Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಪ್ರತಿಷ್ಠೆಯ ಮೇಲಾಟ ಸಲ್ಲ

Tuesday, 19.06.2018, 3:03 AM       No Comments

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟ ಸಹೋದ್ಯೋಗಿಗಳೊಂದಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿರುವ ಕೇಜ್ರಿವಾಲ್ ಆಡಳಿತ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರೇ ಧರಣಿ ಮಾಡುವುದು ಹಾಸ್ಯಾಸ್ಪದ ಎನ್ನದೆ ವಿಧಿಯಿಲ್ಲ. ಹೋರಾಟದ ಹಿನ್ನೆಲೆಯಿಂದಲೇ ರಾಜಕೀಯ ಗದ್ದುಗೆ ಏರಿದ ಕೇಜ್ರಿವಾಲ್ ಈ ಹಿಂದೆಯೂ ದೆಹಲಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ನಿದರ್ಶನವುಂಟು. ಆದರೆ, ಈ ಬಾರಿ ಹೈಕೋರ್ಟ್ ಚೆನ್ನಾಗಿಯೇ ಚಾಟಿ ಬೀಸಿದೆ. ‘ಎಲ್​ಜಿ ಕಚೇರಿಯಲ್ಲಿ ಪ್ರತಿಭಟನೆಗೆ ಅನುಮತಿ ಕೊಟ್ಟಿದ್ಯಾರು?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ನ್ಯಾಯಾಲಯ ಯಾವುದೇ ವ್ಯಕ್ತಿಯ ಕಚೇರಿ ಅಥವಾ ಮನೆ ಒಳಗೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕೇಜ್ರಿವಾಲರ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮತದಾರರು ಭರ್ಜರಿ ಬಹುಮತವನ್ನೇ ನೀಡಿ, ಅಭಿವೃದ್ಧಿಯಲ್ಲಿ ಹೊಸ ಮತ್ತು ವಿಶಿಷ್ಟ ಪ್ರಯೋಗಗಳನ್ನು ನಿರೀಕ್ಷಿಸಿದ್ದರು. ಕೆಲಸ ಮಾಡಲು ಸಾಕಷ್ಟು ಅವಕಾಶಗಳಿದ್ದರೂ ಅಧಿಕಾರಿಗಳ ವಿರುದ್ಧ ಟೀಕೆ, ಎಲ್​ಜಿ ಹಾಗೂ ಕೇಂದ್ರ ಸರ್ಕಾರದೊಡನೆ ತಿಕ್ಕಾಟ ನಡೆಸುತ್ತಲೇ ಕಾಲವ್ಯಯಿಸುತ್ತಿದೆ ದೆಹಲಿ ಸರ್ಕಾರ. ಅಷ್ಟಕ್ಕೂ, ಕೇಜ್ರಿವಾಲ್ ಅಧಿಕಾರಶಾಹಿ ಹಿನ್ನೆಲೆಯಿಂದಲೇ ಬಂದವರು. ಹಾಗಾಗಿ, ದೆಹಲಿಯ ಭಿನ್ನವಾದ ಸ್ವರೂಪ ಅವರಿಗೆ ತಿಳಿದಿರುವಂಥದ್ದೇ. ದೆಹಲಿಗೆ ಪೂರ್ಣರಾಜ್ಯದ ಸ್ಥಾನಮಾನ ದೊರೆತಿಲ್ಲ. ಹಾಗಾಗಿ, ಮುಖ್ಯಮಂತ್ರಿಗೆ ಸೀಮಿತ ಅಧಿಕಾರವಿದ್ದು, ಕೇಂದ್ರ ಸರ್ಕಾರದ ಪರವಾಗಿ ಲೆಫ್ಟಿನೆಂಟ್ ಗವರ್ನರ್ ಆಡಳಿತ ಮುಖ್ಯಸ್ಥರಾಗಿರುತ್ತಾರೆ. ಸಂಪುಟದ ನಿರ್ಧಾರಗಳು, ಅಧಿಕಾರಿಗಳ ವರ್ಗಾವಣೆ ಇದಕ್ಕೆಲ್ಲ ಎಲ್​ಜಿ ಒಪ್ಪಿಗೆ ದೊರೆತರೆ ಮಾತ್ರ ಅನುಷ್ಠಾನಕ್ಕೆ ತರಲು ಸಾಧ್ಯ.

ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಇದ್ದಲ್ಲಿ ಮಿತಿಗಳ ನಡುವೆಯೂ ಕೆಲಸ ಮಾಡಬಹುದು ಎಂಬುದಕ್ಕೆ ಶೀಲಾ ದೀಕ್ಷಿತರ ಆಡಳಿತ ಸಾಕ್ಷಿಯಾಗಿತ್ತು. ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ದೀಕ್ಷಿತ್ ದೆಹಲಿಯ ಅಭಿವೃದ್ಧಿಓಟಕ್ಕೆ ವೇಗ ತುಂಬುವಂಥ ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರು.

ಈ ಬಿಕ್ಕಟ್ಟನ್ನು ಸಾಮೂಹಿಕ ಹೊಣೆಗಾರಿಕೆಯಿಂದ ಪರಿಹರಿಸಬೇಕಾದ ಅಗತ್ಯವಿದೆ. ಎಲ್​ಜಿ ಕೂಡ ಸರ್ಕಾರ ಮುಂದಿಟ್ಟಿರುವ ಬೇಡಿಕೆಗಳನ್ನು ಗಮನಿಸಿ, ಮಾತುಕತೆ ಮೂಲಕ

ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು. ಮುಖ್ಯವಾಗಿ, ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೂ ಮೂಕಪ್ರೇಕ್ಷಕನಂತಿರುವ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶ ಮಾಡಬೇಕು. ದೆಹಲಿ ರಾಷ್ಟ್ರದ ರಾಜಧಾನಿಯಾಗಿದ್ದು, ಹಲವು ರಾಷ್ಟ್ರಗಳ ರಾಜತಾಂತ್ರಿಕ ಕಚೇರಿಗಳೂ ಇವೆ. ಅಲ್ಲಿನ ಸಣ್ಣ ಬೆಳವಣಿಗೆ, ಸುದ್ದಿಯನ್ನೂ ವಿಶ್ವ ಸಮುದಾಯ ಕುತೂಹಲದಿಂದ ಗಮನಿಸುತ್ತಿರುತ್ತದೆ. ಸರ್ಕಾರವೇ ಧರಣಿಗೆ ಕೂತಿರುವ ಸುದ್ದಿಯಿಂದ ದೆಹಲಿಗೆ ಮುಜುಗರ ಮಾತ್ರವಲ್ಲ, ಪ್ರತಿಷ್ಠೆಗೂ ಕುಂದು. ಈ ನಡುವೆ ಪ್ರತಿಭಟನೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂಬ ಕೇಜ್ರಿವಾಲ್ ಮನವಿಗೆ ಐಎಎಸ್ ಅಧಿಕಾರಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಮಾತುಕತೆಗೆ ಒಲವು ತೋರಿದ್ದಾರೆ. ಇದೇ ಮಾದರಿಯಲ್ಲಿ ಎಲ್​ಜಿ ಮತ್ತು ಸರ್ಕಾರ ನಡುವಿನ ಬಿಕ್ಕಟ್ಟು ಶೀಘ್ರ ಇತ್ಯರ್ಥಗೊಳ್ಳಲಿ. ಆಮ್ ಆದ್ಮಿ ಸರ್ಕಾರ ಬರೀ ಟೀಕೆ, ಆರೋಪಗಳಲ್ಲಿ ತೊಡಗದೆ ಸಹಕಾರ, ಸಮನ್ವಯದಿಂದ ಆಡಳಿತಯಂತ್ರ ಚುರುಕುಗೊಳಿಸಲಿ.

Leave a Reply

Your email address will not be published. Required fields are marked *

Back To Top