Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಪುಣ್ಯವೆಂಬ ಕರೆನ್ಸಿ

Saturday, 22.09.2018, 3:02 AM       No Comments

| ಡಾ. ಕೆ.ಪಿ. ಪುತ್ತೂರಾಯ

ಪಂಡಿತರೊಬ್ಬರ ಉಪನ್ಯಾಸ ನಡೆಯುತ್ತಿತ್ತು. ಕೋಟ್ಯಧಿಪತಿಯೊಬ್ಬ ಅದರ ಕೇಳುಗರಲ್ಲಿ ಒಬ್ಬನಾಗಿದ್ದ. ‘ಈ ಜಗತ್ತಿನಲ್ಲಿ ಬಹುತೇಕರು ಹಣದ ಹಿಂದೆ ಬಿದ್ದಿರುವಂಥವರೇ; ಇವರಿಗೆ ವಾಮಮಾರ್ಗದಲ್ಲಾದರೂ ಸರಿ ಅಪಾರಹಣ ಗಳಿಸುವಾಸೆ. ಆದರೆ ಸತ್ತ ಮೇಲೆ ಅದನ್ನು ಜತೆಗೆ ಒಯ್ಯಲಾಗುವುದಿಲ್ಲ ಎಂಬ ಅರಿವೇ ಇವರಿಗಿಲ್ಲ. ಆದರೂ ಅತಿರೇಕದ ಹಣ ಸಂಗ್ರಹಣೆಯ ಹುಚ್ಚು ಇವರನ್ನು ಬಿಟ್ಟಿಲ್ಲ…’ ಎಂಬುದಾಗಿ ಆ ಪಂಡಿತರ ಉಪನ್ಯಾಸಧಾರೆ ಹರಿಯುತ್ತಿತ್ತು.

‘ಈ ಪಂಡಿತನ ಬಳಿ ಹಣವಿಲ್ಲ ಎನಿಸುತ್ತದೆ; ಆದ್ದರಿಂದಲೇ ಈ ಥರ ಬಡಬಡಿಸುತ್ತಿದ್ದಾನೆ’ ಎಂದು ತನಗೆತಾನೇ ಹೇಳಿಕೊಂಡ ಆ ಕೋಟ್ಯಧಿಪತಿ, ಕೋಪಗೊಂಡು ಮನೆಗೆ ಬಂದ. ಆದರೂ ಪಂಡಿತನ ಮಾತುಗಳು ಕೊರೆಯುತ್ತಲೇ ಇದ್ದುದರಿಂದ ಸುಮ್ಮನಿರಲಾರದೆ ಮನೆಯ ನೌಕರರನ್ನೆಲ್ಲ ಕರೆದು, ‘ನಮ್ಮಲ್ಲಿರುವ ಸಂಪತ್ತನ್ನು ಸತ್ತಮೇಲೂ ನಮ್ಮೊಂದಿಗೆ ಒಯ್ಯುವುದು ಹೇಗೆಂಬುದರ ವಿಧಾನವನ್ನು ಸೂಚಿಸಿ’ ಎಂದ. ‘ಇವನಿಗೆಲ್ಲೋ ಮತಿಭ್ರಮಣೆಯಾಗಿದೆ’ ಎಂದು ಭಾವಿಸಿದ ನೌಕರರು ಆ ಶ್ರೀಮಂತನಿಂದ ದೂರವುಳಿದರು.

ದಿನಗಳು ಉರುಳಿದವು. ಅಪರಿಚಿತನೊಬ್ಬ ಈ ಶ್ರೀಮಂತನಲ್ಲಿಗೆ ಬಂದು, ‘ಸತ್ತಮೇಲೂ ನಮ್ಮ ಸಂಪತ್ತನ್ನು ಜತೆಗೇ ಒಯ್ಯುವ ವಿಧಾನ ನನಗೆ ಗೊತ್ತಿದೆ’ ಎಂದಾಗ, ಪ್ರಸನ್ನಗೊಂಡ ಶ್ರೀಮಂತ, ‘ಅದನ್ನು ನನಗೂ ಹೇಳಿಕೊಡು’ ಎಂದು ಕೋರಿದ. ಅದಕ್ಕೆ ಆ ಅಪರಿಚಿತ, ‘ನೀವು ವಿದೇಶಯಾತ್ರೆ ಮಾಡಿರುವುದುಂಟಾ?’ ಎಂದು ಪ್ರಶ್ನಿಸಿದ್ದಕ್ಕೆ, ‘ಓಹೋ, ಅಮೆರಿಕೆಗಂತೂ ಬಹಳ ಸಲ ಹೋಗಿಬಂದಿರುವೆ’ ಎಂದ ಶ್ರೀಮಂತ. ‘ಸರಿ, ಆ ದೇಶವನ್ನು ಪ್ರವೇಶಿಸುವ ಮುನ್ನ ಏನು ಮಾಡಿದಿರಿ?’ ಎಂಬ ಅಪರಿಚಿತನ ಪ್ರಶ್ನೆಗೆ ‘ನನ್ನಲ್ಲಿದ್ದ ಭಾರತೀಯ ರೂಪಾಯಿಗಳನ್ನು ಅಮೆರಿಕದ ಡಾಲರ್​ಗಳಿಗೆ ವಿನಿಮಯ ಮಾಡಿಕೊಂಡೆ…’ ಎಂದುತ್ತರಿಸಿದ. ‘ಹಾಗೇಕೆ ಮಾಡಿದಿರಿ?’ ಎಂದು ಅಪರಿಚಿತ ಪ್ರಶ್ನಿಸಿದ್ದಕ್ಕೆ ಶ್ರೀಮಂತ, ‘ಭಾರತದ ರೂಪಾಯಿಗೆ ಅಮೆರಿಕದಲ್ಲಿ ಕಿಮ್ಮತ್ತು ಇರುವುದಿಲ್ಲ ಎಂಬುದು ನಿನಗೆ ತಿಳಿಯದೇ?!’ ಎಂದು ಅಪಹಾಸ್ಯ ಮಾಡಿದ. ತಕ್ಷಣ ಆ ಅಪರಿಚಿತ, ‘ಸರಿಯಾದ ಕೆಲಸವನ್ನೇ ಮಾಡಿದಿರಿ; ಅಂದಹಾಗೆ ಸತ್ತಮೇಲೆ ನಿಮಗೂ ಸ್ವರ್ಗಕ್ಕೆ ಹೋಗಬೇಕೆಂಬ ಆಸೆ ಇದ್ದಿರಬೇಕಲ್ಲವೇ?’ಎಂದು ಕೇಳಿದ್ದಕ್ಕೆ, ‘ಹೌದು, ನಿಸ್ಸಂಶಯವಾಗಿ’ ಎಂದ ಶ್ರೀಮಂತ. ‘ಹಾಗಿದ್ದರೆ ನಿಮ್ಮಲ್ಲಿನ ಹಣವನ್ನು ಸ್ವರ್ಗಲೋಕದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಗೆ ಪರಿವರ್ತಿಸಿಕೊಳ್ಳಿ’ ಎಂದು ಅಪರಿಚಿತ ಹೇಳುತ್ತಿದ್ದಂತೆ ಶ್ರೀಮಂತ ಅತ್ಯವಸರದಲ್ಲಿ ‘ಯಾವುದಪ್ಪಾ ಆ ಕರೆನ್ಸಿ…?’ ಎಂದು ಕೇಳಿದ. ಆಗ ಅಪರಿಚಿತ, ‘ಅದುವೇ ಪುಣ್ಯ! ಈ ಜಗತ್ತಿನಲ್ಲಿರುವಾಗಲೇ ನಿಮ್ಮಲ್ಲಿನ ಹಣವನ್ನು ದಾನ-ಧರ್ಮ, ಸತ್ಕಾರ್ಯ-ಸಮಾಜಸೇವೆಗಳಿಗೆ ವಿನಿಯೋಗಿಸಿ ‘ಪುಣ್ಯ’ವೆಂಬ ಕರೆನ್ಸಿಯಾಗಿ ಪರಿವರ್ತಿಸಿಕೊಳ್ಳಿ. ಸತ್ತಮೇಲೂ ಸ್ವರ್ಗಕ್ಕೆ ಸಂಪತ್ತನ್ನು ಒಯ್ಯಲು ಇರುವ ಏಕೈಕ ವಿಧಾನ ಇದೇ ಆಗಿದೆ’ ಎಂದ. ಶ್ರೀಮಂತನ ಒಳಗಣ್ಣು ತೆರೆಯಿತು; ಅಂದಿನಿಂದಲೇ ದಾನ-ಧರ್ಮ-ಸಮಾಜಸೇವೆಗೆ ಶುರುವಿಟ್ಟುಕೊಂಡ. ಜೀವನದಲ್ಲಿ ನಾವೆಷ್ಟು ಹಣ ಗಳಿಸಿದ್ದೇವೆ ಎಂಬುದಕ್ಕಿಂತಲೂ, ಗಳಿಸಿದ್ದನ್ನು ಹೇಗೆ ವಿನಿಯೋಗಿಸಿದ್ದೇವೆ ಎಂಬುದು ಮುಖ್ಯ. ಹಣ ಸಂಪಾದನೆ ತಪ್ಪಲ್ಲ; ಆದರೆ ಅದು ನನ್ನ ತೆಕ್ಕೆಯಲ್ಲೇ ಭದ್ರವಾಗಿ ಉಳಿದುಬಿಡಬೇಕು, ನನ್ನೊಬ್ಬನ ಸ್ವತ್ತೇ ಆಗಬೇಕು ಎಂಬ ಎಣಿಕೆ ತಪು್ಪ. ಅದು ಸ್ವಾರ್ಥವಲ್ಲದೆ ಮತ್ತೇನು? ಆದ್ದರಿಂದ, ನಮಗೆ ಅಗತ್ಯವಿರುವಷ್ಟು ಸಂಪತ್ತು ಇಟ್ಟುಕೊಂಡು, ಮಿಕ್ಕವನ್ನು ಸತ್ಕಾರ್ಯ-ಸಮಾಜಸೇವೆಗೆ ವಿನಿಯೋಗಿಸಿ ಪುಣ್ಯವಂತರಾಗೋಣ.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top