Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ನಿರ್ಭಯ ವಾತಾವರಣ ಸೃಷ್ಟಿಯಾಗಲಿ

Tuesday, 10.07.2018, 3:02 AM       No Comments

ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ಮಾನವ ಸಂವೇದನೆಗೆ ತೀವ್ರ ಘಾಸಿ ಮಾಡಿದ್ದಲ್ಲದೆ ಇಂಥ ಪೈಶಾಚಿಕ ಕೃತ್ಯ ಮತ್ತೆಂದೂ ಸಂಭವಿಸಬಾರದು ಎಂಬ ಕೂಗನ್ನು ರಾಷ್ಟ್ರಾದ್ಯಂತ ಮೊಳಗುವಂತೆ ಮಾಡಿತು. ಈ ಪ್ರಕರಣ, ಮಹಿಳೆಯರ ಸುರಕ್ಷೆ, ಅತ್ಯಾಚಾರ ತಡೆಗೆ ಬಿಗಿ ಕಾನೂನು, ಅಪರಾಧಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಮುನ್ನೆಲೆಗೆ ಬಂದು ಜಾಗೃತಿಯ ಹೊಸ ಆಯಾಮ ಸೃಷ್ಟಿಸಿತು. ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಮರಣದಂಡನೆ ಘೋಷಿಸಿದಾಗ ದೇಶ ಸಮಾಧಾನದ ನಿಟ್ಟುಸಿರು ಬಿಟ್ಟಿತ್ತು. ಆದರೆ, ನಾಲ್ವರಲ್ಲಿ ಮೂವರು ಅಪರಾಧಿಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರಿಂದ ಮುಂದೇನಾಗಬಹುದು ಎಂಬ ಕುತೂಹಲ ಮೂಡಿತ್ತು. ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ‘ಇಂತಹ ಹೀನ ಅಪರಾಧಿಗಳಿಗೆ ಶಿಕ್ಷೆ ಕಡಿತಗೊಳಿಸಲು ಸಾಧ್ಯವೇ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ನಮ್ಮ ನಾಗರಿಕ ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕುರಿತಂತೆ ಮಿಶ್ರ ಭಾವನೆಗಳು ಇರುವುದೇನೋ ನಿಜ. ಆದರೆ, ಘೋರ ಅಪರಾಧಗಳು, ಕೃತ್ಯಗಳು ಸಂಭವಿಸಿದಾಗ ಜನರು ನ್ಯಾಯಕ್ಕಾಗಿ ಆಸೆಕಂಗಳಿಂದ ನೋಡುವುದು ನ್ಯಾಯಾಂಗದೆಡೆಯೇ. ಇಂಥ ಪ್ರಕರಣಗಳಲ್ಲಿ ತಪಿತಸ್ಥರಿಗೆ ವ್ಯವಸ್ಥೆ ಘೋರ ಶಿಕ್ಷೆ ನೀಡಬೇಕು, ಆ ಮೂಲಕ ಮತ್ತೆ ಅಂಥ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂಬ ಕಳಕಳಿಯೂ ಇದರಲ್ಲಿ ಮಿಳಿತವಾಗಿರುತ್ತದೆ.

ಭಯೋತ್ಪಾದನೆ ವಿರುದ್ಧದ ಸಮರವನ್ನು ಭಾರತ ತೀವ್ರಗೊಳಿಸಿದಾಗಲೂ ‘ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಸಾಧ್ಯವೇ?’ ಎಂಬ ಅನುಮಾನದ ದನಿಗಳು ಅಲ್ಲಲ್ಲಿ ಕೇಳಿಬಂದಿದ್ದವು. ಮುಂಬೈ ದಾಳಿಯಲ್ಲಿ ಜೀವಂತ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಮತ್ತು ಸಂಸತ್ತಿನ ಮೇಲಿನ ದಾಳಿ ಸಂಚುಕೋರ ಅಫ್ಜಲ್​ನನ್ನು ಗಲ್ಲಿಗೇರಿಸಿದಾಗ ಇಂಥ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದವು.

ಗೆಳೆಯನೊಂದಿಗೆ ಸಿನಿಮಾ ನೋಡಿ ಮರಳುತ್ತಿದ್ದ ಯುವತಿಯ ಮೇಲೆ ಕಾಮುಕರು ಚಲಿಸುವ ಬಸ್​ನಲ್ಲೇ ಸಾಮೂಹಿಕ ಅತ್ಯಾಚಾರಗೈದು ಪೈಶಾಚಿಕತೆಯ ತುತ್ತತುದಿ ತಲುಪಿದ್ದರು. ಅತ್ಯಾಚಾರ ತಡೆಗೆ ಕಾನೂನು ಬಿಗಿಗೊಳ್ಳಬೇಕು ಎಂದು ದೇಶ ಏಕದನಿಯಲ್ಲಿ ಒತ್ತಾಯಿಸಿದಾಗ ಕಾನೂನು ತಿದ್ದುಪಡಿಗೊಂಡು, ಮತ್ತಷ್ಟು ಬಲಗೊಂಡಿತು. ಮಾತ್ರವಲ್ಲ, ಮಹಿಳೆಯರ ಸುರಕ್ಷೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ‘ನಿರ್ಭಯಾ ಫಂಡ್’ ಸ್ಥಾಪಿಸಿ ರಾಜ್ಯ ಸರ್ಕಾರಗಳಿಗೆ ಅನುದಾನ ಹಂಚಿಕೆ ಮಾಡಿತು. ‘ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲ’ ಎಂದು ಇತ್ತೀಚೆಗೆ ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ಸಮೀಕ್ಷಾ ವರದಿ ಹೇಳಿದೆ. ಇದು ಅರ್ಧಸತ್ಯ. ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆಯಾದರೂ ಕಾನೂನಿನ ಬಿಗಿ ಕುಣಿಕೆ, ತ್ವರಿತ ವಿಚಾರಣೆಗಳು ಭರವಸೆಯ ಹೊಸ ಆಶಾಕಿರಣ ಮೂಡಿಸಿವೆ ಎನ್ನಲಡ್ಡಿಯಿಲ್ಲ. ಆದರೆ, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಮಹಿಳೆಯರ ಮೇಲಿನ ಎಲ್ಲ ಬಗೆಯ ಹಿಂಸೆ ಮತ್ತು ಅತ್ಯಾಚಾರ ಇಲ್ಲವಾಗಬೇಕು. ಅಂಥ ಆದರ್ಶ ಪರಿಸ್ಥಿತಿ, ಸಮಾಜ ನಿರ್ವಣವಾಗುವ ನಿಟ್ಟಿನಲ್ಲಿ ನೈತಿಕ ಮೌಲ್ಯಗಳ ಪರಿಣಾಮಕಾರಿ ಅನುಷ್ಠಾನ, ಕಾನೂನಿನ ಬಿಗಿ ಕ್ರಮಗಳು ಪೂರಕವಾಗಲಿ. ನಿರ್ಭಯಾ ಪ್ರಕರಣ ಮತ್ತು ಅಪರಾಧಿಗಳಿಗೆ ಶಿಕ್ಷೆ ಮುಂತಾದ ಬೆಳವಣಿಗೆಗಳು ಆತ್ಮಾವಲೋಕನಕ್ಕೆ ನಿಮಿತ್ತವಾಗಿ, ನಿರ್ಭಯ ವಾತಾವರಣ ಸೃಷ್ಟಿಯಾಗುವಂತಾಗಲಿ.

Leave a Reply

Your email address will not be published. Required fields are marked *

Back To Top