More

    ಸಂಪಾದಕೀಯ: ಜನರ ಅಲೆದಾಟ ತಪ್ಪಲಿ: ಗ್ರಾಮ ಒನ್ ಸೇವೆಗಳು ಜನರಿಗೆ ಪಾರದರ್ಶಕವಾಗಿ ತಲುಪಬೇಕು

    ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಹಳ್ಳಿಗಳಿಗೆ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು, ಇತರ ಪ್ರಮಾಣಪತ್ರಗಳು ತಲುಪಬೇಕು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಣರಾಜ್ಯೋತ್ಸವದಂದು ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅಲ್ಲಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ 12 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳ 3024 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಯೋಜನೆ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

    ಪಹಣಿ ಪತ್ರದಿಂದ ಹಿಡಿದು, ಜನನ, ಮರಣ ಪ್ರಮಾಣಪತ್ರ ಪಡೆಯಲು ಕೂಡ ಜನರು ಸರ್ಕಾರಿ ಕಚೇರಿಗಳಿಗೆ ಹಲವು ದಿನ ಎಡತಾಕಬೇಕಾಗುತ್ತದೆ. ಕೆಳಹಂತದಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಅಧಿಕಾರಶಾಹಿಯ ವಿಳಂಬನೀತಿಯ ಪರಿಣಾಮ ಶ್ರೀಸಾಮಾನ್ಯರು ಅನುಭವಿಸುವ ತೊಂದರೆಗಳು ಅಷ್ಟಿಷ್ಟಲ್ಲ. ಎಷ್ಟೋ ಕಚೇರಿಗಳಲ್ಲಿ ಲಂಚ ನೀಡದೆ ಕೆಲಸವೇ ಆಗುವುದಿಲ್ಲ ಎಂಬ ಪರಿಸ್ಥಿತಿ ತುಂಬ ಕಡೆ ನೆಲೆಸಿದೆ. ಇನ್ನು ಕೆಲವು ಇಲಾಖೆಗಳಲ್ಲಿ ತಂತ್ರಜ್ಞಾನದ ಅಳವಡಿಕೆಯಾಗಿದ್ದರೂ, ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲದ ಸಿಬ್ಬಂದಿ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಜನರನ್ನು ಸತಾಯಿಸುತ್ತಾರೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಗ್ರಾಮ ಒನ್ ಹೇಗೆ ಭಿನ್ನವಾಗಿ ಮತ್ತು ಪರಿಣಾಮಕಾರಿಯಾಗಿ ಸೇವೆ ಒದಗಿಸಲಿದೆ ಎಂಬುದು ನಿಜಕ್ಕೂ ಸವಾಲಿನ ಸಂಗತಿ. ಈ ಹಿಂದೆ ಸಕಾಲ ಯೋಜನೆಯಡಿ ಆರಂಭಿಸಲಾಗಿರುವ ಹಲವು ಕೇಂದ್ರಗಳಲ್ಲೂ ‘ನಿಧಾನವೇ ಪ್ರಧಾನ’ ನೀತಿಯಾಗಿರುವುದರಿಂದ ಜನರ ಸಮಸ್ಯೆ ಹೆಚ್ಚಿದೆ.

    ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸರ್ಕಾರದ ಯೋಜನೆಗಳು, ಸೌಲಭ್ಯಗಳು ದೊರೆಯುವಂತಾಗುವುದು ಆಡಳಿತ ಸುಧಾರಣೆಯ ಮಹತ್ವದ ಹೆಜ್ಜೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ಹಿಂದೆ ತಲೆದೋರಿರುವ ಪ್ರಾಯೋಗಿಕ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ‘ಸರ್ವರ್ ಸಮಸ್ಯೆ’ ಎಂಬ ನೆಪ ಹೇಳಿ ರೈತರನ್ನು, ಜನಸಾಮಾನ್ಯರನ್ನು ಈಗಲೂ ಹಲವು ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ಎಡತಾಕುವಂತೆ ಮಾಡುತ್ತಾರೆ. ಸರ್ಕಾರದ ಯೋಜನೆಗಳು ಯಶಸ್ವಿ ಆಗಬೇಕಾದರೆ ಅನುಷ್ಠಾನದ ಹಾದಿಯಲ್ಲಿನ ತೊಡಕುಗಳು ಮೊದಲು ನಿವಾರಣೆಯಾಗಬೇಕು. ಈ ಕೊರತೆಗಳನ್ನು ನೀಗಿಸಿಕೊಂಡು ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುವಂತಾದರೆ ಅದು ಸುಧಾರಣೆಯ ದೊಡ್ಡ ಹೆಜ್ಜೆಯೇ ಸರಿ. ಈ ಹೊಸ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts