Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲಿ

Tuesday, 20.02.2018, 3:02 AM       No Comments

‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಏನಾಗುತ್ತಿದೆ?’-ಇದು ಜನಸಾಮಾನ್ಯರನ್ನು ಈಚಿನ ದಿನಗಳಲ್ಲಿ ಕಾಡುತ್ತಿರುವ ಪ್ರಶ್ನೆ. ಸಾರ್ವಜನಿಕ ಕ್ಷೇತ್ರದ ಎರಡನೇ ಅತಿ ದೊಡ್ಡ ಬ್ಯಾಂಕ್​ನಲ್ಲಿ ನಡೆದ 11,400 ಕೋಟಿ ರೂಪಾಯಿ ಹಗರಣ, ಬ್ಯಾಂಕ್ ಅಧಿಕಾರಿಗಳ ಬಂಧನ ಇದೆಲ್ಲವನ್ನೂ ಅವಲೋಕಿಸಿದರೆ ಬ್ಯಾಂಕಿಂಗ್ ರಂಗದ ಆಂತರಿಕ ನಿಯಂತ್ರಣ ವ್ಯವಸ್ಥೆ ಕುಸಿದಿದ್ದು, ವ್ಯವಸ್ಥೆಯ ಲೋಪದೋಷಗಳು ಢಾಳಾಗಿ ಗೋಚರಿಸುತ್ತಿವೆ. ವಿಚಿತ್ರವೆಂದರೆ ಕಳೆದ ಹಲವು ವರ್ಷಗಳಿಂದ ಈ ಅವ್ಯವಹಾರ ನಡೆಯುತ್ತಿದ್ದರೂ, ಅದರಲ್ಲಿ ಬ್ಯಾಂಕ್ ಅಧಿಕಾರಿಗಳೇ ಶಾಮೀಲಾಗಿದ್ದರೂ ಇದ್ಯಾವುದೂ ಲೆಕ್ಕಪರಿಶೋಧನೆಯ ವೇಳೆಯಾಗಲಿ, ಆರ್​ಬಿಐನ ಪರಿಶೀಲನೆ ವೇಳೆಗಾಗಲಿ ಬೆಳಕಿಗೆ ಬಾರದಿರುವುದು. ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಲ್ಲೇ ಈ ಬಗೆಯ ಅವ್ಯವಹಾರಗಳು ನಡೆದರೆ ಜನ ಯಾವ ಆರ್ಥಿಕ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಹಗರಣದ ತನಿಖೆ ಭಾಗವಾಗಿ ಸಿಬಿಐ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ಈವರೆಗಿನ ದಾಳಿಗಳಿಂದ 105 ಬ್ಯಾಂಕ್ ಖಾತೆ, ಅಪಾರ ಪ್ರಮಾಣದ ಒಡವೆ, ಷೇರುಪತ್ರ ಮತ್ತು 29 ಆಸ್ತಿ ಸೇರಿದಂತೆ 5,694 ಕೋಟಿ ರೂ. ಮೌಲ್ಯದ ಸಂಪತ್ತನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಹಗರಣ ನಡೆದ ಪಿಎನ್​ಬಿ ಶಾಖೆಯ ಹಲವು ಅಧಿಕಾರಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದೇ ಶಾಖೆಯ ಮಾಜಿ ಡೆಪ್ಯೂಟಿ ಮ್ಯಾನೇಜರ್ ಗೋಕುಲನಾಥ ಶೆಟ್ಟಿ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ನೀರವ್ ಮೋದಿ ಮತ್ತು ಮೇಹುಲ್ ಚೌಕಸೆಯವರ ಸಂಸ್ಥೆಗಳಿಗೆ 300 ಎಲ್​ಒಯು (ಲೇಟರ್ ಆಫ್ ಅಂಡರ್​ಟೇಕಿಂಗ್) ನೀಡಿದ್ದು, ಇದಕ್ಕೆ ಅಗತ್ಯವಾದ ದಾಖಲೆಗಳನ್ನೂ ಪಡೆದುಕೊಂಡಿಲ್ಲ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಈ ಅಧಿಕಾರಿ ನಿವೃತ್ತಿ ಸಮೀಪಿಸಿದ್ದರಿಂದ 63 ದಿನಗಳಲ್ಲಿ 143 ಎಲ್​ಒಯುಗಳನ್ನು ಜಾರಿಗೊಳಿಸಿದ್ದಾರೆ. ಅಷ್ಟೆ ಅಲ್ಲದೆ, ಕಾನೂನುಬಾಹಿರ ವಹಿವಾಟು ಮೂಲಕ 7 ವರ್ಷಗಳಲ್ಲಿ ಕೆಲ ಆಯ್ದ ಗ್ರಾಹಕರಿಗೆ ಲಾಭ ಮಾಡಿಕೊಡಲಾಗಿದೆ ಎನ್ನಲಾಗಿದೆ. ಅಂದರೆ ಬ್ಯಾಂಕಿನ ಆಡಳಿತ ಮಂಡಳಿ, ಲೆಕ್ಕ ಪರಿಶೋಧಕರ ತಂಡದ ಕಣ್ಣಿಗೆ ಇದೆಲ್ಲ ಕಾಣಿಸಲೇ ಇಲ್ಲವೇ? ಮತ್ತೊಂದೆಡೆ, ರೋಟೋಮ್ಯಾಕ್ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಐದು ಬ್ಯಾಂಕುಗಳಿಂದ ಪಡೆದ 800 ಕೋಟಿ ರೂ.ಗೂ ಹೆಚ್ಚಿನ ಸಾಲ ಮರುಪಾವತಿಸದ ಪ್ರಕರಣವೂ ಬಯಲಾಗಿದೆ.

ಏತನ್ಮಧ್ಯೆ, ಸಂಕಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮರುಜೀವ ತುಂಬಲು ಮರುಬಂಡವಾಳಕ್ಕಾಗಿ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಲ್ಲಿ 2.6 ಲಕ್ಷ ಕೋಟಿ ರೂಪಾಯಿ ನೀಡಿದೆ. ಈ ಭಾರಿ ಮೊತ್ತ ಜನರ ತೆರಿಗೆ ಹಣವೇ ಆಗಿದೆ. ಅವ್ಯವಹಾರ, ಹಗರಣದಲ್ಲಿ ಸಾವಿರಾರು ಕೋಟಿ ರೂ.ಗಳು ಮುಳುಗುತ್ತಿದ್ದರೆ ಮತ್ತೊಂದೆಡೆ ಜನರ ತೆರಿಗೆ ದುಡ್ಡು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಪಾಲಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ಸಾಮಾನ್ಯ ಜನರು ಶಿಕ್ಷೆ ಅನುಭವಿಸುವಂತಾಗಬಾರದು ಎಂಬ ವಿವೇಚನೆ ಪ್ರಭುತ್ವಕ್ಕೆ ಇರಬೇಕು. ಇದೇ ಪರಿಸ್ಥಿತಿ ಮುಂದುವ ರಿದಲ್ಲಿ ಜನರು ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವ ಅಪಾಯವಿದ್ದು, ಸರ್ಕಾರ, ಆರ್​ಬಿಐ ಸೇರಿದಂತೆ ಸಂಬಂಧಪಟ್ಟವರು ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕು.

Leave a Reply

Your email address will not be published. Required fields are marked *

Back To Top