Monday, 25th June 2018  

Vijayavani

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ- ಪರಂ, ಸಿದ್ದು ನಡುವೆ ಮೂಡದ ಒಮ್ಮತ- ಸಿದ್ದು ಟ್ರೀಟ್‌ಮೆಂಟ್‌ ಮುಗಿಯೋವರೆಗೂ ವೇಟಿಂಗ್‌        ಸಾಲಮನ್ನಾ ಹೇಗೆ ಮಾಡ್ತಾರೆ ಕಾದು ನೋಡ್ತೀನಿ- ಜೆಡಿಎಸ್‌ ಅಂದಿದಕ್ಕೆಲ್ಲಾ ತಲೆ ಅಲ್ಲಾಡಿಸಬೇಡಿ- ಪರಂಗೆ ಸಿದ್ದರಾಮಯ್ಯ ಕಿವಿಮಾತು        ಐಎಎಸ್‌ ಅಧಿಕಾರಿಗಳ ಫೀಡ್‌ಬ್ಯಾಕ್‌ ಕೇಳಿದ ಕೇಂದ್ರ- ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ರವಾನೆ- ಬಡ್ತಿ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಮೋದಿ ಸರ್ಕಾರ        ಸಿಎಂ ಗ್ರಾಮ ವಾಸ್ತವ್ಯದ ಫಲದಿಂದ ಬಂತು ಬಸ್‌- ಎಚ್‌ಡಿಕೆ ಸೇತುವೆ ಭರವಸೆ ಠುಸ್‌- ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಗ್ರೌಂಡ್‌ ರಿಪೋರ್ಟ್‌        ಕೈಗಾ ಸುತ್ತಮುತ್ತಾ ಕ್ಯಾನ್ಸರ್‌ ಭೀತಿ- ಭಯ ಪಡಬೇಡಿ ಇದು ಕೇವಲ ವದಂತಿ- ಉತ್ತರಕನ್ನಡ ಜನತೆಗೆ ಜಿಲ್ಲಾಧಿಕಾರಿ ಅಭಯ        ಊಟ, ತಿಂಡಿ, ಸ್ನ್ಯಾಕ್ಸ್‌ ಎಲ್ಲದಕ್ಕೂ ಅದೇ- 19 ವರ್ಷದಿಂದ ಪಾರ್ಲೆ ಜಿ ಬಿಸ್ಕೆಟ್‌ ತಿಂದೇ ಜೀವನ- ಚಿಕ್ಕೋಡಿ ಯುವತಿ ವೈದ್ಯಲೋಕಕ್ಕೆ ಸವಾಲ್‌       
Breaking News

ಪರ್ವಿುಟ್ ಗೋಲ್ಮಾಲ್

Wednesday, 13.06.2018, 3:05 AM       No Comments
<< ಅರ್ಹತೆ ಇಲ್ಲದ 100 ಹೊಸ ಕಾಲೇಜುಗಳಿಗೆ ಅನುಮತಿ >>

| ದೇವರಾಜ್ ಎಲ್.

ಬೆಂಗಳೂರು: ದುಡ್ಡೊಂದಿದ್ದರೆ ಸರ್ಕಾರಿ ಇಲಾಖೆಗಳಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂಬ ಮಾತಿಗೀಗ ಶಿಕ್ಷಣ ಇಲಾಖೆ ತಾಜಾ ನಿದರ್ಶನ. ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ಅಪೇಕ್ಷಿತ ಮಾನದಂಡಗಳ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕರಿಸುವಂತೆ ಅಧಿಕಾರಿಗಳೂ ವರದಿ ಸಲ್ಲಿಸಿರುವ ಹೊರತಾಗಿಯೂ ಹೊಸದಾಗಿ 100 ಖಾಸಗಿ ಕಾಲೇಜುಗಳ ಆರಂಭಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುಮತಿಯ ಮುದ್ರೆಯೊತ್ತಿರುವ ವಿಚಾರವೀಗ ಚರ್ಚೆ ಹುಟ್ಟುಹಾಕಿದೆ. ಒಂದೆಡೆ ಅರ್ಹತೆ ಇಲ್ಲದ ಖಾಸಗಿ ಶಾಲೆಗಳ ಮಾನ್ಯತೆ ತಡೆಹಿಡಿಯುವುದಾಗಿ ಹೇಳುತ್ತಿರುವ ಸರ್ಕಾರ, ಮತ್ತೊಂದೆಡೆ 2018-19ನೇ ಸಾಲಿನಲ್ಲಿ ಹೊಸದಾಗಿ 100 ಪದವಿ ಪೂರ್ವ ಕಾಲೇಜುಗಳ ಸ್ಥಾಪನೆಗೆ ಅನುಮತಿ ಕೊಟ್ಟಿರುವುದೇಕೆಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶಿಕ್ಷಣ ಸಚಿವರೇ ಇಲ್ಲದ ಸಂದರ್ಭದಲ್ಲಿ ಮಾನದಂಡಗಳನ್ನು ಪಾಲಿಸದಿರುವ ಕಾಲೇಜುಗಳಿಗೂ ಗ್ರೀನ್​ಸಿಗ್ನಲ್ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅನುಮತಿ ಸಿಕ್ಕಿದ್ದಾದರೂ ಹೇಗೆ?

2018-19ನೇ ಸಾಲಿಗೆ ಹೊಸ ಕಾಲೇಜುಗಳ ಆರಂಭಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಜನವರಿಯಲ್ಲಿ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. 360 ಅರ್ಜಿಗಳು ಬಂದಿದ್ದವು. ಅರ್ಜಿಗಳಿಗೆ ಸಮರ್ಪಕ ದಾಖಲೆಗಳನ್ನು ಪಿಯು ಇಲಾಖೆ ಕೇಳಿತ್ತು. ಆ ಸಂದರ್ಭದಲ್ಲಿ 204 ಸಂಸ್ಥೆಗಳು ಸೂಕ್ತ ದಾಖಲೆಗಳನ್ನು ಒದಗಿಸಿದ್ದವು. ಈ ಅರ್ಜಿಗಳನ್ನು ಶಿಕ್ಷಣ ಇಲಾಖೆ, ಪರಿಶೀಲನೆಗೆ ಒಳಪಡಿಸಿದಾಗ ಕೇವಲ 8 ಸಂಸ್ಥೆಗಳಷ್ಟೇ ಮಾನ್ಯತೆ ಪಡೆದುಕೊಳ್ಳಲು ಯೋಗ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿ, ಉಳಿದ ಅರ್ಜಿಗಳನ್ನು ತಿರಸ್ಕರಿಸಿತ್ತು. ಆದರೆ, ತಿರಸ್ಕಾರಗೊಂಡ ಅರ್ಜಿಗಳಿಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯ ಮಾನ್ಯತೆ ನೀಡಿದೆ.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಕಾಲೇಜುಗಳ ಆರಂಭಕ್ಕೆ ಅನುಮತಿ ಕೊಟ್ಟಿಲ್ಲ. ಇದರ ಹೊರತಾಗಿ ನನಗೆ ಹೆಚ್ಚಿನ ವಿಷಯ ಗೊತ್ತಿಲ್ಲ.

| ಸಿ.ಶಿಖಾ, ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ

ಪರಿಣಾಮಗಳೇನು?

ರಾಜ್ಯದ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಹೇಳಿಕೊಂಡೇ ಬರುತ್ತಿದೆ. ಆದರೀಗ 100 ಖಾಸಗಿ ಕಾಲೇಜುಗಳಿಗೆ ಮಾನ್ಯತೆ ನೀಡಿರುವುದರಿಂದ ಸುತ್ತಮುತ್ತಲಿರುವ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ ಬೀಗ ಹಾಕುವ ಸ್ಥಿತಿಗೆ ತಲುಪುತ್ತದೆ. ಖಾಸಗಿ ಕಾಲೇಜುಗಳ ಬೆಳವಣಿಗೆಗೆ ಪರೋಕ್ಷವಾಗಿ ಸರ್ಕಾರವೇ ಪ್ರೋತ್ಸಾಹ ಕೊಡುತ್ತಿದೆ ಎಂಬ ಆರೋಪಕ್ಕೆ ಇದು ಮತ್ತಷ್ಟು ಪುಷ್ಟಿಯಾಗಿದೆ.

ತಲಾ ಅರ್ಜಿಗೆ 5 ಲಕ್ಷ ಲಂಚ!?

ಒಂದು ಕಾಲೇಜಿಗೆ ಅನುಮತಿ ಕೊಡಲು 5 ಲಕ್ಷ ರೂ.ವರೆಗೆ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. 100 ಕಾಲೇಜುಗಳ ಅನುಮತಿಗೆ ಕನಿಷ್ಠ 5 ಕೋಟಿ ರೂ. ಲಂಚದ ವಹಿವಾಟು ನಡೆದಿರುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಲಯದಲ್ಲೇ ಬಲವಾದ ಅನುಮಾನ ವ್ಯಕ್ತವಾಗಿದೆ.

ಸಣ್ಣಪುಟ್ಟ ಮಾನದಂಡಗಳನ್ನು ಪಾಲಿಸದಿದ್ದರೆ ಅಂತಹ ಕಾಲೇಜುಗಳಿಗೆ ಷರತ್ತಿನ ಆಧಾರದ ಮೇಲೆ ಮಾನ್ಯತೆ ನೀಡಲು ಅವಕಾಶವಿದೆ.

| ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

ಮಾನದಂಡ ಏನು?

  • ಸರ್ಕಾರಿ ಕಾಲೇಜಿನಿಂದ 3 ಕಿ.ಮೀ. ದೂರದಲ್ಲಿರಬೇಕು
  • 25,000 ಚದರಡಿ ಸ್ಥಳವಿರಬೇಕು
  • ಸ್ಥಳದ ಕುರಿತ ಸೂಕ್ತ ದಾಖಲೆಗಳಿರಬೇಕು
  • ಗ್ರಂಥಾಲಯ, ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಇರಬೇಕು
  • ಕನಿಷ್ಠ 40 ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕು
  • ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿರಬೇಕು
  • ಸುತ್ತಮುತ್ತ ಕಾಲೇಜುಗಳಿರುವ ದೂರ ತಿಳಿಸಬೇಕು

 

ಅರ್ಹ ಅರ್ಜಿ ಪುರಸ್ಕರಿಸಿ

ಹೊಸ ಕಾಲೇಜುಗಳ ಅನುಮತಿ ಕೋರಿ ಬಂದ ಅರ್ಜಿಗಳನ್ನು ಒಮ್ಮೆ ಮಾತ್ರ ಪರಿಶೀಲಿಸಿ ನೇರವಾಗಿ ಸರ್ಕಾರಕ್ಕೆ ಕಳುಹಿಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಜಯ್ ಸೇಠ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಂತದಲ್ಲೇ ಸಮರ್ಪಕವಾಗಿ ಅರ್ಜಿಗಳನ್ನು ಪರಿಶೀಲಿಸಬೇಕು. ಇಲಾಖೆ ರೂಪಿಸಿರುವ ಎಲ್ಲ ಮಾನದಂಡಗಳನ್ನು ಅನುಸರಿಸಿರುವ ಅರ್ಜಿಗಳನ್ನಷ್ಟೇ ಕಳುಹಿಸುವಂತೆ ಆದೇಶಿಸಿದ್ದರು. ಹೀಗಾಗಿ ಇಲಾಖೆ ಪರಿಶೀಲಿಸಿದಾಗ 8 ಅರ್ಜಿ ಮಾತ್ರ ಅನುಮತಿಗೆ ಅರ್ಹತೆ ಹೊಂದಿವೆ ಎಂದು ವರದಿ ಸಲ್ಲಿಸಿತ್ತು.

 

ಹೊಸ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ. ಸರ್ಕಾರವೇ ರಚಿಸಿದ ಮಾನದಂಡಗಳನ್ನು ಸರ್ಕಾರವೇ ಉಲ್ಲಂಘನೆ ಮಾಡುವುದಾದರೆ ನಿಯಮಗಳು ಏಕೆ ಬೇಕು? ಎಲ್ಲ ನಿಯಮ ಪಾಲಿಸಿ ಪ್ರಾಮಾಣಿಕವಾಗಿ ಅರ್ಜಿ ಸಲ್ಲಿಸಿದವರಿಗೆ ನ್ಯಾಯ ಎಲ್ಲಿದೆ. ಇದರ ಕುರಿತು ಕೂಲಂಕಷವಾಗಿ ತನಿಖೆ ಆಗಲೇಬೇಕು.

| ಅರುಣ ಶಹಪೂರ, ವಿಧಾನ ಪರಿಷತ್ತಿನ ಸದಸ್ಯ

 

Leave a Reply

Your email address will not be published. Required fields are marked *

Back To Top