Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಕಾಯ್ದೆಯ ದುರುಪಯೋಗವಾಗದಿರಲಿ

Wednesday, 21.03.2018, 3:04 AM       No Comments

ರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸಾರ್ವಜನಿಕ ಸೇವೆಯಲ್ಲಿರುವವರ ವಿರುದ್ಧ ಒಂದೊಮ್ಮೆ ದೂರು ದಾಖಲಾದರೆ ಅಂಥವರನ್ನು ಕೂಡಲೇ ಬಂಧಿಸಕೂಡದು ಎಂದು ಸವೋಚ್ಚ ನ್ಯಾಯಾಲಯ ಆದೇಶಿಸಿದೆ. ಈ ಕಾಯ್ದೆಯಡಿ ಯಾವುದೇ ಸರ್ಕಾರಿ ನೌಕರರನ್ನು ಬಂಧಿಸುವುದಕ್ಕೂ ಮೊದಲು ಡಿವೈಎಸ್​ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಬೇಕಾದ್ದು ಕಡ್ಡಾಯ ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿದೆ. ಇದು ನಿಜಕ್ಕೂ ಮಹತ್ವದ ಬೆಳವಣಿಗೆ.

ವ್ಯವಸ್ಥೆಯು ಯಾವುದೇ ಕಾನೂನು-ಕಟ್ಟಳೆ ರೂಪಿಸಿದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವವರು ಇರುವಂತೆಯೇ, ಅದರಲ್ಲಿ ಇದ್ದಿರಬಹುದಾದ ನ್ಯೂನತೆಗಳನ್ನು ಬಳಸಿಕೊಂಡು ದುರುಪಯೋಗಕ್ಕೆ ಮುಂದಾಗುವವರೂ ಇರುತ್ತಾರೆ ಎಂಬುದು ಒಪ್ಪಿತ ಸತ್ಯ. ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಇಂಥದೇ ಆದೇಶ ನೀಡಿರುವುದು ಇಲ್ಲಿ ಸ್ಮರಣಾರ್ಹ. ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗಕ್ಕೆ ಮುಂದಾಗುವ ಕೆಲ ಮಹಿಳೆಯರು, ಪತಿ ಹಾಗೂ ಆತನ ತಾಯ್ತಂದೆಯರು, ಸೋದರ-ಸೋದರಿಯರೇ ಮೊದಲಾದ ಮಿಕ್ಕ ಕುಟುಂಬ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಪರಿಪಾಠ ಹೆಚ್ಚಾದ ಹಿನ್ನೆಲೆಯಲ್ಲಿ, ಇಂಥ ದುರುದ್ದೇಶದ ಪ್ರಕರಣಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ನ್ಯಾಯಪೀಠವೊಂದು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಗಳನ್ನು ಏಕಾಏಕಿ ಬಂಧಿಸುವಂತಿಲ್ಲ ಎಂಬುದಾಗಿ ಕಳೆದ ವರ್ಷದ ಜುಲೈನಲ್ಲಿ ಆದೇಶಿಸಿತ್ತು. ಪ್ರಸ್ತುತ ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆಯೂ ಇಂಥದೇ ಮಾರ್ಗದರ್ಶಿ ಸೂತ್ರ ಹೊಮ್ಮಿದ್ದು, ಸರ್ಕಾರಿ ನೌಕರರ ವಿರುದ್ಧ ಕಾಯ್ದೆಯ ದುರ್ಬಳಕೆಯಾಗದಂತಿರಲು ಅದು ಅನುವುಮಾಡಿಕೊಟ್ಟಿದೆ ಎನ್ನಲಡ್ಡಿಯಿಲ್ಲ. ಸದರಿ ಕಾಯ್ದೆಯಡಿ ಒಂದೊಮ್ಮೆ ಸರ್ಕಾರಿ ನೌಕರರೊಬ್ಬರ ವಿರುದ್ಧ ದೂರು ದಾಖಲಾದರೆ, ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ ಎಂಬ ಅಂಶವೂ ಸೇರಿದಂತೆ ಅಂಥವರನ್ನು ಬಂಧಿಸುವ ಮುನ್ನ ಹಾಗೂ ನಂತರ ಪಾಲಿಸಬೇಕಾದ ಕ್ರಮಗಳ ಕುರಿತೂ ನ್ಯಾಯಾಲಯ ಒಂದಷ್ಟು ನಿರ್ದೇಶನಗಳನ್ನು ನೀಡಿದೆ.

ವೈಯಕ್ತಿಕ ದ್ವೇಷದ ಕಾರಣವಾಗಿಯೋ ಅಥವಾ ಮತ್ತಾವುದಾದರೂ ಹಿತಾಸಕ್ತಿಯ ಸಾಧನೆಗಾಗಿಯೋ ಅಥವಾ ಪ್ರಭಾವಿಗಳ ಒತ್ತಡದಿಂದಾಗಿಯೋ ಸಾರ್ವಜನಿಕ ಸೇವೆಯಲ್ಲಿರುವವರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಪರಿಪಾಠ ನ್ಯಾಯಾಲಯದ ಈ ಆದೇಶದಿಂದಾಗಿ ತಗ್ಗಲಿದೆ ಎಂಬುದು ತಜ್ಞರ ಅಭಿಮತ. ಹಾಗಂತ, ಇದು ಏಕಪಕ್ಷೀಯ ನಿಲುವು ತಳೆಯುವುದಕ್ಕೆ ಅನುವುಮಾಡಿಕೊಡುವ ಸಾಧನವೂ ಆಗಬಾರದು. ಎಸ್​ಸಿ/ಎಸ್​ಟಿ ಪಂಗಡದವರ ಮೇಲಿನ ದೌರ್ಜನ್ಯದ ದೂರು ಸಾಚಾತನದಿಂದ ಕೂಡಿದೆ ಎಂದಾದಲ್ಲಿ, ಯಾವುದೇ ದಯೆ-ದಾಕ್ಷಿಣ್ಯವಿಲ್ಲದೆ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸುವುದಕ್ಕೆ ಅದು ಬಲ ತುಂಬುವಂತಾಗಬೇಕೇ ವಿನಾ, ಯಾವುದೇ ರಾಜಕೀಯ ಹಿತಾಸಕ್ತಿಗಳಾಗಲೀ ಅಥವಾ ಮತಭೇದದ ಲೆಕ್ಕಾಚಾರಗಳಾಗಲೀ ನೇಪಥ್ಯದಲ್ಲಿ ಕರಾಮತ್ತು ತೋರಿಸುವಂತಾಗಬಾರದು. ಉಭಯ ಪಕ್ಷಸ್ಥರಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮಕ್ಕೆ ಒಳಪಡಿಸುವುದಕ್ಕೆ ಅದು ಅನುವುಮಾಡಿಕೊಡಬೇಕು. ಕಾರಣ, ‘ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬುದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಸದಾಶಯ. ಈ ಆಶಯಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಿರಲಿ. ಅಮಾಯಕರಿಗೆ, ನಿರಪರಾಧಿಗಳಿಗೆ ಶಿಕ್ಷೆಯಾಗದಿರಲಿ.

Leave a Reply

Your email address will not be published. Required fields are marked *

Back To Top