More

    ಸಂಪಾದಕೀಯ: ಹೆಚ್ಚಿದ ಭಾರತದ ವರ್ಚಸ್ಸು

    ಸಮರ್ಥ ನಾಯಕತ್ವ ದೇಶದ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುತ್ತದೆ. ಹೊಸ ಸವಾಲಿನ ಸ್ವೀಕಾರ, ಸೃಜನಾತ್ಮಕ ಚಿಂತನೆಗಳ ಅನುಷ್ಠಾನ ಮತ್ತು ಕೆಲಸದ ಬಗ್ಗೆ ಸದಾ ಅಮಿತೋತ್ಸಾಹ-ಇವು ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿಗೆ ಪ್ರಮುಖ ಕಾರಣ ಎನ್ನಬಹುದು. ಹಿಂದೆಲ್ಲ ಬಿಕ್ಕಟ್ಟುಗಳು ಎದುರಾದಾಗ, ಸಂಕಷ್ಟ ತಲೆದೋರಿದಾಗ ಭಾರತ ಇತರೆ ರಾಷ್ಟ್ರಗಳ ಸಹಾಯಕ್ಕಾಗಿ ಎದುರು ನೋಡುತ್ತಿತ್ತು. ಈಗ ಪರಿಸ್ಥಿತಿ ಹೇಗೆ ಬದಲಾಗಿದೆಯೆಂದರೆ ಭಾರತವೇ ಹಲವು ರಾಷ್ಟ್ರಗಳಿಗೆ ನೆರವಿನಹಸ್ತ ಚಾಚುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ, ಈ ಬದಲಾವಣೆ ಏಕಾಏಕಿ ಸಂಭವಿಸಿಲ್ಲ. ದೇಶದ ಎಲ್ಲ ರಂಗಗಳ ಅಭಿವೃದ್ಧಿಗೆ ಸ್ಪಷ್ಟ ದಿಕ್ಸೂಚಿ ರೂಪಿಸಿಕೊಂಡ ಪ್ರಧಾನಿ ಮೋದಿ ತಮ್ಮ ತಂಡದೊಂದಿಗೆ ಅದರ ಸಾಕಾರಕ್ಕಾಗಿ ಹಾಕುತ್ತಿರುವ ಶ್ರಮ ಅಸಾಧಾರಣ. ಸರ್ಕಾರಿ ಆಡಳಿತಯಂತ್ರದ ಜಡತ್ವವನ್ನು ತೊಲಗಿಸಿ, ಅದಕ್ಕೆ ಕಾಪೋರೇಟ್ ಶೈಲಿಯ ಚುರುಕುತನ ತಂದಿದ್ದು ಮೋದಿ ಹೆಗ್ಗಳಿಕೆ.

    ಐದು ವರ್ಷಗಳ ಆಡಳಿತ ನಡೆಸಿದ ಬಳಿಕ ಒಂದಿಷ್ಟು ‘ಆಡಳಿತ ವಿರೋಧಿ ಅಲೆ’ ಕಾಣಿಸಿಕೊಳ್ಳುವುದು ಸ್ವಾಭಾವಿಕ ಎಂದು ನಂಬಲಾಗಿದೆ. ಆದರೆ, 2014-19ರವರೆಗೆ ಮೋದಿ ನೇತೃತ್ವದಲ್ಲಿ ಮೊದಲ ಅವಧಿ ಪೂರ್ಣಗೊಳಿಸಿದ ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ಮತ್ತಷ್ಟು ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಿತು. ಎನ್​ಡಿಎ-2.0 ಸರ್ಕಾರ ಇಂದಿಗೆ (ಶನಿವಾರ) ಒಂದು ವರ್ಷ ಪೂರ್ಣಗೊಳಿಸಿದೆ. ಮೋದಿ ನಾಯಕತ್ವದ ಫಲವಾಗಿ ಭಾರತ ಜಾಗತಿಕ ವಲಯದಲ್ಲಿ ಶಕ್ತಿಕೇಂದ್ರವಾಗಿ ಹೊಮ್ಮಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ದನಿಗೆ ಮನ್ನಣೆ ಸಿಗುತ್ತಿದೆ. ಹಲವು ರಾಷ್ಟ್ರಗಳು ಭಾರತದೊಂದಿಗೆ ಸ್ನೇಹವರ್ಧನೆಗೆ ಉತ್ಸಾಹ ತೋರುತ್ತಿವೆ. ಈ ವರ್ಷ ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇಲ್ಲಿನ ಶಕ್ತಿ, ಸಂಸ್ಕೃತಿಯನ್ನು ಹಲವು ಬಾರಿ ಕೊಂಡಾಡಿದ್ದಾರೆ. ಗಡಿಗಳಲ್ಲಿ ಒಂದೆಡೆ ಚೀನಾ, ಮತ್ತೊಂದೆಡೆ ಪಾಕಿಸ್ತಾನದಿಂದ ಸವಾಲು ಎದುರಾಗಿದ್ದರೂ, ಅದಕ್ಕೆ ವ್ಯೂಹಾತ್ಮಕ ತಂತ್ರಗಳ ಮೂಲಕವೇ ಸಮರ್ಥ, ದಿಟ್ಟ ಉತ್ತರವನ್ನು ನೀಡಲಾಗಿದೆ.

    ಇದನ್ನೂ ಓದಿ  ಬಿಬಿಎಂಪಿ ಕಾರ್ಪೋರೇಟರ್‌ಗೂ ಬಂತು ಕರೊನಾ ಪಾಸಿಟಿವ್!

    ಹಲವು ಯೋಜನೆಗಳ ಯಶಸ್ವಿ ಅನುಷ್ಠಾನ ಈ ಸರ್ಕಾರದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ‘ಆಯುಷ್ಮಾನ್ ಭಾರತ’ ಯೋಜನೆಯ ಲಾಭವನ್ನು ಒಂದು ಕೋಟಿ ಫಲಾನುಭವಿಗಳು ಪಡೆದಿದ್ದಾರೆ. ಜನಧನ ಅಡಿಯಂತೂ 38 ಕೋಟಿಗಿಂತ ಅಧಿಕ ಜನರು ಬ್ಯಾಂಕ್ ಖಾತೆ ಹೊಂದುವಂತಾಗಿದ್ದು, ಗ್ರಾಮೀಣಿಗರು ಹೆಚ್ಚಿನ ಲಾಭ ಪಡೆದಿದ್ದಾರೆ ಎಂಬುದು ವಿಶೇಷ. ಹಾಗೆಯೇ, ಉಜ್ವಲಾ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಕರೊನಾ ಸೋಂಕಿನ ಹಾವಳಿ ಕಾಣಿಸಿಕೊಳ್ಳದಿದ್ದರೆ ಭಾರತದ ಆರ್ಥಿಕತೆ ಪ್ರಗತಿಯ ಹಾದಿಯಲ್ಲಿ ಇರುತ್ತಿತ್ತು. ಕರೊನಾ ವಿರುದ್ಧದ ಹೋರಾಟದಲ್ಲೂ ಭಾರತ ಮಾದರಿಯಾಗಿ ಪರಿಣಮಿಸಿದ್ದು, ಹಲವು ರಾಷ್ಟ್ರಗಳು ಮೋದಿಯವರನ್ನು ಶ್ಲಾಘಿಸಿವೆ. ಕರೊನಾ ಸಂಕಷ್ಟದಲ್ಲೂ ಅವಕಾಶ ಹುಡುಕುತ್ತಿರುವ ದೇಶ, ಹೊಸ ಉತ್ಸಾಹದೊಂದಿಗೆ ನವನಿರ್ವಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನೀಡಿದ ‘ಆತ್ಮನಿರ್ಭರ ಭಾರತ’ದ ಕರೆ ಸಂಚಲನವೇ ಮೂಡಿಸಿದೆ.

    ದೇಶದ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಪ್ರಯತ್ನ ಪರಿಣಾಮಕಾರಿಯಾಗಿ ನಡೆಯುತ್ತಿದೆ. ದೇಶದಲ್ಲಿ ಸಮರ್ಥ, ಆಶಾವಾದಿ ನಾಯಕತ್ವ ಇದ್ದರೆ ಸಂಕಷ್ಟದ ಹೊತ್ತಲೂ ಜನರು ಸ್ಥೈರ್ಯ ಕಳೆದುಕೊಳ್ಳದೆ, ಉತ್ಕರ್ಷದ ಹಾದಿಯನ್ನು ಶೋಧಿಸುತ್ತಾರೆ ಎಂಬುದಕ್ಕೆ ವರ್ತಮಾನದ ಬೆಳವಣಿಗೆಗಳು ಸಾಕ್ಷಿಯಾಗಿವೆ. ಭಾರತದ ಮುಂದೆ ಹಲವು ಸವಾಲುಗಳು ಇರುವುದೇನೋ ನಿಜ. ಆದರೆ, ಈ ಸರ್ಕಾರ ಮುಂದಿನ ನಾಲ್ಕು ವರ್ಷಗಳಲ್ಲಿ ಅವುಗಳಿಗೆ ಸಮರ್ಪಕ ಪರಿಹಾರ ಕಂಡುಕೊಂಡು ಭಾರತದ ಶಕ್ತಿ, ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಲಿ ಎಂಬುದು ಆಶಯ.

    ಪ್ರಿಯಕರ ಮದುವೆ ಆಗಲ್ಲ ಅಂದರೂ ಪೊಲೀಸ್ ಸ್ಟೇಷನ್‌ಗೆ ಕರೆಸಿ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts