Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಆರ್ಥಿಕ ಪ್ರಗತಿಯ ಹಾದಿ

Thursday, 12.07.2018, 3:02 AM       No Comments

ಕಾಳಧನದ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಘೋಷಿಸಿದ ನೋಟು ಅಮಾನ್ಯೀಕರಣ ಕ್ರಮ ಮತ್ತು ಆ ಬಳಿಕ ಜಾರಿಗೆ ಬಂದ ಜಿಎಸ್​ಟಿ ವ್ಯವಸ್ಥೆಯಿಂದಾಗಿ ದೇಶದ ಆರ್ಥಿಕ ಪ್ರಗತಿಯ ವೇಗ ಕೊಂಚ ಕಡಿಮೆಯಾಗಿತ್ತು. ಇದು ಕಳವಳಕ್ಕೂ ಕಾರಣವಾಗಿ, ಇಂಥ ಕಠೋರ ಕ್ರಮಗಳು ದೇಶದ ಆರೋಗ್ಯ ಸ್ವಾಸ್ಥ್ಯಕ್ಕೆ ಮಾರಕವಾಗಬಲ್ಲವು ಎಂಬುದಾಗಿ ತಜ್ಞರ ಒಂದು ವಲಯ ವಿಶ್ಲೇಷಣೆ ಮಾಡಿತು. ಆದರೆ, ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ವ್ಯವಸ್ಥೆಯ ಲಾಭ ತಕ್ಷಣದಲ್ಲಿ ಆಗದಿದ್ದರೂ, ಭವಿಷ್ಯದಲ್ಲಿ ಹಲವು ಪ್ರಯೋಜನಗಳಿವೆ ಎಂದು ಹೇಳಲಾಯಿತು. ಅದೇನೆ ಇದ್ದರೂ, ಆ ಎಲ್ಲ ಅಡೆತಡೆಗಳನ್ನು ದಾಟಿ ಭಾರತ ಆರ್ಥಿಕ ಪ್ರಗತಿಯಲ್ಲಿ ವೇಗ ಕಂಡುಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.

ಬುಧವಾರ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತ ಫ್ರಾನ್ಸ್ ಅನ್ನು ಹಿಂದಿಕ್ಕಿ ವಿಶ್ವದ 6ನೇ ದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. 2017ನೇ ಸಾಲಿನಲ್ಲಿ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು, ಮೊದಲ ಐದು ಸ್ಥಾನಗಳಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್​ಗಳಿವೆ. 2017ರ ಸಾಲಿನಲ್ಲಿ ಭಾರತದ ಒಟ್ಟಾರೆ ದೇಶಿಯ ಉತ್ಪನ್ನ (ಜಿಡಿಪಿ) ಅಂದಾಜು- 178.66 ಲಕ್ಷ ಕೋಟಿ ರೂ.ಇದ್ದರೆ, ಫ್ರಾನ್ಸ್​ನ ಜಿಡಿಪಿ-177.62 ಲಕ್ಷ ಕೋಟಿ ರೂ. ಇದೆ. ಅಲ್ಲದೆ, ‘ಭಾರತದ ಅರ್ಥವ್ಯವಸ್ಥೆ ಸುದೃಢವಾಗಿದ್ದು, ಸುಸ್ಥಿರ ಅಭಿವೃದ್ಧಿಯತ್ತ ಅದು ದಾಪುಗಾಲು ಇರಿಸಿದೆ’ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿರುವುದು, ಮುಂಬರುವ ದಿನಗಳ ಬಗ್ಗೆ ಹೊಸ ಆಶಾವಾದ ಸೃಷ್ಟಿಸಿದೆ. 2018ರ ಅಂತ್ಯಕ್ಕೆ ಭಾರತದ ಜಿಡಿಪಿ ಶೇ. 7.4 ಮತ್ತು 2019ಕ್ಕೆ ಶೇ. 7.9ಕ್ಕೆ ಏರುವ, ಅಂದಾಜಿದ್ದು, ಆರ್ಥಿಕ ಪ್ರಗತಿಯ ವೇಗ ಹೆಚ್ಚಲಿದೆ.

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಮಾನವ ಸಂಪನ್ಮೂಲ ವರವೂ ಹೌದು. ದುಡಿಯುವ ವರ್ಗ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇದು ಆರ್ಥಿಕಾಭಿವೃದ್ಧಿಗೆ ಪೂರಕವಾಗಬಲ್ಲದು. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ವೈಯಕ್ತಿಕ ತಲಾ ಆದಾಯದ ವಿಷಯದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ. ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರವರೆಗೆ ತಲುಪುವಂತಾದಾಗ ಮಾತ್ರ ಅದಕ್ಕೆ ನಿಜವಾದ ಸಾರ್ಥಕತೆ ಎಂಬುದನ್ನು ಆಳುಗರು ಮರೆಯಬಾರದು. ಅಲ್ಲದೆ, ಕಾಳಧನ, ನಕಲಿ ನೋಟು, ತೆರಿಗೆ ಕಳ್ಳತನದಂಥ ಪಿಡುಗುಗಳು ಆರ್ಥಿಕ ರಂಗಕ್ಕೆ ದೊಡ್ಡ ಪಿಡುಗುಗಳಾಗಿ ಕಾಡುತ್ತಿದ್ದು, ಇವುಗಳ ನಿವಾರಣೆಗೆ ಮತ್ತಷ್ಟು ಬಿಗಿಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. 2019ರಿಂದ ಸ್ವಿಸ್ ಬ್ಯಾಂಕಿನಲ್ಲಿ ಠೇವಣಿ ಇಡುವ ಭಾರತೀಯರ ವಿವರಗಳು ಸರ್ಕಾರಕ್ಕೆ ಲಭ್ಯವಾಗಲಿದ್ದು, ಪಾರದರ್ಶಕ ಆರ್ಥಿಕ ವ್ಯವಹಾರದ ನಿಟ್ಟಿನಲ್ಲಿ ಅದು ನೆರವಾಗಲಿದೆ. ಸದ್ಯದಲ್ಲೇ, ಆರ್ಥಿಕತೆಯಲ್ಲಿ ಭಾರತ ಚೀನಾವನ್ನೂ ಹಿಂದಿಕ್ಕಲಿದೆ ಎಂದು ಐಎಂಎಫ್ ವರದಿ ಹೇಳಿದ್ದು, ವಿತ್ತರಂಗದ ಉತ್ಸಾಹ ಹೆಚ್ಚಿಸಿದೆ. ಈ ಆರ್ಥಿಕ ಪ್ರಗತಿ ಉದ್ಯೋಗಸೃಷ್ಟಿ, ಬಡತನ ನಿವಾರಣೆಗೂ ಆದ್ಯತೆ ನೀಡುವಂತಾದ್ದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ.

Leave a Reply

Your email address will not be published. Required fields are marked *

Back To Top