More

    ಸಂಪಾದಕೀಯ: ಕಠಿಣ ಕ್ರಮವೇ ಮದ್ದು 

    ಈ ದುಸ್ಥಿತಿಗೆ, ಕೆಟ್ಟ ವ್ಯವಸ್ಥೆಗೆ ಏನು ಅಂತ ಹೇಳುವುದು? ಅಧಿಕಾರಿಗಳೇ ನೈತಿಕತೆಯನ್ನು ಬದಿಗೊತ್ತಿಬಿಟ್ಟರೆ ಗತಿ ಏನು? ಇಡೀ ಉತ್ತಮ ವ್ಯವಸ್ಥೆ ಹಾಳಾಗುವುದು ಕೆಲವೇ ಕೆಲವು ಭ್ರಷ್ಟಾಚಾರಿಗಳಿಂದ. ದೊಡ್ಡ ಪಿಡುಗಾಗಿ ಕಾಡುತ್ತಿರುವ ಈ ಭ್ರಷ್ಟಾಚಾರಕ್ಕೆ ಅಧಿಕಾರಿವರ್ಗವೇ ನೀರೆರೆದು ಪೋಷಿಸುತ್ತಿದೆ ಎಂದರೆ ಅದಕ್ಕಿಂತ ದೌರ್ಭಾಗ್ಯ ಮತ್ತೇನಿಲ್ಲ.

    ಕಳೆದ ವರ್ಷ ಉತ್ತರ ಕರ್ನಾಟಕಕ್ಕೆ ಬಂದಪ್ಪಳಿಸಿದ ನೆರೆ ಎಷ್ಟು ಭೀಕರ ಹಾನಿ ಸೃಷ್ಟಿಸಿತು ಎಂಬುದನ್ನು ಕಂಡಿದ್ದೇವೆ. ಆ ಹಾನಿಯ ಆಘಾತದಿಂದ ಹೊರಬರಲು ತುಂಬ ಸಮಯವೇ ಬೇಕಾಯಿತು. ರೈತರು ಬೆಳೆದ ಬೆಳೆಗಳೆಲ್ಲ ಕಣ್ಣೆದುರೇ ನೀರುಪಾಲಾಗಿ ಹೋದವು. ಗದ್ದೆಗಳು ಹಲವು ದಿನಗಳ ಕಾಲ ನೀರಿನಲ್ಲಿ ಮುಳುಗಿ ಹೋಗಿದ್ದವು. ಕೆಲ ಸಮಯದಲ್ಲಿ ಬೆಳೆ ಕೈಗೆ ಬರುತ್ತದೆಂದು ಕಾದಿದ್ದ ರೈತರಿಗೆ ಅದೆಂಥ ಆಘಾತ! ಹಾನಿಯ ಪ್ರಮಾಣ ದೊಡ್ಡದಿತ್ತು.

    ಸರ್ಕಾರ ನೀಡುವ ಪರಿಹಾರ ಮತ್ತೆ ಎದ್ದು ನಿಲ್ಲಲು ಅನುವಾಗಬಹುದು ಅಂದುಕೊಂಡಿದ್ದ ರೈತರು ಪರಿಹಾರಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಪರಿಹಾರಧನದ ಬಿಡುಗಡೆಯಲ್ಲೂ ವಿಳಂಬವಾಯಿತು. ಅದು ಬೇರೆ ಸಂಗತಿ. ಆದರೆ, ಬಿಡುಗಡೆಯಾದ ಹಣವೂ ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ. ಯಾರ್ಯಾರದ್ದೋ ಖಾತೆಗಳಿಗೆ ಪರಿಹಾರದ ಹಣ ವರ್ಗಾವಣೆಯಾಗುತ್ತಿದೆ. ಇದು ಉತ್ತರ ಕರ್ನಾಟಕದ ಹಾನಗಲ್ಲ ಸೇರಿ ಹಾವೇರಿ ಜಿಲ್ಲಾದ್ಯಂತ ಹಗರಣದ ಸ್ವರೂಪವನ್ನೇ ಪಡೆದುಕೊಂಡಿದೆ. ಇದರ ಬೆನ್ನುಬಿದ್ದಿರುವ ‘ವಿಜಯವಾಣಿ’ ಹಲವು ಬೆಚ್ಚಿಬೀಳಿಸುವ ಸಂಗತಿಗಳನ್ನು ಅನಾವರಣಗೊಳಿಸಿದೆ.

    ಸರ್ಕಾರಿ ಜಮೀನು, ಗೋಮಾಳ, ಕೆರೆ-ಕಟ್ಟೆಗೂ ಬೆಳೆ ಪರಿಹಾರ ಪಡೆದು ಸರ್ಕಾರಕ್ಕೆ ವಂಚಿಸಿರುವುದು ಒಂದೆಡೆಯಾದರೆ, ಶಾಲಾ ಮಕ್ಕಳು, ಗ್ರಾಮಗಳನ್ನು ತೊರೆದು ಬೇರೆಡೆ ವಾಸವಾಗಿರುವವರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಪರಿಹಾರ ತಂತ್ರಾಂಶದಲ್ಲಿ ವಿವರಗಳನ್ನು ಗ್ರಾಮ ಲೆಕ್ಕಾಧಿಕಾರಿ ಭರ್ತಿ ಮಾಡಬೇಕು.

    ಆದರೆ, ಈ ತಂತ್ರಾಶದ ಯೂಸರ್ ನೇಮ್ ಮತ್ತು ಪಾಸ್​ವರ್ಡ್​ನ್ನೇ ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಆ ಮೂಲಕ ಸರ್ಕಾರದ ಹಣವನ್ನು ಯಾರ್ಯಾರದೋ ಹೆಸರಿನಲ್ಲಿ ಇನ್ಯಾರದೋ ಖಾತೆಗೆ ಜಮೆ ಮಾಡಲಾಗಿದೆ. ಈ ಬಗ್ಗೆ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ ‘ಬೆಳೆಹಾನಿ ಮತ್ತು ಮನೆಹಾನಿ ಪರಿಹಾರ ವಿತರಣೆಯ ಅಕ್ರಮ ಹಾನಗಲ್ಲ ತಾಲೂಕಿನಲ್ಲಿ ಮಾತ್ರವಲ್ಲದೆ ಹಾವೇರಿ ಜಿಲ್ಲಾದ್ಯಂತ ವ್ಯಾಪಿಸಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ತನಿಖೆ ನಡೆಸಿ, ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

    ಇದು ಹಾವೇರಿ ಜಿಲ್ಲೆಗೆ ಸೀಮಿತವೆ, ಉಳಿದ ಜಿಲ್ಲೆಗಳಲ್ಲೂ ಈ ಬಗೆಯ ಅವ್ಯವಹಾರಗಳು ನಡುಯುತ್ತಿವೆಯೇ ಎಂಬುದರ ಬಗ್ಗೆಯೂ ಸರ್ಕಾರ ನಿಗಾ ಇರಿಸಬೇಕಿದೆ. ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಮತ್ತು ಫಲಾನುಭವಿ ರೈತರಿಗೆ ಮೋಸ ಮಾಡಿದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಭ್ರಷ್ಟಾಚಾರದಂಥ ಕೃತ್ಯಕ್ಕೆ ಮುಂದಾಗುವವರಿಗೆ ಖಡಕ್ ಸಂದೇಶ ರವಾನೆ ಆಗಬೇಕು. ಅಂದಾಗಲೇ, ಇಂಥ ಅಪಸವ್ಯಗಳಿಗೆ ಕಡಿವಾಣ ಹಾಕಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts