Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಶ್ಲಾಘನೀಯ ಬೆಳವಣಿಗೆ

Saturday, 21.07.2018, 3:02 AM       No Comments

ಹೊತ್ತಲ್ಲದ ಹೊತ್ತಿನಲ್ಲಿ ಗ್ರಾಹಕರ ಮೊಬೈಲ್ ಫೋನ್​ಗಳಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳಿಂದ ಬರುವ ಕರೆ ಮತ್ತು ಸಂದೇಶಗಳಿಂದ ಉಂಟಾಗುವ ಕಿರಿಕಿರಿಯನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇಂಥ ಅನಪೇಕ್ಷಿತ ಸಂವಹನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಯಮಗಳನ್ನು ಪರಿಷ್ಕರಿಸಿದೆ. ಟ್ರಾಯ್ನ ಪರಿಷ್ಕೃತ ನಿಯಮದಂತೆ, ಟೆಲಿಮಾರ್ಕೆಟಿಂಗ್ ಅಥವಾ ಪ್ರಚಾರಾರ್ಥ ಕರೆ, ಸಂದೇಶಗಳನ್ನು ಕಳುಹಿಸುವ ಮುನ್ನ ಸಂಬಂಧಿತ ಗ್ರಾಹಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ ಹಾಗೂ ವಾಣಿಜ್ಯೋದ್ದೇಶದ ಕರೆ-ಸಂದೇಶಗಳನ್ನು ನೋಂದಾಯಿತ ಸಂಸ್ಥೆಗಳು ಮಾತ್ರ ಗ್ರಾಹಕರ ಒಪ್ಪಿಗೆಯ ಮೇರೆಗೆ ಕಳುಹಿಸಬೇಕು ಮತ್ತು ಟೆಲಿಕಾಂ ಕಂಪನಿಗಳು ಇದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದೂ ಟ್ರಾಯ್ ಸೂಚಿಸಿದೆ. ಮತ್ತೊಂದೆಡೆ, ಸುಳ್ಳುಸುದ್ದಿಗಳ ಹರಡಿಕೆಯಿಂದಾಗಿ ಸಾಮೂಹಿಕ ಹಲ್ಲೆ ಮತ್ತು ಹತ್ಯಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಹೊಮ್ಮಿದ ಕಟ್ಟುನಿಟ್ಟಿನ ಸೂಚನೆಯಿಂದ ಮೈಕೊಡವಿಕೊಂಡು ಎದ್ದಿರುವ ವಾಟ್ಸ್​ಆಪ್ ಕಂಪನಿ, ಒಂದು ಬಾರಿಗೆ ಐದು ಸಂಖ್ಯೆಗಳೊಂದಿಗೆ ಮಾತ್ರವೇ ಚಾಟ್ ಮಾಡಲು ಸಾಧ್ಯವಾಗುವಂತೆ ನಿರ್ಬಂಧ ಹೇರಲು ಮುಂದಾಗಿದೆ. ವಾಟ್ಸ್​ಆಪ್ ಖಾತೆಯೊಂದರಿಂದ ಸಂದೇಶ, ಚಿತ್ರ ಅಥವಾ ವಿಡಿಯೋವನ್ನು ಐವರಿಗೆ ಫಾರ್ವರ್ಡ್ ಮಾಡಿದ ಬಳಿಕ ಮತ್ತೆ ಅವನ್ನು ಫಾರ್ವರ್ಡ್ ಮಾಡಲು ಮುಂದಾದರೆ, ಸಂಬಂಧಿತ ಆಯ್ಕೆಯನ್ನು ಕಂಪನಿಯೇ ನಿಷ್ಕ್ರಿಯಗೊಳಿಸುತ್ತದೆ ಎಂಬುದು ಲಭ್ಯ ಮಾಹಿತಿ. ಜನಹಿತ ರಕ್ಷಣೆಯ ನಿಟ್ಟಿನಲ್ಲಿ ಇವು ನಿಜಕ್ಕೂ ಶ್ಲಾಘನೀಯ ಬೆಳವಣಿಗೆಗಳು ಎಂಬುದರಲ್ಲಿ ಎರಡು ಮಾತಿಲ್ಲ.

ಅತ್ಯಾಧುನಿಕ ಸಾಧನಗಳೇ ಆಗಲಿ, ಅದಕ್ಕೆ ಒತ್ತಾಸೆಯಾಗಿ ನಿಲ್ಲುವ ತಂತ್ರಜ್ಞಾನವೇ ಆಗಲಿ ಜನರಿಗೆ ಪ್ರಯೋಜನ ಒದಗಿಸುವಂತಾಗಬೇಕು ಎಂಬುದು ಮೂಲ ಆಶಯವಾಗಿರುತ್ತದೆ. ಆದರೆ ಅದರಿಂದ ವಿಮುಖವಾಗುವಂಥ ಬೆಳವಣಿಗೆಗಳಾದಾಗ ಮತ್ತು ಸಾರ್ವಜನಿಕ ನೆಮ್ಮದಿಗೆ ಅದರಿಂದ ಭಂಗವುಂಟಾದಾಗ ಸೂಕ್ತ ಕಡಿವಾಣ, ಕಟ್ಟುನಿಟ್ಟು ಅನಿವಾರ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದ ವಿವಿಧೆಡೆ ಮಕ್ಕಳ ಕಳ್ಳರ ಗ್ಯಾಂಗ್ ನುಸುಳಿದೆ ಎಂಬ ಸುಳ್ಳುಸುದ್ದಿ ಹಬ್ಬುತ್ತಿದ್ದಂತೆ, ಅಮಾಯಕರು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆದಿದ್ದು, ಕೆಲವೊಮ್ಮೆ ಅದು ಸಾವಿನಲ್ಲೂ ಪರ್ಯವಸಾನಗೊಂಡಿದ್ದು ಬಹಳ ಕಡೆ ವರದಿಯಾಗಿದೆ. ಇನ್ನು, ಸ್ವತಃ ಗ್ರಾಹಕರಿಗೇ ಅರಿವಾಗದಂತೆ ಯಾವ್ಯಾವುದೋ ಮೂಲಗಳಿಂದ ಅವರ ಮೊಬೈಲ್ ಸಂಖ್ಯೆ ದಕ್ಕಿಸಿಕೊಳ್ಳುವ ಮಾರ್ಕೆಟಿಂಗ್ ಕಂಪನಿಗಳಿಂದಾಗಿ, ಅವುಗಳಿಂದ ಬರುವ ಕರೆ-ಸಂದೇಶಗಳಿಂದಾಗಿ ಗ್ರಾಹಕರ ಖಾಸಗಿತನಕ್ಕೆ ವಿಭಿನ್ನ ನೆಲೆಗಟ್ಟಿನಲ್ಲಿ ಸಂಚಕಾರ ಒದಗುವ ಸಾಧ್ಯತೆಯನ್ನು ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ, ಬಳಕೆದಾರರಿಗೇ ಅರಿವಿಲ್ಲದಂತೆ ಅವರ ವ್ಯಕ್ತಿಗತ ವಿವರಗಳು ಅನಾಮಧೇಯರ ಪಾಲಾಗುವುದೆಂದರೆ, ಅದು ಭದ್ರತೆಗೆ ಒದಗಿದ ಸಂಚಕಾರವೇ ಸರಿ.

ಆದ್ದರಿಂದ, ಆಧುನಿಕತೆಯೆಡೆಗೆ ಮುಖಮಾಡುವುದರ ಜತೆಜತೆಗೇ, ಅದು ಸಮಾಜದ ಒಟ್ಟಾರೆ ಸ್ವಾಸ್ಥ್ಯಕ್ಕೇ ಕಂಟಕಕಾರಿಯಾಗಲಿದೆ ಎನಿಸಿದಾಗ, ಸರ್ಕಾರ ಮತ್ತು ಸಂಸ್ಥೆಗಳು ಮಾತ್ರವಲ್ಲದೆ, ಸಾಮಾಜಿಕವಾಗಿಯೂ ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ಬಲವಾದ ದನಿ ಹೊಮ್ಮಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ. ಇದು ಮೊಬೈಲ್ ಕರೆ, ಸಂದೇಶ ಮತ್ತು ವಾಟ್ಸ್​ಆಪ್​ನಂಥ ಬಾಬತ್ತುಗಳಿಗೆ ಮಾತ್ರವೇ ಸೀಮಿತವಾಗಬಾರದು. ಎಲ್ಲೆಲ್ಲಿ ಶ್ರೀಸಾಮಾನ್ಯರ/ಗ್ರಾಹಕರ ಹಕ್ಕುಗಳಿಗೆ ಸಂಚಕಾರ ಒದಗುತ್ತಿದೆಯೋ, ಯಾವ್ಯಾವ ನೆಲೆಗಟ್ಟಿನಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತಿದೆಯೋ ಅಂಥ ಎಲ್ಲ ವಲಯಗಳೆಡೆಗೂ ಹಬ್ಬಬೇಕಾದ ಅರಿವಿನ ಬೆಳಕು.

Leave a Reply

Your email address will not be published. Required fields are marked *

Back To Top