Friday, 21st September 2018  

Vijayavani

Breaking News

ಕೃಷ್ಣಾ ಟೆಂಡರ್ ಸಭೆ ರದ್ದು

Thursday, 24.05.2018, 3:03 AM       No Comments

ಬೆಂಗಳೂರು: ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಟೆಂಡರ್ ಅಂತಿಮಗೊಳಿಸಲು ತರಾತುರಿಯಲ್ಲಿ ಕರೆದಿದ್ದ ಸಭೆಯನ್ನು ಅಧಿಕಾರಿಗಳು ದಿಢೀರ್ ರದ್ದು ಮಾಡಿದ್ದಾರೆ.

ವಿಜಯವಾಣಿ ಮುಖಪುಟದಲ್ಲಿ ಬುಧವಾರ ‘ಕೃಷ್ಣಾ ಟೆಂಡರ್ ಗೋಲ್​ವಾಲ್’ ಶೀರ್ಷಿಕೆಯಡಿ ತನಿಖಾ ವರದಿ ಪ್ರಕಟ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಟೆಂಡರ್ ಅಂತಿಮಗೊಳಿಸಲು ಕರೆದಿದ್ದ ಸಭೆ ರದ್ದುಪಡಿಸಿ, ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತದ ಟೆಂಡರ್ ಪರಿಶೀಲನಾ ಸಮಿತಿ ಅಧ್ಯಕ್ಷ ಬಿ.ಜಿ.ಗುರುಪಾದಸ್ವಾಮಿ ಸಭೆ ಮುಂದೂಡಲಾಗಿದೆ ಎಂದರು.

ಹಿಂದೇನಾಗಿತ್ತು?: ನಿಗಮದ 16 ಕಾಮಗಾರಿಗಳಿಗೆ ಚುನಾವಣೆಗೂ ಮೊದಲು ಅಂತಿಮ ರೂಪ ನೀಡಲು ನಿರ್ಧರಿಸಲಾಗಿತ್ತು. ಆದರೆ, ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದ ನಂತರ ಸಭೆಯನ್ನು ಮತ್ತೆ ಮುಂದೂಡಲಾಯಿತು. ಚುನಾವಣೆ ಅಂತ್ಯಗೊಂಡು ಫಲಿತಾಂಶ ಪ್ರಕಟವಾದ ಬಳಿಕ ಸಭೆ ನಿಗದಿ ಮಾಡಲಾಗಿತ್ತು. ಮೇ 23ರಂದು ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿತ್ತು. ನಿಗಮದ ಸುಮಾರು 16 ವಿವಿಧ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ರೂಪ ನೀಡಲು ಅಧಿಕಾರಿಗಳು ಮುಂದಾಗಿದ್ದರು.

ಅಧಿಕಾರಿಗಳು ಹೇಳೋದೇನು?

ನಿಗಮದ ಟೆಂಡರ್​ಗಳನ್ನು ಅಂತಿಮಗೊಳಿಸಲು ಮೇ 23ರಂದು ಟೆಂಡರ್ ಪರಿಶೀಲನಾ ಸಮಿತಿ ಸಭೆ ಕರೆಯಲಾಗಿತ್ತು. ಆದರೆ, ಇಲಾಖೆಯ ಕಾರ್ಯದರ್ಶಿ ಅವರನ್ನು ವಿಧಾನಪರಿಷತ್ ಚುನಾವಣೆಗೆ ನೇಮಕ ಮಾಡಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಸಭೆ ನಡೆಸಿ ಟೆಂಡರ್​ಗಳನ್ನು ಅಂತಿಮಗೊಳಿಸಲು ಹಿಂದಿನ ಸರ್ಕಾರ ಇದ್ದಾಗಲೇ ಆದೇಶ ಇತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹೊಸದಾಗಿ ಸಭೆ ನಿಗದಿ ಮಾಡಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಟೆಂಡರ್ ಅಂತಿಮಗೊಳಿಸಲು ಬೆಂಗಳೂರಿನಲ್ಲಿ ಕರೆದಿದ್ದ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸಭೆ ನಡೆಯುವ ಮುಂದಿನ ದಿನಾಂಕ ಇನ್ನೂ ನಿರ್ಧರಿಸಿಲ್ಲ.

| ಬೂದಿಹಾಳ್ ಮಠ, ನಿಗಮದ ಮುಖ್ಯ ಎಂಜಿನಿಯರ್

Leave a Reply

Your email address will not be published. Required fields are marked *

Back To Top