Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಉಪಕಾರಿಯಾಗಿ ಬಾಳೋಣ

Friday, 10.08.2018, 3:02 AM       No Comments

| ಎಂ.ಕೆ. ಮಂಜುನಾಥ್

ಮಹಾಭಾರತ ಯುದ್ಧದಲ್ಲಿ ವಿಜಯಿಗಳಾದ ಪಾಂಡವರು ತಮ್ಮ ಅವತಾರ ಕಾರ್ಯವನ್ನೆಲ್ಲ ಮುಗಿಸಿ ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ರಾಜ್ಯಭಾರವನ್ನು ಹಸ್ತಾಂತರಿಸಿದರು. ಪಾಂಡವರನ್ನು ಸ್ವರ್ಗಕ್ಕೆ ಕರೆದೊಯ್ಯಲೆಂದು ಪುಷ್ಪಕ ವಿಮಾನವೂ ಬಂದಿಳಿಯಿತು. ಭೀಮ, ಅರ್ಜುನ, ನಕುಲ, ಸಹದೇವ ಮತ್ತು ದ್ರೌಪದಿ ಎಲ್ಲರೂ ತಂತಮ್ಮ ಭೌತಿಕ ಶರೀರವನ್ನು ತೊರೆದು ಸ್ವರ್ಗಾರೋಹಣಕ್ಕೆ ಸನ್ನದ್ಧರಾದರು. ಧರ್ಮರಾಯನೂ ಇನ್ನೇನು ಪುಷ್ಪಕ ವಿಮಾನವನ್ನು ಹತ್ತುವುದರಲ್ಲಿದ್ದ. ಆದರೆ ನಿಷ್ಠಾವಂತ ನಾಯಿಯೊಂದು ತನ್ನನ್ನು ಹಿಂಬಾಲಿಸಿ ಬರುತ್ತಿರುವುದು ಅವನ ಅರಿವಿಗೆ ಬಂತು. ಧರ್ಮರಾಯನಿಗೆ ಅದರ ಮೇಲೆ ವಿಶೇಷ ಪ್ರೀತಿ-ಮಮಕಾರ ಉಕ್ಕಿ, ತನ್ನೊಂದಿಗೆ ಅದನ್ನೂ ಸ್ವರ್ಗಕ್ಕೆ ಕರೆತರುವುದಕ್ಕೆ ಅನುಮತಿಸಬೇಕಾಗಿ ದೇವತೆಗಳನ್ನು ಕೇಳಿದ. ಆದರೆ, ‘ನಾಯಿಗಳಿಗೆ ಸ್ವರ್ಗದಲ್ಲಿ ಪ್ರವೇಶ ನಿಷಿದ್ಧ’ ಎಂಬ ಕಾರಣ ನೀಡಿ ದೇವತೆಗಳು ಆ ಮನವಿಯನ್ನು ತಿರಸ್ಕರಿಸಿದರು. ಆಗ ಧರ್ಮರಾಯ, ಅಭಿಮಾನವಿಟ್ಟು ತನ್ನನ್ನು ಹಿಂಬಾಲಿಸಿದ ನಾಯಿಯನ್ನು ಬಿಟ್ಟು ತಾನೊಬ್ಬನೇ ಸ್ವರ್ಗಕ್ಕೆ ಬರುವುದಿಲ್ಲ ಎಂದು ಹಠಹಿಡಿದ. ಈ ದಯಾಭಾವವನ್ನು ಕಂಡು ದೇವತೆಗಳು ಅಚ್ಚರಿಗೊಂಡರು. ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಆ ನಾಯಿ ಬೇರಾರೂ ಆಗಿರದೆ ಸಾಕ್ಷಾತ್ ಯಮಧರ್ಮರಾಯನೇ ಆಗಿದ್ದ. ಮಹಾಭಾರತದ ಪ್ರಾರಂಭದಲ್ಲಿ ಜನಮೇಜಯನ ಸೋದರರು ಮೂಕಪ್ರಾಣಿಯಾದ ನಾಯಿಯೊಂದನ್ನು ಕಲ್ಲಿನಿಂದ ಹೊಡೆದು ಓಡಿಸಿ ಅಮಾನವೀಯತೆ ಮೆರೆದಿದ್ದರು. ಆದರೆ ಅದೇ ಮಹಾಭಾರತದ ಅಂತ್ಯದಲ್ಲಿ ಧರ್ಮರಾಯ ಹೀಗೆ ನಾಯಿಗೆ ಪ್ರೀತ್ಯಾದರಗಳನ್ನು ತೊರುವ ಮೂಲಕ ಮಾನವೀಯತೆಯ ಪ್ರತಿರೂಪವೇ ತಾನಾದ. ‘ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ’ ಎಂಬ ಬುದ್ಧಿಮಾತು ಅರಿವಿದ್ದರೂ, ಬಹುತೇಕರು ನಿತ್ಯಜೀವನದಲ್ಲಿ ಹಾಗೆ ನಡೆದುಕೊಳ್ಳುವುದು ಅಪರೂಪ ಎನ್ನಬೇಕು. ನಕಾರಾತ್ಮಕ ಚಿಂತನೆಗಳಿಗೆ ಒಡ್ಡಿಕೊಳ್ಳುವುದು, ಮತ್ತೊಬ್ಬರ ಏಳಿಗೆಯನ್ನು ಕಂಡು ಅಸೂಯೆಪಡುವುದು ಹೀಗೆ ನಮ್ಮ ಬದುಕಿನ ಹೆಚ್ಚಿನ ಸಮಯ ನಾನಾ ಕಾರಣಗಳಿಂದಾಗಿ ವ್ಯರ್ಥವಾಗಿಯೇ ಕಳೆದುಹೋಗುತ್ತದೆ. ‘ಪ್ರೀತಿಸುವುದಕ್ಕೇ ಸಮಯವಿಲ್ಲದಿರುವಾಗ ದ್ವೇಷಿಸುವುದಕ್ಕೆ ಸಮಯವೆಲ್ಲಿ?’ ಎಂಬುದು ಓರ್ವ ಅನುಭಾವಿಗಳ ಮಾತು. ಇದು ನಮ್ಮ ಅನುದಿನದ ಬದುಕಿನ ಆದರ್ಶಸೂತ್ರವಾಗಲಿ. ಮತ್ತೊಬ್ಬರಿಗೆ ಕನಸು-ಮನಸಿನಲ್ಲೂ ದ್ರೋಹ ಬಗೆಯದೆ ಒಳಿತನ್ನೇ ಬಯಸುವ ವ್ಯಕ್ತಿಯು ಸಮಾಜದಲ್ಲಿ ಹೆಚ್ಚಿನ ಗೌರವ ಸಂಪಾದಿಸಬಲ್ಲ ಎಂಬುದನ್ನು ಮರೆಯದಿರೋಣ. ನಮಗೆ

ದೊರಕುವ ಅತ್ಯಮೂಲ್ಯ ಸಮಯವನ್ನು ಪರೋಪಕಾರದ ಕೆಲಸ-ಕಾರ್ಯಗಳಿಗೆ ವಿನಿಯೋಗಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top