Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಪರಿಪೂರ್ಣತೆಯತ್ತ ಸಾಗೋಣ

Thursday, 22.03.2018, 3:03 AM       No Comments

| ರಾಗಿಣಿ

ಕುದುರೆಯೊಂದು ಸುಂದರ, ಸುವಾಸನೆ ಬೀರುವ ಹೂಗಳನ್ನು ತುಂಬಿದ್ದ ಗಾಡಿಯನ್ನು ಎಳೆಯುತ್ತಿತ್ತು. ಗಾಡಿಯೊಳಗಿನ ಹೂಗಳ ಪರಿಮಳ ಮತ್ತು ಅತಿ ಭಾರವಿಲ್ಲದ ಗಾಡಿಯನ್ನು ಎಳೆಯುವಾಗ ಕುದುರೆ ಅತಿಯಾದ ಅಹಂನಿಂದ ಬೀಗುತ್ತಿತ್ತು. ಹೀಗೆಯೇ ದಾರಿ ಮಧ್ಯೆ ಬೀಗುತ್ತ ಸಾಗುತ್ತಿದ್ದ ಕುದುರೆ ಸೌದೆ ತುಂಬಿದ ಗಾಡಿಯನ್ನು ಎಳೆಯುತ್ತಿದ್ದ ಇನ್ನೊಂದು ಕುದುರೆಯನ್ನು ತಿರಸ್ಕಾರದಿಂದ ನೋಡಿ- ‘ನನ್ನನ್ನು ನೋಡು, ನನ್ನ ಸುತ್ತಮುತ್ತಲಿರುವಂಥ ಸುಗಂಧ ನಿನ್ನ ಬಳಿ ಇದೆಯೇ? ನಾನು ರಸ್ತೆ ತುಂಬ ಸುಗಂಧ ಬೀರುತ್ತಿದ್ದೇನೆ, ಎಳೆಯುವ ಕಸರತ್ತಿನ ಅನುಭವವೇ ಆಗುತ್ತಿಲ್ಲ. ಎಷ್ಟು ಹಗುರವಾಗಿದೆ ನನ್ನ ಗಾಡಿ’ ಎಂದು ಮೂದಲಿಸಿತು.

ಸೌದೆಗಳಿಂದ ಭಾರವಾಗಿದ್ದ ಗಾಡಿಯನ್ನು ಪ್ರಯಾಸದಿಂದ ಎಳೆಯುತ್ತಿದ್ದ ಕುದುರೆ ಪೆಚ್ಚು ಮೋರೆ ಹಾಕಿಕೊಂಡು ಹೋಯಿತು. ಇತ್ತ ಹೂವಿನ ಗಾಡಿಯ ಮಾಲೀಕ ಸಂತೆಯಲ್ಲಿ ಹೂಗಳನ್ನು ಮಾರಿ ಹಿಂದಿರುಗುವಾಗ ಗಾಡಿಯಲ್ಲಿ ಗೊಬ್ಬರ ತುಂಬಿಕೊಂಡು ಬಂದನು. ಈಗ ಮತ್ತೆ ದಾರಿಯಲ್ಲಿ ಸೌದೆ ಹೊತ್ತಿದ್ದ ಅದೇ ಕುದುರೆಯನ್ನು ಭೇಟಿ ಮಾಡಬೇಕಾಗಿ ಬಂದಾಗ ಅಹಂಕಾರದಿಂದ ಬೀಗಿದ್ದ ಕುದುರೆ ತಲೆತಗ್ಗಿಸಿತು.

ಇಂಥ ಅಹಂ ಪ್ರವೃತ್ತಿ ಮನುಷ್ಯರಲ್ಲಿ ಹೆಚ್ಚಾಗಿ ಕಾಣುತ್ತೇವೆ. ಜೀವನ ಎನ್ನುವುದೊಂದು ಚಕ್ರದ ರೀತಿ. ಮೇಲೆ ಹೋದವನು ಒಮ್ಮೆಯಾದರೂ ಕೆಳಗೆ ಬರಲೇಬೇಕು. ಆಗ ಮೇಲಿದ್ದವ ಕೆಳಗಿನವನನ್ನು ನೋಡಿ ಅಪಹಾಸ್ಯ ಮಾಡಬಾರದು. ಹಾಗೇ ಮಾಡಿದ್ದೇ ಆದಲ್ಲಿ ತನ್ನ ಜೀವನಬಂಡಿ ಕೆಳಗಿಳಿದಾಗ ಅವರನ್ನು ನೋಡಿ ತಲೆತಗ್ಗಿಸಬೇಕಾಗುವುದು ನಿಶ್ಚಿತ. ಇನ್ನೊಬ್ಬರನ್ನು ಹಿಂದಿನಿಂದ ನಿಂದಿಸಿದರೆ ಮುಂದೊಂದು ದಿನ ಅದೇ ಸ್ಥಿತಿ ನಾವು ಎದುರಿಸಬೇಕಾಗಿ ಬರಬಹುದು. ಆಗ ಅವಮಾನದಿಂದ ತಲೆ ತಗ್ಗಿಸಬೇಕಾಗಬಹುದು. ಮನುಷ್ಯನಲ್ಲಿರುವ ಅಹಂಕಾರ ಮತ್ತು ‘ನಾನು’ ಎನ್ನುವುದು ಮರದ ಒಳಗೆ ಸೇರಿರುವ ಗೆದ್ದಲು ಹುಳುವಿನ ತರಹ. ತನ್ನ ಇರುವಿಕೆಯನ್ನು ಕಿಂಚಿತ್ತೂ ತೋರ್ಪಡಿಸದೆ, ಇಂಚಿಂಚಲ್ಲೂ ಸೇರಿಕೊಂಡು ಸರ್ವನಾಶಕ್ಕೆ ಕಾರಣವಾಗುತ್ತದೆ. ಎದ್ದಾಗ ಬೀಗದೆ, ಬಿದ್ದಾಗ ಕುಗ್ಗದೆ ಪ್ರೌಢತೆಯಿಂದ ಸಮತೋಲನ ಕಾಯ್ದುಕೊಂಡು ಪರಿಪೂರ್ಣತೆಯಿಂದ ಬದುಕೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

([email protected])

Leave a Reply

Your email address will not be published. Required fields are marked *

Back To Top