Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಸ್ವಯಂನಿಯಂತ್ರಣ ಬೇಕು

Wednesday, 19.09.2018, 3:02 AM       No Comments

2019ರ ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿತ ನೀತಿ-ನಿಯಮಗಳು, ನಿಯಂತ್ರಣಾ ಉಪಕ್ರಮಗಳು, ಶಿಷ್ಟಾಚಾರಗಳ ರೂಪಣೆಯ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ರಾತ್ರಿ ಹತ್ತು ಗಂಟೆಯಿಂದ ಮರುದಿನ ಮುಂಜಾನೆ 6 ಗಂಟೆಯವರೆಗೆ ‘ಸಗಟು’ ಸ್ವರೂಪದಲ್ಲಿ ಮತದಾರರಿಗೆ ಎಸ್​ಎಂಎಸ್ ಸಂದೇಶಗಳ ರವಾನೆ, ಫೋನ್​ಕರೆ ಮತ್ತು ಸಂದೇಶಗಳ ಮುಂಬರಿಕೆ ಇತ್ಯಾದಿಗೆ ಮುಂದಾಗದಂತೆ ಎಲ್ಲ ರಾಜಕೀಯ ಪಕ್ಷಗಳು, ವೈಯಕ್ತಿಕ ಪ್ರಚಾರಕರ್ತರನ್ನು ಅದು ನಿರ್ಬಂಧಿಸಿರುವುದು ಶ್ಲಾಘನೀಯ ಹೆಜ್ಜೆ ಎನ್ನಲಡ್ಡಿಯಿಲ್ಲ. ಇಂಥ ಕರೆ ಅಥವಾ ಸಂದೇಶಗಳಿಂದಾಗಿ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಇದರ ಹಿಂದಿನ ಒಂದು ಉದ್ದೇಶವಾಗಿದ್ದರೆ, ಚುನಾವಣೆಯಂಥ ಸೂಕ್ಷ್ಮ ಸಂದರ್ಭಗಳಲ್ಲಿ ಅಪಪ್ರಚಾರ/ವೈಯಕ್ತಿಕ ಚಾರಿತ್ರ್ಯವಧೆ, ದ್ವೇಷ, ಹಿಂಸಾಚಾರದಂಥ ಪರಿಪಾಠಗಳಿಗೆ ತಡೆಯೊಡ್ಡುವ ಆಶಯವೂ ಇದರ ಹಿಂದಿದೆ ಎನ್ನಲಡ್ಡಿಯಿಲ್ಲ.

ಇಂಥದೊಂದು ಕ್ರಮ ನಿಜಕ್ಕೂ ಅಗತ್ಯವಾಗಿತ್ತು. ಕಾರಣ, ಎಸ್​ಎಂಎಸ್, ಇ-ಮೇಲ್, ಟ್ವಿಟರ್, ಫೇಸ್​ಬುಕ್, ವಾಟ್ಸ್​ಆಪ್​ನಂಥ ಸಂವಹನ/ಸಾಮಾಜಿಕ ಮಾಧ್ಯಮಗಳಿಂದ ಪ್ರಯೋಜನವಾಗಿರುವಂತೆಯೇ, ಕಿಡಿಗೇಡಿಗಳಿಂದ ಅವುಗಳ ದುರ್ಬಳಕೆಯಾಗಿರುವ ನಿದರ್ಶನಗಳಿಗೇನೂ ಕಮ್ಮಿಯಿಲ್ಲ. ಊರಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬರ್ಥ ಸ್ಪುರಿಸುವ ಸಂದೇಶಗಳು ವಾಟ್ಸ್​ಆಪ್ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಎಗ್ಗಿಲ್ಲದೆ ರವಾನೆಯಾದ ಕಾರಣ, ‘ಮಕ್ಕಳ ಕಳ್ಳರು’ ಎಂಬ ಗ್ರಹಿಕೆಯಲ್ಲಿ ಅಪರಿಚಿತರು, ಅಮಾಯಕರನ್ನೂ ಶಂಕಿಸಿ ಭೀಕರ ಹಲ್ಲೆ ಮಾಡಿದ್ದು, ಕೆಲವೊಮ್ಮೆ ಅದು ಸಾವಿನಲ್ಲೂ ಪರ್ಯವಸಾನಗೊಂಡಿದ್ದು ಈಗಾಗಲೇ ಜಗಜ್ಜಾಹೀರು. ಇದು ಸಾಮಾಜಿಕ ಮಾಧ್ಯಮಗಳು ಮತ್ತಿತರ ಸಂವಹನಾ ಸ್ವರೂಪಗಳ ದುರುಪಯೋಗವಾಗಿದ್ದರ ಪರಿಣಾಮ ಎನ್ನಲೇಬೇಕಿದೆ. ಚುನಾವಣೆ ವೇಳೆಯೂ ಇಂಥ ಅಪಪ್ರಚಾರ, ಹಿಂಸಾಚಾರಗಳ ಪುನರಾವರ್ತನೆ ಯಾಗಬಹುದಾದ್ದರಿಂದ, ಇವಕ್ಕೆ ಲಗಾಮುಹಾಕುವ ಆಯೋಗದ ನಡೆ ಸರಿಯಾಗೇ ಇದೆ. ಆದರೆ, ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ವಾಟ್ಸ್​ಆಪ್ ಸಂದೇಶವೊಂದರ ಮುಂಬರಿಕೆ ರವಾನೆಗೆ ಸಂಬಂಧಿಸಿ ನಿರ್ದಿಷ್ಟ ಮಿತಿಗಳನ್ನು ಹೇರಿದಾಗ, ಸಂಬಂಧಿತ ಕಂಪನಿ/ಅಂತರ್ಜಾಲ ಸೇವಾದಾರ ಸಂಸ್ಥೆಗಳು ‘ಮಾಹಿತಿ ಹರಿವಿಗೆ ನಿರ್ಬಂಧ ವಿಧಿಸಬಹುದೇ ವಿನಾ, ನಿರ್ದಿಷ್ಟ ಸಂದೇಶ/ಮಾಹಿತಿಯ ಮೂಲವನ್ನು ನೀಡಲಾಗದು; ಇದು ಬಳಕೆದಾರರ ಖಾಸಗಿತನದ ಉಲ್ಲಂಘನೆಯಾಗುತ್ತದೆ’ ಎಂದಿದ್ದವು. ಈ ಅಂಶವನ್ನು ಅವಲೋಕಿಸಿದಾಗ, ಪಠ್ಯ, ಚಿತ್ರ/ವಿಡಿಯೋ ರೂಪದಲ್ಲಿ ಇರಬಹುದಾದ ಅಪಪ್ರಚಾರ/ಚಾರಿತ್ರ್ಯವಧೆಯ ನಿರ್ದಶನಗಳಿಗೆ ಚುನಾವಣಾ ಆಯೋಗವೊಂದೇ ಲಗಾಮು ಹಾಕಲಿ ಎಂದು ನಿರೀಕ್ಷಿಸುವುದು, ಈ ಸಂವಹನ ಮಾಧ್ಯಮಗಳು ಒಳಗೊಂಡಿರುವ ಅಗಾಧತೆಯ ಹಿನ್ನೆಲೆಯಲ್ಲಿ ಅಸಾಧ್ಯವೇ. ಚುನಾವಣೆ ಎಂದಾಕ್ಷಣ ಆರೋಪ-ಪ್ರತ್ಯಾರೋಪಗಳು, ಟೀಕೆಯ ಕೂರಂಬುಗಳು ಸಹಜ. ಆದರೆ, ಶತಾಯಗತಾಯ ಪರಿಸ್ಥಿತಿಯ ಪ್ರಯೋಜನ ಪಡೆಯಬೇಕೆಂಬ ಹವಣಿಕೆಯಲ್ಲಿ, ತಂತ್ರಜ್ಞಾನದ ನೆರವಿನಿಂದ ಯಾರದೋ ಧ್ವನಿಯಲ್ಲಿ ಅನಪೇಕ್ಷಿತ ಸಂದೇಶ ರವಾನಿಸಲು, ಯಾರದೋ ಚಿತ್ರ/ದೃಶ್ಯಾವಳಿಯನ್ನು ತಿರುಚಿ ಅಪಾರ್ಥ ಹುಟ್ಟುಹಾಕಲು ಸಾಧ್ಯವಿರುವ ದಿನಮಾನವಿದು; ಇಂಥ ಅಪಸವ್ಯಗಳಿಂದಾಗಿ ಮತದಾರರಿಗೆ ತಪು್ಪಸಂದೇಶ ರವಾನೆಯಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ, ಪ್ರಚಾರಕರ್ತರು, ರಾಜಕೀಯ ಪಕ್ಷಗಳು, ಅಂತರ್ಜಾಲ ಸೇವಾಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕಿದೆ, ಸಂಯಮ ಮೆರೆಯಬೇಕಿದೆ. ಜತೆಗೆ, ಇಂಥ ಯಾವುದೇ ಮಾಹಿತಿಯ ರವಾನೆಯಾದರೂ ಅದನ್ನು ಒಂದೇ ಗುಕ್ಕಿಗೆ ಸ್ವೀಕರಿಸಿ, ಕಾನೂನನ್ನು ಕೈತೆಗೆದುಕೊಳ್ಳುವಂಥ ಅತಿರೇಕದ ಕ್ರಮಕ್ಕೆ ಸಾರ್ವಜನಿಕರು ಮುಂದಾಗದೆ, ವಿವೇಚನೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ.

Leave a Reply

Your email address will not be published. Required fields are marked *

Back To Top