Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ವಿಶ್ವಾಸ ತುಂಬುವ ಕೆಲಸ ಮಾಡೋಣ

Saturday, 11.08.2018, 3:02 AM       No Comments

| ಚಿದಂಬರ ಮುನವಳ್ಳಿ

ರೈತನೊಬ್ಬ ತಾನು ಶ್ರಮವಹಿಸಿ ಬೆಳೆದ ಉತ್ತಮ ದರ್ಜೆಯ ದಾಳಿಂಬೆ ಯನ್ನು ಸಂತೆಯಲ್ಲಿ ಮಾರಲೆಂದು ಬುಟ್ಟಿಗಳಲ್ಲಿ ತುಂಬುತ್ತಿರುವಾಗ, ಸುತ್ತಲಿನ ಜನ ‘ಈ ಸಲ ಭರ್ಜರಿ ದಾಳಿಂಬೆ ಬಂದಿದ್ದು, ದರ ಕುಸಿದಿದೆ

ಯಂತೆ; ಮಾರುವವರಿಗೆ ಏನೂ ಸಿಗಲಿಕ್ಕಿಲ್ಲವೇನೋ…’ ಎಂದು ಮಾತ ನಾಡುತ್ತಿದ್ದುದು ಕೇಳಿಸಿತು. ಈ ಮಾತಿನಿಂದ ಅವನು ಆತಂಕಗೊಂಡಾಗ, ‘ಹತಾಶರಾಗಬೇಡಿ. ನಮ್ಮ ಹಣ್ಣುಗಳು ಉತ್ತಮ ದರ್ಜೆಯವು; ಒಳ್ಳೆಯ ಬೆಲೆಗೇ ಮಾರಲು ಯತ್ನಿಸಿ’ ಎಂದು ಹೆಂಡತಿ ಭರವಸೆ ತುಂಬಿದಳು.

ಸಂತೆಗೆ ಬಂದ ಗಂಡನಿಗೆ ಅದಾಗಲೇ ಬಗೆಬಗೆಯ ದಾಳಿಂಬೆಗಳು ಬಂದಿರುವುದು ಕಂಡು ಹಿಂಜರಿಕೆ-ಹೆದರಿಕೆ ಆಯಿತು. ಆದರೂ ಆರಂಭದಲ್ಲೇ ದರ ಕಡಿಮೆಮಾಡುವುದು ಬೇಡವೆಂದು ನಿರ್ಧರಿಸಿ, ತನ್ನ ದಾಳಿಂಬೆಯ ಗುಣಮಟ್ಟಕ್ಕೆ ತಕ್ಕಂತೆ ಯೋಗ್ಯಬೆಲೆಯನ್ನೇ ನಿಗದಿಪಡಿಸಿದ. ಅಚ್ಚರಿ ಯೆಂಬಂತೆ ಗಿರಾಕಿಗಳು ಅವನಿಂದಲೇ ಕೊಳ್ಳಲಾರಂಭಿಸಿದರು. ಹಣ್ಣುಗಳೆಲ್ಲ ನಿಗದಿತ ಬೆಲೆಗೇ ಮಾರಾಟ

ವಾದವು, ಹಣ ತೃಪ್ತಿಕರವಾಗೇ ಜಮೆಯಾಗಿತ್ತು. ಸಂತೆ ಮುಗಿಯುವ ವೇಳೆಯಾಯಿತು. ಮನೆಗೆ ಒಯ್ಯಬೇಕಾದ ಪದಾರ್ಥಗಳ ಜತೆಗೆ ಹೆಂಡತಿಗೊಂದು ಸೀರೆಯನ್ನೂ ಖರೀದಿಸಿ ಮನೆಗೆ ಬಂದ.

ಅಷ್ಟು ಹೊತ್ತಿಗಾಗಲೇ ಹೆಂಡತಿ ಕೈಕಾಲು ತೊಳೆಯಲು ಬಿಸಿನೀರು ಕಾಯಿಸಿಟ್ಟಿದ್ದಳು, ಅಡುಗೆ ಮನೆಯಲ್ಲಿ ಪಾಯಸ ಸೇರಿದಂತೆ ರುಚಿಕಟ್ಟಾದ ಊಟ ತಯಾರಾಗಿತ್ತು. ‘ನಾನು ಒಯ್ದಿದ್ದ ಹಣ್ಣು ಒಳ್ಳೆಯ ಬೆಲೆಗೇ ಮಾರಾಟವಾಯಿತು…’ ಎನ್ನುತ್ತ ಹೆಂಡತಿಯೊಂದಿಗೆ ಆತ ಖುಷಿಯಿಂದ ಮಾತಿಗಿಳಿಯಲು ಹೋದಾಗ ಆಕೆ ಮುಗುಳ್ನಗುತ್ತ, ‘ನನಗೆ ಆ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು; ದಣಿದಿದ್ದೀರಿ, ಮೊದಲು ಊಟ ಮಾಡಿ. ನಂತರ ಮಾತಾಡೋಣವಂತೆ’ ಎಂದಳು. ಆಗ ಅವನು ಕುತೂಹಲಕ್ಕೆಂಬಂತೆ, ‘ಒಂದು ವೇಳೆ ನಮ್ಮ ಹಣ್ಣುಗಳಿಗೆ ಉತ್ತಮ ಬೆಲೆ ದಕ್ಕದೆ, ಹೋದಷ್ಟಕ್ಕೆ ಹೋಗಲಿ ಎಂದು ಮಾರಿಬಿಟ್ಟಿದ್ದಿದ್ದರೆ ಅಥವಾ ಮಾರದೆ ಮನೆಗೆ ಖಾಲಿ ಕೈಯಲ್ಲಿ ಬಂದಿದ್ದಿದ್ದರೆ ಆಗಲೂ ನನ್ನನ್ನು ಹೀಗೇ ಸ್ವಾಗತಿಸುತ್ತಿದ್ದೆಯಾ?’ ಎಂದು ಹೆಂಡತಿಯನ್ನು ಕೇಳಿದ. ಆಗ ಆಕೆ ಹೇಳುತ್ತಾಳೆ- ‘ಆಗಲೂ ಹೀಗೇ ಆದರಿಸುತ್ತಿದ್ದೆ. ನಿಜ ಹೇಳಬೇಕೆಂದರೆ ಇದಕ್ಕಿಂತ ಹೆಚ್ಚಿನ ರೀತಿಯಲ್ಲೇ ನಿಮ್ಮ ಕುರಿತು ಕಾಳಜಿ ವಹಿಸುತ್ತಿದ್ದೆ. ಏಕೆಂದರೆ ಅಂಥ ಸ್ಥಿತಿಯಲ್ಲೇ ನಿಮಗೆ ನನ್ನ ಬೆಂಬಲ, ಸಾಂತ್ವನದ ಅಗತ್ಯ ಹೆಚ್ಚಿರುತ್ತದೆ. ನೀವು ಸಂತೆಯಲ್ಲಿ ಸೋತರೂ ಮನದಲ್ಲಿ ಸೋಲಬಾರದೆಂಬುದು ನನ್ನ ಬಯಕೆ. ನಾನು ಇಷ್ಟೆಲ್ಲ ಮಾಡಿದ್ದು, ಮಾಡುತ್ತಿರುವುದು ನೀವು ತರುವ ದುಡ್ಡಿಗಾಗಿ ಅಲ್ಲ; ನೀವು ಪಟ್ಟ ಶ್ರಮಕ್ಕೆ. ಎಲ್ಲಕ್ಕಿಂತ ಮಿಗಿಲಾಗಿ, ಇದರ ಹಿಂದಿರುವುದು ನಿಮ್ಮ ಮೇಲಿನ ವಿಶ್ವಾಸಭರಿತ ಪ್ರೀತಿ…’.

ಕೆಲವೊಮ್ಮೆ ಶಕ್ತಿಮೀರಿ ದುಡಿದಾಗಲೂ ಸೋಲುಂಟಾದಾಗ ಅವರಿವರ ಟೀಕೆಗಳಿಂದ ಹತಾಶರಾಗುತ್ತೇವೆ. ಆಗ ನಮಗೆ ಒತ್ತಾಸೆಯಾಗಿದ್ದು ಧೈರ್ಯ ನೀಡುವವರು ನಮ್ಮೊಂದಿಗಿದ್ದರೆ ಹತಾಶೆ ಕುಗ್ಗಿ, ಆತ್ಮವಿಶ್ವಾಸ ಹಿಗ್ಗುತ್ತದೆ. ‘ಇಂಥ ಸೋಲಿಗೆ ಹೆದರಬೇಡ; ನಿನ್ನಲ್ಲಿ ಸಾಮರ್ಥ್ಯವಿದೆ’ ಎಂಬುದಾಗಿ ಹುರಿದುಂಬಿಸಿ ನಮ್ಮ ಕರ್ತೃತ್ವಶಕ್ತಿಯ ಮೇಲೆ ವಿಶ್ವಾಸವಿಡುವ, ಬೇಷರತ್ತಾದ ಪ್ರೀತಿ ನೀಡುವ ಜನರ ಸಾಂಗತ್ಯದಲ್ಲಿರೋಣ. ಜತೆಗೆ ನಾವೂ ಅಂಥವರಲ್ಲಿ ಒಬ್ಬರಾಗಿ, ಮಿಕ್ಕವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡೋಣ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top