Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಎತ್ತಿಗೆ ಜ್ವರ, ಎಮ್ಮೆಗೆ ಬರೆ!

Thursday, 15.02.2018, 3:02 AM       No Comments

ಇದೊಂದು ವಿಲಕ್ಷಣ ಘಟನೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆವಿಮೆಯ ಬೆಳೆ ಕಟಾವು ಲೆಕ್ಕಾಚಾರದ ವೇಳೆ ಅಧಿಕಾರಿಗಳು ‘ಭತ್ತ’ ಎಂಬುದಕ್ಕೆ ಬದಲಾಗಿ ‘ಅಕ್ಕಿ’ ಎಂದು ನಮೂದಿಸಿದ್ದರ ಪರಿಣಾಮ ಹಾವೇರಿ ಜಿಲ್ಲೆಯ ರೈತರಿಗೆ ಸುಮಾರು 10 ಕೋಟಿ ರೂ. ವಿಮೆ ಹಣ ಮಂಜೂರಾಗಿಲ್ಲದ ಸಂಗತಿಯಿದು. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದ ರೈತರು ಬೆಳೆವಿಮೆ ತುಂಬಿದ್ದರು. ಸಾಂಖ್ಯಿಕ ಇಲಾಖೆ ಹಿಂದಿನ 5 ವರ್ಷದ ಅವಧಿಯಲ್ಲಿ ಭತ್ತ ಎಂದು ಪರಿಗಣಿಸಿದ್ದರೂ, ಅಧಿಕಾರಿಗಳು ಕಟಾವು ಸಮೀಕ್ಷೆ ನಡೆಸುವಾಗ ಅಕ್ಕಿ ಎಂದು ನಮೂದಿಸಿದ ಪರಿಣಾಮ ಕಟಾವು ಪರೀಕ್ಷೆಯ ಇಳುವರಿ ತೆಗೆಯುವಲ್ಲಿ ರೈತರಿಗೆ ಶೇ. 30ರಷ್ಟು ನಷ್ಟವಾಗಿ, ಅದರಿಂದಾಗಿ ವಿಮೆಯ ಲೆಕ್ಕಾಚಾರ ಅಸ್ತವ್ಯಸ್ತಗೊಂಡು ವಿಮೆಹಣ ಕೈತಪ್ಪಿದಂತಾಗಿದೆ. ಅಧಿಕಾರಿಗಳು ಎಸಗಿದ ತಾಂತ್ರಿಕ ದೋಷದಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ.

‘ಭಾರತ ಕೃಷಿಕರ ದೇಶ, ರೈತರೇ ನಾಡಿನ ಬೆನ್ನೆಲುಬು’ ಎಂಬುದು ವೇದಿಕೆಗಳಲ್ಲಿ ಆಗಾಗ ಘಂಟಾಘೋಷವಾಗಿ ಕೇಳಿಬರುವ ಮಾತು. ಆದರೆ ಸ್ವತಃ ರೈತನ ಬೆನ್ನೆಲುಬೇ ಮುರಿದು ಬೆನ್ನು ಹೊಟ್ಟೆಗೆ ಅಂಟಿಕೊಂಡಂತಾಗಿರುವುದು ಬಹುತೇಕ ಅನ್ನದಾತರ ದುಸ್ಥಿತಿ. ಬಿತ್ತನೆಗೆ ಹೊರಟರೆ ಗುಣಮಟ್ಟದ ಬಿತ್ತನೆ ಬೀಜವಿಲ್ಲ, ಬೀಜ ಸಿಕ್ಕಿ ಬಿತ್ತನೆಯಾದರೂ ಮಳೆರಾಯನ ಕೃಪೆ ಸಿಗುತ್ತದೆ ಎಂಬ ಭರವಸೆಯಿಲ್ಲ, ಮಳೆ ಬಂದು ಭರ್ಜರಿ ಇಳುವರಿಯ ಬೆಳೆ ಬಂದರೂ ಬೆಂಬಲ ಬೆಲೆ ಸಿಗುತ್ತದೆ ಎಂಬುದಕ್ಕೆ ನೆಚ್ಚಿಕೆಯಿಲ್ಲ…. ಹೀಗೆ ‘ಇಲ್ಲ’ಗಳ ಪಟ್ಟಿ ಬೆಳೆಯುತ್ತಲೇ ಹೋಗಿ, ಯಾವ ಪುರುಷಾರ್ಥಕ್ಕೆ ಉಳುಮೆ ಮಾಡಬೇಕು ಎಂಬ ಹತಾಶೆ ನೇಗಿಲಯೋಗಿಯನ್ನು ಆವರಿಸಿದೆ. ಹೀಗಾಗಿ ಕೃಷಿಕರ ಮಕ್ಕಳಿಗೀಗ ಕೃಷಿ ಎಂಬುದು ಆಸಕ್ತಿ ಹುಟ್ಟಿಸುವ ಅಖಾಡವಾಗಿಲ್ಲ; ನಗರಗಳಲ್ಲಿನ ಉದ್ಯೋಗ ಅರಸಿಯೋ ಕಟ್ಟಡ ಕಾಮಗಾರಿಗಳಲ್ಲಿನ ಚಾಕರಿಗೋ ಅವರ ಮನ ಹಾತೊರೆಯುವಂತಾಗಿದೆ, ‘ಪಾರಂಪರಿಕ ಕೃಷಿಗಾರಿಕೆ’ ಎಂಬ ಪರಿಕಲ್ಪನೆ ಸತ್ತುಹೋಗಿ ವರ್ಷಗಳೇ ಕಳೆದಿವೆ. ಇಂಥ ‘ಸಾಂಪ್ರದಾಯಿಕ ಸಮಸ್ಯೆಗಳು’ ಸಾಲದು ಎಂಬಂತೆ ಆ ಪಟ್ಟಿಗೆ ಅಧಿಕಾರಿಗಳ ಇಂಥ ಎಡವಟ್ಟೂ ಸೇರಿಬಿಟ್ಟರೆ ಅನ್ನದಾತರು ಎಲ್ಲಿಗೆ ಹೋಗಬೇಕು?

ಈಗ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲೋಸುಗ, ಮರುಪರಿಶೀಲನೆಗೆ ಮುಂದಾಗಿ ಭತ್ತದ ಬೆಳೆಗೆ ವಿಮಾ ಪರಿಹಾರ ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ ನಷ್ಟ ಭರಿಸಲು ಕೇಂದ್ರ ಸರ್ಕಾರವಾಗಲೀ, ವಿಮಾ ಕಂಪನಿಗಳಾಗಲೀ ಸಿದ್ಧವಿಲ್ಲ. ಇದು ರಾಜ್ಯದ ಅಧಿಕಾರಿಗಳು ಮಾಡಿರುವ ಎಡವಟ್ಟಾಗಿರುವುದರಿಂದ ರಾಜ್ಯವೇ ನಷ್ಟಭರ್ತಿಗೆ ಮುಂದಾಗಬೇಕು ಎಂಬುದು ಮುನ್ನೆಲೆಗೆ ಬಂದಿರುವ ವಾದ. ಪರಿಹಾರಕ್ಕೆ ರಾಜ್ಯ ಸರ್ಕಾರವೂ ತಾರಮ್ಮಯ್ಯ ಮಾಡಿದರೆ ರೈತರ ಬವಣೆ ಮತ್ತಷ್ಟು ತೀವ್ರವಾಗುವುದು ಖರೆ. ಆದ್ದರಿಂದ, ಕೃಷಿಕರ ಮತ್ತು ಕೃಷಿವಲಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಣಾಯಕ ಕ್ರಮಕ್ಕೆ ಮುಂದಾಗಬೇಕಿದೆ. ಜತೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಶಿಸ್ತುಕ್ರಮಕ್ಕೂ ಮುಂದಾಗಬೇಕಿದೆ. ರೈತರ ಅಸಮಾಧಾನವು ಆಕ್ರೋಶವಾಗಿ ಪರಿವರ್ತನೆಯಾಗಬಾರದು ಎಂದಾದರೆ ಇಂಥ ಉಪಶಾಮಕ ಕ್ರಮವೀಗ ಅತ್ಯಗತ್ಯ.

Leave a Reply

Your email address will not be published. Required fields are marked *

Back To Top