More

    ಸಂಪಾದಕೀಯ| ಆರೋಗ್ಯಕರ ಕ್ರಮ: ಅವಶ್ಯಕ ಔಷಧಗಳ ಪಟ್ಟಿಗೆ ಹೊಸ ಸೇರ್ಪಡೆ

    ರಾಷ್ಟ್ರೀಯ ಅವಶ್ಯಕ ಔಷಧಗಳ ಪಟ್ಟಿಗೆ (ಎನ್​ಎಲ್​ಇಎಂ) ಮತ್ತೆ 34 ಔಷಧ ಸೇರ್ಪಡೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವು ಗಂಭೀರ ಕಾಯಿಲೆ ಎದುರಿಸುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರ ಪಾಲಿಗೆ ಅನುಕೂಲವಾಗುವ ಜನಸ್ನೇಹಿ ಕ್ರಮವೆನ್ನಬಹುದು. ಈ ಸೇರ್ಪಡೆಯೊಂದಿಗೆ ಎನ್​ಎಲ್​ಇಎಂನ ಒಟ್ಟು ಔಷಧಗಳ ಸಂಖ್ಯೆ 384ಕ್ಕೆ ಏರಿದ್ದು, ಕ್ಯಾನ್ಸರ್, ಹೃದಯಸಂಬಂಧಿ ಕಾಯಿಲೆಗಳು, ಮಧುಮೇಹ ಹಾಗೂ ದೀರ್ಘಕಾಲೀನ ರೋಗಗಳ ಔಷಧಗಳ ಬೆಲೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 1996ರಲ್ಲಿ ಎನ್​ಎಲ್​ಇಎಂ ರಚನೆ ಮಾಡಲಾಗಿತ್ತು. ನಂತರ 2003, 2011 ಮತ್ತು 2015ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಈ ಪಟ್ಟಿ ಪರಿಷ್ಕರಣೆಯ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು 2018ರಲ್ಲಿ ಸ್ವತಂತ್ರ ರಾಷ್ಟ್ರೀಯ ವೈದ್ಯಕೀಯ ಸ್ಥಾಯಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2022ರಲ್ಲಿ ನೀಡಿದ ಶಿಫಾರಸಿನ ಅನ್ವಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎನ್​ಎಲ್​ಇಎಂ ಪರಿಷ್ಕರಣೆ ಮಾಡಿದೆ. ಔಷಧಗಳನ್ನು ಈ ಪಟ್ಟಿಗೆ ಸೇರಿಸುವಲ್ಲಿ, ವೈಜ್ಞಾನಿಕ ಸಾಕ್ಷ್ಯಗಳ ಆಧಾರಿತವಾಗಿ ಸುರಕ್ಷಿತ ಮತ್ತು ಗುಣಮಟ್ಟದ್ದವು ಎಂದು ಸಾಬೀತಾದ ಹಾಗೂ ಭಾರತೀಯ ಔಷಧ ಮಹಾ ನಿಯಂತ್ರಕರಿಂದ (ಡಿಜಿಸಿಐ) ಅನುಮೋದಿತ ಔಷಧಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಸ್ಪರ್ಧಾತ್ಮಕ ಬೆಲೆ ಇರುವ ಔಷಧಗಳಿಗೆ ಪ್ರಾಧಾನ್ಯ ನೀಡಲಾಗುತ್ತದೆ. ಯಾವುದೇ ಒಂದು ವರ್ಗದಲ್ಲಿ ಒಂದಕ್ಕಿಂತ ಹೆಚ್ಚು ಔಷಧಗಳು ಲಭ್ಯವಿದ್ದರೆ, ಹೆಚ್ಚು ಯೋಗ್ಯವಾದ ಒಂದನ್ನು ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಒಟ್ಟಾರೆಯಾಗಿ ವೆಚ್ಚ, ಸುರಕ್ಷತೆ ಹಾಗೂ ದಕ್ಷತೆ- ಈ ಮೂರು ಅಂಶಗಳನ್ನು ಆಧರಿಸಿ ಎನ್​ಎಲ್​ಇಎಂ ಸಿದ್ಧಪಡಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ಅವಶ್ಯಕ ಔಷಧಗಳ ಪಟ್ಟಿಯ ಅನುಸಾರವೇ ಬಹುತೇಕವಾಗಿ ಪ್ರಸ್ತುತ ಎನ್​ಎಲ್​ಇಎಂ ಸಿದ್ಧವಾಗಿದೆ.

    ಎನ್​ಎಲ್​ಇಎಂನಲ್ಲಿರುವ ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧೀಯ ದರ ಪ್ರಾಧಿಕಾರವು (ಎನ್​ಪಿಪಿಎ) ನಿಗದಿಪಡಿಸುವ ಮೂಲಕ ಔಷಧಗಳ ಬೆಲೆಯನ್ನು ನಿಯಂತ್ರಣದಲ್ಲಿಡಲಾಗುತ್ತದೆ. ಈ ಪಟ್ಟಿಯಲ್ಲಿಲ್ಲದ ಔಷಧಗಳ ಬೆಲೆಯನ್ನು ವಾರ್ಷಿಕವಾಗಿ ಶೇ. 10 ಏರಿಕೆ ಮಾಡಲು ಅವಕಾಶವಿದೆ. ಆದರೆ, ಈ ಪಟ್ಟಿಯಲ್ಲಿರುವ ಔಷಧಗಳ ದರವನ್ನು ಹೆಚ್ಚಳ ಮಾಡಬೇಕಾದರೆ ಮತ್ತೆ ಎನ್​ಪಿಪಿಎ ಅನುಮತಿ ಅಗತ್ಯವಾಗುತ್ತದೆ. ‘ಸಬ್​ಕೋ ದವಾಯಿ; ಸಸ್ತಿ ದವಾಯಿ’ (ಸರ್ವರಿಗೂ ಔಷಧ; ಅಗ್ಗದ ಔಷಧ) ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಜಾರಿಗೊಳಿಸುವ ಕ್ರಮವಾಗಿ ಜನೌಷಧಿ ಮಳಿಗೆಗಳನ್ನು ದೇಶಾದ್ಯಂತ ಆರಂಭಿಸುವ ಮೂಲಕ ಗಂಭೀರವಲ್ಲದ ಕಾಯಿಲೆಗಳಿಗೆ ಅಗ್ಗದ ಬೆಲೆಯಲ್ಲಿ ಔಷಧ ದೊರೆಯಲು ಆಸ್ಪದ ಮಾಡಿಕೊಡಲಾಗಿದೆ. ಇಲ್ಲಿ ಇನ್ನೂ ಒಂದೆರಡು ಅಂಶದತ್ತ ಗಂಭೀರ ಚಿಂತನೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ವೈದ್ಯರ ಪ್ರಿಸ್ಕ್ರಿಷ್ಕನ್ ಇಲ್ಲದೆಯೇ ನೇರವಾಗಿ ಫಾರ್ಮಸಿ ಮಳಿಗೆಗಳಿಂದ ಔಷಧ ಖರೀದಿಸುವ ಪ್ರವೃತ್ತಿ ಜನರಲ್ಲಿ ಹೆಚ್ಚುತ್ತಿದೆ. ಆಂಟಿಬಯಾಟಿಕ್​ಗಳ ಸೇವನೆ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿದೆ ಎಂಬ ಸಂಗತಿಯೂ ಹೊರಬಿದ್ದಿದೆ. ಕೆಲ ಕಾಯಿಲೆಗಳಿಗೆ ತಜ್ಞರ ಸಲಹೆ-ಸೂಚನೆ ಇಲ್ಲದೆ ಮದ್ದು ಸೇವಿಸುವುದು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts