಸಂಪಾದಕಿಯಾಗಿ ಸ್ತ್ರೀಯರಿಂದ ಸ್ತ್ರೀಯರಿಗಾಗಿ ಪ್ರಕಟಮಾಡಿದ ಕರ್ನಾಟಕದ ಪ್ರಥಮ ಪ್ರಕಾಶಕಿಯಾದರು. ‘ಸತಿ ಹಿತೈಷಿಣಿ’ ಗ್ರಂಥಮಾಲೆ, ಪ್ರಕಾಶನ ಸಂಸ್ಥೆ ಆರಂಭಿಸಿದ ಹೆಗ್ಗಳಿಕೆ ಇವರದು. ಸನ್ಮಾರ್ಗ ನಂದಿನಿ ಎಂಬ ಗ್ರಂಥಮಾಲೆಯ ಮುಖಾಂತರ ಸಂಪ್ರದಾಯದ ಚೌಕಟ್ಟಿನಲ್ಲಿದ್ದೂ ಸ್ತ್ರೀ ಚಿಂತನೆಗೆ ಪ್ರಾಮುಖ್ಯ ಕೊಟ್ಟು ವೈಚಾರಿಕತೆಯನ್ನು ಎತ್ತಿಹಿಡಿದ ಮಹಾನ್ ಸಾಧಕಿ ಇವರು. ವಯಸ್ಸಾದಾಗ ಮದ್ರಾಸಿನಲ್ಲಿ ಮಗನ ಮನೆಯಲ್ಲಿದ್ದರೂ ‘ಕನ್ನಡ ಸಾಹಿತ್ಯಸೇವೆ ಮಾಡದಿರುವ ಬದುಕು ಸತ್ತಂತೆ’ ಎಂಬ ಭಾವನೆ ಅವರ ಮನದಲ್ಲಿ ಬಂದಿತ್ತು. ಅವರನ್ನು ಅರಸಿಕೊಂಡು ಚಿ.ನಾ. ಮಂಗಳಾ ಅವರು ಮದ್ರಾಸಿನ ಮನೆಗೆ ಹೋದಾಗ ಬಾಗಿಲು ತೆಗೆದ ತಿರುಮಲಾಂಬಾ ಅವರು- ‘ತಿರುಮಲಾಂಬಾ ಸತ್ತಿದ್ದಾಳೆ’ ಎಂದು ಹೇಳಿ ಬಾಗಿಲು ಮುಚ್ಚಿಬಿಟ್ಟಿದ್ದರಂತೆ! 1982ರ ಆಗಸ್ಟ್ 31ರಂದು ಅವರು ನಿಧನರಾದ ನಂತರ, ಚಿ.ನಾ. ಮಂಗಳಾ ಅವರು ‘ಶಾಶ್ವತಿ’ ಹೆಸರಿನ ತಿರುಮಲಾಂಬಾ ಅಧ್ಯಯನ ಪೀಠವನ್ನು ಪ್ರಾರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ಎಂದೂ ಮರೆಯಲಾಗದ ಪ್ರಥಮಗಳ ಸರಮಾಲೆಯ ಸರದಾರಿಣಿ ತಿರುಮಲಾಂಬಾ ಬಾಲವಿಧವೆಯಲ್ಲ, ಕನ್ನಡ ಸಾಹಿತ್ಯದ ವಿಧಿ ಬದಲಾಯಿಸಿದ ಮಾದರಿ ಸರಸ್ವತಿಪುತ್ರಿ!

1902ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಅಂಬಾಬಾಯಿ 12ನೇ ವಯಸ್ಸಿನಲ್ಲಿ, ಪ್ಲೇಗಿಗೆ ತುತ್ತಾದ ಗಂಡ ಮತ್ತು ತಂದೆಯನ್ನು ಒಂದೇ ದಿನ ಕಳೆದುಕೊಂಡರು. ಆದರೂ ಧೈರ್ಯಗೆಡದ ಅವರು ‘ಗೋಪಾಲಕೃಷ್ಣ ವಿಠಲ’ ಎಂಬ ಅಂಕಿತನಾಮದಲ್ಲಿ ಕೀರ್ತನೆ ರಚಿಸಿದರು. ತಾಳ-ತಂಬೂರಿ ಹಿಡಿದು ಜೋಳಿಗೆ ಹಾಕಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹರಿದಾಸ ವೃತ್ತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಮಹಾಸಾಧಿ್ವ. ‘ಉಣಲು ಉಡಲು ಆಸೆ ಇಲ್ಲ, ತೊಡಲು ಇಡಲು ಮಮತೆ ಇಲ್ಲ, ಎಡದ ಬಲದ ನೆಂಟರಭಿಮಾನವಿಲ್ಲವು, ಎಡರು ಬರಲು ಭಯವಿಲ್ಲ, ಬಿಡಲು ದೇಹ ಅಂಜಿಕಿಲ್ಲ’ ಎಂದು ಹಾಡಿದ ಇವರ ‘ಗೋಪಾಲಕೃಷ್ಣ ವಿಠಲ’ ಅಂಕಿತನಾಮದ ಸುಮಾರು ಮುನ್ನೂರು ಕೀರ್ತನೆಗಳು ಸಿಕ್ಕಿವೆ. ಊರೂರಿಗೆ ಹೋಗಿ ಮಹಿಳೆಯರಿಗೆ ಭಜನೆ ಕಲಿಸುತ್ತಿದ್ದ ಅಂಬಾಬಾಯಿಯವರು ತಾವೇ ಬರೆದ ರಾಮಾಯಣದ ಸುಂದರಕಾಂಡವನ್ನು ಹಾಡಿ ಪ್ರವಚನ ಮಾಡುತ್ತಿದ್ದರು. ಇದರಿಂದ ‘ಸುಂದರಕಾಂಡದ ಅಂಬಾಬಾಯಿ’ ಎಂದೇ ಪ್ರಚಲಿತರಾದ ಪರಮ ಪವಿತ್ರಾತ್ಮ! ಭಕ್ತಿರಸ ಹರಿಸಿದ ಮಹಾನ್ ಚೇತನ!

1928ರಲ್ಲಿ ಮಂಡ್ಯದ ಸುಪ್ರಸಿದ್ಧ ವಕೀಲರೊಬ್ಬರ ಮಗಳಾಗಿ ಜನಿಸಿದ ಭಾಗೀರಥಿ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಮನಃಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿ 1947ರಲ್ಲಿ ಬಿ.ಎ. ಪದವಿಯನ್ನು ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಪಾಸು ಮಾಡಿದರು. ಇವರು ‘ತ್ರಿವೇಣಿ’ ಎಂಬ ಕಾವ್ಯನಾಮದಲ್ಲಿ 50 ಕಾದಂಬರಿಗಳನ್ನು ಬರೆದು ಕನ್ನಡಿಗರ ಮನಮುಟ್ಟಿದ ಗಾರುಡಿ. ಇವರ ಐದು ಕಾದಂಬರಿಗಳು (ಬೆಳ್ಳಿಮೋಡ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಕಂಕಣ, ಬೆಕ್ಕಿನ ಕಣ್ಣು) ಮಹಿಳಾಪ್ರಧಾನ ಚಲನಚಿತ್ರಗಳಾಗಿ ಮನೋಜ್ಞವಾಗಿ ಮೂಡಿಬಂದವು.

ಸೋಲಾಪುರದಲ್ಲಿ ಹುಟ್ಟಿ ಮರಾಠಿಯಲ್ಲಿ ವಿದ್ಯಾಭ್ಯಾಸ ಮಾಡಿ, ಕನ್ನಡದಲ್ಲಿ ‘ಜಯದೇವಿಗೀತೆ’ಯನ್ನು ಮಕ್ಕಳಿಗಾಗಿ, ‘ಸಿದ್ಧರಾಮೇಶ್ವರ ಪುರಾಣ’ವನ್ನು ಪ್ರಬುದ್ಧರಿಗಾಗಿ ರಚಿಸಿದ ಜಯದೇವಿ ತಾಯಿ ಲಿಗಾಡೆ, ಕನ್ನಡನಾಡು ಕಂಡ ಅಪ್ರತಿಮ, ಅಪರೂಪದ ಅಪರಂಜಿ! ನಿಜಾಮನ ರಜಾಕರ ಹಾವಳಿಗೆ ತತ್ತರಿಸಿದ ನಾಡಲ್ಲಿ ಹೊರಗಡೆ ಉರ್ದು ಫಲಕ ಹಾಕಿ ಒಳಗಡೆ ಕನ್ನಡ ಕಲಿಸುವ ಶಾಲೆಗಳಲ್ಲಿ 200 ಜನ ಶಿಕ್ಷಕರಿಗೆ ಸ್ವಂತಹಣವನ್ನು ಸಂಬಳವಾಗಿ ಕೊಟ್ಟ ಮಹಾನ್ ಕನ್ನಡತಿ. ಸೋಲಾಪುರವನ್ನು ಕರ್ನಾಟಕಕ್ಕೆ ಸೇರಿಸಲು ಹೋರಾಡಿದ ಸಾಧಕಿ. ತಾವು ಕಂಡ ಅಖಂಡ ಕರ್ನಾಟಕದ ಕನಸು ನನಸಾಗದಿದ್ದಾಗ, ಕನ್ನಡನಾಡಲ್ಲೇ ಮಡಿಯುವೆ ಎಂದು ಬಸವಕಲ್ಯಾಣಕ್ಕೆ ಬಂದು ಜೀವನ್ಮುಕ್ತಿ ಕಂಡ ಅಪರಿಮಿತ ಕನ್ನಡಪ್ರೇಮಿ, ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರು ಜಯದೇವಿ ತಾಯಿ ಲಿಗಾಡೆಯವರು.

115 ಕೃತಿ ರಚಿಸಿ, ಸಾಹಿತ್ಯವೆಂದರೆ ಸಮಾಜಕ್ಕೆ ಹಿತವಾಗಿರುವಂಥದ್ದು ಎಂದು ವ್ಯಾಖ್ಯಾನಿಸಿದ ನಿರುಪಮಾ ಅವರು ‘ಸಾಹಿತ್ಯದ ಸೊಬಗು’ ಎಂಬ ಕೃತಿಯಲ್ಲಿ ಸಾಹಿತ್ಯ ಸಾಗರವನ್ನು ಸಾಸಿವೆ ಕಾಳಲ್ಲಿ ಹಿಡಿದಿಟ್ಟ ಅಪರೂಪದ ಸಾಹಿತಿ. ಇನ್ನು ಅನುಪಮಾ ನಿರಂಜನ ಅವರು ವೈದ್ಯೆಯಾಗಿ ವಿಜ್ಞಾನದ ಜತೆಗೆ ಜಿಜ್ಞಾಸೆ ತುಂಬಿದ ಪ್ರಬುದ್ಧ ಲೇಖಕಿ. ಅವರ ಕೃತಿಗಳು 40-50 ಮರುಮುದ್ರಣ ಕಂಡು ಇಂದಿಗೂ ಜನಪ್ರಿಯವಾಗಿವೆ. ಹಾಸ್ಯಲೇಖಕಿ ಟಿ. ಸುನಂದಮ್ಮನವರಿಗೆ ವೈದ್ಯರಿಂದ ಸನ್ಮಾನ ಆಯೋಜಿಸಿದಾಗ ಮುಖ್ಯ ಅತಿಥಿಯಾಗಿ ಬಂದ ಖ್ಯಾತ ಚಲನಚಿತ್ರ ನಟ ಡಾ. ವಿಷ್ಣುವರ್ಧನ್, ಅವರಿಗೆ ಮಾಲೆಹಾಕಲು ಹಿಂಜರಿದು ನನಗೆ ಕೊಟ್ಟರು. ಅವರ ಸಂಕೋಚ ಕಂಡ ಸುನಂದಮ್ಮನವರು- ‘ಯಾಕಪ್ಪ ಸಂಕೋಚ, ನಾನು ನಿಮ್ಮ ತಾಯಿಸಮಾನ ಅಲ್ಲವೇ?’ ಎಂದು ಕೇಳಿದಾಗ ವಿಷ್ಣುವರ್ಧನ್ ಅವರು ಕಾಲುಮುಟ್ಟಿ ನಮಸ್ಕರಿಸಿ ಮಾಲೆಹಾಕಿದರು. ಮಾತೃತ್ವದ ಮಾನವೀಯತೆ ಮೆರೆದರು!

ಹಲವು ಶತಮಾನದಿಂದ ಹಲವಾರು ಮಹಿಳೆಯರು ಸಮಾಜಮುಖಿಗಳಾಗಿ, ಸಮಾಜದ ಹಿತಕ್ಕಾಗಿ ಸದ್ವಿಚಾರ, ಸದ್ಭಾವನೆ ಬಿತ್ತುವ ಸಾಹಿತ್ಯ ರಚಿಸಿ ಸರಸ್ವತಿಪುತ್ರಿಯರಾಗಿ ಸಾಧನೆಗೈದಿದ್ದಾರೆ. ಇವರು ಸದಾ ಪ್ರಾತಃಸ್ಮರಣೀಯರು.

Leave a Reply

Your email address will not be published. Required fields are marked *

Back To Top