More

    ಸೌಹಾರ್ದವೇ ಜೀವಾಳ: ಒಗ್ಗಟ್ಟಿನಿಂದ ಮುಂದೆ ಸಾಗುವುದರಲ್ಲೇ ಇದೆ ಎಲ್ಲರ ಹಿತ

    ದೇಶ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅಚಾನಕ್ ಆಗಿ ಉದ್ಭವಿಸಿರುವ ಕರೊನಾ ಸೋಂಕಿನ ಸಮಸ್ಯೆಯ ವಿರುದ್ಧ ಇಡೀ ದೇಶ ಹೋರಾಡುತ್ತಿದೆ. ‘ಕರೊನಾ ಸೋಂಕು ಇದು ಅಗೋಚರ ಶತ್ರು. ಯಾವುದೇ ಧರ್ಮ, ಜಾತಿ, ಮತ, ಪಂಥ, ಪ್ರದೇಶವನ್ನು ನೋಡಿ ಬರುವಂಥದ್ದಲ್ಲ. ಹಾಗಾಗಿ, ಇದರ ವಿರುದ್ಧ ಪ್ರಬಲವಾಗಿ ಹೋರಾಡುವುದೇ ಗುರಿ ಆಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕಳಕಳಿಯಿಂದ ಮಾತನಾಡಿದ್ದಾರೆ. ಆದರೆ, ‘ದೇಶದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ’ ಎಂದು ‘ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಅಪರೇಷನ್’ (ಒಐಸಿ) ತಜ್ಞರು ಹೇಳಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಹತ್ವದ ಹೇಳಿಕೆ ನೀಡಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ‘ಮುಸ್ಲಿಂ ಧರ್ಮದವರಿಗೆ ಭಾರತ ಸ್ವರ್ಗವಿದ್ದಂತೆ. ಈ ದೇಶದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ, ಧಾರ್ವಿುಕ ಹಕ್ಕುಗಳು ಸುರಕ್ಷಿತವಾಗಿವೆ. ಹಾಗಾಗಿ, ಇದು ಅವರಿಗೆ ಸ್ವರ್ಗ’ ಎಂದು ಪ್ರತಿಕ್ರಿಯಿಸಿದ್ದು, ಔಚಿತ್ಯಪೂರ್ಣವಾಗಿದೆ. ಪೂರ್ವಗ್ರಹಗಳನ್ನು ಬದಿಗಿಟ್ಟು, ವಾಸ್ತವದ ನೆಲೆಯಲ್ಲಿ ಅವಲೋಕಿಸಿದರೆ ಭಾರತ ಸೌಹಾರ್ದತೆಗೆ, ಸಾಮರಸ್ಯಕ್ಕೆ ತುಂಬ ಪ್ರಾಮುಖ್ಯ ನೀಡಿರುವ ರಾಷ್ಟ್ರ. ಹಲವು ಧರ್ವಿುೕಯರು ನೆಲೆಸಿದ್ದರೂ, ಅವರ ಸಂಸ್ಕೃತಿ, ಆಚರಣೆಗಳು ಅಬಾಧಿತವಾಗಿ ನಡೆದುಕೊಂಡು ಬಂದಿವೆಯಲ್ಲದೆ ಎಲ್ಲರಿಗೂ, ಅಭಿವೃದ್ಧಿಯ ದಾರಿ ಮುಕ್ತವಾಗಿದೆ.

    ಈ ವೈಶಿಷ್ಟ್ಯದಿಂದಲೇ ಮುಸ್ಲಿಮರು ಭಾರತದಲ್ಲಿ ಸುರಕ್ಷಿತ ಅಷ್ಟೇ ಅಲ್ಲ ಸಮಾಧಾನದ ಬದುಕು ಕಂಡುಕೊಂಡಿದ್ದಾರೆ. ಹಲವು ರಂಗಗಳಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಜಗತ್ತಿನ ಎಷ್ಟೋ ಮುಸ್ಲಿಂ ರಾಷ್ಟ್ರಗಳಲ್ಲೇ ಅಲ್ಲಿನ ಬಹುಸಂಖ್ಯಾತರು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಣ್ಣಿಗೆ ಕಾಣುವ ಸತ್ಯ. ಈ ದೇಶದಲ್ಲಿ ಅಂಥ ಯಾವುದೇ ಸಮಸ್ಯೆಯೂ ಇಲ್ಲ. ಅಯೋಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ನ್ಯಾಯಾಲಯದ ತೀರ್ಪು ಬಂದಾಗ, ಎಲ್ಲರೂ ಏಕಮನಸ್ಸಿನಿಂದ ಅದನ್ನು ಸ್ವೀಕರಿಸಿ, ಸೌಹಾರ್ದ ಮೆರೆದಿದ್ದು ಇತ್ತೀಚಿನ ನಿದರ್ಶನವಷ್ಟೇ. ಹಾಗಾಗಿ, ಸಚಿವರು ಹೇಳಿರುವಂತೆ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ. ಅವರ ಹಕ್ಕುಗಳು ಮೊಟಕುಗೊಳ್ಳುವ ಭೀತಿ ಬೇಡ.

    ಕರೊನಾ ಸೋಂಕಿನ ವಿದ್ಯಮಾನದಲ್ಲಿ ಕೆಲವೆಡೆ ಚಿಕಿತ್ಸೆಗೆ ಅಸಹಕಾರ ನೀಡಿರುವುದು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಯತ್ನಿಸಿದ್ದು ಮತ್ತು ತಬ್ಲಿಘಿ ಪ್ರಕರಣದಿಂದ ಸೋಂಕು ಪ್ರಮಾಣ ಹೆಚ್ಚಾದ ಘಟನೆಯಿಂದ ಒಂದಿಷ್ಟು ಅತೃಪ್ತಿ, ಅಸಮಾಧಾನ ಸೃಷ್ಟಿಯಾಗಿದ್ದೇನೋ ನಿಜ. ಆದರೆ, ಈ ಬಗ್ಗೆ ಸಂಬಂಧಿತರಿಗೆ ಸೂಕ್ತ ತಿಳಿವಳಿಕೆಯನ್ನು ನೀಡುವ ಕೆಲಸವಾಗಿದೆಯೇ ಹೊರತು, ಯಾವುದೋ ಒಂದು ವರ್ಗವನ್ನು ಗುರಿಯಾಗಿಸಿಕೊಂಡಿಲ್ಲ. ಕರೊನಾ ಸೋಂಕಿನ ಅಪಾಯವನ್ನು ಮನಗಾಣಬೇಕು. ಇದರ ವಿರುದ್ಧ ಕ್ರಮಗಳನ್ನು ಕೈಗೊಂಡಷ್ಟು ಸೋಂಕು ಅಷ್ಟೇ ವೇಗದಲ್ಲಿ ಹರಡುತ್ತಿರುವುದು ದುರದೃಷ್ಟಕರ. ಮನುಷ್ಯರೇ ಇದರ ವಾಹಕರಾಗಿರುವುದರಿಂದ ಲಾಕ್​ಡೌನಿನ ಕ್ರಮ ಅನಿವಾರ್ಯವಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಭಾವನೆಗಳನ್ನು ನಿಯಂತ್ರಿಸಿಕೊಂಡು, ವಿವೇಕವನ್ನು ಪ್ರದರ್ಶಿಸುವ ಕೆಲಸ ಆಗಬೇಕು. ಜೀವ ಉಳಿದರೆ ತಾನೇ ಮುಂದಿನ ಜೀವನ? ಹೀಗಿರುವಾಗ ಆ ಜೀವವನ್ನೇ ಅಪಾಯಕ್ಕೆ ಒಡ್ಡಿ ಪ್ರಾರ್ಥನೆ ನಡೆಸುವುದು ಇಲ್ಲವೆ ಗುಂಪು ಸೇರುವಂಥ ಚಟುವಟಿಕೆಗಳು ಸಲ್ಲ. ಇದು ಅನಗತ್ಯ ಭಯ ಸೃಷ್ಟಿಸುವ, ಮನಸುಗಳನ್ನು ವಿಭಜಿಸುವ ಸಮಯ ಅಲ್ಲ. ಹಾಗಾಗಿ, ಸರ್ಕಾರದ ಕ್ರಮಗಳ ಸದಾಶಯ ಮತ್ತು ಅನಿವಾರ್ಯತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

    ನಿಜಾಮುದ್ದೀನ್ ನಂಟು ಹೊಂದಿದ್ದವರೂ ಸೇರಿ 63 ಜನ ಕ್ವಾರಂಟೈನ್‌ನಿಂದ ಮುಕ್ತ; ಫುಡ್‌ಕಿಟ್ ಗಿಫ್ಟ್ ಕೊಟ್ಟು ಬೀಳ್ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts