Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಎಚ್ಚರಿಕೆಯ ಗಂಟೆ

Tuesday, 13.02.2018, 3:02 AM       No Comments

ನೀರಿನ ಕೊರತೆ ಎದುರಿಸುತ್ತಿರುವ ವಿಶ್ವದ 11 ನಗರಗಳ ಯಾದಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಬಿಬಿಸಿ ಸುದ್ದಿವಾಹಿನಿ ನೀಡಿರುವ ಈ ವರದಿಯಲ್ಲಿ, ಮಾಲಿನ್ಯದಿಂದಾಗಿ ಮಹಾನಗರಿಯ ಕೆರೆಗಳ ನೀರು ಬಳಕೆಗೆ ಯೋಗ್ಯವಲ್ಲದ ಸ್ಥಿತಿ ತಲುಪಿರುವ, ಒಳಚರಂಡಿ ನಿರ್ವಹಣೆ ಹದಗೆಟ್ಟಿರುವ ಪರಿಸ್ಥಿತಿ ಅನಾವರಣಗೊಂಡಿದ್ದು, ಇದು ಹೀಗೇ ಮುಂದುವರಿದಲ್ಲಿ ದಕ್ಷಿಣ ಆಫ್ರಿಕಾದ ಕೇಪ್​ಟೌನ್ ನಗರಕ್ಕೆ ಒದಗಿದ ದುಸ್ಥಿತಿಗೆ ಬೆಂಗಳೂರೂ ಸಾಕ್ಷಿಯಾಗಬೇಕಾಗುತ್ತದೆ ಎಂಬರ್ಥದ ಅಭಿಪ್ರಾಯ ವ್ಯಕ್ತವಾಗಿದೆ. ಈ ಮಾತನ್ನು ನಾವು ಸ್ವಲ್ಪ ಉತ್ಪ್ರೇಕ್ಷೆ ಎಂದು ಭಾವಿಸಿದರೂ, ಆ ವರದಿಯಲ್ಲಿನ ಎಚ್ಚರಿಕೆಯ ದನಿಯನ್ನು ಕಡೆಗಣಿಸಲಾಗದು.

ಬೆಂಗಳೂರಿಗೆ ತನ್ನದೇ ಆದ ನದಿನೀರು ಮೂಲವಿಲ್ಲ ಮತ್ತು 100 ಕಿ.ಮೀ.ನಷ್ಟು ದೂರವಿರುವ ಕಾವೇರಿ ಕಣಿವೆಯಿಂದ ಪೂರೈಕೆಯಾಗುವ ನೀರನ್ನೇ ನೆಚ್ಚಿಕೊಂಡಿದೆ. ಹೀಗೆ ಪೂರೈಕೆಯಾಗುತ್ತಿರುವ ಜಲರಾಶಿಯ ಪೈಕಿ ಶೇ. 43 ಭಾಗ ವ್ಯರ್ಥವಾಗುತ್ತಿದ್ದರೆ, ಕೊಳವೆ ಬಾವಿಗಳು ಗಣನೀಯ ಪ್ರಮಾಣದ ನೀರನ್ನೇನೂ ಒದಗಿಸುತ್ತಿಲ್ಲ. ಇಷ್ಟು ಸಾಲದೆಂಬಂತೆ, ಒಂದು ಕಾಲಕ್ಕೆ ಬೆಂಗಳೂರಿನಲ್ಲಿ ಕಂಗೊಳಿಸುತ್ತಿದ್ದ ಕೆರೆಗಳು ಜಲಮಾಲಿನ್ಯ ಹಾಗೂ ಒತ್ತುವರಿ ಕಾರಣದಿಂದಾಗಿ ಅವಧಿಪೂರ್ವವಾಗಿಯೇ ಅಸುನೀಗಿವೆ. ನಗರದ ಪಶ್ಚಿಮ ಭಾಗಕ್ಕೆ ನೀರುಣಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ, ಆಸುಪಾಸಿನ ಕಾರ್ಖಾನೆಗಳಿಂದ ತ್ಯಾಜ್ಯ ಹರಿದುಬಂದು ಸೇರಿಕೊಂಡಿದ್ದರ ಫಲವಾಗಿ ಕಲುಷಿತಗೊಂಡು ಅನೇಕ ವರ್ಷಗಳಿಂದ ಸಾರ್ವಜನಿಕ ಬಳಕೆಯಿಂದ ದೂರವುಳಿದಿತ್ತು.

ಆದರೆ ಬೆಂಗಳೂರಿನ ಜಲಸಮಸ್ಯೆ ಕುರಿತು ಬಿಬಿಸಿ ವಾಹಿನಿ ಬಿತ್ತರಿಸಿರುವ ವರದಿಯ ಅಂಶಗಳನ್ನು ನಿರಾಕರಿಸಿರುವ ಸಚಿವ ಜಾರ್ಜ್, ಶರಾವತಿ ನದಿನೀರನ್ನೂ ಬೆಂಗಳೂರಿಗೆ ಹರಿಸುವ ಚಿಂತನೆಯಿದೆ, ಜತೆಗೆ ಮುಂದಿನ ವರ್ಷದ ಮಾರ್ಚ್​ನಿಂದ ಕಾವೇರಿ 5ನೇ ಹಂತದ ವಿಸ್ತರಣೆ ಕಾಮಗಾರಿ ಶುರುವಾಗಲಿದೆ; ಹೀಗಾಗಿ ನಗರಕ್ಕೆ ನೀರಿನ ಕೊರತೆ ಉಂಟಾಗದು. ಜನ ಆತಂಕಗೊಳ್ಳುವ ಅಗತ್ಯವಿಲ್ಲ ಎಂದೇನೋ ಭರವಸೆ ನೀಡಿದ್ದಾರೆ. ಈ ಮಾತು ನೆರವೇರಲಿ ಎಂಬುದು ಪ್ರಜ್ಞಾವಂತರ ಆಶಯ.

ಮೂಲನಿವಾಸಿಗಳು ಮಾತ್ರವಲ್ಲದೆ ಉದ್ಯೋಗ, ವ್ಯವಹಾರದ ಕಾರಣದಿಂದಾಗಿ ಗಣನೀಯ ಸಂಖ್ಯೆಯ ವಲಸಿಗರು ಬಂದು ಬೇರೂರುತ್ತಿರುವ ನಗರ ಬೆಂಗಳೂರು. ಹೀಗಾಗಿ, ಕುಡಿಯುವ ನೀರು, ಒಳಚರಂಡಿ, ವಸತಿ ಸೇರಿದಂತೆ ಇಲ್ಲಿ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದು ಸವಾಲಿನ ಸಂಗತಿಯೇ ಸರಿ. ನಗರವಲಸೆಯಿಂದಾಗಿ ಕೊಳೆಗೇರಿಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಇದೀಗ ಬಿಜೆಪಿ ಸಿದ್ಧಪಡಿಸಿರುವ ವರದಿಯೂ ಬೊಟ್ಟುಮಾಡಿದೆ. ಹಾಗಂತ, ಸೂಕ್ತ ಕ್ರಮಗಳಿಗೆ ಮುಂದಾಗದಿದ್ದಲ್ಲಿ ಅಂತಿಮವಾಗಿ ಬಲಿಪಶುಗಳಾಗುವುದು ಜನರೇ. ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿನ ಪರಿಧಿಗೆ ಕಡಿವಾಣ ಹಾಕುವುದು, ಮಳೆನೀರು ಕೊಯ್ಲು ವ್ಯವಸ್ಥೆಯ ಅಳವಡಿಕೆಗೆ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳನ್ನು ಪ್ರೋತ್ಸಾಹಿಸುವುದು, ಕೆರೆಗಳ ಒತ್ತುವರಿ ಹಾಗೂ ಮಾಲಿನ್ಯವನ್ನು ತಡೆಗಟ್ಟಿ ಅವುಗಳನ್ನು ಪುನಶ್ಚೇತನಗೊಳಿಸುವಿಕೆ ಹೀಗೆ ಸಾಧ್ಯವಿರುವ ಎಲ್ಲ ಉಪಕ್ರಮಗಳಿಗೂ ಸರ್ಕಾರ ಮುಂದಾಗಬೇಕಿದೆ. ಜತೆಗೆ, ಜಲ ಮತ್ತು ವಾಯುಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಕಸದ ಸಮಸ್ಯೆಯ ನಿವಾರಣೆಗೂ ಚಿಂತನ-ಮಂಥನವಾಗಬೇಕಿದೆ. ಜಲಮೂಲಗಳಿಗೆ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಹರಿಯಬಿಡುವ ಕೈಗಾರಿಕೆಗಳ ಕಿವಿಹಿಂಡಬೇಕಿದೆ. ‘ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು’ ಎಂಬುದು ಕೇವಲ ದಾರ್ಶನಿಕ ನುಡಿಯಲ್ಲ; ಮುಂದಿನ ಪೀಳಿಗೆಯವರಿಗೂ ಬಳಕೆಗೆ ಲಭ್ಯವಾಗುವಂತೆ ನಿಸರ್ಗದ ಈ ಕೊಡುಗೆಗಳನ್ನು ಮುಕ್ಕಾಗದಂತೆ ಕಾಪಿಟ್ಟುಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿಸುವ ಭರತವಾಕ್ಯವೂ ಹೌದು.

Leave a Reply

Your email address will not be published. Required fields are marked *

Back To Top