More

    ವಿಜಯವಾಣಿ ಸಂಪಾದಕೀಯ| ಅಪೌಷ್ಟಿಕತೆ ತಡೆಯಲು ಇನ್ನಷ್ಟು ಕ್ರಮ ಅಗತ್ಯ

    ವಿಜಯವಾಣಿ ಸಂಪಾದಕೀಯ| ಅಪೌಷ್ಟಿಕತೆ ತಡೆಯಲು ಇನ್ನಷ್ಟು ಕ್ರಮ ಅಗತ್ಯಅಭಿವೃದ್ಧಿಯ ವ್ಯಾಖ್ಯೆ, ಅದರ ಸ್ವರೂಪ ಮತ್ತು ಆಯಾಮಗಳ ಬಗ್ಗೆ ಆಗಾಗ ಚಿಂತನೆ ನಡೆದು, ಬದಲಾವಣೆಗಳನ್ನು ಅಳವಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಪಡೆದುಕೊಳ್ಳುವ ಭರದಲ್ಲಿ ಕಳೆದುಕೊಳ್ಳುವುದೇ ಹೆಚ್ಚಾಗುತ್ತದೆ ಎಂಬುದು ಕರಾಳ ವಾಸ್ತವ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಎಂದರೆ ಮೂಲಸೌಕರ್ಯ ಹೆಚ್ಚಿಸುವುದು ಎಂಬಂತಾಗಿದೆ. ಮೂಲಸೌಕರ್ಯಗಳು ಅವಶ್ಯವೇನೋ ಹೌದು. ಆದರೆ, ಬರೀ ಭೌತಿಕ ಸೌಲಭ್ಯಗಳ ಬೆನ್ನು ಹತ್ತಿ, ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನೇ ಕಡೆಗಣಿಸಿದರೆ ಯುವ ಪೀಳಿಗೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡಲು ರಾಜ್ಯ ಮತ್ತು ದೇಶದಲ್ಲಿ ಹಲವು ಸರ್ಕಾರಿ ಕಾರ್ಯಕ್ರಮ, ಯೋಜನೆಗಳೇನೋ ಇವೆ. ಅವು ಎಷ್ಟು ಪ್ರಯೋಜನಕಾರಿ ಆಗುತ್ತಿವೆ ಎಂದು ಅವಲೋಕಿಸ ಹೊರಟರೆ ಉತ್ತರ ಆಶಾದಾಯಕ ವಾಗೇನಿಲ್ಲ. ಕರೊನಾ ಮತ್ತು ಆ ನಂತರದ ದಿನಗಳಲ್ಲಂತೂ ಮಕ್ಕಳ ಆರೋಗ್ಯ ರಕ್ಷಣೆ ವಿಷಯ ಸವಾಲಾಗಿ ಪರಿಣಮಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಹುಡುಕದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾದಿತು.

    ಸರ್ಕಾರದಿಂದ ಸ್ಥಾಪಿಸಲಾಗಿರುವ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ನಂತರವೂ ಶೇಕಡ 65 ಮಕ್ಕಳಲ್ಲಿ ಅಪೌಷ್ಟಿಕತೆ ಮುಂದುವರಿದಿರುವುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ನಡೆಸಲಾದ ಸಮೀಕ್ಷೆಯಲ್ಲಿ ಬಯಲಾಗಿದೆ. ದಕ್ಷಿಣಕ್ಕಿಂತ ಉತ್ತರ ಕರ್ನಾಟಕದಲ್ಲಿ, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ, ಇತರ ವರ್ಗಗಳಿಗಿಂತ ಪರಿಶಿಷ್ಟ ಸಮುದಾಯಗಳಲ್ಲಿ ಹೆಚ್ಚಿನ ಅಪೌಷ್ಟಿಕತೆ ಇರುವುದು ವರದಿಯಲ್ಲಿ ಕಂಡುಬಂದಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಶೋಚನೀಯವಾಗಿದೆ ಎಂಬದನ್ನು ಅಂಕಿಸಂಖ್ಯೆಗಳೇ ಸಾರುತ್ತಿವೆ. ಕಡಿಮೆ ತೂಕದ ಮಕ್ಕಳ ಪ್ರಮಾಣ ಆಂಧ್ರಪ್ರದೇಶದಲ್ಲಿ ಶೇ.31.9, ತೆಲಂಗಾಣದಲ್ಲಿ ಶೇ.28.3, ತಮಿಳುನಾಡಿನಲ್ಲಿ ಶೇ.23.8 ಹಾಗೂ ಕೇರಳದಲ್ಲಿ ಶೇ.16.1 ಇದ್ದರೆ ಕರ್ನಾಟಕದಲ್ಲಿ ಶೇ.35.2 ಇದೆ. ಅದೇ ರೀತಿ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣ(ಶೇ.36) ಹಾಗೂ ರಕ್ತಹೀನತೆಯ ಮಕ್ಕಳ ಸಂಖ್ಯೆಯಲ್ಲೂ(ಶೇ.60.9) ಕರ್ನಾಟಕವೇ ಅಪಾಯದ ಸ್ಥಿತಿಯಲ್ಲಿದೆ. ಹರ್ಯಾಣ ಹಾಗೂ ತಮಿಳುನಾಡು ಈಗಾಗಲೇ ಪೌಷ್ಟಿಕಾಂಶ ನೀತಿ ಜಾರಿ ಮಾಡಿದ್ದು, ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಪೌಷ್ಟಿಕಾಂಶ ನೀತಿ ಜಾರಿಗೆ ಬರುವುದು ಅವಶ್ಯವಾಗಿದೆ. ಮಕ್ಕಳ ಆರೋಗ್ಯ ಸ್ಥಿತಿಯೇ ಶೋಚನೀಯವಾಗಿಬಿಟ್ಟರೆ ಸಮಾಜದ ನಾಳೆಗಳನ್ನು ಕಟ್ಟುವುದಾದರೂ ಹೇಗೆ?

    ಇನ್ನೊಂದೆಡೆ, ಕರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಮರಳಿದ ನಂತರವೂ ಮಕ್ಕಳಲ್ಲಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಉತ್ತರ ಕರ್ನಾಟಕದಿಂದ ವರದಿಯಾಗಿವೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಸಮಸ್ಥಿತಿಯಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆಯಾದರೂ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕ್ರಮಗಳತ್ತ ಗಮನ ವಹಿಸಬೇಕಿದೆ. ಅಲ್ಲದೆ, ಅಪೌಷ್ಟಿಕತೆ ಪ್ರಮಾಣ ಬಡಮಕ್ಕಳಲ್ಲಿ ಹೆಚ್ಚಾಗಿದ್ದು, ಬಡತನ ಹೇಗೆ ಆರೋಗ್ಯಕ್ಕೆ 21ನೇ ಶತಮಾನದಲ್ಲೂ ಶಾಪವಾಗಿ ಕಾಡುತ್ತಿದೆ ಎಂಬುದಕ್ಕೆ ನಿದರ್ಶನ. ಸರ್ಕಾರ, ಆರೋಗ್ಯ ಸಂಸ್ಥೆಗಳು ಹೆಚ್ಚು ಕಾಳಜಿಯಿಂದ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗುವುದು ಈಗಿನ ತುರ್ತ. ಪಾಲಕರು ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts